ಮುಖಪುಟ ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ನಂತರ ನಾಯಿಯನ್ನು ರಕ್ಷಿಸಲಾಗಿದೆ ಎಂದು ೨೦೨೧ ರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ನಂತರ ನಾಯಿಯನ್ನು ರಕ್ಷಿಸಲಾಗಿದೆ ಎಂದು ೨೦೨೧ ರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಆಗಸ್ಟ್ 2 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ನಂತರ ನಾಯಿಯನ್ನು ರಕ್ಷಿಸಲಾಗಿದೆ ಎಂದು ೨೦೨೧ ರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ನಾಯಿಯನ್ನು ರಕ್ಷಿಸಿದ ವೀಡಿಯೋವನ್ನು ತೋರಿಸುವ ಸ್ಕ್ರೀನ್‌ಶಾಟ್ ವೈರಲ್ ಪೋಷ್ಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ವೀಡಿಯೋ ೨೦೨೧ ರದ್ದು ಮತ್ತು ಪಾಲಕ್ಕಾಡ್ ಜಿಲ್ಲೆಯ ಬಳಿ ಸಣ್ಣ ಭೂಕುಸಿತದ ನಂತರ ನಾಯಿ ಮತ್ತು ಅದರ ಮರಿಗಳನ್ನು ರಕ್ಷಿಸಲಾಗಿದೆ.

(ಪ್ರಚೋದಕ ಎಚ್ಚರಿಕೆ: ಕೆಳಗಿನ ಲೇಖನವು ತೊಂದರೆ ಮತ್ತು ನೋವಿನಲ್ಲಿರುವ ಪ್ರಾಣಿಗಳ ವಿವರಣೆಗಳು ಮತ್ತು ವೀಡಿಯೋವನ್ನು ಒಳಗೊಂಡಿದೆ, ಕೆಲವು ಓದುಗರು ಸಂಕಟವನ್ನು ಅನುಭವಿಸಬಹುದು. ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)

ಹೇಳಿಕೆ ಏನು?

ನಾಯಿಯೊಂದು ಮಣ್ಣಿನ ದಿಬ್ಬದ ಕೆಳಗೆ ನರಳುತ್ತಿರುವುದನ್ನು ತೋರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭಾರೀ ಭೂಕುಸಿತದ ವೀಡಿಯೋ ಎಂದು ಹೇಳಲಾಗುತ್ತಿದೆ. ಎಕ್ಸ್ ನಲ್ಲಿನ ಪೋಷ್ಟ್ (ಹಿಂದೆ ಟ್ವಿಟ್ಟರ್) ವೀಡಿಯೋವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ: "ಪಾರುಗಾಣಿಕಾ ತಂಡಕ್ಕೆ ಬಿಗ್ ಸೆಲ್ಯೂಟ್....ಒಂದು ನಾಯಿ ಮತ್ತು ಅದರ ಎರಡು ನಾಯಿಮರಿಗಳನ್ನು ಭೂಕುಸಿತದಿಂದ ರಕ್ಷಿಸಲಾಗಿದೆ" ಮತ್ತು "#WayanadDisaster #WaynadLandslide #Disaster" ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಒಳಗೊಂಡಿದೆ. ಈ ಫ್ಯಾಕ್ಟ್ ಚೆಕ್ ಬರೆಯುವ ಸಮಯದಲ್ಲಿ, ಪೋಷ್ಟ್ ೯೩,೧೦೦ ವೀಕ್ಷಣೆಗಳನ್ನು ಗಳಿಸಿದೆ.

ಇತರ ಬಳಕೆದಾರರು ಒಂದೇ ರೀತಿಯ ಹೇಳಿಕೆಗೊಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಲಭ್ಯವಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಜುಲೈ ೩೦, ೨೦೨೪ ರಂದು, ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತಗಳು ಸಂಭವಿಸಿದವು, ವಿಶೇಷವಾಗಿ ಮೆಪ್ಪಾಡಿ ಬಳಿಯ ಚೂರಲ್ ಮಾಲಾ ಮತ್ತು ಮುಂಡಕ್ಕೈ ಪ್ರದೇಶಗಳ ಮೇಲೆ ಪರಿಣಾಮ ಬೀರಿತು. ಈ ದುರಂತವು ಕನಿಷ್ಠ ೨೫೬ ಸಾವುಗಳು ಮತ್ತು ಹಲವಾರು ಜನರಿಗೆ ಗಾಯವನ್ನು ಉಂಟು ಮಾಡಿದೆ, ಹಾಗು ಕಾಣೆಯಾದ ವ್ಯಕ್ತಿಗಳ ಪತ್ತೆಗೆ ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರೆದಿದೆ.

ಆದರೆ, ಈಗ ವೈರಲ್ ಆಗಿರುವ ವೀಡಿಯೋ ಹಳೆಯದಾಗಿದ್ದು, ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಸೆರೆಹಿಡಿಯಲಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.

ನಾವು ಏನು ಕಂಡುಕೊಂಡಿದ್ದೇವೆ?

ವೈರಲ್ ಕ್ಲಿಪ್‌ನ ರಿವರ್ಸ್ ಇಮೇಜ್ ಸರ್ಚ್, ಅಕ್ಟೋಬರ್ ೧೩, ೨೦೨೧ ರಂದು  ಮಲಯಾಳಂ ಸುದ್ದಿ ವಾಹಿನಿಯಾದ ಮನೋರಮಾ ನ್ಯೂಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅಪ್‌ಲೋಡ್ ಮಾಡಿದ ಯೂಟ್ಯೂಬ್ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೋದಲ್ಲಿ, ಭಾರೀ ಮಳೆಯಿಂದ ಉಂಟಾದ ಭೂಕುಸಿತದ ನಂತರ ಕೆಸರಿನಡಿಯಲ್ಲಿ ನಾಯಿ ಸಿಲುಕಿಕೊಂಡಿರುವುದನ್ನು ಸ್ಪೀಕರ್ ಉಲ್ಲೇಖಿಸಿದ್ದಾರೆ. ಆರು ನಾಯಿಮರಿಗಳಲ್ಲಿ ಎರಡು ಮಾತ್ರ ಬದುಕುಳಿದವು. ವೀಡಿಯೋದಲ್ಲಿ ಸ್ಥಳವನ್ನು ನಿರ್ದಿಷ್ಟಪಡಿಸದಿದ್ದರೂ, ಇದು ಇತ್ತೀಚಿನ ವಯನಾಡ್ ಭೂಕುಸಿತಕ್ಕಿಂತ ಹಿಂದಿನದು ಎಂಬುದು ಸ್ಪಷ್ಟವಾಗಿದೆ.

ಮನೋರಮಾ ನ್ಯೂಸ್ ಹಂಚಿಕೊಂಡಿರುವ ವೀಡಿಯೋದ ಸ್ಕ್ರೀನ್ ಶಾಟ್. (ಮೂಲ: ಯೂಟ್ಯೂಬ್)

ಮತ್ತೊಂದು ಚಾನೆಲ್, ನ್ಯೂಸ್ ಕ್ಯಾಪ್ಚರ್ ೨೪ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಅದೇ ವೀಡಿಯೋವನ್ನು ಅಕ್ಟೋಬರ್ ೧೩, ೨೦೨೧ ರಂದು ಅಪ್‌ಲೋಡ್ ಮಾಡಿದೆ.

ಹೆಚ್ಚಿನ ತನಿಖೆಯು ಅಕ್ಟೋಬರ್ ೧೪, ೨೦೨೧ ರಂದು ಪ್ರಕಟವಾದ ದಿ ನ್ಯೂಸ್ ಮಿನಿಟ್‌ನ ವರದಿಯನ್ನು ಬಹಿರಂಗಪಡಿಸಿತು. ಸಣ್ಣ ಭೂಕುಸಿತದ ನಂತರ ಪಾಲಕ್ಕಾಡ್ ಜಿಲ್ಲೆಯ ಕಂಜಿರಥಾನಿ, ಕುಮಾರನೆಲ್ಲೂರ್ ಬಳಿಯ ಹಳ್ಳಿಯಲ್ಲಿ ನಾಯಿ ಮತ್ತು ಅದರ ಎರಡು ನಾಯಿಮರಿಗಳನ್ನು ರಕ್ಷಿಸಿದ ಘಟನೆಯನ್ನು ವರದಿ ವಿವರಿಸುತ್ತದೆ. ವರದಿಯು ಮನೋರಮಾ ನ್ಯೂಸ್ ವೀಡಿಯೋದ ಲಿಂಕ್ ಅನ್ನು ಒಳಗೊಂಡಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ಘಟನೆಯ ಬಗ್ಗೆ ವರದಿ ಮಾಡಿದ್ದು, ಪಾಲಕ್ಕಾಡ್ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯ ನಡೆದಿರುವುದನ್ನು ಖಚಿತಪಡಿಸಿದೆ. ವರದಿಯು ವೈರಲ್ ಕ್ಲಿಪ್‌ನಿಂದ ಫ್ರೇಮ್ ಅನ್ನು ಒಳಗೊಂಡಿತ್ತು, ರಕ್ಷಣೆಯ ನಂತರ ನಾಯಿಯನ್ನು ಆಶ್ರಯಿಸಲಾಗಿದೆ ಎಂದು ತೋರಿಸುತ್ತದೆ.

ತೀರ್ಪು

೨೦೨೧ ರಲ್ಲಿ ಪಾಲಕ್ಕಾಡ್ ಜಿಲ್ಲೆಯಲ್ಲಿ ನಾಯಿಯನ್ನು ರಕ್ಷಿಸಿದ ವೀಡಿಯೋವನ್ನು ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ವೀಡಿಯೋ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ