ಮುಖಪುಟ ಇಲ್ಲ, ನರೇಂದ್ರ ಮೋದಿಯವರು ಅಂಬಾನಿ ಮದುವೆಯಲ್ಲಿ ರಾಮಮಂದಿರದ ಟೀಕೆಗೆ ಸಂಬಂಧಿಸಿದ ಹಿಂದೂ ಸನ್ಯಾಸಿಯವರನ್ನು ಕಡೆಗಣಿಸಲಿಲ್ಲ.

ಇಲ್ಲ, ನರೇಂದ್ರ ಮೋದಿಯವರು ಅಂಬಾನಿ ಮದುವೆಯಲ್ಲಿ ರಾಮಮಂದಿರದ ಟೀಕೆಗೆ ಸಂಬಂಧಿಸಿದ ಹಿಂದೂ ಸನ್ಯಾಸಿಯವರನ್ನು ಕಡೆಗಣಿಸಲಿಲ್ಲ.

ಮೂಲಕ: ರಾಜೇಶ್ವರಿ ಪರಸ

ಜುಲೈ 22 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ನರೇಂದ್ರ ಮೋದಿಯವರು ಅಂಬಾನಿ ಮದುವೆಯಲ್ಲಿ ರಾಮಮಂದಿರದ ಟೀಕೆಗೆ ಸಂಬಂಧಿಸಿದ ಹಿಂದೂ ಸನ್ಯಾಸಿಯವರನ್ನು ಕಡೆಗಣಿಸಲಿಲ್ಲ. ರಾಮ ಮಂದಿರದ ಕುರಿತಾದ ತಮ್ಮ ನಿಲುವಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಶಂಕರಾಚಾರ್ಯರಲ್ಲಿ ಒಬ್ಬರನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳುವ ಹೇಳಿಕೆಯ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಭಯ ಸನ್ಯಾಸಿಗಳಿಗೆ ಮೋದಿಯವರು ನಮಸ್ಕರಿಸುವುದನ್ನು ಸಂಪೂರ್ಣ ವೀಡಿಯೋ ತೋರಿಸುತ್ತದೆ. ಅವರು ಸ್ವಾಮಿ ಅವಿಮುಕ್ತೇಶ್ವರಾನಂದರನ್ನ ಕಡೆಗಣಿಸಲಿಲ್ಲ.

ಹೇಳಿಕೆ ಏನು?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಬಣ್ಣದ ಬಟ್ಟೆ ಧರಿಸಿದ ಸನ್ಯಾಸಿಯನ್ನು ಸ್ವಾಗತಿಸುತ್ತಿರುವ ೨೪ ಸೆಕೆಂಡುಗಳ ವೀಡಿಯೋ ವೈರಲ್ ಆಗಿದ್ದು, ಮೋದಿ ಒಬ್ಬ ಶಂಕರಾಚಾರ್ಯರಿಂದ (ಹಿಂದೂ ಗುರು ಆದಿ ಶಂಕರಾಚಾರ್ಯರು ಸ್ಥಾಪಿಸಿದ ಹಿಂದೂ ಮಠಗಳ ಮುಖ್ಯಸ್ಥ) ಆಶೀರ್ವಾದವನ್ನು ಮಾತ್ರ ಕೋರಿದರು ಮತ್ತು ಇನ್ನೊಬ್ಬರನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಲಾಗಿದೆ.

ಅಯೋಧ್ಯೆಯಲ್ಲಿನ ರಾಮಮಂದಿರದ ಕುರಿತಾದ ಕಾಮೆಂಟ್‌ಗಳು ಮತ್ತು ೨೦೨೪ ರ ಜನವರಿಯಲ್ಲಿ ದೇವಾಲಯದ ಶಂಕುಸ್ಥಾಪನೆಗೆ ಹಾಜರಾಗಲು ನಿರಾಕರಿಸಿದ ಕಾರಣಕ್ಕಾಗಿ ಮೋದಿ ಎರಡನೇ ಸನ್ಯಾಸಿಯವರನ್ನು ತಿರಸ್ಕರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಈ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ: “ಅನಂತ್ ಅಂಬಾನಿ ಅವರ ವಿವಾಹದ ಸಮಯದಲ್ಲಿ, ಮೋದಿಜಿ ಅವರು ಹಾಜರಿದ್ದ ಇಬ್ಬರು ಶಂಕರಾಚಾರ್ಯರಲ್ಲಿ ಒಬ್ಬರ  ಪಾದಗಳನ್ನು ಸ್ಪರ್ಶಿಸಿ ಅವರ ಆಶೀರ್ವಾದ ಪಡೆದರು. ಇತರ ಶಂಕರಾಚಾರ್ಯರು ರಾಮ ಮಂದಿರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಮತ್ತು ಅದರ ಉದ್ಘಾಟನೆಗೆ ಆಹ್ವಾನವನ್ನು ನಿರಾಕರಿಸಿದರು. ಮೋದಿಜಿ ಅವರತ್ತ ತಿರುಗಿಯೂ ನೋಡಲಿಲ್ಲ, ಇದು ಘೋರ ಅವಮಾನ (ಹಿಂದಿಯಿಂದ ಅನುವಾದಿಸಲಾಗಿದೆ)." ಒಂದೇ ರೀತಿಯ ಪೋಷ್ಟ್ ಗಳಿಗೆ ಆರ್ಕೈವ್ ಲಿಂಕ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.


ಆನ್‌ಲೈನ್‌ನಲ್ಲಿ ಕಂಡ ಪೋಷ್ಟ್‌ಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಜುಲೈ ೧೩, ೨೦೨೪ ರಂದು ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವನ್ನು ವೀಡಿಯೋ ಉಲ್ಲೇಖಿಸುತ್ತದೆ. ಪ್ರಧಾನ ಮಂತ್ರಿಗಳು ಮತ್ತು ಇತರ ವಿವಿಧ ಗಣ್ಯರ ಜೊತೆಗೆ, ದ್ವಾರಕಾ ಪೀಠದ ಶಂಕರಾಚಾರ್ಯ, ಸ್ವಾಮಿ ಸದಾನಂದ ಸರಸ್ವತಿ, ಮತ್ತು ಜ್ಯೋತಿಮಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದರು ಸಹ ಉಪಸ್ಥಿತರಿದ್ದರು

ಜನವರಿ ೨೦೨೪ ರಲ್ಲಿ, ಸ್ವಾಮಿ ಅವಿಮುಕ್ತೇಶ್ವರಾನಂದರು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದರು, ದೇವಾಲಯದ ಪೂರ್ಣಗೊಳಿಸುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಆದರೆ, ದೇವಸ್ಥಾನವನ್ನು ಟೀಕಿಸಿದ ಸನ್ಯಾಸಿಯನ್ನು ಮೋದಿ 'ನಿರ್ಲಕ್ಷಿಸಿದ್ದಾರೆ' ಎಂದು ಸೂಚಿಸುವ  ವೀಡಿಯೋದಲ್ಲಿ ಸಂದರ್ಭದಿಂದ ಹೊರಗಿರುವ ಹೇಳಿಕೆಯ ಹೊರತಾಗಿಯೂ, ಪ್ರಧಾನಿ ಮದುವೆಯಲ್ಲಿ ಇಬ್ಬರೂ ಸನ್ಯಾಸಿಗಳಿಂದ ಆಶೀರ್ವಾದವನ್ನು ಕೋರಿದ್ದಾರೆ ಎಂಬುದನ್ನು  ಪುರಾವೆಗಳು ತೋರಿಸುತ್ತವೆ.

ವಾಸ್ತವಾಂಶಗಳು ಇಲ್ಲಿವೆ

ವೈರಲ್ ವೀಡಿಯೋ ಮೇಲಿನ ಬಲ ಮೂಲೆಯಲ್ಲಿ ಇಂಡಿಯಾ ಟಿವಿ ಲೋಗೋವನ್ನು ಒಳಗೊಂಡಿದೆ. ಇಂಡಿಯಾ ಟಿವಿ ಜುಲೈ ೧೪, ೨೦೨೪ ರಂದು ಇನಸ್ಟಾಗ್ರಾಮ್ ನಲ್ಲಿ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ), ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಅವರು ಪ್ರಧಾನಿ ಮೋದಿಯನ್ನು ಆಶೀರ್ವದಿಸಿದರು ಮತ್ತು ಶಾಲು ಹೊದಿಸಿದರು ಎಂದು ಹೇಳುವ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. 

ಆದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಚಾನಲ್ ಹಂಚಿಕೊಂಡ ಮತ್ತೊಂದು ವೀಡಿಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮೋದಿ ಇತರ ಶಂಕರಾಚಾರ್ಯರಿಂದ ಆಶೀರ್ವಾದ ಪಡೆಯುವುದನ್ನು ತೋರಿಸುತ್ತದೆ. ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರು ತಾವು ಧರಿಸಿದ್ದ ‘ರುದ್ರಾಕ್ಷ’ ಮಾಲೆಯನ್ನು ತೆಗೆದು ಮೋದಿಯವರಿಗೆ ನೀಡಿದ್ದು, ಪ್ರಧಾನಿ ಅವರನ್ನು ಕಡೆಗಣಿಸಿಲ್ಲ ಎಂಬುದನ್ನು ಪ್ರದರ್ಶಿಸುತ್ತದೆ ಎಂದು ವೀಡಿಯೋ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ. 


ಮೋದಿಯವರು ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಭೇಟಿಯಾಗಿರುವುದನ್ನು ತೋರಿಸುವ ಇಂಡಿಯಾಟಿವಿ ಇನ್‌ಸ್ಟಾಗ್ರಾಮ್ ಪೋಷ್ಟ್‌ನ ಸ್ಕ್ರೀನ್‌ಶಾಟ್. (ಮೂಲ: ಇನ್‌ಸ್ಟಾಗ್ರಾಮ್/ಇಂಡಿಯಾಟಿವಿ)

ಅಂಬಾನಿ ಮದುವೆಯ CNN-News18 ನ ಲೈವ್‌ಸ್ಟ್ರೀಮ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ೨:೫೮:೦೮ ಕ್ಕೆ ಸ್ವಾಮಿ ಅವಿಮುಕ್ತೇಶ್ವರಾನಂದರಿಂದ ಮೋದಿ ಆಶೀರ್ವಾದ ಪಡೆಯುವುದನ್ನು ಸಹ ಸೆರೆಹಿಡಿಯಲಾಗಿದೆ. 

ಹೆಚ್ಚುವರಿಯಾಗಿ, ಗುಜರಾತಿ ಜಾಗರಣದ ವರದಿಯು ಸಮಾರಂಭದಲ್ಲಿ ಮೋದಿ ಮತ್ತು ಅವಿಮುಕ್ತೇಶ್ವರಾನಂದರ ಚಿತ್ರ ಮತ್ತು ಶಂಕರಾಚಾರ್ಯರು ಮೋದಿಯ ಭೇಟಿಯ ಕುರಿತು ಚರ್ಚಿಸುತ್ತಿರುವ ಮತ್ತು ಅವರ ಆಶೀರ್ವಾದವನ್ನು ಪಡೆಯುವ ವೀಡಿಯೋವನ್ನು ಒಳಗೊಂಡಿದೆ.


ಮೋದಿಯವರು ಸನ್ಯಾಸಿಯನ್ನು ಭೇಟಿಯಾಗಿರುವುದನ್ನು ತೋರಿಸುವ ಗುಜರಾತಿ ಜಾಗರಣ್ ವರದಿ (ಮೂಲ: gujaratijagran.com/ಸ್ಕ್ರೀನ್ ಶಾಟ್ )

ಮದುವೆಯ ನಂತರ, ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರು ಮಾಧ್ಯಮಗಳೊಂದಿಗೆ ಮಾತನಾಡಿದರು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮತ್ತು ಹೀಗೆ ಹೇಳಿದರು, “ಮೋದಿ ನನ್ನ ಬಳಿಗೆ ಬಂದರು; ಅವರು ನಮ್ಮನ್ನು ಸ್ವಾಗತಿಸಿದರು. ಇದು ನಮ್ಮ ಪದ್ಧತಿ. ಯಾರಾದರೂ ನಮ್ಮ ಬಳಿಗೆ ಬಂದರೆ, ನಾವು ಅವರಿಗೆ ಆಶೀರ್ವಾದ ಮಾಡುತ್ತೇವೆ. ನರೇಂದ್ರ ಮೋದಿ ನಮ್ಮ ಶತ್ರು ಅಲ್ಲ.” 

ತೀರ್ಪು

೨೦೨೪ ರ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯ ವಿರುದ್ಧ ಮಾತನಾಡಿದ ಹಿಂದೂ ಸನ್ಯಾಸಿಯನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಲಕ್ಷಿಸಲಿಲ್ಲ. ಅವರು ಅಂಬಾನಿ ಮದುವೆಯಲ್ಲಿ ಇಬ್ಬರೂ ಶಂಕರಾಚಾರ್ಯರನ್ನು ಭೇಟಿಯಾದರು ಮತ್ತು ಅವರು ಇಬ್ಬರಿಂದಲೂ ಶುಭಾಶಯಗಳನ್ನು ಹಾಗು ಆಶೀರ್ವಾದವನ್ನು ಪಡೆದರು ಎಂದು ವೀಡಿಯೋಗಳು ಖಚಿತಪಡಿಸುತ್ತವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ