ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ನವೆಂಬರ್ 30 2023
ಕಾಂಗ್ರೆಸ್ ಅಧ್ಯಕ್ಷರು ರಾಹುಲ್ ಗಾಂಧಿಯವರನ್ನು ಹುತಾತ್ಮ ಎಂದು ತಪ್ಪಾಗಿ ಕರೆದಿದ್ದು ಅವರು ಶೀಘ್ರವಾಗಿ ತಮ್ಮನ್ನು ತಾವು ಸರಿಪಡಿಸಿಕೊಂಡು ಕ್ಷಮೆಯಾಚಿಸಿದರು.
ಉತ್ತರ ಭಾರತದ ರಾಜ್ಯವಾದ ರಾಜಸ್ಥಾನದಲ್ಲಿ ನವೆಂಬರ್ ೨೫ ರಂದು ಚುನಾವಣೆ ನಡೆಯಿತು ಮತ್ತು ಈಗ ಫಲಿತಾಂಶಗಳಿಗಾಗಿ ಕಾಯುತ್ತಿದೆ. ಅದು ಡಿಸೆಂಬರ್ ೩ ರಂದು ಪ್ರಕಟವಾಗಲಿದೆ. ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ೨೪ ಗಂಟೆಗಳ ಕಾಲ ಸಕ್ರಿಯವಾಗಿ ಪ್ರಚಾರ ಮಾಡುವುದನ್ನು ರಾಜಸ್ಥಾನವು ಕಂಡಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಶ್ರೀಗಂಗಾನಗರ ಮತ್ತು ಹನುಮಾನ್‌ಗಢದಲ್ಲಿ ರ‍್ಯಾಲಿಗಳನ್ನುದ್ದೇಶಿಸಿ, ರಾಜ್ಯ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿ ಮಾತನಾಡಿದರು.
ಇಲ್ಲಿನ ಹೇಳಿಕೆಯೇನು?
ರಾಜಸ್ಥಾನದಲ್ಲಿ ಖರ್ಗೆ ಅವರ ರ‍್ಯಾಲಿಗಳ ಹಿನ್ನೆಲೆಯಲ್ಲಿ, ಅವರ ಭಾಷಣದ ೮ ಸೆಕೆಂಡುಗಳ ಸುದೀರ್ಘ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಕ್ಲಿಪ್‌ನಲ್ಲಿ, "ರಾಹುಲ್ ಗಾಂಧಿಯಂತಹ ನಾಯಕರು ಈ ರಾಷ್ಟ್ರದ ಏಕತೆಗಾಗಿ ತಮ್ಮ ಪ್ರಾಣವನ್ನೇ ಕೊಟ್ಟರು" ಎಂದು ಖರ್ಗೆ ಹೇಳುವುದನ್ನು ಕೇಳಬಹುದು. ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮಗ - ರಾಜೀವ್ ಗಾಂಧಿಯವರು ೧೯೯೧ ರಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹತ್ಯೆಗೀಡಾದರು.
ಭಾರತೀಯ ಜನತಾ ಪಕ್ಷದ (ಬಿಜೆಪಿ) ಐಟಿ ಸೆಲ್‌ನ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವಿಯ ಅವರು "ಖರ್ಗೆ ಜೀ ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಪೋಷ್ಟ್ ಅನ್ನು ಪ್ರಕಟಿಸುವ ಸಮಯದಲ್ಲಿ ೩೦,೦೦೦ ವೀಕ್ಷಣೆಗಳನ್ನು ಹೊಂದಿತ್ತು.
ಮತ್ತೊಬ್ಬ ಎಕ್ಸ್ ಬಳಕೆದಾರರು ಹಿಂದಿ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ, "ರಾಹುಲ್ ಗಾಂಧಿ ದೇಶದ ಏಕತೆಗಾಗಿ ತಮ್ಮ ಪ್ರಾಣವನ್ನು ನೀಡಿದರು! ಇದು ಯಾವಾಗ ಸಂಭವಿಸಿತು? (ಕನ್ನಡಕ್ಕೆ ಅನುವಾದಿಸಲಾಗಿದೆ)" ಪೋಷ್ಟ್ ನ ಆರ್ಕೈವ್‌ಗಳು ಮತ್ತು ಅಂತಹುದೇ ಆದ ಪೋಷ್ಟ್ ಗಳ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ವೈರಲ್ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಇದೇ ವೀಡಿಯೋ ಫೇಸ್‌ಬುಕ್ ನಲ್ಲಿಯೂ ಹರಿದಾಡುತ್ತಿದೆ. 'মোদীৰ সৈতে অসম' ಎಂಬ ಅಸ್ಸಾಮಿ ಫೇಸ್‌ಬುಕ್ ಪುಟವೊಂದು("ಮೋದಿಯವರೊಂದಿಗೆ ಅಸ್ಸಾಂ" ಎಂದು ಕನ್ನಡಕ್ಕೆ ಅನುವಾದಿಸುತ್ತದೆ) ಸ್ಪ್ಲಿಟ್-ಸ್ಕ್ರೀನ್ ವೀಡಿಯೋವನ್ನು ಹಂಚಿಕೊಂಡಿದೆ. ಎಡಭಾಗದಲ್ಲಿ ಖರ್ಗೆ ಅವರ ೮ ಸೆಕೆಂಡುಗಳ ಕ್ಲಿಪ್ ಇದ್ದರೆ, ಬಲಭಾಗದಲ್ಲಿ ರಾಹುಲ್ ಗಾಂಧಿ ಇದ್ದಾರೆ. ಖರ್ಗೆಯವರ ವೀಡಿಯೋ ನಂತರ, "ರಾಹುಲ್ ಗಾಂಧಿ, ನಾನು ಅವನನ್ನು ನಿಮ್ಮ ಮನಸ್ಸಿನಲ್ಲಿ ಕೊಂದಿದ್ದೇನೆ, ಅವನು ಅಲ್ಲಿದ್ದಾನೆ, ಅವನು ನನ್ನ ಮನಸ್ಸಿನಲ್ಲಿಲ್ಲ, ಅವನು ಹೋದನು, ಅವನು ಹೋದನು (ಹಿಂದಿಯಿಂದ ಅನುವಾದಿಸಲಾಗಿದೆ)" ಎಂದು ರಾಹುಲ್ ಗಾಂಧಿ ಹೇಳುವುದು ಕೇಳಿಸುತ್ತದೆ. ಪೋಷ್ಟ್ ನಲ್ಲಿ ಕಂಡುಬಂದ ಅಸ್ಸಾಮಿ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ, "ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳನ್ನು ಕೇಳಿದಾಗ ಪ್ರತಿಯೊಬ್ಬರ ಕಣ್ಣುಗಳು ಅವರ ಹಣೆಯ ಮೇಲೆ ಇರುತ್ತದೆ!" ಎಂದು ಹೇಳುತ್ತದೆ.
ಕ್ಲಿಪ್ ಮಾಡಿದ ವೀಡಿಯೋವನ್ನು ಹಂಚಿಕೊಂಡ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ರಾಹುಲ್ ಗಾಂಧಿ ಸತ್ತಿದ್ದಾರೆ ಎಂದು ಸೂಚಿಸಿದ್ದಕ್ಕಾಗಿ ಖರ್ಗೆ ಅವರನ್ನು ಅಪಹಾಸ್ಯ ಮಾಡಲು ವೈರಲ್ ವೀಡಿಯೋವನ್ನು ಕ್ಲಿಪ್ ಮಾಡಲಾಗಿದೆ ಮತ್ತು ತಪ್ಪುದಾರಿಗೆಳೆಯುವ ಸಂದರ್ಭದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಖರ್ಗೆ ಅವರು ಹೇಳಿಕೆ ನೀಡಿದ ಕೂಡಲೇ, ಅವರು ಕ್ಷಮೆ ಕೇಳುತ್ತ ಅದನ್ನು ಸರಿಪಡಿಸಿಕೊಂಡರು.
ಸತ್ಯಾಂಶಗಳೇನು?
ಇದರ ಕುರಿತು ಗೂಗಲ್ ಸರ್ಚ್ ನಡೆಸಿದಾಗ, ಹಲವಾರು ಸುದ್ದಿವಾಹಿನಿಗಳು ಪ್ರಶ್ನಾರ್ಹ ಘಟನೆಯನ್ನು ಒಳಗೊಂಡಿರುವ ಸುದ್ದಿ ವರದಿಗಳನ್ನು ಪ್ರಕಟಿಸಿರುವುದಾಗಿ ನಾವು ಕಂಡುಕೊಂಡಿದ್ದೇವೆ. ನವೆಂಬರ್ ೨೦ ರಂದು, ರಾಜಸ್ಥಾನದಲ್ಲಿ ನಡೆದ ರ‍್ಯಾಲಿಯಲ್ಲಿ, ಖರ್ಗೆ ಅವರು ಬಾಯಿ ತಪ್ಪಿ ರಾಹುಲ್ ಗಾಂಧಿಯನ್ನು ಹುತಾತ್ಮ ಎಂದು ಉಲ್ಲೇಖಿಸಿದ್ದಾರೆ ಎಂದು ಇಂಡಿಯಾ ಟುಡೇ ಮತ್ತು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿವೆ. ಆದರೆ, ಅವರ ತಪ್ಪಾದ ಹೆಸರನ್ನು ಹೇಳಿದ ಬಗ್ಗೆ ಯಾರೋ ಒಬ್ಬರು ತಕ್ಷಣ ಎಚ್ಚರಿಸಿದ ನಂತರ, ಖರ್ಗೆ ಅವರು ತಮ್ಮ ತಪ್ಪನ್ನು ಸರಿಪಡಿಸಿ ರಾಜೀವ್ ಗಾಂಧಿಯೆಂದು ತಿದ್ದಿಕೊಂಡರು. ಹಿಂದೂಸ್ತಾನ್ ಟೈಮ್ಸ್ ವರದಿಯು ಕಾಂಗ್ರೆಸ್ ಅಧ್ಯಕ್ಷರ ಈ ಬಾಯಿ ತಪ್ಪಿ ಹೇಳಿದ ವಿಷಯವನ್ನು ಬಿಜೆಪಿಯು ತಕ್ಷಣ ತೆಗೆದುಕೊಂಡು ಖರ್ಗೆ ಅವರನ್ನು ಟೀಕಿಸಿತು ಮತ್ತು ಅವರ ಭಾಷಣದ ಕ್ಲಿಪ್ ಮಾಡಿದ ವೀಡಿಯೋವನ್ನು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ಹಂಚಿಕೊಂಡು, "ಇದು ಯಾವಾಗ ಸಂಭವಿಸಿತು?" ಎಂಬ ಶೀರ್ಷಿಕೆಯನ್ನು ಸೇರಿಸಿದೆ, ಎಂದು ಹೇಳಿಕೊಂಡಿದೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಖರ್ಗೆಯವರ ಭಾಷಣದ ವಿಸ್ತೃತ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ನವೆಂಬರ್ ೨೦ ರಂದು ಹಿಂದಿ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದನ್ನು ಅನುವಾದಿಸಿದಾಗ "ಮಲ್ಲಿಕಾರ್ಜುನ ಖರ್ಗೆ ವೇದಿಕೆಯಲ್ಲಿ ಕೋಪಗೊಂಡರು, ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ನಿಂದಿಸಿದರು | ರಾಜಸ್ಥಾನ ಚುನಾವಣೆ" ಎಂದು ಹೇಳುತ್ತದೆ.
೨೩ ನಿಮಿಷಗಳಿಗಿಂತ ಹೆಚ್ಚು ಅವಧಿಯ ಮೂಲ ವೀಡಿಯೋದಲ್ಲಿ ಸುಮಾರು ೧೧:೦೭ ನುಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ, ಖರ್ಗೆ ಅವರು ಹೇಳುವುದನ್ನು ಕೇಳಬಹುದು, "ಕಾಂಗ್ರೆಸ್ ಪಕ್ಷವು ರಾಷ್ಟ್ರವನ್ನು ಮುನ್ನಡೆಸಲು ಸಮರ್ಪಿಸಿಕೊಂಡಿದೆ, ಅಂತಿಮ ತ್ಯಾಗ ಮಾಡಿದ ಇಂದಿರಾ ಗಾಂಧಿಯವರಂತಹ ಪ್ರಮುಖ ನಾಯಕರು ಮತ್ತು ದೇಶದ ಏಕತೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು ರಾಹುಲ್ ಗಾಂಧಿಯವರು" ಎಂದರು. ಸ್ವಲ್ಪ ಸಮಯದ ನಂತರ, ಅವರು ವೇದಿಕೆಯಲ್ಲಿ ಅಡಚಣೆಯನ್ನು ಒಪ್ಪಿಕೊಂಡರು ಮತ್ತು ರಾಜೀವ್ ಗಾಂಧಿಯವರ ಹೆಸರನ್ನು ತೆಗೆದುಕೊಂಡು ಸ್ವತಃ ತಮ್ಮ ಮಾತನ್ನು ಸರಿಪಡಿಸಿಕೊಂಡರು. ಅವರು ಕ್ಷಮೆಯಾಚಿಸುತ್ತಾ, "ನನ್ನ ಮಾಧ್ಯಮದ ಸ್ನೇಹಿತರು ಮತ್ತು ಇತರ ಜನರೇ...ಕ್ಷಮಿಸಿ" ಎಂದು ಹೇಳುವ ಮೂಲಕ, ನಂತರ "ರಾಜೀವ್ ಗಾಂಧಿ ಅವರು ದೇಶದ ಏಕತೆಗಾಗಿ ತಮ್ಮ ಪ್ರಾಣವನ್ನು ನೀಡಿದರು, ಹಾಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಜನರನ್ನು ಕಾಂಗ್ರೆಸ್ ಹೊಂದಿದೆ ... (ಕನ್ನಡಕ್ಕೆ ಅನುವಾದಿಸಲಾಗಿದೆ) "
ಆದರೆ, ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋ, ವಾಸ್ತವವಾಗಿ ಕಾಂಗ್ರೆಸ್ ನಾಯಕನನ್ನು ಅಪಹಾಸ್ಯ ಮಾಡಲು ಉದ್ದೇಶಪೂರ್ವಕವಾಗಿ ಎಡಿಟ್ ಮಾಡಿದ ಕ್ಲಿಪ್ ಆಗಿದೆ. ಖರ್ಗೆ ಅವರ ತಕ್ಷಣದ ತಿದ್ದುಪಡಿಯನ್ನು ಮತ್ತು ಕ್ಷಮೆಯಾಚಿಸುವುದನ್ನು ವೀಡಿಯೋ ಆಯಕಟ್ಟಿನ ರೀತಿಯಲ್ಲಿ ಬಿಟ್ಟುಬಿಡುತ್ತದೆ. ಅನೇಕ ಪೋಷ್ಟ್ ಗಳು ಖರ್ಗೆ ಅವರನ್ನು ಸರಳವಾಗಿ ಅಪಹಾಸ್ಯ ಮಾಡಿದರೆ, ಕೆಲವರು ರಾಹುಲ್ ಗಾಂಧಿಯವರ ಜನವರಿ ೨೦೨೩ ರ ಹೇಳಿಕೆಯನ್ನು ಸೇರಿಸಿ ವೀಡಿಯೋವನ್ನು ಎಡಿಟ್ ಮಾಡಿದ್ದಾರೆ. ಆ ಕ್ಲಿಪ್ ನಲ್ಲಿ ಅವರು ತಮ್ಮ ಭಾರತ್ ಜೋಡೋ ಯಾತ್ರೆಯ ಕುರಿತು ವರದಿಗಾರರ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು, "ರಾಹುಲ್ ಗಾಂಧಿ ನಿಮ್ಮ ತಲೆಯಲ್ಲಿದ್ದಾರೆ. ನಾನು ಅವರನ್ನು ಕೊಂದಿದ್ದೇನೆ. ಅವನು ನನ್ನ ಮನಸ್ಸಿನಲ್ಲಿ ಇಲ್ಲ, ಅವನು ಹೋದನು, ಹೋದನು."
ತೀರ್ಪು
ವೈರಲ್ ವೀಡಿಯೋ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಾಯಿ ತಪ್ಪಿ ಹೇಳಿದ ಮಾತನ್ನು ಅನ್ನು ತೋರಿಸುತ್ತದೆ. ಆದರೆ ಖರ್ಗೆಯವರು ಅದನ್ನು ಸರಿಪಡಿಸಿಕೊಳ್ಳುವ ಭಾಗವನ್ನು ಬಿಟ್ಟುಬಿಟ್ಟಿದೆ ಮತ್ತು ತನ್ನ ತಪ್ಪನ್ನು ಸರಿಪಡಿಸುವ ಸಂದರ್ಭದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹೆಸರಿಸಿದ್ದಾರೆ. ಆದ್ದರಿಂದ, ನಾವು ಈ ವೈರಲ್ ವೀಡಿಯೋ ಜೊತೆಗಿನ ಹೇಳಿಕೆಗಳನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು:ವಿವೇಕ್.ಜೆ)