ಮೂಲಕ: ರಜಿನಿ ಕೆ.ಜಿ
ಜುಲೈ 23 2024
ಕುದುರೆಯ ಮೇಲೆ ಕಾಣುವ ‘ಗಾಯ’ಗಳನ್ನು ಪೇಂಟ್ ಮಾಡಲಾಗಿದೆ, ಅದು ನಿಜವಲ್ಲ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯು ಇದನ್ನು ನಮಗೆ ಖಚಿತಪಡಿಸಿದ್ದಾರೆ.
ಹೇಳಿಕೆ ಏನು?
ಇಬ್ಬರು ಪುರುಷರು ಗಾಯಗೊಂಡ ಕುದುರೆಯನ್ನು ದೊಡ್ಡ ಗುಂಪಿನ ಮೂಲಕ ಮುನ್ನಡೆಸುತ್ತಿರುವುದನ್ನು ತೋರುವ ವೀಡಿಯೋ, ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಂ ಸಮುದಾಯದ ಪುರುಷರು ಮೊಹರಂನಲ್ಲಿ ಬೀದಿಗಳಲ್ಲಿ ಮೆರವಣಿಗೆ ಮಾಡಲು ಕುದುರೆಯನ್ನು ಗಾಯಗೊಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರೊಬ್ಬರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ, “ಭಾರತದಲ್ಲಿ ಅಶುರಾ ... ಈ ವರ್ಷ, ಮುಂಬೈನ ಬೀದಿಗಳಲ್ಲಿ, ಮುಸ್ಲಿಮರು ಭಯಭೀತರಾದ, ಮುಗ್ಧ ಕುದುರೆಯನ್ನು ತೆಗೆದುಕೊಂಡು, ಅದನ್ನು ಚಾಕುವಿನಿಂದ ಪದೇ ಪದೇ ಕತ್ತರಿಸುತ್ತಾರೆ ಮತ್ತು ರಕ್ತಸಿಕ್ತ, ಗಾಯಗೊಂಡವರನ್ನು ಮೆರವಣಿಗೆ ಮಾಡುತ್ತಾರೆ. ಪ್ರವಾದಿಯವರ ಮೊಮ್ಮಗನ ಮರಣದ ನೆನಪಿಗಾಗಿ ಸುತ್ತಲೂ ಪ್ರಾಣಿ. ಈ ಮನೋರೋಗಿಗಳು ತಮ್ಮನ್ನು ತಾವೇ ಕಡಿದು ಹೊಡೆಯುವುದರಲ್ಲಿ ಬೇಸತ್ತಿದ್ದಾರೆ ಮತ್ತು ಬದಲಿಗೆ ಮುಗ್ಧ ಪ್ರಾಣಿಯನ್ನು ಗುರಿಯಾಗಿಸಲು ನಿರ್ಧರಿಸಿದ್ದಾರೆ. ಇದನ್ನು ಹೇಗೆ ಅನುಮತಿಸಲಾಗಿದೆ (sic)?"
ಈ ಫ್ಯಾಕ್ಟ್-ಚೆಕ್ ಅನ್ನು ಬರೆಯುವ ಸಮಯದಲ್ಲಿ ಪೋಷ್ಟ್ ೧.೬ ಮಿಲಿಯನ್ ವೀಕ್ಷಣೆಗಳನ್ನು ಮತ್ತು ೨೨,೦೦೦ ಕ್ಕೂ ಹೆಚ್ಚು ಲೈಕ್ ಗಳನ್ನು ಹೊಂದಿತ್ತು. ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಾಣಿಯನ್ನು ಗಾಯಗೊಳಿಸಲು ಚಾಕು ಮತ್ತು ಬ್ಲೇಡ್‌ಗಳನ್ನು ಬಳಸುತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯವನ್ನು ಟೀಕಿಸಿದ್ದಾರೆ. ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಬೀದಿಗಳಲ್ಲಿ ಮೆರವಣಿಗೆ ಮಾಡಲು ಕುದುರೆಯನ್ನು ಗಾಯಗೊಲಿಸಲಾಗಿದೆ ಎಂದು ಹೇಳುವ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಮತ್ತು ಅಶುರಾ ಮೊಹರಂನ ಹತ್ತನೇ ದಿನವಾಗಿದೆ, ಇದು ಕರ್ಬಲಾ ಕದನದಲ್ಲಿ ಇಮಾಮ್ ಹುಸೇನ್ ಅವರ ಮರಣವನ್ನು ಸೂಚಿಸುತ್ತದೆ. ಅಶುರಾ ದಿನದಂದು, ಶಿಯಾ ಮುಸ್ಲಿಮರು ಕರ್ಬಲಾ ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡ ಇಮಾಮ್ ಹುಸೇನ್ ಅವರ ಕುದುರೆಯ ಗೌರವಾರ್ಥವಾಗಿ ಕುದುರೆಯನ್ನು ಮೆರವಣಿಗೆ ಮಾಡುವ ಆಚರಣೆಯನ್ನು ಹೊಂದಿದ್ದಾರೆ.
ಆದರೆ, ಗಾಯಗೊಂಡ ಕುದುರೆಯನ್ನು ಮೆರವಣಿಗೆ ಮಾಡಲಾಗಿದೆ ಎಂದು ಹೇಳುವ ಪೋಷ್ಟ್ ತಪ್ಪು. ವೀಡಿಯೋ ಮುಂಬೈನ ಡೋಂಗ್ರಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಕೂಡ ಕುದುರೆಯ ಮೇಲೆ ಕಂಡ ಗಾಯಗಳು ನಿಜವಲ್ಲ ಎಂದು ಲಾಜಿಕಲಿ ಫ್ಯಾಕ್ಟ್ಸ್ ಗೆ ದೃಢಪಡಿಸಿದರು.
ನಾವು ಕಂಡುಕೊಂಡದ್ದು ಏನು?
ಮುಂಬೈನಲ್ಲಿ ಅಶುರಾ ಮೆರವಣಿಗೆಗಳಿಗಾಗಿ ಗೂಗಲ್ ಹುಡುಕಾಟವು ಜುಲೈ ೧೭, ೨೦೨೪ ರಂದು ಶಿಯಾ ಏಜೆನ್ಸಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಂಬ ಚಾನಲ್‌ನಿಂದ ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. ನಾವು ವೀಡಿಯೋವನ್ನು ವೈರಲ್ ವೀಡಿಯೋದೊಂದಿಗೆ ಹೋಲಿಸಿದ್ದೇವೆ. ವೈರಲ್ ವೀಡಿಯೋದಲ್ಲಿ ೦:೦೪ ನಲ್ಲಿ ನೋಡಿದ ವ್ಯಕ್ತಿಯನ್ನು ನಾವು ಯೂಟ್ಯೂಬ್ ವೀಡಿಯೋದಲ್ಲಿ ೦ :೨೫ ಮಾರ್ಕ್ ನಲ್ಲಿ ನೋಡಬಹುದು.
ಎಕ್ಸ್ ವೀಡಿಯೋ ಮತ್ತು ಯೂಟ್ಯೂಬ್ ವೀಡಿಯೋದಲ್ಲಿ ಕಂಡುಬರುವ ಮನುಷ್ಯ ಮತ್ತು ಕುದುರೆಯ ಹೋಲಿಕೆ.
(ಮೂಲ: ಎಕ್ಸ್/ಯೂಟ್ಯೂಬ್)
ವೈರಲ್ ವೀಡಿಯೋದಲ್ಲಿ ೦:೧೮ ಸೆಕೆಂಡುಗಳಲ್ಲಿ ಮತ್ತು ಯೂಟ್ಯೂಬ್ ವೀಡಿಯೋದಲ್ಲಿ ೦:೩೦ ಮಾರ್ಕ್ ನಲ್ಲಿ ಇನ್ನೊಬ್ಬ ವ್ಯಕ್ತಿ ಕುದುರೆಯನ್ನು ಮುನ್ನಡೆಸುವುದನ್ನು ನಾವು ನೋಡಬಹುದು.
ವೈರಲ್ ವೀಡಿಯೋದಲ್ಲಿರುವ ವ್ಯಕ್ತಿ ಮತ್ತು ಯೂಟ್ಯೂಬ್ ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿಯ ಹೋಲಿಕೆ.
(ಮೂಲ: ಎಕ್ಸ್ /ಯೂಟ್ಯೂಬ್)
೦:೧೬ ಸೆಕೆಂಡುಗಳ ಟೈಮ್‌ಸ್ಟ್ಯಾಂಪ್‌ನಲ್ಲಿ, ಕುದುರೆಯ ದೇಹದ ಮೇಲೆ ಮನುಷ್ಯ ಕೆಂಪು ಬಣ್ಣವನ್ನು ಹಚ್ಚುವುದನ್ನು ನಾವು ನೋಡಬಹುದು.
(ಮೂಲ: ಯೂಟ್ಯೂಬ್/ಶಿಯಾ ಏಜೆನ್ಸಿ)
ಜುಲೈ ೧೭, ೨೦೨೪ ರಂದು ಮುಂಬೈನ ಡೋಂಗ್ರಿ, ಬಾಂದ್ರಾ, ಮೀರಾ ರೋಡ್ ಮತ್ತು ವರ್ಸೋವಾದಲ್ಲಿ ಅಶುರಾವನ್ನು ಆಚರಿಸಲಾಗಿದೆ ಎಂದು ವರದಿಯಾಗಿದೆ. ನಾವು ವೈರಲ್ ವೀಡಿಯೋವನ್ನು ಗೂಗಲ್ ಮ್ಯಾಪ್ಸ್ ನಲ್ಲಿ ಜಿಯೋಲೊಕೇಟ್ ಮಾಡಿದ್ದೇವೆ ಮತ್ತು ವೀಡಿಯೋವನ್ನು ಮುಂಬೈನ ಡೋಂಗ್ರಿಯಲ್ಲಿರುವ ಹಜರತ್ ಇಮಾಮ್ ಹುಸೇನ್ ಚೌಕ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಕಂಡುಬಂದಿದೆ. ವೈರಲ್ ವೀಡಿಯೋದಲ್ಲಿ ಕಂಡುಬರುವ ಹಸಿರು ಬಣ್ಣದ ಕಟ್ಟಡವು ಸುನ್ನಿ ಶಾಫಿ ಮಸೀದಿಯಾಗಿದ್ದು, ಮಸೀದಿಯ ಪಕ್ಕದಲ್ಲಿರುವ ಡೋಂಗ್ರಿ ಪೊಲೀಸ್ ಠಾಣೆಯ ಫಲಕವನ್ನು ನಾವು ಗುರುತಿಸಿದ್ದೇವೆ.
ಗೂಗಲ್ ಮ್ಯಾಪ್ಸ್ ನೊಂದಿಗೆ ಎಕ್ಸ್ ವೀಡಿಯೋದಲ್ಲಿ ಕಂಡುಬರುವ ಸ್ಥಳದ ಹೋಲಿಕೆ. (ಮೂಲ: ಎಕ್ಸ್/ಗೂಗಲ್ ಮ್ಯಾಪ್ಸ್)
ಡೋಂಗ್ರಿ ಪೊಲೀಸ್ ವಲಯ ೧ ಠಾಣೆ ಎಂದು ಹೆಸರು ಹೇಳಲು ಇಚ್ಛಿಸಿದ ಪೊಲೀಸ್ ಸಿಬ್ಬಂದಿಯೊಂದಿಗೆ ಲಾಜಿಕಲಿ ಫ್ಯಾಕ್ಟ್ಸ್ ಮಾತನಾಡಿತು. ಮೆರವಣಿಗೆ ವೇಳೆ ಸ್ಥಳದಲ್ಲಿದ್ದ ಅವರು ಕುದುರೆಗೆ ಬಣ್ಣ ಬಳಿಯಲಾಗಿದ್ದು, ಯಾವುದೇ ಗಾಯವಾಗಿಲ್ಲ ಎಂದು ಖಚಿತಪಡಿಸಿದರು.
PETA ಇಂಡಿಯಾದ ಮ್ಯಾನೇಜರ್ ಮೀಟ್ ಅಶರ್ ಅವರ ಕಾಮೆಂಟ್ (ಇಲ್ಲಿ ಆರ್ಕೈವ್) ಕೂಡ ನಾವು ಕಂಡುಕೊಂಡಿದ್ದೇವೆ, ಅವರು ಕುದುರೆಗೆ ಗಾಯಗೊಳಿಸಲಾಗಿಲ್ಲ ಎಂದು ಹೇಳಿದ್ದಾರೆ. ಅವರು ಮೆರವಣಿಗೆಯ ಅನೇಕ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಒಂದು ವ್ಯಕ್ತಿ ಬಿಳಿ ಕುದುರೆಯ ಮೇಲೆ ಚಿತ್ರಿಸುತ್ತಿರುವುದನ್ನು ತೋರಿಸಿದೆ.
PETA ಸದಸ್ಯ ಮೀಟ್ ಅಶರ್ ಅವರು ಹಂಚಿಕೊಂಡ ಎಕ್ಸ್ ಫೋಸ್ಟ್ ಮತ್ತು ಕುದುರೆಯ ಮೇಲೆ ಚಿತ್ರಿಸಿದ ವೀಡಿಯೋವನ್ನು ತೋರಿಸುತ್ತದೆ. (ಮೂಲ: ಎಕ್ಸ್/asharmeet02)
ಅಶುರಾ ಮೆರವಣಿಗೆಯಲ್ಲಿ ಗಾಯಗೊಂಡಿರುವಂತೆ ಕಾಣುವ ಕುದುರೆಯನ್ನು ಮೆರವಣಿಗೆ ಮಾಡುವುದು ಪ್ರಪಂಚದಾದ್ಯಂತ ಶಿಯಾ ಮುಸ್ಲಿಮರು ಅನುಸರಿಸುವ ಸಂಪ್ರದಾಯವಾಗಿದೆ. ಪ್ರಪಂಚದಾದ್ಯಂತದ ಚಿತ್ರಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ತೀರ್ಪು
ಮುಂಬೈನ ಡೋಂಗ್ರಿಯಲ್ಲಿ ನಡೆದ ಅಶುರಾ ಮೆರವಣಿಗೆಯ ಸಮಯದಲ್ಲಿ ಕುದುರೆಯ ದೇಹದ ಮೇಲೆ ಗಾಯಗಳನ್ನು ಚಿತ್ರಿಸಲಾಗಿದೆ ಎಂದು ನಮ್ಮ ಸಂಶೋಧನೆ ತೋರಿಸುತ್ತದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳಿಕೊಂಡಂತೆ ಕುದುರೆಯನ್ನು ಗಾಯಗೊಳಿಸಲಾಗಿಲ್ಲ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.