ಮೂಲಕ: ಅಂಕಿತಾ ಕುಲಕರ್ಣಿ
ಫೆಬ್ರವರಿ 17 2023
ವೀಡಿಯೋ ಏರೋ ಇಂಡಿಯಾ ೨೦೨೩ ರ ಪ್ರಾರಂಭಕ್ಕಿಂತ ಮೊದಲೇ ಚಿತ್ರೀಕರಿಸಲಾಗಿದೆ ಮತ್ತು ಬೆಂಗಳೂರಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿಲ್ಲ.
ಸಂದರ್ಭ
ಪ್ರತಿ ವರ್ಷದಂತೆ ನಡೆಯುವ ಏರ್ ಶೋ, "ಏರೋ ಇಂಡಿಯಾ ೨೦೨೩" ಫೆಬ್ರವರಿ ೧೩ ರಿಂದ ೧೭ ರವರೆಗೆ ಭಾರತದ ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ. ಸರ್ಕಾರದ ಪ್ರಕಟಣೆಯ ಪ್ರಕಾರ ಈ ಐದು ದಿನಗಳ ಕಾರ್ಯಕ್ರಮ "ದಿ ರನ್‌ವೇ ಟು ಬಿಲಿಯನ್ ಒಪ್ಪೋರ್ಚುನಿಟಿಸ್" ಎಂಬ ವಿಷಯದ ಮೇಲೆ ಭಾರತದ ವೈಮಾನಿಕ ಮತ್ತು ರಕ್ಷಣಾ ಸಾಮರ್ಥ್ಯಗಳ ಬೆಳೆವಣಿಗೆಗಳನ್ನು ಪ್ರದರ್ಶಿಸುತ್ತದೆ. ಯು.ಎಸ್(U.S.) ವಾಯುಪಡೆಯ F-35 ಮತ್ತು ರಷ್ಯಾದ ಸುಖೋಯ್ SU-57 ಫೈಟರ್ ಜೆಟ್‌ಗಳನ್ನು ಪ್ರದರ್ಶಿಸಲಾಗುವುದು ಎಂದು ವರದಿಗಳು ಹೇಳುತ್ತವೆ. ಈ ಹಿನ್ನಲೆಯಲ್ಲಿ, ೧೫ ಸೆಕೆಂಡುಗಳ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು ಅದು ಈಗ ನಡೆಯುತ್ತಿರುವ ಏರೋ ಶೋನ ದೃಶ್ಯವನ್ನು ಬಿಂಬಿಸುತ್ತದೆ ಎಂದು ಹೇಳುತ್ತದೆ. ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ ದಲ್ಲಿ ವಿಮಾನವು ಕೋಬ್ರಾ ಕುಶಲತೆಯಲ್ಲಿ ಚಲಿಸುತ್ತಿರುವುದನ್ನು ನಾವು ನೋಡಬಹುದು. ಈ ವೀಡಿಯೋ ಕನಿಷ್ಠ ೧೫೭೦೦ ರಷ್ಟು ವೀಕ್ಷಣೆಗಳನ್ನು ಗಳಿಸಿದೆ .
ವಾಸ್ತವವಾಗಿ
ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ವೀಡಿಯೋ ಏರೋ ಇಂಡಿಯಾ ೨೦೨೩ ಪ್ರಾರಂಭವಾಗುವ ಮೊದಲೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ನಾವು ಕಂಡುಕೊಂಡೆವು. ಫೆಬ್ರವರಿ ೯, ೨೦೨೩ ರಂದು "ಆವಿಯಾ.ಪ್ರೊ-ಫಾರಿನ್ ಅಫೇರ್ಸ್-ಜಿಯೋಪಾಲಿಟಿಕ್ಸ್" ಎಂಬ ಬಳಕೆದಾರರಿಂದ ಇದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿತ್ತು ಮತ್ತು ಇದರ ಶೀರ್ಷಿಕೆ, "ವಿಮಾನ ಪ್ರದರ್ಶನದಲ್ಲಿ ರಷ್ಯಾದ ಪೈಲಟ್. ವಿಮಾನದ ಪ್ರಕಾರ - ಸುಖೋಯ್ SU-57" ಎಂದು ತಿಳಿಸುತ್ತದೆ. ಟ್ವಿಟ್ಟರ್ ನ ಮತ್ತೊಂದು ಬಳಿಕೆದಾರರಾದ "ಡೆನೆಸ್ ಟೋರ್ಟೆಲಿ" ಯವರೂ ಸಹ ಈ ವೀಡಿಯೋವನ್ನು ಫೆಬ್ರವರಿ ೮, ೨೦೨೩ರಂದು ಶೇರ್ ಮಾಡಿದ್ದರು ಮತ್ತು ಅದರ ಶೀರ್ಷಿಕೆ ಹೀಗಿದೆ, "ಐತಿಹಾಸಿಕ Su-35 ವೈಮಾನಿಕ ಪ್ರದರ್ಶನದಲ್ಲಿ ಮತ್ತು ಉಕ್ರೇನ್‌ನಲ್ಲಿನ ನಿಜವಾದ ಯುದ್ಧಭೂಮಿಯಲ್ಲಿ"
ವಿಮಾನ ಮತ್ತು ವಿಮಾನ ನಿಲ್ದಾಣಗಳ ವ್ಯಾಪಕ ಫೋಟೋ ಡೇಟಾಬೇಸ್ ಅನ್ನು ಒಳಗೊಂಡಿರುವ ಏರ್ಲಿನ್ರ್ಸ್.ನೆಟ್ ಎಂಬ ವೆಬ್‌ಸೈಟ್‌ನಲ್ಲಿ ನಾವು ಈ ಫೈಟರ್ ಜೆಟ್‌ನ ಚಿತ್ರವನ್ನು ಕಂಡುಕೊಂಡೆವು. ಇದು "ರಷ್ಯಾದ ವಾಯುಪಡೆಯ ಸುಖೋಯ್ SU-30MKI" ಎಂದು ವೆಬ್‌ಸೈಟ್ ಉಲ್ಲೇಖಿಸುತ್ತದೆ. ವೀಡಿಯೋ ದಲ್ಲಿ ಕಂಡುಬಂದ ಜೆಟ್ ಮತ್ತು ಈ ಚಿತ್ರದಲ್ಲಿರುವ ವಿಮಾನ ಹೋಲುತ್ತದೆ ಆದರೆ ಮೇಲ್ಕಂಡ ಟ್ವಿಟ್ಟರ್ ವೀಡಿಯೋಗಳ ಕೆಳಗೆ ಕಾಮೆಂಟ್ಸ್ ಅಲ್ಲಿ ಇತರೆ ಬಳಿಕೆದಾರರು ಅದನ್ನು ರಷ್ಯಾದ ಫೈಟರ್ ಜೆಟ್ SU-35 ನ ರೇಡಿಯೊ-ನಿಯಂತ್ರಿತ (RC) ಮಾದರಿಯಲ್ಲಿದೆ ಎಂದು ಸೂಚಿಸುತ್ತವೆ.
ವೀಡಿಯೋ ದಲ್ಲಿ ಕಂಡುಬರುವ ಜೆಟ್ ನ ಆಯಾಮಗಳನ್ನು ಸೂಕ್ತವಾಗಿ ವಿಶ್ಲೇಷಿಸಿದಾಗ ಅದರ ಮೇಲೆ ಅನುಮಾನ ಉಂಟಾಯಿತು.SU-35 ಗಳ RC ಮಾದರಿಗಳು ಲಭ್ಯವಿದೆಯೇ ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸಿದಾಗ , ಜುಲೈ ೨೨, ೨೦೨೨ ರಂದು ಏರ್‌ಗಾರ್ಡಿಯನ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಯೂಟ್ಯೂಬ್ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಇದು "ಫ್ರೀವಿಂಗ್ ಮಾಡೆಲ್" ಎಂಬ ಕಂಪನಿಯು ತಯಾರಿಸಿದ SU-35 ನ RC ಮಾದರಿಯನ್ನು ತೋರಿಸುತ್ತದೆ. ವೈರಲ್ ವೀಡಿಯೋದಲ್ಲಿ ನೋಡಿದಂತೆ ಇದು ಫೈಟರ್ ಜೆಟ್ ಅನ್ನು ಹೋಲುತ್ತದೆ ಮತ್ತು ಅದೇ ರೀತಿ ಕೋಬ್ರಾ ಕುಶಲತೆಯಲ್ಲಿ ಹಾರುವುದನ್ನು ನಾವು ನೋಡಬಹುದು. ಅದರ ಆಕಾರ ಮತ್ತು ಬಣ್ಣವು ಈಗ ವೈರಲ್ ಆಗಿರುವ ವೀಡಿಯೋಗೆ ಹೊಂದಿಕೆಯಾಗುತ್ತದೆ. ವೈರಲ್ ವೀಡಿಯೋದಲ್ಲಿ ಕಂಡುಬರುವ ಜೆಟ್ RC ಮಾದರಿಯಾಗಿರಬಹುದು ಎಂದು ಇದು ಸೂಚಿಸುತ್ತದೆ.
ವೈರಲ್ ವೀಡಿಯೋದ ಮೂಲವನ್ನು ನಾವು ಖಚಿತಪಡಿಸಲು ಸಾಧ್ಯವಾಗದಿದ್ದರೂ, ಇದು ಏರೋ ಇಂಡಿಯಾ ೨೦೨೩ರ ಪ್ರಾರಂಭಕ್ಕೂ ಮುಂಚೆಯೇ ಚಿತ್ರಿಕರಿಸಿರುವುದು ಎಂದು ತಿಳಿದುಬಂದಿದೆ. ಅನಾಮಧೇಯರಾಗಿ ಉಳಿಯಲು ಬಯಸಿದ HAL (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ನ ತಾಂತ್ರಿಕ ಇಂಜಿನಿಯರ್, ಇದು ಹಳೆಯ ವೀಡಿಯೋ ಮತ್ತು ಏರೋ ಇಂಡಿಯಾ ೨೦೨೩ಗೆ ಸಂಬಂಧಿಸಿಲ್ಲ ಎಂದು ಲಾಜಿಕಲಿಗೆ (Logically) ದೃಢಪಡಿಸಿದರು.
ತೀರ್ಪು
ಫೈಟರ್ ಜೆಟ್‌ನ ರಿಮೋಟ್-ನಿಯಂತ್ರಿತ ಮಾದರಿಯನ್ನು ತೋರಿಸುವ ವೈರಲ್ ವೀಡಿಯೋ ಏರೋ ಇಂಡಿಯಾ ೨೦೨೩ಕ್ಕಿಂತ ಹಿಂದಿನದ್ದು ಮತ್ತು ಇದನ್ನು ಇತ್ತೀಚೆಗೆ ಭಾರತದ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿಲ್ಲ. ಆದ್ದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.