ಮೂಲಕ: ವನಿತಾ ಗಣೇಶ್
ಜೂನ್ 11 2024
ಎರಡು ಮಕ್ಕಳ ನೀತಿಯ ಕರಡು ಮಸೂದೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ, ಅದನ್ನು ಅಂಗೀಕರಿಸಲಾಗಿಲ್ಲ, ಅಥವಾ ಜಾರಿಗೆ ತಂದಿಲ್ಲ.
ಹೇಳಿಕೆ ಏನು?
ಉತ್ತರ ಪ್ರದೇಶ (ಯುಪಿ) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನರ ಗುಂಪಿನೊಂದಿಗೆ ಮೇಜಿನ ಮೇಲೆ ಕುಳಿತಿರುವ ಚಿತ್ರವನ್ನು ರಾಜ್ಯ ಸರ್ಕಾರವು ಎರಡು ಮಕ್ಕಳ ನೀತಿಯನ್ನು ಜಾರಿಗೆ ತಂದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಜೂನ್ ೭, ೨೦೨೪ ರಂದು, ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಈ ಫೋಟೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ), “ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳ ಕಾನೂನು ಜಾರಿಗೆ ತಂದರೆ ನೀವು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಯಾವುದೇ ಸರ್ಕಾರಿ ಸೌಲಭ್ಯವಿಲ್ಲ. ಸರ್ಕಾರಿ ಕೆಲಸವಿಲ್ಲ, ಪ್ರಧಾನ ಮಂತ್ರಿ ಪಡಿತರವಿಲ್ಲ, ಮನೆ ಇಲ್ಲ (ಸಿಕ್ಕಿ)” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಅಂತಹ ಹೆಚ್ಚಿನ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಕೆಲವು ಬಳಕೆದಾರರು ಸುದ್ದಿ ವಾಹಿನಿಯೊಂದರ ಕಿರು ಕ್ಲಿಪ್ ಅನ್ನು ಸಹ ಹಂಚಿಕೊಂಡಿದ್ದಾರೆ, ಅಲ್ಲಿ ಆಂಕರ್ ಅವರು ಜನಸಂಖ್ಯೆ ನಿಯಂತ್ರಣಕ್ಕಾಗಿ ಹೊಸ ಯೋಜನೆಯನ್ನು ತಂದಿದ್ದಾರೆ ಎಂದು ಹೇಳುವುದನ್ನು ಕೇಳಬಹುದು. ಈ ಪೋಷ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು.
ಆನ್‌ಲೈನ್‌ನಲ್ಲಿ ಮಾಡಿದ ಹೇಳಿಕೆಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ. ಇಂತಹ ನೀತಿಯ ಕರಡು ಮಸೂದೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರೂ ಅದು ಅಂಗೀಕಾರಗೊಂಡು ಕಾನೂನಾಗಿ ರೂಪುಗೊಂಡಿಲ್ಲ.
ವಾಸ್ತವಾಂಶಗಳು ಇಲ್ಲಿವೆ
ಚಿತ್ರದ ಮೇಲಿನ ರಿವರ್ಸ ಇಮೇಜ್ ಸರ್ಚ್ ಜೂನ್ ೬, ೨೦೨೪ ರಂದು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಎಕ್ಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಖಾತೆಯ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು. ರಾಜ್ಯದ ಸಾರ್ವಜನಿಕ ಕಲ್ಯಾಣ ಯೋಜನೆಗಳ ಪರಿಶೀಲನೆಗಾಗಿ ನಡೆದ ಸಭೆಯಲ್ಲಿ ಚಿತ್ರಗಳನ್ನು ತೆಗೆಯಲಾಗಿದೆ ಎಂದು ಪೋಷ್ಟ್ ಶೀರ್ಷಿಕೆಯಲ್ಲಿ ತಿಳಿಸಲಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯಿಂದ ಪೋಷ್ಟ್ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)
ಪೋಷ್ಟ್ ನಲ್ಲಿ ಎರಡು ಮಕ್ಕಳ ನೀತಿಯ ಕಾನೂನನ್ನು ಜಾರಿಗೆ ತರಲಾಗುತ್ತಿದೆ ಅಥವಾ ಚರ್ಚಿಸಲಾಗಿದೆ ಎಂದು ಉಲ್ಲೇಖಿಸುವುದಿಲ್ಲ.
ಇದಲ್ಲದೆ, ಹಂಚಿಕೊಳ್ಳಲಾಗುತ್ತಿರುವ ಸುದ್ದಿ ತುಣುಕು ಕೂಡ ಹಳೆಯದು. ಜುಲೈ ೧೧, ೨೦೨೧ ರಂದು ಪ್ರಕಟಿಸಲಾದ ಹಿಂದಿ ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಭಾರತ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನ ಯೂಟ್ಯೂಬ್ ಚಾನಲ್‌ನಲ್ಲಿ ಮೂಲ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈಗ-ವೈರಲ್ ಭಾಗವನ್ನು ೧೬-ನಿಮಿಷದ ಮಾರ್ಕ್‌ನಲ್ಲಿ ನೋಡಬಹುದು ಮತ್ತು ೧೮:೧೧ ಸೆಕೆಂಡುಗಳಲ್ಲಿ ಕೊನೆಗೊಳ್ಳುತ್ತದೆ. ಉತ್ತರ ಪ್ರದೇಶ ಕಾನೂನು ಆಯೋಗವು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರನ್ನು ಸರ್ಕಾರಿ ಉದ್ಯೋಗದಿಂದ ನಿರ್ಬಂಧಿಸಬೇಕೆಂದು ಶಿಫಾರಸು ಮಾಡಿದೆ ಎಂದು ಸುದ್ದಿ ನಿರೂಪಕ ಹೇಳುತ್ತಾರೆ; ಮತ್ತು ಕೆಲವು ಸರ್ಕಾರಿ ಕಲ್ಯಾಣ ಯೋಜನೆಗಳು ಮತ್ತು ಪ್ರಯೋಜನಗಳಿಗೆ ಅನರ್ಹರಾಗಿರುತ್ತಾರೆ.
ಕರಡು ಮಸೂದೆಯ ಬಗ್ಗೆ
ಎರಡು ಮಕ್ಕಳ ನೀತಿಯ ಕುರಿತು ಕೀವರ್ಡ್ ಹುಡುಕಾಟವನ್ನು ನಡೆಸುವಾಗ, ಉತ್ತರ ಪ್ರದೇಶ ಕಾನೂನು ಆಯೋಗವು ೨೦೨೧ ರಲ್ಲಿ ಜನಸಂಖ್ಯೆ ನಿಯಂತ್ರಣದ ಪ್ರಸ್ತಾವಿತ ಮಸೂದೆಯ ಕರಡನ್ನು ರಾಜ್ಯ ಸರ್ಕಾರದೊಂದಿಗೆ ಹಂಚಿಕೊಂಡಿದೆ ಎಂದು ಉಲ್ಲೇಖಿಸಿರುವ ೨೦೨೧ ರ ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ.
ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ, ೨೦೨೧ ರ ಕರಡು ಮಸೂದೆಯ ಪ್ರಕಾರ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗಳು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು, ಬಡ್ತಿ ಪಡೆಯಲು ಅಥವಾ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಲಾಭ ಪಡೆಯಲು ಅನುಮತಿಸುವುದಿಲ್ಲ. ಅಸ್ಸಾಂನಲ್ಲಿ ಇದೇ ರೀತಿಯ ನೀತಿಯು ಜಾರಿಯಲ್ಲಿದೆ, ಇದು ಅಸ್ಸಾಂ ಸಾರ್ವಜನಿಕ ಸೇವೆಗಳ (ನೇರ ನೇಮಕಾತಿಯಲ್ಲಿ ಸಣ್ಣ ಕುಟುಂಬದ ನಿಯಮಗಳ ಅನ್ವಯ) ನಿಯಮಗಳು, ೨೦೧೯ ರ ಅಡಿಯಲ್ಲಿ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರನ್ನು ಸರ್ಕಾರಿ ಉದ್ಯೋಗಗಳಿಂದ ನಿರ್ಬಂಧಿಸುತ್ತದೆ.
ಲಾಜಿಕಲಿ ಫ್ಯಾಕ್ಟ್ಸ್, ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರ ಆಪ್ತ ಕಾರ್ಯದರ್ಶಿ ಸೈಯದ್ ಅಹ್ಮದ್ ಹುಸೇನ್ ರಿಜ್ವಿ ಅವರೊಂದಿಗೆ ಮಾತನಾಡಿತು. "೨೦೨೧ ರಲ್ಲಿ ಪ್ರಸ್ತಾವನೆಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಅವರೊಂದಿಗೆ ಬಾಕಿ ಉಳಿದಿದೆ. ಅಂದಿನಿಂದ ಯಾವುದೇ ಹೊಸ ಪ್ರಸ್ತಾವನೆಗಳು ಅಥವಾ ಅನುಷ್ಠಾನಗಳು ನಡೆದಿಲ್ಲ" ಎಂದು ರಿಜ್ವಿ ಹೇಳಿದರು.
ಉತ್ತರ ಪ್ರದೇಶವು ಈ ಕಾನೂನನ್ನು ಜಾರಿಗೊಳಿಸಿದೆ ಎಂದು ನಮಗೆ ಯಾವುದೇ ಅಧಿಕೃತ ಪ್ರಕಟಣೆ ಕಂಡುಬಂದಿಲ್ಲ. ನಮ್ಮ ಸಂಶೋಧನೆಯ ಪ್ರಕಾರ, ಮಸೂದೆ ಇನ್ನೂ ರಾಜ್ಯ ಸರ್ಕಾರದ ಬಳಿ ಬಾಕಿ ಇದೆ. ನಾವು ಉತ್ತರ ಪ್ರದೇಶ ಸರ್ಕಾರದ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ, ಅಲ್ಲಿ ೨೦೨೪ ರಲ್ಲಿ ಜಾರಿಗೊಳಿಸಲಾದ ಕಾನೂನುಗಳನ್ನು ಪಟ್ಟಿ ಮಾಡಲಾಗಿದೆ ಮತ್ತು ಎರಡು ಮಕ್ಕಳ ನೀತಿಯು ಅವುಗಳಲ್ಲಿ ಕಾಣಿಸಿಕೊಂಡಿಲ್ಲ.
ತೀರ್ಪು
ಉತ್ತರ ಪ್ರದೇಶ ಸರ್ಕಾರವು ಜೂನ್ ೭, ೨೦೨೪ ರಿಂದ ಎರಡು ಮಕ್ಕಳ ನೀತಿಯನ್ನು ಜಾರಿಗೆ ತಂದಿದೆ ಎಂಬ ಹೇಳಿಕೆಯು ತಪ್ಪು. ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗದೊಂದಿಗೆ ಕೆಲಸ ಮಾಡುವ ಅಧಿಕಾರಿಯೊಬ್ಬರು ಬಿಲ್ ಇನ್ನೂ ಬಾಕಿ ಇದೆ ಮತ್ತು ಇನ್ನೂ ಜಾರಿಗೆ ಬಂದಿಲ್ಲ ಎಂದು ನಮಗೆ ತಿಳಿಸಿದರು.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here.