ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 14 2023
೨೦೨೨ರ ಆಗಸ್ಟ್‌ನಲ್ಲಿ ತಮಿಳುನಾಡಿನ ಹೊಸೂರಿನಲ್ಲಿ ಈ ವೀಡಿಯೋ ತೆಗೆಯಲಾಗಿದೆ. ಮುಂಬೈನ ಮುಂಗಾರು ಮಳೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.
ಸಂದರ್ಭ
ನಿರಂತರ ಮುಂಗಾರು ಮಳೆಯಿಂದಾಗಿ ಭಾರತದ ಮುಂಬೈ ನಗರದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಇದು ಟ್ರಾಫಿಕ್ ಅಸ್ತವ್ಯಸ್ತತೆ ಮತ್ತು ಕಟ್ಟಡಗಳ ಕುಸಿತಕ್ಕೆ ಕಾರಣವಾಗಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಬಿಎಂಸಿ, ಮೆಟ್ರೋಪಾಲಿಟನ್ ನಗರದ ನಿರ್ವಹಣೆಯ ಜವಾಬ್ದಾರಿಯುತ ನಾಗರಿಕ ಸಂಸ್ಥೆಯನ್ನು ಈ ಪರಿಸ್ಥಿತಿಗೆ ಟೀಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ತೆರೆದ ಚರಂಡಿಯ ಸುತ್ತಲೂ ಜನರ ಗುಂಪನ್ನು ತೋರಿಸುವ ೪೫ ಸೆಕೆಂಡುಗಳ ಕ್ಲಿಪ್ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಕೆಲವು ನಿವಾಸಿಗಳು ನೀರಿನಿಂದ ತುಂಬಿದ ಚರಂಡಿಯ ಒಂದು ಬದಿಯಿಂದ ಪ್ರಜ್ಞಾಹೀನ ವ್ಯಕ್ತಿಯನ್ನು ರಕ್ಷಿಸುತ್ತಿರುವುದನ್ನು ವೀಡಿಯೋದ ತುಣುಕಿನಲ್ಲಿ ಕಾಣಬಹುದು. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಉಳಿಸುವ ಪ್ರಯತ್ನದಲ್ಲಿ ಕೆಲವರು ನಂತರ ಸಿಪಿಆರ್ (CPR ) ಅನ್ನು ನೀಡುತ್ತಿದ್ದಾರೆ. ವೀಡಿಯೋದಲ್ಲಿ ಯಾವುದೇ ಸಂಭಾಷಣೆಗಳು ಕೇಳಿಸುವುದಿಲ್ಲ ಆದರೆ ಹಿನ್ನೆಲೆಯಲ್ಲಿ ಕೆಲವು ಹಾಡುಗಳನ್ನು ಕೇಳಬಹುದು. ಟ್ವಿಟ್ಟರ್ ಬಳಕೆದಾರರು "ಬೋರಿವಲಿ ಪೂರ್ವ ಭಾಗ.. ಬಿಎಂಸಿಯ ಭ್ರಷ್ಟ ನಾಯಕತ್ವವು ಇದನ್ನು ನಿಮಗಾಗಿ ಮಾಡಿಕೊಟ್ಟಿದೆ. ದೇವರು ಈ ನಾಯಕರನ್ನು ಕ್ಷಮಿಸುತ್ತಾನೆ ಎಂದು ನೀವು ಭಾವಿಸುತ್ತೀರಾ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಘಟನೆಯ ಬಗ್ಗೆ ಗಮನ ಸೆಳೆಯಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಕೂಡ ಪೋಷ್ಟ್ ನಲ್ಲಿ ಟ್ಯಾಗ್ ಮಾಡಲಾಗಿದೆ.
ಆದರೆ, ಈ ವೀಡಿಯೋ ಮುಂಬೈನದ್ದಲ್ಲ.
ವಾಸ್ತವವಾಗಿ
ವೀಡಿಯೋದ ಕೀಫ್ರೇಮ್‌ಗಳಲ್ಲಿ ಒಂದನ್ನು ತೆಗೆದುಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನ್ಯೂಸ್ ೧೮ ಆಗಸ್ಟ್ ೨೦೨೨ರಲ್ಲಿ ಟ್ವಿಟರ್‌ನಲ್ಲಿ ಅದೇ ಘಟನೆಯ ಕ್ಲಿಪ್ ಅನ್ನು ಹಂಚಿಕೊಂಡಿದೆ ಎಂದು ನಾವು ಕಂಡುಕೊಂಡಿದ್ದೇವೆ, ಘಟನೆಯು ತಮಿಳುನಾಡಿನ ಹೊಸೂರಿನಲ್ಲಿ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ವೀಡಿಯೋ ಚಿಕ್ಕದಾಗಿದೆ ಮತ್ತು ವಿಭಿನ್ನ ಕೋನದಿಂದ ರೆಕಾರ್ಡ್ ಮಾಡಲಾಗಿದೆ ಎಂದು ತೋರುತ್ತದೆ, ಆದರೆ ಚರಂಡಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯನ್ನು ರಕ್ಷಿಸಲು ಜನರು ಧಾವಿಸುತ್ತಿರುವ ದೃಶ್ಯಗಳನ್ನು ಇದು ಸೆರೆಹಿಡಿದಿದೆ. ನ್ಯೂಸ್ ೧೮ ಹಂಚಿಕೊಂಡ ವೀಡಿಯೋದಲ್ಲಿ, ಮಧ್ಯವಯಸ್ಸಿನ ವ್ಯಕ್ತಿ ಒಬ್ಬರು ನೀರು ನಿಂತಿರುವ ರಸ್ತೆಯಲ್ಲಿ ಟ್ರಾಫಿಕ್ ಮಧ್ಯ ನಿಂತಿರುವುದನ್ನು ಕಾಣಬಹುದು. ರಸ್ತೆ ದಾಟಲು ಯತ್ನಿಸುವ ಮುನ್ನ ದ್ವಿಚಕ್ರ ವಾಹನ ಸವಾರನ ಜೊತೆ ವಾಗ್ವಾದಕ್ಕಿಳಿಯುತ್ತಾನೆ. ಆದರೆ ಅವನ ಅಸ್ಥಿರ ನಡಿಗೆಯಿಂದಾಗಿ, ತನ್ನ ಸಮತೋಲನವನ್ನು ಕಳೆದುಕೊಂಡು ರಸ್ತೆಬದಿಯಲ್ಲಿರುವ ಚರಂಡಿಗೆ ಬೀಳುತ್ತಾನೆ ಮತ್ತು ಅಲ್ಲಿನ ಇತರರು ಅವನ ಸಹಾಯಕ್ಕೆ ಧಾವಿಸುವುದನ್ನು ನೋಡಬಹುದು. ವೈರಲ್ ವೀಡಿಯೋದಲ್ಲಿಯೂ ಕೂಡ ಇದೇ ದೃಶ್ಯಗಳನ್ನು ಕಾಣಬಹುದು. ಈ ವೀಡಿಯೋದಲ್ಲಿ ಜನರು ತಮಿಳಿನಲ್ಲಿ ಮಾತಾಡದಿರುವುದು ಅಸ್ಪಷ್ಟವಾಗಿ ಕೇಳಬಹುದು.
ವೈರಲ್ ಕ್ಲಿಪ್‌ನಂತಹ ಇದೇ ರೀತಿಯ ದೃಶ್ಯಗಳನ್ನು ಯೂಟ್ಯೂಬ್‌ನಲ್ಲಿ ಕನ್ನಡ ಸುದ್ದಿ ಚಾನೆಲ್ ಏಷ್ಯಾನೆಟ್ ಸುವರ್ಣ ನ್ಯೂಸ್ ತನ್ನ ವೀಡಿಯೋ ವರದಿಯಲ್ಲಿ ಹಂಚಿಕೊಂದಿದೆ. ಅದರ ಶೀರ್ಷಿಕೆ, "ಕುಡಿದ ಮತ್ತಿನಲ್ಲಿ ಚರಂಡಿಗೆ ಬಿದ್ದ ವೃದ್ಧ; ವಿಡಿಯೋ ವೈರಲ್ !" ಎಂದು ಹೇಳುತ್ತದೆ ಮತ್ತು ಆಗಸ್ಟ್ ೪, ೨೦೨೨ ರಂದು ಅಪ್‌ಲೋಡ್ ಮಾಡಲಾಗಿದೆ. ವೀಡಿಯೋದ ವಿವರಣೆಯಲ್ಲಿ ಈ ಘಟನೆಯು ತಮಿಳುನಾಡಿನ ಹೊಸೂರಿನಲ್ಲಿ ಸಂಭವಿಸಿದೆ ಎಂದು ತಿಳಿಸುತ್ತದೆ.
ಇದಲ್ಲದೆ, ಪ್ರಾದೇಶಿಕ ಸುದ್ದಿ ಸಂಸ್ಥೆಯಾದ ಸಮಯಂ ತಮಿಳುನ ವೀಡಿಯೋ ವರದಿಯ ಪ್ರಕಾರ, ವ್ಯಕ್ತಿ ರಸ್ತೆ ದಾಟಲು ಪ್ರಯತ್ನಿಸುವಾಗ ಅಜಾಗರೂಕತೆಯಿಂದ ಚರಂಡಿಗೆ ಬಿದ್ದಿದ್ದಾನೆ ಎಂದು ಹೇಳುತ್ತದೆ. ಹಾಗು ಸುಮಾರು ಮೂರು ಗಂಟೆಗಳ ಕಾಲ ನಿರಂತರ ಮಳೆಯಿಂದಾಗಿ ಹೊಸೂರಿನ ರಸ್ತೆಯು ಜಲಾವೃತಗೊಂಡಿತ್ತು ಎಂದು ತಿಳಿಸುತ್ತದೆ. ಈ ವರದಿಯನ್ನು ಆಗಸ್ಟ್ ೪, ೨೦೨೨ರಂದು ಪ್ರಕಟಿಸಲಾಗಿತ್ತು. ರಕ್ಷಣೆಯ ನಂತರ ವ್ಯಕ್ತಿಯನ್ನು ಹೆಚ್ಚುವರಿ ವೈದ್ಯಕೀಯ ಆರೈಕೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ವರದಿ ಹೇಳುತ್ತದೆ.
ನಾವು ವೈರಲ್ ಕ್ಲಿಪ್ ಅನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಚರಂಡಿಯ ಬಳಿ ಕೆಲವು ತಮಿಳು ಪಠ್ಯವನ್ನು ಹೊಂದಿರುವ ಅಂಗಡಿಯ ಸೈನ್‌ಬೋರ್ಡ್ ಅನ್ನು ಗಮನಿಸಬಹುದು. ಸೈನ್‌ಬೋರ್ಡ್‌ನಲ್ಲಿ 'ಚಿನ್ನದ ಸಾಲ' ಮತ್ತು ಕೆಲವು ದೂರವಾಣಿ ಸಂಖ್ಯೆಗಳನ್ನೂ ಸಹ ಉಲ್ಲೇಖಿಸಲಾಗಿದೆ. ಲಾಜಿಕಲಿ ಫ್ಯಾಕ್ಟ್ಸ್ ಅಂಗಡಿಯನ್ನು ಸಂಪರ್ಕಿಸಿ ಅದರ ಸ್ಥಳದ ಬಗ್ಗೆ ವಿಚಾರಿಸಿದೆ. ಅಂಗಡಿಯ ಸಿಬ್ಬಂದಿಯೊಬ್ಬರು, ಯೋಗಕ್ಷೇಮಮ್ ಗೋಲ್ಡ್ ಲೋನ್ ಅಂಗಡಿಯು ಹೊಸೂರಿನಲ್ಲಿದೆ ಎಂದು ಹೇಳಿದರು ಮತ್ತು ಅದರ ಗೂಗಲ್ ಮ್ಯಾಪ್ಸ್ ನ ಜಿಯೋಲೊಕೇಶನ್ ನಿರ್ದೇಶಾಂಕಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
ರಾಜ್ಯ ಹೆದ್ದಾರಿ ೧೭ ರ ಉದ್ದಕ್ಕೂ ಮಾರ್ಗವನ್ನು ಪತ್ತೆಹಚ್ಚಿದ ನಂತರ, ನಾವು ವೈರಲ್ ವೀಡಿಯೋದ ದೃಶ್ಯಗಳಲ್ಲಿ ಕಂಡುಬರುವ ವೈಶಿಷ್ಟ್ಯಗಳೊಂದಿಗೆ ಒಂದು ಸ್ಥಳವನ್ನು ಗುರುತಿಸಿದ್ದೇವೆ, ಉದಾಹರಣೆಗೆ ಚಿನ್ನದ ಸಾಲದ ಕೊಡುಗೆಯೊಂದಿಗೆ ಇದ್ದ ಸೈನ್‌ಬೋರ್ಡ್, ರೈಲ್ವೆ ನಿಲ್ದಾಣಕ್ಕೆ ನಿರ್ದೇಶನಗಳನ್ನು ಹೊಂದಿರುವ ಮತ್ತೊಂದು ಸೈನ್‌ಬೋರ್ಡ್, ಹಳದಿ ಕಂಬ, ಮತ್ತು ಸೇತುವೆಯನ್ನು ನೋಡಬಹುದು. ವೀಡಿಯೋ ತುಣುಕನ್ನು ಮತ್ತು ಗೂಗಲ್ ಮ್ಯಾಪ್‌ನಲ್ಲಿ ಗುರುತಿಸಲಾದ ಸ್ಥಳವನ್ನು ಹೋಲಿಸಿದಾಗ, ವೈರಲ್ ವೀಡಿಯೋವನ್ನು ತಮಿಳುನಾಡಿನ ಹೊಸೂರಿನಲ್ಲಿ ಸೆರೆಹಿಡಿಯಲಾಗಿದೆ ಎಂದು ನಾವು ದೃಡೀಕರಿಸಿದ್ದೇವೆ.
ತೀರ್ಪು
ತಮಿಳುನಾಡಿನ ಹೊಸೂರಿನಲ್ಲಿ ತೆರೆದ ಚರಂಡಿಗೆ ಬೀಳುವ ವ್ಯಕ್ತಿಯನ್ನು ಸೆರೆಹಿಡಿಯುವ ೨೦೨೨ರ ವೀಡಿಯೋವನ್ನು ಮಹಾರಾಷ್ಟ್ರದ ಮುಂಬೈನ ಬೋರಿವಲಿ ಪೂರ್ವ ಭಾಗದಿಂದ ಇತ್ತೀಚಿನ ಘಟನೆಯನ್ನು ಸೆರೆಹಿಡಿಯಲಾಗಿದೆ ಎಂಬ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.