ಮುಖಪುಟ ಇವಿಎಂ ಅನ್ನು ನಾಶಗೊಳಿಸಿದ ಆಂಧ್ರಪ್ರದೇಶದ ರಾಜಕಾರಣಿಯ ೨೦೧೯ ರ ವೀಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗಿದೆ

ಇವಿಎಂ ಅನ್ನು ನಾಶಗೊಳಿಸಿದ ಆಂಧ್ರಪ್ರದೇಶದ ರಾಜಕಾರಣಿಯ ೨೦೧೯ ರ ವೀಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ

ಮೇ 29 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇವಿಎಂ ಅನ್ನು ನಾಶಗೊಳಿಸಿದ ಆಂಧ್ರಪ್ರದೇಶದ ರಾಜಕಾರಣಿಯ ೨೦೧೯ ರ ವೀಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗಿದೆ ಆಂಧ್ರಪ್ರದೇಶದ ರಾಜಕಾರಣಿ ಮಧುಸೂದನ್ ಗುಪ್ತಾ ಇತ್ತೀಚೆಗೆ ಇವಿಎಂ ಅನ್ನು ಒಡೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳುತ್ತವೆ. (ಮೂಲ: X/Logically facts ಮೂಲಕ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

೨೦೧೯ರ ಆಂಧ್ರಪ್ರದೇಶ ಚುನಾವಣೆಯ ಸಮಯದಲ್ಲಿ ಅಂದಿನ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂದನ್ ಗುಪ್ತಾ ಇವಿಎಂ ಅನ್ನು ಒಡೆದು ಹಾಕಿದ್ದನ್ನು ವೀಡಿಯೋ ತೋರಿಸುತ್ತದೆ.

ಹೇಳಿಕೆ  ಏನು?

ಆಂಧ್ರಪ್ರದೇಶದ ರಾಜಕಾರಣಿ ಮಧುಸೂದನ್ ಗುಪ್ತಾ ಅವರು ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಅನ್ನು (ಇವಿಎಂ) ಒಡೆದು ಹಾಕುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮತದಾನದ ನಡುವೆ  ಈ ಕ್ಲಿಪ್‌ ಅನ್ನು ಸೆರೆಹಿಡಿಯಲಾಗಿದೆ ಎಂದು ಹಂಚಿಕೊಂಡಿದ್ದಾರೆ. ಗುಪ್ತಾ ಅವರು ಗುಂಟಕಲ್ ಕ್ಷೇತ್ರದಿಂದ ತೆಲುಗು ದೇಶಂ ಪಕ್ಷ (ಟಿಡಿಪಿ) ಅಥವಾ ಜನಸೇನಾ ಅಭ್ಯರ್ಥಿ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ.

೪೬ ಸೆಕೆಂಡುಗಳ ವೀಡಿಯೋದಲ್ಲಿ, ಬಿಳಿ ಅಂಗಿಯನ್ನು ಧರಿಸಿರುವ ವ್ಯಕ್ತಿ ತೆಲುಗಿನಲ್ಲಿ ಮಾತನಾಡುತ್ತಾ ಹೀಗೆ ಹೇಳಿದ್ದಾರೆ, "ಇದೆಲ್ಲ ತಪ್ಪು, ನಾನು ಇದನ್ನು ಒಡೆಯುತ್ತಿದ್ದೇನೆ. ಇದೇನು ಚುನಾವಣೆ? ಇದು ನಡೆಸುವ ವಿಧಾನವೇ? ಇದೆಲ್ಲವೂ ಮೋಸ, ನೀವು ಇದನ್ನು ಹೇಗೆ ಮಾಡುತ್ತೀರಿ?" ನಂತರ ನೆಲದ ಮೇಲೆ ಇವಿಎಂ ಅನ್ನು ಎಸೆದಿದನ್ನು ಹಾಗು ಆ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿಗಳು ವಾಹನಕ್ಕೆ ಕರೆದೊಯ್ಯುತ್ತಿರುವುದನ್ನು ವೀಡಿಯೋ ತೋರಿಸುತ್ತದೆ.

ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, "ಟಿಡಿಪಿ ಅಭ್ಯರ್ಥಿ ಇಂದ ಇವಿಎಂ ಧ್ವಂಸಗೊಳಿಸಲಾಗಿದೆ. ಗುಂಟಕಲ್ ಟಿಡಿಪಿ-ಜನಸೇನಾ ಜಾಯಿಂಟ್ ಅಭ್ಯರ್ಥಿ ಮಧುಸೂದನ್ ಗುಪ್ತಾ ಇವಿಎಂಗಳನ್ನು ಧ್ವಂಸಗೊಳಿಸಿದ್ದಾರೆ. ಮಾಚಾರ್ ಶಾಸಕ ಪಿನ್ನೆಲ್ಲಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಈ ವೀಡಿಯೋ ಬೆಳಕಿಗೆ ಬಂದಿದೆ..ಇದರಲ್ಲಿ @ECISVEEP ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು (ತೆಲುಗಿನಿಂದ ಅನುವಾದಿಸಲಾಗಿದೆ)?" ಕ್ಲಿಪ್ ಅನ್ನು ಹಂಚಿಕೊಂಡ ಒಂದು ಪೋಷ್ಟ್ ಬರೆಯುವ ಸಮಯದಲ್ಲಿ ಸುಮಾರು ೮೨,೦೦೦ ವೀಕ್ಷಣೆಗಳನ್ನು ಹೊಂದಿತ್ತು.

ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆಂಧ್ರಪ್ರದೇಶದಲ್ಲಿ ಮೇ ೧೩ ರಂದು ಎಲ್ಲಾ ವಿಧಾನಸಭೆಯ ಸದಸ್ಯರು (ಎಂಎಲ್ಎಗಳು) ಮತ್ತು ಕೆಲವು ಸಂಸತ್ ಸದಸ್ಯರು (ಎಂಪಿಗಳು) ಆಯ್ಕೆ ಮಾಡಲು ಚುನಾವಣೆ ನಡೆಯಿತು.

ಆದರೆ, ವೈರಲ್ ವೀಡಿಯೋ ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆ ಅಥವಾ ಲೋಕಸಭೆ ಚುನಾವಣೆಗಳಿಗೆ ಸಂಬಂಧಿಸಿಲ್ಲ ಮತ್ತು ೨೦೧೯ ರ ಹಿಂದಿನದ್ದು.

ನಾವು ಏನು ಕಂಡುಕೊಂಡಿದ್ದೇವೆ?

ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ ಉಲ್ಲೇಖಿಸಲಾದ ಕ್ಷೇತ್ರ  ಗುಂಟಕಲ್ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಗರವಾಗಿದೆ. ಮತದಾನದ ಸಮಯದಲ್ಲಿ ಅಲ್ಲಿನ ಯಾವುದೇ ಬೂತ್‌ನಲ್ಲಿ ಇವಿಎಂಗಳನ್ನು ಧ್ವಂಸಗೊಳಿಸಿರುವ ಕುರಿತು ಯಾವುದೇ ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ. 

ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್  ನಡೆಸಿದಾಗ, ನಾವು ಎಕ್ಸ್ ನಲ್ಲಿ ಏಪ್ರಿಲ್ ೧೧, ೨೦೧೯ ರ ದಿನಾಂಕದ ಎಎನ್ಐ ನ್ಯೂಸ್ ಪೋಷ್ಟ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕಂಡುಕೊಂಡೆವು. ಸುಮಾರು ೧೨-ಸೆಕೆಂಡ್ ಮಾರ್ಕ್‌ನಿಂದ ಎಎನ್ಐ ವೀಡಿಯೋದಲ್ಲಿ, ವೈರಲ್ ವೀಡಿಯೋದ ಮೊದಲ ೧೦ ಸೆಕೆಂಡುಗಳಿಗೆ ಅನುಗುಣವಾಗಿ ವ್ಯಕ್ತಿ ಇವಿಎಂ ಗಳನ್ನು ನೆಲಕ್ಕೆ ಎಸೆಯುವ ಅದೇ ದೃಶ್ಯಗಳನ್ನು ತೋರಿಸುತ್ತದೆ.  

ಎಎನ್ಐ ಪೋಷ್ಟ್ ನ ಶೀರ್ಷಿಕೆ ಹೀಗಿದೆ: "#WATCH ಜನಸೇನಾ ಶಾಸಕ ಅಭ್ಯರ್ಥಿ ಮಧುಸೂಧನ್ ಗುಪ್ತಾ ಅನಂತಪುರ ಜಿಲ್ಲೆಯ ಗೂಟಿಯ ಮತಗಟ್ಟೆಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಗಳನ್ನು (ಇವಿಎಂ) ಒಡೆದು ಹಾಕಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ. #ಆಂಧ್ರಪ್ರದೇಶ." ಜನ ಸೇನಾ ಪಕ್ಷ (ಜೆಎಸ್‌ಪಿ) ಭಾರತೀಯ ರಾಜಕೀಯ ಪಕ್ಷವಾಗಿದ್ದು, ಪ್ರಾಥಮಿಕವಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕಾರ್ಯನಿರ್ವಹಿಸುತ್ತದೆ.

೨೦೧೯ ರ ಎನ್‌ಡಿಟಿವಿ ವರದಿಯು ಈ ವಿವರಗಳನ್ನು ದೃಢೀಕರಿಸುತ್ತದೆ, ಆಗ ಆಂಧ್ರಪ್ರದೇಶದಲ್ಲಿ ಜೆಎಸ್‌ಪಿ ಅಭ್ಯರ್ಥಿಯಾಗಿದ್ದ ಗುಪ್ತಾ ಅವರನ್ನು ಏಪ್ರಿಲ್ ೧೧, ೨೦೧೯ ರಂದು ಇವಿಎಂ ನಾಶಗೊಳಿಸಿದಕ್ಕಾಗಿ ಬಂಧಿಸಲಾಯಿತು. ಅಸೆಂಬ್ಲಿ ಮತ್ತು ಸಂಸದೀಯ ಕ್ಷೇತ್ರಗಳ ಹೆಸರುಗಳನ್ನು ಸರಿಯಾಗಿ ಪ್ರದರ್ಶಿಸದಿದ್ದಕ್ಕಾಗಿ ಮತಗಟ್ಟೆ ಸಿಬ್ಬಂದಿಯ ಮೇಲೆ ಕೋಪ ವ್ಯಕ್ತಪಡಿಸಿದ ನಂತರ ಅವರು ಮತಗಟ್ಟೆಯಲ್ಲಿ ಇವಿಎಂ ಅನ್ನು ನೆಲದ ಮೇಲೆ ಎಸೆದರು ಎಂದು ಅದು ಹೇಳುತ್ತದೆ. ಯಂತ್ರಕ್ಕೆ ಹಾನಿಯಾಗಿದ್ದು, ಗುಪ್ತಾ ಅವರನ್ನು ತಕ್ಷಣವೇ ಬಂಧಿಸಲಾಗಿತ್ತು. ವರದಿಯು ವೈರಲ್ ವೀಡಿಯೋದ ಫ್ರೇಮ್‌ನ ಚಿತ್ರವನ್ನು ಒಳಗೊಂದಿದೆ. 

ಆಂಧ್ರಪ್ರದೇಶದಲ್ಲಿ ೨೦೧೯ ರ ಸಂಸತ್ತು ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಐದು ವರ್ಷಗಳ ಹಿಂದೆ ಏಪ್ರಿಲ್ ೧೧ ರಂದು ಮತದಾನ ನಡೆದಿತ್ತು.

ಇದಲ್ಲದೆ, ಏಪ್ರಿಲ್ ೧೧, ೨೦೧೯ ರಂದು ಡೆಕ್ಕನ್ ಹೆರಾಲ್ಡ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಷ್ಟ್ ಮಾಡಿದ ಯೂಟ್ಯೂಬ್ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ, ಇದು ಗುಪ್ತಾ ಅವರನ್ನು ಸುಮಾರು ೪೮-ಸೆಕೆಂಡ್ ಮಾರ್ಕ್‌ನಲ್ಲಿ ಪೊಲೀಸರು ಬೆಂಗಾವಲು ಮಾಡಿದ ರೀತಿಯ ದೃಶ್ಯಗಳನ್ನು ತೋರಿಸಿದೆ.

ಡೆಕ್ಕನ್ ಹೆರಾಲ್ಡ್ ಮೇ ೨೦೧೯ ರಲ್ಲಿ ಪೋಷ್ಟ್ ಮಾಡಿದ ಯೂಟ್ಯೂಬ್  ವೀಡಿಯೋದ ಸ್ಕ್ರೀನ್‌ಶಾಟ್‌ ಮತ್ತು ವೈರಲ್ ವೀಡಿಯೋದ ಹೋಲಿಕೆ. (ಮೂಲ: ಎಕ್ಸ್ /ಯೂಟ್ಯೂಬ್)

೨೦೧೯ ರ ಎಲ್ಲಾ ಮಾಧ್ಯಮ ವರದಿಗಳು ಈ ವೈರಲ್ ವೀಡಿಯೋ ಇತ್ತೀಚಿನದಲ್ಲ ಎಂದು ತೋರಿಸುತ್ತದೆ.

೨೦೨೪ ರಲ್ಲಿ ಗುಪ್ತಾ ಅವರು ಗುಂಟಕಲ್ ನಿಂದ ಟಿಡಿಪಿ-ಜೆಎಸ್‌ಪಿ ಅಭ್ಯರ್ಥಿಯೇ?

೨೦೧೯ರ ವೀಡಿಯೋದಲ್ಲಿ ಗುಪ್ತಾ ಅವರು ಜೆಎಸ್‌ಪಿ ಅಭ್ಯರ್ಥಿಯಾಗಿದ್ದರು . ಅವರ ಫೇಸ್‌ಬುಕ್ ಪುಟವು ಈಗ ಅವರನ್ನು ಗುಂಟಕಲ್ ನ ಮಾಜಿ ಶಾಸಕ ಎಂದು ಉಲ್ಲೇಖಿಸುತ್ತದೆ.

ಈಗ ಟಿಡಿಪಿಯಲ್ಲಿರುವ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮಾಜಿ ಶಾಸಕ ಗುಮ್ಮನೂರು ಜಯರಾಮ್ ಅವರು ಗುಂಟಕಲ್ ಕ್ಷೇತ್ರದಲ್ಲಿ ಟಿಡಿಪಿ-ಜನಸೇನೆ-ಬಿಜೆಪಿ ಮೈತ್ರಿಕೂಟದ ಪ್ರಸ್ತುತ ಅಭ್ಯರ್ಥಿಯಾಗಿದ್ದಾರೆ. ಇವಿಎಂ ಧ್ವಂಸ ಘಟನೆಗಳಲ್ಲಿ ಜಯರಾಮ್ ಭಾಗಿಯಾಗಿರುವ ಬಗ್ಗೆ ಇತ್ತೀಚಿನ ವರದಿಗಳಿಲ್ಲ.

ನಡೆಯುತ್ತಿರುವ ಲೋಕಸಭಾ ಚುನಾವಣೆಯ ನಡುವೆ, ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿಯ ಶಾಸಕ ಪಿನ್ನೇಲಿ ರಾಮಕೃಷ್ಣಾ ರೆಡ್ಡಿ ಅವರು ಮೇ ೧೩ ರಂದು ಮತದಾರ-ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರವನ್ನು ಎತ್ತಿಕೊಂಡು ಮತಗಟ್ಟೆಯಲ್ಲಿ ನೆಲಕ್ಕೆ ಎಸೆದಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಚುನಾವಣಾ ಆಯೋಗವು ಹೊಣೆಗಾರರ ​​ವಿರುದ್ಧ ಕಠಿಣ ಕ್ರಿಮಿನಲ್ ಕ್ರಮಕ್ಕೆ ಆದೇಶಿಸಿದೆ.


ತೀರ್ಪು

ಆಂಧ್ರಪ್ರದೇಶದಲ್ಲಿ ೨೦೨೪ ರ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿ ಮಧುಸೂದನ್ ಗುಪ್ತಾ ಅವರು ಇವಿಎಂ ಅನ್ನು ನಾಶಪಡಿಸುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಹೇಳಲು ೨೦೧೯ ರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಆದರೆ, ೨೦೧೯ರ ಆಂಧ್ರಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಮತದಾನದ ವೇಳೆ ಈ ಘಟನೆ ನಡೆದಿದೆ. ಇದಲ್ಲದೆ, ಗುಪ್ತಾ ಅವರು ಗುಂಟಕಲ್ ನಿಂದ ಟಿಡಿಪಿ ಅಥವಾ ಜನಸೇನೆಯ ಅಭ್ಯರ್ಥಿಯಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ