ಮೂಲಕ: ಅಂಕಿತಾ ಕುಲಕರ್ಣಿ
ಸೆಪ್ಟೆಂಬರ್ 29 2023
ಈ ವೀಡಿಯೋ ಇತ್ತೀಚಿನ ಪ್ರತಿಭಟನೆಗಳದ್ದಲ್ಲ. ಇದು ೨೦೧೬ರಲ್ಲಿ ಕಾವೇರಿ ಜಲ ವಿವಾದದ ಬಗ್ಗೆ ಕನ್ನಡ ಪರ ಗುಂಪು ತಮಿಳು ಚಾಲಕನ ಮೇಲೆ ಹಲ್ಲೆ ನಡೆಸಿದ್ದನ್ನು ತೋರಿಸುತ್ತದೆ.
(ಪ್ರಚೋದಕ ಎಚ್ಚರಿಕೆ: ಈ ಕಥೆಯು ಸಂಕಟದ ದೃಶ್ಯಗಳ ವಿವರಣೆಯನ್ನು ಒಳಗೊಂಡಿದೆ, ಮತ್ತು ದೈಹಿಕ ಆಕ್ರಮಣದ ಉಲ್ಲೇಖಗಳನ್ನು ತೋರುತ್ತದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)
ಶುಕ್ರವಾರ, ಸೆಪ್ಟೆಂಬರ್ ೨೯ರಂದು ಕರ್ನಾಟಕದಲ್ಲಿ ರಾಜ್ಯಾದ್ಯಂತ ಬಂದ್ ಅನ್ನು ಘೋಷಿಸಲಾಗಿದೆ. ರೈತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಮುಷ್ಕರವು ಸೆಪ್ಟೆಂಬರ್ ೨೬ ರಂದು ರಾಜಧಾನಿ ಬೆಂಗಳೂರಿನಲ್ಲಿ ಆಚರಿಸಲಾದ ಮುಷ್ಕರದ ನಂತರ ನಡೆಯಲಿದೆ. ನೆರೆಯ ರಾಜ್ಯವಾದ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ವಿರೋಧಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯ ಭಾಗವಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕರ್ನಾಟಕದಾದ್ಯಂತ- (ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್ ಪಕ್ಷ- ರಾಷ್ಟ್ರವ್ಯಾಪಿ I. N. D. I. A. ವಿರೋಧ ಪಕ್ಷದ ಭಾಗಿ ಅಧಿಕಾರಕ್ಕೆ ಬಂದಿತು) ೧೭೫ ಕ್ಕೂ ಹೆಚ್ಚು ಸಂಘಟನೆಗಳು ಮುಷ್ಕರವನ್ನು ಬೆಂಬಲಿಸಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಬಹುಕಾಲದಿಂದ ವಿವಾದದಲ್ಲಿದ್ದು, ಎರಡೂ ರಾಜ್ಯಗಳು ಹೆಚ್ಚಿನ ಪಾಲು ಬೇಡಿಕೆಯನ್ನು ಕೋರಿವೆ. ಹಲವು ವರ್ಷಗಳಿಂದ, ಬೆಂಗಳೂರಿಗೆ ಕುಡಿಯುವ ನೀರು ಮತ್ತು ಕರ್ನಾಟಕದ ಮಂಡ್ಯ ಪ್ರದೇಶದ ನೀರಾವರಿಗೆ ಮುಖ್ಯವಾದ ಕಾವೇರಿಗಾಗಿ ಎರಡೂ ರಾಜ್ಯಗಳಲ್ಲಿ ಹಲವಾರು ಪ್ರತಿಭಟನೆಗಳು ನಡೆದಿವೆ. ೨೦೧೮ ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ವಿವಾದವನ್ನು ಇತ್ಯರ್ಥಪಡೆಸಿದಂತೆ ತೋರಿದ್ದರೂ , ಈ ವರ್ಷ ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಡಿಮೆ ಮಳೆಯ ಪರಿಣಾಮವಾಗಿ ತಮಿಳುನಾಡಿಗೆ ಕಡಿಮೆ ನೀರು ಬಿಡುಗಡೆಯಾಗಿದೆ, ಇದು ಮತ್ತೊಮ್ಮೆ ಸಮಸ್ಯೆಯನ್ನು ಹುಟ್ಟುಹಾಕಿದೆ.
ಇಲ್ಲಿನ ಹೇಳಿಕೆ ಏನು?
ಈ ಹಿನ್ನಲೆಯಲ್ಲಿ ಕನ್ನಡ ಮಾತನಾಡುವ ಜನರ ಗುಂಪೊಂದು ವೃದ್ಧರೊಬ್ಬರ ಮೇಲೆ ಹಲ್ಲೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಗುಂಪು ವೃದ್ದನನ್ನು ಕನ್ನಡದಲ್ಲಿ “ಕಾವೇರಿ ನಮ್ಮದು” ಎಂದು ಹೇಳುವಂತೆ ಒತ್ತಾಯಿಸುತ್ತಿದೆ. ತಮಿಳುನಾಡಿನ ಗಡಿಭಾಗದ ಪ್ರದೇಶಗಳಲ್ಲಿ ಕರ್ನಾಟಕದ ಪ್ರತಿಭಟನಾಕಾರರು ತಮಿಳು ಲಾರಿ ಚಾಲಕರನ್ನು ಥಳಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್‌ನಲ್ಲಿ ಓರ್ವ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ಶೀರ್ಷಿಕೆ, "ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ, ತಮಿಳಿನ ಜನರನ್ನು ಹೊಡೆಯಲು ಪ್ರಾರಂಭಿಸಿದರು. ತಮಿಳು ದ್ರೋಹಿಗಳೇ, ತಮಿಳರು ಅಧಿಕಾರಕ್ಕೆ ಬರಲು ಪ್ರಾಮಾಣಿಕ ಮತ್ತು ಸುರಕ್ಷಿತವಾಗಿದ್ದ ಬಿಜೆಪಿ ಸರ್ಕಾರವನ್ನು ತೊಲಗಿಸಲು ನೀವು ಶ್ರಮಿಸಿದ್ದೀರಾ? ಇಂದಿನ ಬೆಂಗಳೂರಿನ ಸ್ಥಿತಿ ನೋಡಿ. ಮಿಷನರಿ I. N. D. I. A. ಸಮ್ಮಿಶ್ರ ಚುನಾವಣೆಗಳ ಮೊದಲು ತಮಿಳುನಾಡಿಗೆ ನೀಡಿದ ಉಡುಗೊರೆ (sic) (ತಮಿಳಿನಿಂದ ಅನುವಾದಿಸಲಾಗಿದೆ).” ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ದೃಶ್ಯಗಳನ್ನು ಇದು ತೋರಿಸುತ್ತದೆ ಎಂದು ಹೇಳುವ ವೀಡಿಯೋವನ್ನು ಇದೇ ರೀತಿಯ ನಿರೂಪಣೆಯೊಂದಿಗೆ ಎಕ್ಸ್‌ನಲ್ಲಿ (ಹಿಂದೆ ಟ್ವಿಟ್ಟರ್) ಶೇರ್ ಮಾಡಲಾಗಿದೆ. ಅಂತಹ ಒಂದು ಪೋಷ್ಟ್ ಅನ್ನು ಇಲ್ಲಿ ವೀಕ್ಷಿಸಬಹುದು.
ಅದೇ ಹೇಳಿಕೆಯನ್ನು ಹಂಚಿಕೊಂಡ ಇತರ ಪೋಷ್ಟ್ ಗಳ ಆರ್ಕೈವ್ ಮಾಡಿದ ಲಿಂಕ್‌ಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ವೈರಲ್ ಆಗಿರುವ ವೀಡಿಯೋವನ್ನು ಸೆರೆಹಿಡಿಯಲಾಗಿದ್ದರೂ, ಇದು ೨೦೧೬ ರ ಹಳೆಯ ವೀಡಿಯೋವಾಗಿದೆ.
ವಾಸ್ತವಾಂಶಗಳೇನು?
ವೈರಲ್ ಕ್ಲಿಪ್ ನ ಸ್ಕ್ರೀನ್‌ಶಾಟ್ ಬಳಸಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ತಮಿಳುನಾಡು ಮೂಲದ ಪ್ರಾದೇಶಿಕ ಮಾಧ್ಯಮವಾದ ನ್ಯೂಸ್ ೧೮ ತಮಿಳುನಾಡು ಸೆಪ್ಟೆಂಬರ್ ೧೩, ೨೦೧೬ ರಂದು ಅಪ್‌ಲೋಡ್ ಮಾಡಿದ ವೀಡಿಯೋ ವರದಿಯನ್ನು ನಾವು ಕಂಡುಕೊಂಡೆವು. ೦:೧೧ ಟೈಮ್‌ಸ್ಟ್ಯಾಂಪ್‌ನಲ್ಲಿ , ರಸ್ತೆಯ ಮೇಲೆ ವೃದ್ಧ ವ್ಯಕ್ತಿಯೊಬ್ಬರಿಗೆ ಕಿರುಕುಳ ನೀಡುತ್ತಿರುವ ಅದೇ ವೈರಲ್ ದೃಶ್ಯಗಳನ್ನು ನೋಡಬಹುದು. “ಕಾವೇರಿ ಸಮಸ್ಯೆ: ತಮಿಳುನಾಡು ಲಾರಿ ಚಾಲಕನ ಮೇಲೆ ಕನ್ನಡ ಪರ ಸಂಘಟನೆಗಳ ದಾಳಿ” ಎಂದು ವೀಡಿಯೋ ಶೀರ್ಷಿಕೆ ಹೇಳುತ್ತದೆ. ಮೂಲತಃ ತಮಿಳಿನಲ್ಲಿ ಬರೆಯಲಾದ ಯೂಟ್ಯೂಬ್ ವೀಡಿಯೋ ವಿವರಣೆಯು "ಕರ್ನಾಟಕದಲ್ಲಿ ತಮಿಳು ಟ್ರಕ್ ಚಾಲಕನ ಮೇಲೆ ಹಿಂಸಾತ್ಮಕ ದಾಳಿ" ಎಂದು ಉಲ್ಲೇಖಿಸಲಾಗಿದೆ.
ವೈರಲ್ ವೀಡಿಯೋ ಮತ್ತು ನ್ಯೂಸ್ ೧೮ ತಮಿಳುನಾಡಿನ ೨೦೧೬ ರ ವೀಡಿಯೋ ವರದಿಯ ನಡುವಿನ ಹೋಲಿಕೆ.(ಮೂಲ:ಫೇಸ್‌ಬುಕ್/ಯೂಟ್ಯೂಬ್/ಸ್ಕ್ರೀನ್‌ಶಾಟ್)
ತಮಿಳುನಾಡು ಮೂಲದ ಮತ್ತೊಂದು ಸ್ಥಳೀಯ ಸುದ್ದಿವಾಹಿನಿಯಾದ ಪುಥಿಯಾತಲೈಮುರೈ ಟಿವಿಯು ಯೂಟ್ಯೂಬ್‌ನಲ್ಲಿ ಪೋಷ್ಟ್ ಮಾಡಿದ ಅದೇ ಘಟನೆಯ ಕುರಿತು ಮತ್ತೊಂದು ವೀಡಿಯೋ ವರದಿಯನ್ನು ನಾವು ಕಂಡುಕೊಂಡೆವು. ವೀಡಿಯೋದಲ್ಲಿ ಸುಮಾರು ೬೩ ಸೆಕೆಂಡುಗಗಳಲ್ಲಿ ವೈರಲ್ ಕ್ಲಿಪ್‌ನಲ್ಲಿ ಕಂಡ ನಿಖರವಾದ ದೃಶ್ಯಗಳನ್ನು ನೋಡಬಹುದು. ಸೆಪ್ಟೆಂಬರ್ ೧೩, ೨೦೧೬ ರಂದು ಹಂಚಿಕೊಳ್ಳಲಾದ ಈ ಯೂಟ್ಯೂಬ್ ವೀಡಿಯೋಗೆ "ಕಾವೇರಿ ಸಮಸ್ಯೆ: ಗಡಿಯ ಬಳಿ ಕನ್ನಡಿಗರಿಂದ ಟಿಎನ್ ಲಾರಿ ಚಾಲಕರ ಮೇಲೆ ಕ್ರೂರವಾಗಿ ಹಲ್ಲೆ" ಎಂದು ಶೀರ್ಷಿಕೆ ನೀಡಲಾಗಿದೆ.
ಅದಲ್ಲದೆ, ನಾವು ಸೆಪ್ಟೆಂಬರ್ ೧೫, ೨೦೧೬ ರಂದು ತಮಿಳುನಾಡು ಮೂಲದ ಪ್ರಾದೇಶಿಕ ಮಾಧ್ಯಮ ಸಂಸ್ಥೆಯಾದ ತಂತಿ ಟಿವಿಯು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಲಾರಿ ಚಾಲಕನ ಸಂದರ್ಶನವನ್ನು ನೋಡಿದೆವು. ವ್ಯಕ್ತಿಯು ತನ್ನನ್ನು ಸೋಲೈಮುತ್ತು ಎಂದು ಗುರುತಿಸಿಕೊಂಡಿದ್ದಾನೆ ಸಂದರ್ಶನದಲ್ಲಿ, "ನನ್ನನ್ನು ಕಮಾಚಿ ಪಾಲಮ್ (ಪ್ರದೇಶ) ಬಳಿ ನಿಲ್ಲಿಸಲಾಯಿತು ಮತ್ತು ಪ್ರತಿಭಟನಾಕಾರರು ನನ್ನ ಲಾರಿಯನ್ನು ಧ್ವಂಸಗೊಳಿಸಿದರು ಮತ್ತು ನನ್ನ ಎಲ್ಲಾ ಹಣವನ್ನು ತೆಗೆದುಕೊಂಡರು. ನೋಡುಗರು ಯಾರೂ ನನ್ನ ರಕ್ಷಣೆಗೆ ಬರಲಿಲ್ಲ. ಪ್ರತಿಭಟನಾಕಾರರು ಮತ್ತೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ಆತನ ಲಾರಿಗೆ ಬೆಂಕಿ ಹಚ್ಚಲಾಗಿತ್ತು. ಅವರು ನನ್ನ ವಾಹನವನ್ನು ನಾಶಮಾಡಲು ಬಂದರು, ಆದರೆ ನಾನು ಹೇಗೂ ಟ್ರಕ್‌ನೊಂದಿಗೆ ತಪ್ಪಿಸಿಕೊಂಡು ನನ್ನ ಊರಿಗೆ ತಲುಪಿದೆ." (sic) (ತಮಿಳಿನಿಂದ ಅನುವಾದಿಸಲಾಗಿದೆ) ವೀಡಿಯೋ ಶೀರ್ಷಿಕೆಯು, "ಕನ್ನಡಿಗರು ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದರು, ಕನ್ನಡ ಮಾತನಾಡಲು ಒತ್ತಾಯಿಸಿದರು - ಸೋಲೈಮುತ್ತು, ಟಿಎನ್ ಲಾರಿ ಚಾಲಕ," ಎಂದು ಬರೆಯಲಾಗಿದೆ.
ವೈರಲ್ ಕ್ಲಿಪ್ ಹಳೆಯ ಘಟನೆಯನ್ನು ತೋರಿಸುತ್ತದೆ ಎಂದು ಸ್ಪಷ್ಟಪಡಿಸಿ ಕರ್ನಾಟಕ ರಾಜ್ಯ ಪೊಲೀಸರು ಫ್ಯಾಕ್ಟ್ ಚೆಕ್ ಅನ್ನೂ ಸಹ ಪ್ರಕಟಿಸಿದ್ದಾರೆ.
ಹೆಚ್ಚಿನ ಸಂಶೋಧನೆಯ ಮೂಲಕ, ೨೦೧೬ ರಲ್ಲಿ ಕಾವೇರಿ ಜಲ ವಿವಾದದ ನಂತರ ಕರ್ನಾಟಕದಲ್ಲಿ ಸರಣಿ ಪ್ರತಿಭಟನೆಗಳು ನಡೆದಾಗ ವೀಡಿಯೋ ವೈರಲ್ ಆಗಿತ್ತು ಎಂದು ನಾವು ಉಲ್ಲೇಖಿಸಬಹುದು. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಸೆಪ್ಟೆಂಬರ್ ೨೦, ೨೦೧೬ ರವರೆಗೆ ತಮಿಳುನಾಡಿಗೆ ಪ್ರತಿದಿನ ೧೨,೦೦೦ ಕ್ಯೂಸೆಕ್ ನೀರನ್ನು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶದ ನಂತರ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು.
ಆದರೆ, ಈಗ ಪ್ರಶ್ನೆಯಲ್ಲಿರುವ ವೀಡಿಯೋ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗೆ ಸಂಬಂಧಿಸಿಲ್ಲ.
ತೀರ್ಪು
ಇತ್ತೀಚೆಗೆ ಕರ್ನಾಟಕದಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲು ೨೦೧೬ರ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವೀಡಿಯೋದಲ್ಲಿ ಸೆರೆಹಿಡಿಯಲಾಗಿರುವ ಘಟನೆ ಕಾವೇರಿ ಜಲವಿವಾದದ ಹಿನ್ನೆಲೆಯಲ್ಲಿ ನಡೆದಿದ್ದರೂ ಅದು ಇತ್ತೀಚಿನದಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೇವೆ.