ಮೂಲಕ: ವಿವೇಕ್ ಜೆ
ಮಾರ್ಚ್ 3 2023
ಐದು ಪ್ರತಿಶತದಷ್ಟು ಆರೋಗ್ಯ ಸೇವಾ ತೆರಿಗೆಯನ್ನು ವಿಧಿಸುವ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ೨೦೧೧ ರಲ್ಲಿ ಬರೆದ ಪತ್ರವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ನಿರೂಪಿಸಲಾಗಿದೆ.
ಸಂದರ್ಭ
ಭಾರತದ ಖ್ಯಾತ ಹೃದ್ರೋಗ ತಜ್ಞ ಹಾಗು ನಾರಾಯಣ ಹೆಲ್ತ್‌ನ ಅಧ್ಯಕ್ಷರಾದ ಡಾ. ದೇವಿ ಶೆಟ್ಟಿಯವರು ಬರೆದಿರುವುದಾಗಿ ತೋರಿಸುವಂತಹ ಪತ್ರವೊಂದನ್ನು ತೋರಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ಎ ಲೆಟರ್ ಟು ಆಮ್ ಆದ್ಮಿ" ಎಂಬ ಶೀರ್ಷಿಕೆಯನ್ನು ಹೊಂದಿರುವ ಈ ಪತ್ರವು ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಶೇಕಡಾ ೫ ಪ್ರತಿಶತದಷ್ಟು ಆರೋಗ್ಯ ಸೇವಾ ತೆರಿಗೆಯನ್ನು ಟೀಕಿಸುತ್ತದೆ. ಈ ಪತ್ರವನ್ನು ಕೆಲವು ರಾಜಕಾರಣಿಗಳು ಸೇರಿದಂತೆ ಹಲವಾರು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವನ್ನು ಹಾಗೂ ಭಾರತದ ಇಂದಿನ ತೆರಿಗೆ ವ್ಯವಸ್ಥೆಯನ್ನು ಟೀಕಿಸುವಂತೆ ಹಂಚಿಕೊಂಡಿದ್ದಾರೆ. ಆದರೆ, ಈ ಪತ್ರವನ್ನು ತಪ್ಪಾದ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗಿದೆ.
ವಾಸ್ತವವಾಗಿ
ವೈರಲ್ ಚಿತ್ರದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಸಾಮಾಜಿಕ ಮಾಧ್ಯಮ ಬಳಕೆದಾರರು ೨೦೧೭ ರಲ್ಲಿಯೂ ಕೂಡ ಇದೇ ಪತ್ರವನ್ನು ಹಂಚಿಕೊಂಡಿದ್ದರು ಎಂದು ಕಂಡು ಬಂದಿದೆ. ಇಂತಹ ಒಂದು ಪತ್ರವನ್ನು ಬರೆದುದ್ದಕ್ಕೆ ಡಾ. ಶೆಟ್ಟಿಯವರನ್ನು ಶ್ಲಾಘಿಸುವಂತೆ ತೋರಿಸುವ ಹಲವಾರು ಪೋಷ್ಟ್ ಗಳನ್ನು ನಾವು ಕಂಡುಕೊಂಡಿದ್ದೇವೆ. ಕೀವರ್ಡ್‌ಗಳ ವಿವರವಾದ ಸರ್ಚ್ ಮಾಡಿದಾಗ ಮಾರ್ಚ್ ೨೦೧೧ ರಲ್ಲಿ ಪ್ರಕಟಿತಗೊಂಡ ಲೇಖನಗಳು ಮತ್ತು ಬ್ಲಾಗ್ ಪೋಷ್ಟ್ ಗಳು ಕಂಡುಬಂದವು.
ಆರೋಗ್ಯ ಸೇವೆಯ ಮೇಲಿನ ಸೇವಾ ತೆರಿಗೆಯನ್ನು "ಮೈಸರೀ ಟ್ಯಾಕ್ಸ್" ಎಂದು ವೈದ್ಯಕೀಯ ಸಮುದಾಯವು ಹೇಳಿದ್ದು, ಈ ಪ್ರಸ್ತಾವನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿತು, ಎಂಬ ಸುದ್ದಿಯನ್ನು ಹೊಂದಿರುವ ವರದಿಯೊಂದು ಮಾರ್ಚ್ ೨೦೧೧ ರಲ್ಲಿ ಪ್ರಕಟವಾಗಿತ್ತು. ಈ ವರದಿಯು ಮಾರ್ಚ್ ೧೨ ರಂದು ವೈದ್ಯಕೀಯ ಕಾರ್ಯಕರ್ತರು ಆರೋಗ್ಯ ಸೇವಾ ತೆರಿಗೆ ವಿರೋಧಿಸಿ ಪ್ರತಿಭಟಿಸಲು ಹಾಗು ಅದನ್ನು ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸುವಂತೆ "ಮೈಸರೀ ಡೇ" ಎಂದು ಘೋಷಣೆ ಮಾಡಿತ್ತು. ಇದೇ ಸುದ್ದಿ ವರದಿಯಲ್ಲಿ ಡಾ. ದೇವಿ ಶೆಟ್ಟಿಯವರು ಬರೆದ ಪತ್ರವನ್ನು ಉಲ್ಲೇಖಿಸಲಾಗಿದೆ.
ಪ್ರಾಸಂಗಿಕವಾಗಿ, ಪ್ರಣಬ್ ಮುಖರ್ಜಿ ಅವರು ಹಣಕಾಸು ಸಚಿವರಾಗಿದ್ದಾಗ (ಎಫ್‌ಎಂ) ಆಗಿನ ಕೇಂದ್ರ ಸರ್ಕಾರವು ೨೦೧೧-೧೨ ರ ಕೇಂದ್ರ ಬಜೆಟ್‌ನಲ್ಲಿ ಐದು ಪ್ರತಿಶತದಷ್ಟು ಆರೋಗ್ಯ ಸೇವಾ ತೆರಿಗೆಯನ್ನು ಪ್ರಸ್ತಾಪಿಸಿತ್ತು. ಈ ಪ್ರಸ್ತಾಪದ ಬಗ್ಗೆ ವೈದ್ಯಕೀಯ ಸಮುದಾಯದಿಂದ ಟೀಕೆಗಳ ಕುರಿತು ಹಲವಾರು ಸುದ್ದಿ ವರದಿಗಳಿವೆ.
ನಂತರ, ಸರ್ಕಾರವು ಆ ಪ್ರಸ್ತಾವನೆಯನ್ನು ಹಿಂತೆಗೆದುಕೊಂಡಿದ್ದು ಮಾರ್ಚ್ ೨೨, ೨೦೧೧ ರಂದು ಪ್ರಕಟವಾದ ಲೈವ್ ಮಿಂಟ್ ವರದಿಯು ಡಾ. ಶೆಟ್ಟೆಯವರನ್ನು ಉಲ್ಲೇಖಿಸಿದ್ದು ಹೀಗೆ - "ಸೇವಾ ತೆರಿಗೆಯನ್ನು ಹಿಂಪಡೆಯಲು ಹಣಕಾಸು ಸಚಿವರು ನಿರ್ಧರಿಸಿರುವುದು ನನಗೆ ಖುಷಿ ತಂದಿದೆ. ನಾನು ಎರಡು ವಾರಗಳ ಹಿಂದೆ ಎಫ್‌ಎಂ ಅವರನ್ನು ಭೇಟಿಯಾದ ಸಮಯದಲ್ಲಿ ಅವರು ಈ ತೆರಿಗೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಮತ್ತು ಅದರ ಬಗ್ಗೆ ಏನಾದರೂ ಮಾಡಲು ಬಯಸುತ್ತಿದ್ದೇನೆ ಎಂದು ಅವರು ಅಭಿಪ್ರಾಯಪಟ್ಟಿದ್ದರು." ಅಧಿಕೃತ ಕಾಮೆಂಟ್‌ಗಾಗಿ ನಾವು ನಾರಾಯಣ ಹೆಲ್ತ್ ಅವರನ್ನು ಸಂಪರ್ಕಿಸಿದ್ದೇವೆ. ಅವರ ಪ್ರತಿಕ್ರಿಯೆಯು ಲಭಿಸಿದ ನಂತರ ಈ ಫ್ಯಾಕ್ಟ್ ಚೆಕ್ ಅನ್ನು ನವೀಕರಿಸುತ್ತೇವೆ.
ಹೀಗಾಗಿ, ಡಾ. ಶೆಟ್ಟಿಯವರು ಇತ್ತೀಚೆಗೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿರುವ ಮೋದಿ ಸರ್ಕಾರದ ತೆರಿಗೆ ನೀತಿಗಳನ್ನು ಟೀಕಿಸಿ ಪತ್ರ ಬರೆದಿದ್ದಾರೆ ಎಂದು ತೋರಿಸಲು ೨೦೧೧ ರಲ್ಲಿ ಬರೆದ ಪತ್ರವನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ತನ್ನ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋವಾದ ಪಿಐಬಿ ಫ್ಯಾಕ್ಟ್ ಚೆಕ್ ಕೂಡ ಈ ಮೇಲಿನ ಹೇಳಿಕೆಯನ್ನು ತಪ್ಪು ಎಂದು ಹೇಳಿಕೊಂಡಿದೆ.
ತೀರ್ಪು
ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿಯವರು ೨೦೧೧ ರಲ್ಲಿ ಆಗಿನ ಯುಪಿಎ ಸರ್ಕಾರವು ಪ್ರಸ್ತಾಪಿಸಿದ್ದ ಶೇ.೫ ರಷ್ಟು ಆರೋಗ್ಯ ಸೇವಾ ತೆರಿಗೆಯನ್ನು ವಿರೋಧಿಸಿ ಬರೆದ ಪತ್ರವನ್ನು ೨೦೨೩ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಕೆಲವರು ಅದನ್ನು ಇತ್ತೀಚಿನ ಪತ್ರವೆಂದು ತಪ್ಪಾಗಿ ಗ್ರಹಿಸಿಕೊಂಡು ಪ್ರಸ್ತುತ ಸರ್ಕಾರದ ತೆರಿಗೆ ಪ್ರಸ್ತಾಪಗಳ ಬಗ್ಗೆಯ ಡಾ. ಶೆಟ್ಟಿಅವರ ಟೀಕೆಗೆ ಅವರು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಆದ್ದರಿಂದ, ಈ ಹೇಳಿಕೆಯನ್ನು ನಾವು ಸಂಧರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.