ಮುಖಪುಟ ಗುಜರಾತ್ ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬನು ಭಿತ್ತಿಚಿತ್ರಗಳನ್ನು ನಾಶ ಮಾಡುತ್ತಿರುವ ವೀಡಿಯೋವನ್ನು ತಪ್ಪಾದ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ

ಗುಜರಾತ್ ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬನು ಭಿತ್ತಿಚಿತ್ರಗಳನ್ನು ನಾಶ ಮಾಡುತ್ತಿರುವ ವೀಡಿಯೋವನ್ನು ತಪ್ಪಾದ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಸೆಪ್ಟೆಂಬರ್ 22 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಗುಜರಾತ್ ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬನು  ಭಿತ್ತಿಚಿತ್ರಗಳನ್ನು ನಾಶ ಮಾಡುತ್ತಿರುವ ವೀಡಿಯೋವನ್ನು ತಪ್ಪಾದ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ ಆನ್‌ಲೈನ್ ಪೋಷ್ಟ್ ಗಳು ಮುಸ್ಲಿಂ ದೇವಸ್ಥಾನವನ್ನು ಧ್ವಂಸಗೊಳಿಸುವಾಗ ವ್ಯಕ್ತಿಯೊಬ್ಬನು ಸಿಕ್ಕಿಬಿದ್ದಿದ್ದಾನೆ ಎಂದು ತಪ್ಪಾಗಿ ಹೇಳುತ್ತವೆ. ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಪ್ರಕರಣದಲ್ಲಿ ಸಿಕ್ಕ ಮೂರು ಆರೋಪಿಗಳೂ ಸಹ ಹಿಂದೂ ಧರ್ಮದವರೆಂದು ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ.

ಇಲ್ಲಿನ ಹೇಳಿಕೆ ಏನು?

ಬೃಹತ್ ಪ್ರತಿಮೆಯ ಪೀಠದ ಗೋಡೆಗಳ ಮೇಲೆ ವ್ಯಕ್ತಿಯೊಬ್ಬನು ಹಲವಾರು ಭಿತ್ತಿಚಿತ್ರಗಳನ್ನು ವಿರೂಪಗೊಳಿಸಿ ಧ್ವಂಸಗೊಳಿಸುತ್ತಿರುವುದನ್ನು ತೋರಿಸುವ ವೀಡಿಯೋವನ್ನು ಮುಸ್ಲಿಂ ವ್ಯಕ್ತಿಯೊಬ್ಬನು ಕರ್ನಾಟಕದಲ್ಲಿ ದೇವಸ್ಥಾನವನ್ನು ಧ್ವಂಸಗೊಳಿಸಿದ್ದಾನೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಅಂತಹ ಒಂದು ಫೇಸ್‌ಬುಕ್ ಪೋಷ್ಟ್ (ಆರ್ಕೈವ್ ಇಲ್ಲಿ) ಪ್ರಕಟಿಸುವ ಸಮಯದಲ್ಲಿ ೧.೬ ಮಿಲಿಯನ್ ಬಾರಿ ವೀಕ್ಷಿಸಲಾಗಿದೆ, ಅದೇ ನಿರೂಪಣೆ ಮತ್ತು "#karnatakasuddi #hinduism #muslim #bangalore" ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದೆ.

ಇದೇ ರೀತಿಯ ಪೋಷ್ಟ್ ಗಳ ಕೆಲವು ಆರ್ಕೈವ್ ಲಿಂಕ್‌ಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಆನ್‌ಲೈನ್‌ನಲ್ಲಿ ಕಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ ಆನ್‌ಲೈನ್‌ನಲ್ಲಿ ಮಾಡಿದ ಹೇಳಿಕೆಗಳು ತಪ್ಪು ಎಂದು ನಾವು ಕಂಡುಕೊಂಡಿದ್ದೇವೆ.

  • ಮೊದಲನೆಯದಾಗಿ, ವೀಡಿಯೋ ಗುಜರಾತ್‌ನ ಬೊಟಾಡ್ ಜಿಲ್ಲೆಯದ್ದು ಮತ್ತು ಕರ್ನಾಟಕದಲ್ಲ.

  • ಎರಡನೆಯದಾಗಿ, ಪ್ರಶ್ನೆಯಲ್ಲಿರುವ ವ್ಯಕ್ತಿಯನ್ನು ಹರ್ಷದ್  ಗಾಡ್ವಿ ಎಂದು ಗುರುತಿಸಲಾಗಿದೆ. ಆತ ಮುಸ್ಲಿಂ ಅಲ್ಲ.

ವಾಸ್ತವಾಂಶಗಳೇನು?

ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ ನ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಆನ್‌ಲೈನ್ ಪೋರ್ಟಲ್ ದೇಶ್ ಗುಜರಾತ್‌ನಿಂದ ಎಕ್ಸ್‌ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಸೆಪ್ಟೆಂಬರ್ ೨ ರ ಪೋಷ್ಟ್ ಅನ್ನು ನಾವು ನೋಡಿದ್ದೇವೆ. ಪೋಷ್ಟ್  ಅದೇ ವೈರಲ್ ಕ್ಲಿಪ್ ಅನ್ನು ಹೊಂದಿತ್ತು ಮತ್ತು ಅದರ ಜೊತೆಗಿನ ಶೀರ್ಷಿಕೆ ಅನುವಾದಿಸಿದಾಗ ಹೀಗಿದೆ: "ಸಲಾಂಗ್‌ಪುರದ ಸ್ವಾಮಿನಾರಾಯಣ ಪಂಥದ ವಡ್ತಾಲ್ ಶಾಖೆಯಿಂದ ಹನುಮಾನ್ ಜಿ ವಿರೂಪ: ಉದ್ರೇಕಗೊಂಡ ಹಿಂದೂ ವ್ಯಕ್ತಿ ವಿವಾದಾತ್ಮಕ ಭಿತ್ತಿಚಿತ್ರಗಳ ಮೇಲೆ ಕಪ್ಪು ಬಣ್ಣವನ್ನು ಲೇಪಿಸಿ, ಮತ್ತು ಕೋಲಿನಿಂದ ದಾಳಿ ಮಾಡುತ್ತಾನೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ. ”

ದೇಶ್ ಗುಜರಾತ್ ಅವರ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ನಂತರ ನಾವು ಸೆಪ್ಟೆಂಬರ್ ೪ ರಂದು ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ಸುದ್ದಿ ವರದಿಯನ್ನು ನೋಡಿದ್ದೇವೆ. ಬೋಟಾಡ್ ಜಿಲ್ಲೆಯ ಸಾಲಂಗಪುರ ನಲ್ಲಿ ಶ್ರೀ ಕಷ್ಟಭಂಜನದೇವ್ ಹನುಮಾನ್ ಜಿಮಂದಿರದಲ್ಲಿ ಸ್ವಾಮಿನಾರಾಯಣನ ಪಾದದ ಬಳಿ ಕುಳಿತಿರುವ ಹಿಂದೂ ದೇವರಾದ ಹನುಮಂತನನ್ನು ಬಿಂಬಿಸುವ ಭಿತ್ತಿಚಿತ್ರಗಳನ್ನು ಧ್ವಂಸಗೊಳಿಸಿ ವಿರೂಪಗೊಳಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇವಾಲಯದಲ್ಲಿರುವ ೫೪ ಅಡಿ ಎತ್ತರದ ಹನುಮಂತನ ಪ್ರತಿಮೆಯ ಪೀಠದ ಗೋಡೆಗಳ ಮೇಲೆ ಭಿತ್ತಿಚಿತ್ರಗಳನ್ನು ಇರಿಸಲಾಗಿತ್ತು. ಈ ಚಿತ್ರಣವು ವಿವಾದಕ್ಕೆ ಕಾರಣವಾಯಿತು. ಇದು ದೇವಸ್ಥಾನವನ್ನು ನಿರ್ವಹಿಸುವ ಸ್ವಾಮಿನಾರಾಯಣ ಪಂಥ ಮತ್ತು ಗುಜರಾತ್‌ನ ಇತರ ಹಿಂದೂ ಸಂಘಟನೆಗಳ ನಡುವಿನ ದೊಡ್ಡ ವಿವಾದಕ್ಕೂ ಕಾರಣವಾಯಿತು ಎಂದು ದಿ ಹಿಂದೂ ವರದಿ ಮಾಡಿದೆ.

ಲಾಜಿಕಲಿ ಫ್ಯಾಕ್ಟ್ಸ್ ನೊಂದಿಗೆ ಮಾತನಾಡುತ್ತಾ, ಬೋಟಾಡ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಿಶೋರ್ ಬಲೋಲಿಯಾ ಅವರು ವೀಡಿಯೋದಲ್ಲಿರುವ ವ್ಯಕ್ತಿಯನ್ನು ಹರ್ಷದ್ ಗಾಡ್ವಿ ಎಂದು ಗುರುತಿಸಿದ್ದಾರೆ. "ಕಷ್ಟಭಂಜನದೇವ್ ದೇವಾಲಯದಲ್ಲಿ ಇದ್ದ ಭದ್ರತಾ ಸಿಬ್ಬಂದಿಯಿಂದ ವ್ಯಕ್ತಿಯನ್ನು ಸೆರೆಹಿಡಿಯಲಾಗಿದ್ದು, ದೇವಾಲಯದ ಅಧಿಕಾರಿಗಳಿಂದ ದೂರನ್ನು ಸ್ವೀಕರಿಸಿದ ನಂತರ ನಾವು ಅವರನ್ನು ಬಂಧಿಸಿದ್ದೇವೆ" ಎಂದು ಬಲೋಲಿಯಾ ಹೇಳಿದರು.

ಈ ಪ್ರಕರಣದಲ್ಲಿ ದಾಖಲಾದ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್), ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ. ಮೂವರು ಆರೋಪಿಗಳನ್ನು ಹರ್ಷದ್ ಗಧ್ವಿ, ಜೈಸಿನ್ಹ್ ಭಾರವಾಡ್ ಮತ್ತು ಬಲದೇವ್ ಭಾರವಾಡ್ ಎಂದು ಗುರುತಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 427 (ಆಸ್ತಿಗೆ ಹಾನಿ), 295A (ಧಾರ್ಮಿಕ ನಂಬಿಕೆಗಳನ್ನು ಅತಿರೇಕಗೊಳಿಸುವುದು), 153A (ಧರ್ಮ, ಜನಾಂಗದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದು), ಮತ್ತು 120B (ಅಪರಾಧ ಪಿತೂರಿ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಫ್‌ಐಆರ್ ನಲ್ಲಿ ಹೇಳಲಾಗಿದೆ. ಎಫ್‌ಐಆರ್‌ನಲ್ಲಿ ಗಧ್ವಿ ಭಿತ್ತಿಚಿತ್ರಗಳನ್ನು ಧ್ವಂಸಗೊಳಿಸಿದರೆ, ಇನ್ನಿಬ್ಬರು ಆತನ ಕೃತ್ಯಗಳನ್ನು ಚಿತ್ರೀಕರಿಸಿದ್ದರು. ಮೂವರು ಆರೋಪಿಗಳು ಹಿಂದೂಗಳು ಎಂದು ಎಸ್‌ಪಿ ಬಲೋಲಿಯಾ ಹೇಳಿದ್ದಾರೆ.

ಗುಜರಾತ್ ಮೂಲದ ಪತ್ರಕರ್ತ ಸಹಲ್ ಖುರೇಷಿ ಅದೇ ವಿವರಗಳನ್ನು ದೃಢಪಡಿಸಿದ್ದಾರೆ ಮತ್ತು ಸೆಪ್ಟೆಂಬರ್ ೨ ರಂದು ಬೆಳಿಗ್ಗೆ ೧೧:೩೦ ರ ಸುಮಾರಿಗೆ ಗಾಡ್ವಿ  ದೇವಸ್ಥಾನಕ್ಕೆ ಪ್ರವೇಶಿಸಿದಾಗ ಈ ಘಟನೆ ಸಂಭವಿಸಿದೆ ಮತ್ತು ಭಿತ್ತಿಚಿತ್ರಗಳನ್ನು ವಿರೂಪಗೊಳಿಸುವುದು ಮತ್ತು ಧ್ವಂಸ ಮಾಡುವುದು ಕಂಡುಬಂದಿದೆ ಎಂದು ಹೇಳಿದರು. ಕ್ಯಾಮರಾದಲ್ಲಿ ಸೆರೆಹಿಡಿಯಲಾದ, ಗಾಡ್ವಿಯನ್ನು ಸೆಪ್ಟೆಂಬರ್ ೪ ರಂದು ಜಾಮೀನಿನ ಮೇಲೆ ಬಿಡುಗಡೆಯಾದರು ಎಂದು ದಿ ಹಿಂದೂ ವರದಿ ಮಾಡಿದೆ. 

ಪೊಲೀಸರು, ಮಾಧ್ಯಮ ವರದಿಗಳು ಮತ್ತು ಸ್ಥಳೀಯ ಪತ್ರಕರ್ತರು ಖಚಿತಪಡಿಸಿದಂತೆ, ವೈರಲ್ ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿ ಹಿಂದೂ, ಮುಸ್ಲಿಂ ಅಲ್ಲ.

ತೀರ್ಪು

ಗುಜರಾತಿನ ದೇವಸ್ಥಾನವೊಂದರಲ್ಲಿ ವ್ಯಕ್ತಿಯೊಬ್ಬ ಹನುಮಂತನ ಭಿತ್ತಿಚಿತ್ರಗಳನ್ನು ವಿರೂಪಗೊಳಿಸಿದ ವೀಡಿಯೋವನ್ನು ಕೋಮು ಕೋನದೊಂದಿಗೆ ಹಂಚಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮದ ಪೋಷ್ಟ್ ಗಳಿಗೆ ವ್ಯತಿರಿಕ್ತವಾಗಿ, ಪ್ರಕರಣದಲ್ಲಿ ಆರೋಪಿಯಾಗಿರುವ ಮೂವರೂ ಹಿಂದೂಗಳು. ಆದ್ದರಿಂದ, ನಾವು ಈ ಹೇಳಿಕೆಯನ್ನು ಎಂದು ಗುರುತಿಸಿದ್ದೇವೆ.  

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ