ಮೂಲಕ: ವಿವೇಕ್ ಜೆ
ಆಗಸ್ಟ್ 1 2023
ಈ ವೀಡಿಯೋದಲ್ಲಿನ ಘಟನೆಯು ಆಂಧ್ರಪ್ರದೇಶದಲ್ಲಿ ನಡೆದದ್ದು, ಜೂನ್ ೨೦೨೩ ರಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬನನ್ನು ಥಳಿಸಿದ ಆರೋಪದಡಿಯಲ್ಲಿ ಒಂಬತ್ತು ಜನರನ್ನು ಬಂಧಿಸಲಾಯಿತು.
(ಪ್ರಚೋದಕ ಎಚ್ಚರಿಕೆ: ಈ ಕಥೆಯು ಯಾತನೆಯ ದೃಶ್ಯಗಳ ವಿವರಣೆಯನ್ನು ಒಳಗೊಂಡಿದೆ ಮತ್ತು ದೈಹಿಕ ಮತ್ತು ಲೈಂಗಿಕ ಆಕ್ರಮಣದ ಉಲ್ಲೇಖಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗಿದೆ.)
ಸಂದರ್ಭ
ಮಣಿಪುರದಲ್ಲಿ ಕ್ರಿಶ್ಚಿಯನ್ ವ್ಯಕ್ತಿಯೊಬ್ಬರು ದೈಹಿಕ ಹಲ್ಲೆಗೆ ಒಳಗಾಗಿದ್ದಾರೆ ಎಂಬ ಹೇಳಿಕೆಯೊಂದಿಗೆ ಪುರುಷರ ಗುಂಪೊಂದು ವ್ಯಕ್ತಿಯೊಬ್ಬನನ್ನು ಥಳಿಸಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ತೋರಿಸುವ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
“#ಮಣಿಪುರದಲ್ಲಿ ಹಿಂದುತ್ವದ ಗೂಂಡಾಗಳ ಗುಂಪೊಂದು #ಕ್ರಿಶ್ಚಿಯನ್ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ದೈಹಿಕ ಹಲ್ಲೆ ನಡೆಸಿತು. ನಂತರ ಅವರು ಅವನ ಹೆಂಡತಿ ಮತ್ತು ಮಗುವನ್ನು ಕೊಂದರು, ”ಎಂದು ವೈರಲ್ ವೀಡಿಯೋದ ಶೀರ್ಷಿಕೆಯೊಂದು ಹೇಳುತ್ತದೆ.
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳ ಮಧ್ಯೆ ಕುಕಿ-ಜೋಮಿ ಬುಡಕಟ್ಟಿನ ಮಹಿಳೆಯರ ಮೇಲೆ ಗುಂಪು ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಮಣಿಪುರದ ಕ್ಲಿಪ್ ವೈರಲ್ ಆದ ಹಿನ್ನಲೆಯಲ್ಲಿ, ಈ ವೀಡಿಯೋವನ್ನು ಕಳೆದ ವಾರ ಹಂಚಿಕೊಳ್ಳಲಾಗಿದೆ.
ವಾಸ್ತವವಾಗಿ
ವೈರಲ್ ವೀಡಿಯೋವಿನ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಜುಲೈ ೧೯, ೨೦೨೩ ರಂದು ಸುದ್ದಿ ವೆಬ್‌ಸೈಟ್ ಎನ್ ಡಿ ಟಿವಿ (NDTV) ಅಪ್‌ಲೋಡ್ ಮಾಡಿದ ಅದೇ ತುಣುಕನ್ನು ನಾವು ಕಂಡುಕೊಂಡಿದ್ದೇವೆ. ಘಟನೆಯು ಜೂನ್ ೨೦೨೩ ರಲ್ಲಿ ಸಂಭವಿಸಿದ್ದು, ಜೂಲೈ ೧೫ ರಂದು ಆಕ್ರಮಣದ ವೈರಲ್ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದಿದೆ. ಆಂಧ್ರಪ್ರದೇಶದ ಓಂಗೋಲ್‌ನಲ್ಲಿ ಘಟನೆ ಸಂಭವಿಸಿದೆ ಎಂದು ವರದಿ ಹೇಳಿದೆ. ಅಪ್ರಾಪ್ತ ವಯಸ್ಸಿನ ಹುಡುಗಿಯೊಂದಿಗಿನ ಆತನ ಸಂಬಂಧದ ಆರೋಪದ ಮೇಲೆ ಕುಡುಕರ ಗುಂಪೊಂದು ಬುಡಕಟ್ಟು ವ್ಯಕ್ತಿಯನ್ನು ಥಳಿಸಿ ಮೂತ್ರ ವಿಸರ್ಜನೆ ಮಾಡಿದೆ ಎಂದು ವರದಿ ಮಾಡಲಾಗಿದೆ. ಇಂಡಿಯಾ ಟುಡೇ ಮತ್ತು ಸ್ಥಳೀಯ ಸುದ್ದಿ ಮೂಲ ಹ್ಯಾನ್ಸ್ ಇಂಡಿಯಾ ಕೂಡ ಈ ಘಟನೆಯ ಬಗ್ಗೆ ವರದಿ ಮಾಡಿದ್ದು, ಇದು ಆಂಧ್ರಪ್ರದೇಶದಲ್ಲಿ ಸಂಭವಿಸಿದೆ, ಮಣಿಪುರದಲ್ಲಿ ಅಲ್ಲ ಎಂದು ಹೇಳಿವೆ. ಈ ವೀಡಿಯೋ ದಾಳಿಯ ಕ್ಲಿಪ್ ಗಳನ್ನು ಹೊಂದಿರುವುದರಿಂದ ಲಾಜಿಕಲಿ ಫ್ಯಾಕ್ಟ್ಸ್ ಅದನ್ನು ತೋರಿಸುವ ಲಿಂಕ್‌ಗಳನ್ನು ಹಂಚಿಕೊಳ್ಳುವುದರಿಂದ ಹಿಂದೆ ಸರಿದಿದೆ.
ಲಾಜಿಕಲಿ ಫ್ಯಾಕ್ಟ್ಸ್ ಘಟನೆಯನ್ನು ಒಂಗೋಲ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ನಾರಾಯಣ ಸ್ವಾಮಿ ರೆಡ್ಡಿ ಅವರೊಂದಿಗೆ ಮಾತನಾಡಿದಾಗ ಅವರು ಈ ಘಟನೆ ಆಂಧ್ರದಲ್ಲಿ ನಡೆದದ್ದು ಹಾಗೂ ಈ ವೀಡಿಯೋದಲ್ಲಿನ ಹಲ್ಲೆಗೊಳಗಾದ ವ್ಯಕ್ತಿ ಒಬ್ಬ ಬುಡಕಟ್ಟು ಜನಾಂಗದವನು ಎಂದು ಸ್ಪಷ್ಟೀಕರಣ ನೀಡಿದ್ದಾರೆ. "ಈ ಘಟನೆಯು ಜೂನ್ ೧೯, ೨೦೨೩ ರಂದು ಈ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಕುಡಿಯಲು ಹೋದಾಗ ಸಂಭವಿಸಿದೆ." ಅಧಿಕೃತ ದೂರು ದಾಖಲಿಸಲಾಗಿದ್ದು, ಅದರಲ್ಲಿ ಆತನೇ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದರ ಬಗ್ಗೆ ಹೇಳಿಕೊಂಡಿಲ್ಲ ಎಂದು ಕೂಡ ಅವರು ಹೇಳಿದರು.
ಜುಲೈ ೧೫ ರಂದು ಪೊಲೀಸರಿಗೆ ವೀಡಿಯೋ ಸಿಕ್ಕಿದ ನಂತರ ನಾವು ಮರು ಪರೀಕ್ಷೆ ನಡೆಸಿ ಕೊಲೆ ಯತ್ನ (ಐಪಿಸಿ ಸೆಕ್ಷನ್ ೩೦೭) ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್‌ಟಿ) ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ ಎಂದು ರೆಡ್ಡಿ ಅವರು ತಿಳಿಸಿದ್ದಾರೆ.
ಒಬ್ಬ ಬಾಲಾಪರಾಧಿ ಸೇರಿದಂತೆ ಒಂಬತ್ತು ಜನರನ್ನು ಈ ವಿಷಯಕ್ಕೆ ಸಂಬಂಧಿಸಿ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಸಂತ್ರಸ್ತೆ ಮತ್ತು ಆರೋಪಿಗಳೆಲ್ಲರೂ ಒಬ್ಬರಿಗೊಬ್ಬರು ಪರಿಚಿತರು, ಆರೋಪಿಗಳು ಕೂಡ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದವರು ಎಂದು ಪೊಲೀಸರು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಟ್ವಿಟರ್ ಪೋಷ್ಟ್ ಹೇಳುವಂತೆ ಹಲ್ಲೆಗೊಳಗಾದ ವ್ಯಕ್ತಿಯ "ಹೆಂಡತಿ ಮತ್ತು ಮಗು" ಕೂಡ ಕೊಲೆಯಾಗಿದ್ದರೆ ಎಂದು ವರದಿಗಳಾಗಲಿ ಅಥವಾ ಪೊಲೀಸರಾಗಲಿ ಉಲ್ಲೇಖಿಸಿಲ್ಲ.
ತೀರ್ಪು
ಈ ವೀಡಿಯೋ ಆಂಧ್ರಪ್ರದೇಶದ ಓಂಗೋಲ್ ಜಿಲ್ಲೆಯದ್ದು ಮತ್ತು ಬುಡಕಟ್ಟು ವ್ಯಕ್ತಿಯೊಬ್ಬನನ್ನು ಆತನ ಸ್ನೇಹಿತರು ಥಳಿಸುತ್ತಿರುವುದನ್ನು ತೋರಿಸುತ್ತದೆ ಎಂದು ವರದಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.