ಮೂಲಕ: ರಾಹುಲ್ ಅಧಿಕಾರಿ
ಆಗಸ್ಟ್ 30 2023
ನಾಸಾದ ಕ್ಯೂರಿಯಾಸಿಟಿ ಮಾರ್ಸ್ ರೋವರ್ ಸೆರೆಹಿಡಿದ ಮಂಗಳದ ಮೇಲ್ಮೈಯ ೩೬೦ ಡಿಗ್ರಿ ದೃಶ್ಯಗಳನ್ನು ಜೂಮ್ ಮಾಡುವ ಮೂಲಕ ವೀಡಿಯೋವನ್ನು ರಚಿಸಲಾಗಿದೆ.
ಸಂದರ್ಭ
ಆಗಸ್ಟ್ ೨೩ ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮೂರನೇ ಚಂದ್ರ ಮಿಷನ್ ಚಂದ್ರಯಾನ-೩ ಚಂದ್ರನ ಮೇಲೆ ಯಶಸ್ವಿಯಾಗಿ ಮೃದುವಾಗಿ ಇಳಿಸಲಾಗಿದ್ದು ಭಾರತವು ಚಂದ್ರನ ಮೇಲೆ ಇಳಿಯುವಿಕೆಯನ್ನು ಸಾಧಿಸಿದ ನಾಲ್ಕನೇ ರಾಷ್ಟ್ರವಾಯಿತು. ಇಸ್ರೋದ ಸಾಧನೆಯನ್ನು ಲಕ್ಷಾಂತರ ಭಾರತೀಯರು ತಮ್ಮ ಟಿವಿ ಮೂಲಕ ವೀಕ್ಷಿಸಿದರು.
ಇಲ್ಲಿನ ಹೇಳಿಕೆ ಏನು?
ಈ ಹಿನ್ನೆಲೆಯಲ್ಲಿ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಬಾಹ್ಯಾಕಾಶ ಕಾರ್ಯಾಚರಣೆಗೆ ಲಿಂಕ್ ಮಾಡುವ ಸಂಬಂಧವಿಲ್ಲದ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಚಂದ್ರಯಾನ-೩ ತನ್ನ ಮೊದಲ ವೀಡಿಯೋವನ್ನು ಚಂದ್ರನಿಂದ ಕಳುಹಿಸಿದೆ ಎಂದು ಹೇಳುವ ವೀಡಿಯೋವೊಂದನ್ನು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆದ ಮೂರು ನಿಮಿಷಗಳ ಕಪ್ಪು-ಬಿಳುಪು ವೀಡಿಯೋವು ಚಂದ್ರನದ್ದು ಎಂದು ಹೇಳಲಾಗುವ ಕಲ್ಲಿನ ಮೇಲ್ಮೈಯನ್ನು ತೋರಿಸುತ್ತದೆ. ವೀಡಿಯೋದೊಂದಿಗೆ ಕಂಡುಬಂದ ಒಂದು ಪೋಷ್ಟ್ ನ ಶೀರ್ಷಿಕೆ ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, “ಚಂದ್ರಯಾನ-೩ ತನ್ನ ಮೊದಲ ವೀಡಿಯೋವನ್ನು ಚಂದ್ರನಿಂದ ಕಳುಹಿಸಿದೆ. ಚಂದ್ರನ ಅದ್ಭುತ ನೋಟವನ್ನು ನೋಡಿ.” ಹಲವಾರು ಇತರ ಬಳಕೆದಾರರು ಅದೇ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಷ್ಟ್ ಮಾಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಪೋಷ್ಟ್ ಗಳು (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಆಲ್ಟೆರ್ ಮಾಡಲಾಗಿದೆ)
ಆದರೆ, ಈ ಹೇಳಿಕೆಗಳು ತಪ್ಪು. ನಾಸಾದ ಕ್ಯೂರಿಯಾಸಿಟಿ ಮಾರ್ಸ್ ರೋವರ್ ಸೆರೆಹಿಡಿದ ಮಂಗಳನ ೩೬೦ ಡಿಗ್ರಿ ಚಿತ್ರವನ್ನು ಜೂಮ್ ಮಾಡುವ ಮೂಲಕ ಈ ವೀಡಿಯೋವನ್ನು ರಚಿಸಲಾಗಿದೆ.
ನಾವು ಕಂಡು ಹಿಡಿದದ್ದು ಏನು?
ನಾವು ವೈರಲ್ ವೀಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ವೀಡಿಯೋವಿನ ಕೆಳಭಾಗದಲ್ಲಿ ಕೆಲವು ಪಠ್ಯ ಚಾಲನೆಯಾಗುತ್ತಿರುವುದನ್ನು ಗಮನಿಸಿದ್ದೇವೆ. ಈ ಪಠ್ಯದ ಒಂದು ವಾಕ್ಯವು, “ಈ ದೃಶ್ಯವನ್ನು ಕ್ಯೂರಿಯಾಸಿಟಿ ರೋವರ್‌ನೊಂದಿಗೆ ಸೆರೆಹಿಡಿಯಲಾಗಿದೆ...” ಎಂದು, ಮತ್ತು ಅದರ ಕೊನೆಯಲ್ಲಿನ ಪಠ್ಯವು ಹೀಗೆ ಓದುತ್ತದೆ, “ನಾಸಾದ ಮಾರ್ಸ್ ರೋವರ್‌ನಿಂದ ಇತ್ತೀಚಿನ 4K ರೆಸಲ್ಯೂಶನ್‌ಗಳು ಈ ೩೬೦-ಡಿಗ್ರಿ ಪನೋರಮಾವನ್ನು ತೆಗೆದುಕೊಂಡಿತು. 'ಮಾಂಟ್ ಮರ್ಕೌ.” ವೀಡಿಯೋದ ಮೇಲಿನ ಎಡ ಮೂಲೆಯಲ್ಲಿ "TT ಸ್ಪೇಸ್" ಎಂದು ಓದುವ ಲೋಗೋವನ್ನು ನಾವು ಗಮನಿಸಿದ್ದೇವೆ. ಅದರಲ್ಲಿನ ಮೊದಲ "ಟಿ" ಅನ್ನು ತಲೆಕೆಳಗಾಗಿ ಬರೆಯಲಾಗಿದೆ.
ಇದರಿಂದ ಸುಳುಹನ್ನು ತೆಗೆದುಕೊಂಡು, ಅದೇ ವೀಡಿಯೋದ ವಿಸ್ತೃತ ಆವೃತ್ತಿಯನ್ನು ಯೂಟ್ಯೂಬ್ ಚಾನೆಲ್ 'ಟಾವಿ ಟೆಕ್ನಿಕಲ್ ಸ್ಪೇಸ್' ಆಗಸ್ಟ್ ೮ ರಂದು ಹಂಚಿಕೊಂಡಿದೆ ಎಂದು ನಾವು ಕಂಡುಕೊಂಡಿದ್ದೇವೆ. ಎಂಟು ನಿಮಿಷಗಳ ಅವಧಿಯ ಬಣ್ಣದ ವೀಡಿಯೋದ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, "ಮಾರ್ಸ್ ರೋವರ್‌ನ ಪನೋರಮಿಕ್ ಕ್ಯಾಮ್ ಕ್ಯಾಪ್ಚರ್ಸ್ ಇತ್ತೀಚಿನ 360° ಅನಿರೀಕ್ಷಿತ ವಿಲಕ್ಷಣ 4K ವೀಡಿಯೋ ಫೂಟೇಜ್ ಆಫ್ ಮಾರ್ಸ್ ಲೈಫ್." ವೀಡಿಯೋದ ವಿವರಣೆಯು "ಆನ್‌ಬೋರ್ಡ್ ಮಾಸ್ಟ್ ಕ್ಯಾಮೆರಾಗಳಿಂದ ತೆಗೆದ ಮಂಗಳದಿಂದ 4k ರೆಸಲ್ಯೂಶನ್‌ಗಳಲ್ಲಿ ೩೬೦-ಡಿಗ್ರಿ ನೈಜ ಪನೋರಮಾ ಚಿತ್ರಗಳನ್ನು" ತೋರಿಸಿದೆ ಎಂದು ವಿವರಿಸಿದೆ.
ನಾವು ಈ ವೀಡಿಯೋದೊಂದಿಗೆ ವೈರಲ್ ಕ್ಲಿಪ್ ಅನ್ನು ಹೋಲಿಸಿ ನೋಡಿದಾಗ, ವೈರಲ್ ಕ್ಲಿಪ್ ಅನ್ನು ಯೂಟ್ಯೂಬ್ ವೀಡಿಯೋದಿಂದ ಕ್ರಾಪ್ ಮಾಡಲಾಗಿದೆ ಎಂದು ಕಂಡುಬಂದಿದೆ. ವೈರಲ್ ಕ್ಲಿಪ್ ಈ ವೀಡಿಯೋದ ೦:೨೮ ಟೈಮ್‌ಸ್ಟ್ಯಾಂಪ್‌ನಿಂದ ಪ್ರಾರಂಭವಾಗುತ್ತದೆ ಮತ್ತು ೪:೧೨ ರವರೆಗೆ ನಡೆಯುತ್ತದೆ. ಯೂಟ್ಯೂಬ್ ವೀಡಿಯೋದ ಕೆಲವು ಭಾಗಗಳನ್ನು ತೆಗೆದುಕೊಂಡು ಚಂದ್ರಯಾನ-೩ ತೆಗೆದ ಮೊದಲ ದೃಶ್ಯಗಳು ಎಂದು ಹಂಚಿಕೊಳ್ಳಲಾಗಿದೆ.
ನಾವು ಎರಡೂ ವೀಡಿಯೋಗಳಲ್ಲಿ ಕೂಡ ಓವಲ್ ಆಕಾರದ ಕುಳಿ (ಕ್ರೇಟರ್ ಎಂದು ಕರೆಯಲಾಗುತ್ತದೆ) ಮತ್ತು ಸಮಾನ ರೀತಿಯ ಕಲ್ಲಿನ ರಚನೆಗಳನ್ನು ಗಮನಿಸಿದ್ದೇವೆ. ಹಿನ್ನೆಲೆಯಲ್ಲಿ ಒಂದೇ ಫ್ರೇಮ್‌ನೊಂದಿಗೆ ಎರಡೂ ವೀಡಿಯೋಗಳಲ್ಲಿ ಒಂದೇ ಪಠ್ಯವು ಚಾಲನೆಯಲ್ಲಿದೆ. ಯೂಟ್ಯೂಬ್ ಚಾನೆಲ್ ಯು.ಎಸ್ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಗೆ ವೀಡಿಯೋದ ಕ್ರೆಡಿಟ್ ನೀಡಿದೆ.
ವೈರಲ್ ವೀಡಿಯೋ ಮತ್ತು ಯೂಟ್ಯೂಬ್ ವೀಡಿಯೋ ನಡುವಿನ ಚಿತ್ರಗಳ ಹೋಲಿಕೆ. (ಮೂಲ: ಫೇಸ್‌ಬುಕ್/ಯೂಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಆಲ್ಟೆರ್ ಮಾಡಲಾಗಿದೆ)
ನಾಸಾದ ಕ್ಯೂರಿಯಾಸಿಟಿ ರೋವರ್ ನಿಂದ ಸೆರೆಹಿಡಿಯಲಾದ ಮಂಗಳನ ೩೬೦-ಡಿಗ್ರಿ ಚಿತ್ರದ ವಿವಿಧ ಭಾಗಗಳಲ್ಲಿ ಜೂಮ್ ಮಾಡುವ ಮೂಲಕ ವೀಡಿಯೋವನ್ನು ರಚಿಸಲಾಗಿದೆ ಎಂದು ಹೆಚ್ಚಿನ ಸಂಶೋಧನೆಯು ಬಹಿರಂಗಪಡಿಸಿತು. ಚಿತ್ರದೊಳಗಿನ ಸಣ್ಣ ವಸ್ತುಗಳ ಮೇಲೆ ವೀಡಿಯೋ ಅಲ್ಟ್ರಾ-ಜೂಮ್ ಆಗುತ್ತದೆ ಮತ್ತು ವೀಡಿಯೋದ ರಚನೆಕಾರರು ವೀಡಿಯೋದ ಕೆಳಭಾಗದಲ್ಲಿ ಕಂಡುಬರುವ ಪಠ್ಯದಲ್ಲಿ ಕೆಲವು ಪ್ರಶ್ನೆಗಳನ್ನು ತಿಳಿಸಿದ್ದಾರೆ. ಮೇಲಿನ ಫೋಟೋಗಳಲ್ಲಿ ನೋಡಿದಂತೆ, ವೀಡಿಯೋದ ಸೃಷ್ಟಿಕರ್ತರು ಮೇಲ್ಮೈಯಲ್ಲಿರುವ ಕ್ರೇಟರ್ ಒಂದು ಕಾಲದಲ್ಲಿ ಪ್ರಾಚೀನ ಕೊಳವಾಗಿರಬಹುದೇ ಅಥವಾ ಕಲ್ಲಿನ ರಚನೆಗಳ ಹಿಂದಿನ ರಹಸ್ಯಗಳು ಏನೆಂದು ಪ್ರಶ್ನಿಸುತ್ತಾರೆ.
ಕ್ಯೂರಿಯಾಸಿಟಿ ರೋವರ್ ಎಂಬುದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಿಂದ ನಿರ್ಮಿಸಲಾದ ರೋಬೋಟಿಕ್ ಬಾಹ್ಯಾಕಾಶ ನೌಕೆಯಾಗಿದ್ದು, ಕ್ಯಾಲಿಫೋರ್ನಿಯಾದ ಪಸಾಡೆನಾದಿಂದ ಇದನ್ನು ನಿಯಂತ್ರಿಸಲಾಗುತ್ತದೆ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ವೆಬ್‌ಸೈಟ್‌ನಲ್ಲಿ ನಾವು ಇದರ ಚಿತ್ರವನ್ನು ಪತ್ತೆ ಮಾಡಿದ್ದೇವೆ.
ಚಿತ್ರವು ಮಂಗಳ ಗ್ರಹದ ಮೇಲೆ "ಜೌ" ಎಂಬ ಅಡ್ಡಹೆಸರಿನ ಪ್ರಭಾವದ ಕ್ರೇಟರ್ ಅನ್ನು ಪ್ರದರ್ಶಿಸುತ್ತದೆ. ಇದನ್ನು ಜುಲೈ ೨೫, ೨೦೨೩ ರಂದು ರೋವರ್‌ನ ಮಾಸ್ಟ್‌ಕ್ಯಾಮ್ ಬಳಸಿ ಸೆರೆಹಿಡಿಯಲಾಗಿದೆ. ೩,೮೯೯ ನೇ ಮಂಗಳದ ದಿನ (ಸೋಲ್ ಎಂದು ಕರೆಯಲಾಗುತ್ತದೆ). ಚಿತ್ರವನ್ನು ಆಗಸ್ಟ್ ೩, ೨೦೨೩ ರಂದು ಪ್ರಕಟಿಸಲಾಗಿದೆ. ನಾವು ಯೂಟ್ಯೂಬ್ ವೀಡಿಯೋವನ್ನು ೩೬೦-ಡಿಗ್ರಿ ಚಿತ್ರದೊಂದಿಗೆ ಹೋಲಿಸಿದ್ದೇವೆ ಮತ್ತು ಎಲ್ಲಾ ದೃಶ್ಯಗಳಲ್ಲಿ ಅದೇ ಕ್ರೇಟರ್ ಮತ್ತು ಕಲ್ಲಿನ ಮೇಲ್ಮೈಗಳನ್ನು ಗುರುತಿಸಿದ್ದೇವೆ. ಆದ್ದರಿಂದ, ಚಿತ್ರದ ಮೇಲೆ ಜೂಮ್ ಮಾಡುವ ಮೂಲಕ ಯೂಟ್ಯೂಬ್ ವೀಡಿಯೋವನ್ನು ರಚಿಸಲಾಗಿದೆ ಎಂದು ನಾವು ತೀರ್ಮಾನಿಸಿದ್ದೇವೆ.
ಯೂಟ್ಯೂಬ್ ವೀಡಿಯೋ ಮತ್ತು ನಾಸಾದ ಚಿತ್ರದ ನಡುವಿನ ಹೋಲಿಕೆ. (ಮೂಲ: ಯೂಟ್ಯೂಬ್/ನಾಸಾ/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಬದಲಾಯಿಸಲಾಗಿದೆ)
ನಾವು ಎರಡೂ ದೃಶ್ಯಗಳಲ್ಲಿ ಒಂದೇ ರೀತಿಯ ರಚನೆಗಳನ್ನು ಗುರುತಿಸಿದ್ದೇವೆ- ದೊಡ್ಡ ಕಪ್ಪು ಬಣ್ಣದ ಬಂಡೆಯಂತಹ ವಸ್ತು ಮತ್ತು ಚಿಕ್ಕದಾದ ಕಂದು ಬಣ್ಣದ ರಚನೆ. ೩:೩೭ ಟೈಮ್‌ಸ್ಟ್ಯಾಂಪ್‌ನಲ್ಲಿ, ಯೂಟ್ಯೂಬ್ ವೀಡಿಯೋದಲ್ಲಿನ ಸಣ್ಣ ಕಂದು ರಚನೆಗೆ ಎಡಿಟಿಂಗ್ ಲೇಯರ್ ಅನ್ನು ಅನ್ವಯಿಸಲಾಗಿದೆ. ಅದನ್ನು ಹಿಂದೂ ದೇವರು ಗಣೇಶನ ಆಕಾರದಲ್ಲಿ ರೂಪಿಸಲಾಗಿದೆ. ಯೂಟ್ಯೂಬ್ ವೀಡಿಯೋದ ರಚನೆಕಾರರು ಎಡಿಟಿಂಗ್ ಲೇಯರ್ ಅನ್ನು ಬಳಸುತ್ತಾರೆ, ಅದು ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ಸೇರಿಸಿದ ಆರು ಸೆಕೆಂಡುಗಳಲ್ಲಿ ಮರೆಯಾಗುತ್ತಾ "ಹಿಂದೂ ದೇವರು ಗಣೇಶನ ಇದೇ ರೀತಿಯ ಪ್ರತಿಮೆ" ಎಂದು ಹೇಳುತ್ತದೆ.
ಯೂಟ್ಯೂಬ್ ವೀಡಿಯೋ ನಾಸಾದ ದೃಶ್ಯಕ್ಕೆ ಎಡಿಟಿಂಗ್ ಲೇಯರ್ ಅನ್ನು ಅನ್ವಯಿಸುತ್ತದೆ. (ಮೂಲ: ಯೂಟ್ಯೂಬ್/ನಾಸಾ/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಬದಲಾಯಿಸಲಾಗಿದೆ)
ಇದಲ್ಲದೆ, ಚಂದ್ರನ ಕಾರ್ಯಾಚರಣೆಯ ಅಧಿಕೃತ ದೃಶ್ಯಗಳನ್ನು ಬಿಡುಗಡೆ ಮಾಡುತ್ತಿರುವ ಇಸ್ರೋ ಹಂಚಿಕೊಂಡ ಯಾವುದೇ ವೀಡಿಯೋವನ್ನು ನಾವು ಈ ಫ್ಯಾಕ್ಟ್ ಚೆಕ್ ಬರೆಯುವ ಸಮಯದಲ್ಲಿ ಕಂಡುಬಂದಿಲ್ಲ. ಬಾಹ್ಯಾಕಾಶ ಸಂಸ್ಥೆ ಇದುವರೆಗೆ ಚಂದ್ರಯಾನ-೩ ರ ರೋವರ್ ಪ್ರಗ್ಯಾನ್ ಅನ್ನು ಚಂದ್ರನ ಮೇಲೆ ತೋರಿಸುವ ವೀಡಿಯೋವನ್ನು ಮಾತ್ರ ಬಿಡುಗಡೆ ಮಾಡಿದೆ. ಮತ್ತೊಂದು ಎಕ್ಸ್ ಪೋಷ್ಟ್ ನಲ್ಲಿ, ಇಸ್ರೋ ಎರಡು ಚಿತ್ರಗಳನ್ನು ಸಹ ಹಂಚಿಕೊಂಡಿದೆ - ಒಂದು ಚಂದ್ರನ ಮೇಲಿನ ಕ್ರೇಟರ್ ಅನ್ನು ಪ್ರದರ್ಶಿಸುತ್ತದೆ ಮತ್ತು ಇನ್ನೊಂದು ರೋವರ್‌ನ ಮಾರ್ಗವನ್ನು ತೋರಿಸುತ್ತದೆ.
ತೀರ್ಪು
ವೈರಲ್ ವೀಡಿಯೋವು ಚಂದ್ರಯಾನ-೩ ಬಾಹ್ಯಾಕಾಶ ನೌಕೆಯಿಂದ ಸೆರೆಹಿಡಿಯಲಾದ ಚಂದ್ರನ ಮೊದಲ ವೀಡಿಯೋವನ್ನು ತೋರಿಸುತ್ತದೆ ಎಂಬ ಹೇಳಿಕೆ ತಪ್ಪು. ನಾಸಾದ ಕ್ಯೂರಿಯಾಸಿಟಿ ಮಾರ್ಸ್ ರೋವರ್ ಸೆರೆಹಿಡಿದ ೩೬೦ ಡಿಗ್ರಿ ಚಿತ್ರವನ್ನು ಜೂಮ್ ಮಾಡುವ ಮೂಲಕ ವೀಡಿಯೋವನ್ನು ರಚಿಸಲಾಗಿದೆ. ಚಂದ್ರಯಾನ-೩ ಚಂದ್ರನ ಮೇಲೆ ಇಳಿಯುವ ಮೊದಲೇ ಈ ಚಿತ್ರವನ್ನು ಜುಲೈ ೨೫ ರಂದು ಸೆರೆಹಿಡಿಯಲಾಯಿತು ಮತ್ತು ಆಗಸ್ಟ್ ೩ ರಂದು ಪ್ರಕಟಿಸಲಾಯಿತು.
ಅನುವಾದಿಸಿದವರು: ವಿವೇಕ್ ಜೆ