ಮೂಲಕ: ರಾಹುಲ್ ಅಧಿಕಾರಿ
ಸೆಪ್ಟೆಂಬರ್ 27 2024
ಜುಲೈ ೪ ರಂದು ಮುಂಬೈನಲ್ಲಿ ನಡೆದ ಟಿ೨೦ ವಿಶ್ವಕಪ್ ವಿಜಯೋತ್ಸವದ ಮೆರವಣಿಗೆಯಲ್ಲಿ ವೈರಲ್ ಕ್ಲಿಪ್ ಅನ್ನು ಸೆರೆಹಿಡಿಯಲಾಗಿದೆ ಮತ್ತು ಇದು ಇತ್ತೀಚಿನ ಪ್ರತಿಭಟನೆಗಳಿಗೆ ಸಂಬಂಧಿಸಿಲ್ಲ.
ಹೇಳಿಕೆ ಏನು?
ಮುಂಬೈನಲ್ಲಿ ಮುಸ್ಲಿಂ ಸಮುದಾಯದ ಜನರು ಪ್ರತಿಭಟನೆ ನಡೆಸುತ್ತಿರುವುದನ್ನು ತೋರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವೈರಲ್ ವೀಡಿಯೋ ಕರಾವಳಿಯ ರಸ್ತೆಯೊಂದರಲ್ಲಿ ದೊಡ್ಡ ಜನಸಂದಣಿಯನ್ನು ತೋರಿಸುತ್ತದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ನಿತೇಶ್ ರಾಣೆ ಮತ್ತು ಬೋಧಕ ರಾಮಗಿರಿ ಮಹಾರಾಜ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಸಾವಿರಾರು ಮುಸ್ಲಿಂ ಪ್ರತಿಭಟನಾಕಾರರು ಮುಂಬೈನ ಬೀದಿಗಿಳಿದ ನಂತರ ಇದು ಹೊರಹೊಮ್ಮಿತು. ಹಲವಾರು ಎಕ್ಸ್ (ಹಿಂದೆ ಟ್ವಿಟ್ಟರ್) ಬಳಕೆದಾರರು ಮತ್ತು ಫೇಸ್‌ಬುಕ್ ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಇದನ್ನು "ಮುಸ್ಲಿಂ ರ‍್ಯಾಲಿ" ಎಂದು ಕರೆದಿದ್ದಾರೆ.
ಒಬ್ಬ ಬಳಕೆದಾರರು ಬರೆದಿದ್ದಾರೆ, "ಮುಸ್ಲಿಮರು ಎಲ್ಲಿದ್ದಾರೆಂದು ನೋಡಲು ಬಯಸುವವರು, ಇಂದು ಇಲ್ಲಿ ನೋಡಿ; ಮುಸ್ಲಿಮರು ಇಲ್ಲಿದ್ದಾರೆ 🔥. ನೀವು ನನ್ನನ್ನು ಪ್ರಚೋದಿಸಿದರೆ, ನಾನು ನಿಮ್ಮನ್ನು ಹೋಗಲು ಬಿಡುವುದಿಲ್ಲ. ನೆನಪಿಡಿ, ಮಲಗಿರುವ ಸಿಂಹವು ಎಚ್ಚರಗೊಳ್ಳದೆ ದಾಳಿ ಮಾಡುವುದಿಲ್ಲ, ಮತ್ತು ಅದು ಎಚ್ಚರಗೊಂಡರೆ, ನೀವು ತಪ್ಪಿಸಿಕೊಳ್ಳಲು ಕಷ್ಟವಾಗುತ್ತದೆ ಎಂದು ಅರ್ಥಮಾಡಿಕೊಳ್ಳಿ."
ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿ, ಇಲ್ಲಿ ಮತ್ತು ಇಲ್ಲಿವೆ.
ಕೆಲವು ಸಾಮಾಜಿಕ ಮಾಧ್ಯಮ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಹೇಳಿಕೆ ತಪ್ಪು. ಜುಲೈ ೨೦೨೪ ರಲ್ಲಿ ಟಿ ೨೦ ವಿಶ್ವಕಪ್ ಜಯಗಳಿಸಿದ ನಂತರ ಮುಂಬೈನಲ್ಲಿ ವಿಜಯೋತ್ಸವದ ಮೆರವಣಿಗೆಗಾಗಿ ಭಾರತ ತಂಡವು ಆಗಮಿಸಲು ಜನರು ಕಾಯುತ್ತಿರುವುದನ್ನು ವೈರಲ್ ವೀಡಿಯೋ ತೋರಿಸುತ್ತದೆ.
ನಾವು ಸತ್ಯವನ್ನು ಹೇಗೆ ಕಂಡುಕೊಂಡೆವು?
ವೈರಲ್ ವೀಡಿಯೋದ ಕೀಫ್ರೇಮ್‌ಗಳಲ್ಲಿ ನಾವು ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿದ್ದೇವೆ. ಮುಂಬೈ ಮೂಲದ ಫೇಸ್‌ಬುಕ್ ಬಳಕೆದಾರರು ಜುಲೈ ೫ ರಂದು ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ, ಇದು ಭಾರತೀಯ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ನಗರದಲ್ಲಿ ಜನಸಂದಣಿಯನ್ನು ತೋರಿಸುತ್ತದೆ.
ಮುಂಬೈನ ಮರೈನ್ ಡ್ರೈವ್‌ನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ದೊಡ್ಡ ಜನಸಮೂಹ ನೆರೆದಿರುವುದನ್ನು ತೋರಿಸುವ ಹಲವಾರು ರೀತಿಯ ವೀಡಿಯೋಗಳನ್ನು ನಾವು ಕಂಡುಕೊಂಡಿದ್ದೇವೆ. ಪ್ರಿಂಟ್ ಜುಲೈ ೪ ರಂದು ಯೂಟ್ಯೂಬ್‌ನಲ್ಲಿ ಇದೇ ರೀತಿಯ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪ್ರಕಟಿಸಿತು, "ಭಾರತದ ವಿಜಯ ಪರೇಡ್‌ಗೆ ಸಾಕ್ಷಿಯಾಗಲು ಕ್ರಿಕೆಟ್ ಅಭಿಮಾನಿಗಳು ಮುಂಬೈನ ಮರೈನ್ ಡ್ರೈವ್‌ನಲ್ಲಿ ಸೇರುತ್ತಾರೆ."
ಎರಡೂ ವೀಡಿಯೋಗಳನ್ನು ಮೇಲ್ಛಾವಣಿಯಿಂದ ಸೆರೆಹಿಡಿಯಲಾಗಿದೆ ಮತ್ತು ಒಂದೇ ಸ್ಥಳವನ್ನು ತೋರಿಸಲಾಗಿದೆ. ಹೋಲಿಸಿದರೆ, ನಾವು ಎರಡು ವೀಡಿಯೋಗಳಲ್ಲಿ ಹಲವಾರು ಕಾರುಗಳು ನಿಂತಿರುವುದು ಮತ್ತು ದೀಪಗಳಿಗೆ ಕೆಂಪು ಪೋಷ್ಟ್ ರ್‌ಗಳನ್ನು ಅಂಟಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ.
ವೈರಲ್ ವೀಡಿಯೊ ಮತ್ತು ದಿ ಪ್ರಿಂಟ್ ಪ್ರಕಟಿಸಿದ ವೀಡಿಯೊ ನಡುವಿನ ಹೋಲಿಕೆಯನ್ನು ಹೋಲಿಕೆ ತೋರಿಸುತ್ತದೆ. (ಮೂಲ: ಎಕ್ಸ್/ಯೂಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ನ್ಯೂಸ್ ೧೮ ಮರಾಠಿ ಮತ್ತು ಚಾನೆಲ್ ೫ ತಮಿಳು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಒಂದೇ ರೀತಿಯ ದೃಶ್ಯಗಳನ್ನು ಹಂಚಿಕೊಂಡಿವೆ.
ಮೆರೈನ್ ಡ್ರೈವ್‌ನಿಂದ ವಾಂಖೆಡೆ ಸ್ಟೇಡಿಯಂಗೆ ತೆರೆದ ಬಸ್‌ನಲ್ಲಿ ಸಾಗಿದ ಮೆರವಣಿಗೆಯನ್ನು ಸ್ವಾಗತಿಸಲು ಸಾವಿರಾರು ಜನರು ಸೇರಿದ್ದರು.
ನಾವು ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಸ್ಥಳವನ್ನು ಜಿಯೋಲೊಕೇಟ್ ಮಾಡಿದ್ದೇವೆ, ಅದನ್ನು ಮುಂಬೈನ ಮರೈನ್ ಡ್ರೈವ್‌ನಲ್ಲಿ ಸೆರೆಹಿಡಿಯಲಾಗಿದೆ ಎಂದು ಖಚಿತಪಡಿಸಿದೆ. ದಿ ಪ್ರಿಂಟ್ ಮತ್ತು ಗೂಗಲ್ ಸ್ಟ್ರೀಟ್ ವ್ಯೂ ನಲ್ಲಿ ಪ್ರಕಟಿಸಿದ ವೀಡಿಯೋದಲ್ಲಿ ನಾವು ಎರಡು ಕಟ್ಟಡಗಳನ್ನು ಗುರುತಿಸಿದ್ದೇವೆ.
ದಿ ಪ್ರಿಂಟ್ ಮೂಲಕ ವೀಡಿಯೋ ಮತ್ತು ಗೂಗಲ್ ಸ್ಟ್ರೀಟ್ ವ್ಯೂನಲ್ಲಿನ ಸ್ಥಳದ ನಡುವಿನ ಹೋಲಿಕೆ. (ಮೂಲ: ಎಕ್ಸ್/ಗೂಗಲ್ ಮ್ಯಾಪ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಮುಂಬೈನಲ್ಲಿ ಇತ್ತೀಚಿನ ಪ್ರತಿಭಟನೆಗಳು
ಸೆಪ್ಟೆಂಬರ್ ೨೩ ರಂದು, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನ ಮಾಜಿ ಸಂಸದ ಇಮ್ತಿಯಾಜ್ ಜಲೀಲ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಸದಸ್ಯರ ದೊಡ್ಡ ಗುಂಪು ಮುಂಬೈನ ಬೀದಿಗಳಲ್ಲಿ ಮೆರವಣಿಗೆ ನಡೆಸಿತು. ಬಿಜೆಪಿ ಶಾಸಕ ನಿತೇಶ್ ರಾಣೆ ಮತ್ತು ಧರ್ಮ ಪ್ರಚಾರಕ ರಾಮಗಿರಿ ಮಹಾರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದರು. "ಇರಂಗ ಸಂವಿಧಾನ್ ರ‍್ಯಾಲಿ" ಎಂಬ ಶೀರ್ಷಿಕೆಯ ರ‍್ಯಾಲಿಯು ೧೨,೦೦೦ ಕ್ಕೂ ಹೆಚ್ಚು ಜನರನ್ನು ಆಕರ್ಷಿಸಿತು.
ತೀರ್ಪು
ಟಿ೨೦ ವಿಶ್ವಕಪ್ ವಿಜಯೋತ್ಸವದ ಪಥಸಂಚಲನದ ವೇಳೆ ಸೆರೆಹಿಡಿಯಲಾದ ಹಳೆಯ ವೀಡಿಯೋವನ್ನು ಮುಂಬೈನಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸುತ್ತಿರುವ ದೃಶ್ಯಾವಳಿಗಳನ್ನು ತೋರಿಸಲಾಗಿದೆ ಎಂಬ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ವೈರಲ್ ಕ್ಲಿಪ್ ಅನ್ನು ಜುಲೈ ೪, ೨೦೨೪ ರಂದು ಮರೈನ್ ಡ್ರೈವ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ ಮತ್ತು ಮುಂಬೈನಲ್ಲಿನ ಇತ್ತೀಚಿನ ಪ್ರತಿಭಟನೆಗಳಿಗೆ ಸಂಬಂಧಿಸಿಲ್ಲ.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here.