ಮೂಲಕ: ಉಮ್ಮೆ ಕುಲ್ಸುಮ್
ಸೆಪ್ಟೆಂಬರ್ 28 2023
ಕಿನ್ನೌರ್‌ನ ಕಾಂಗ್ರೆಸ್ ಶಾಸಕ ಜಗತ್ ಸಿಂಗ್ ನೇಗಿ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಮಾತನಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ವೀಡಿಯೋವಿಗೂ ನೇಪಾಳಕ್ಕೂ ಯಾವುದೇ ಸಂಬಂಧವಿಲ್ಲ.
ಇಲ್ಲಿನ ಹೇಳಿಕೆಯೇನು?
ನೇಪಾಳಿ ಸಂಸದರೊಬ್ಬರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳು ಮತ್ತು ಕ್ರಮಗಳನ್ನು ಟೀಕಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಂಸತ್ತಿನಲ್ಲಿ ಅಥವಾ ರಾಜ್ಯ ವಿಧಾನಸಭೆಯಲ್ಲಿ ವ್ಯಕ್ತಿಯೊಬ್ಬರು ಮಾತನಾಡುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮೋದಿ ಅವರ ಆರ್ಥಿಕ ನೀತಿಗಳು, ವಿದೇಶ ಪ್ರವಾಸಗಳು ಮತ್ತು ಭಾರತದಲ್ಲಿನ ನಿರುದ್ಯೋಗ ಮತ್ತಿತರ ವಿಷಯಗಳಿಗಾಗಿ ವ್ಯಕ್ತಿಯೊಬ್ಬರು ಮೋದಿಯನ್ನು ದೂಷಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ.
ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋವನ್ನು ಎಕ್ಸ್ ನಲ್ಲಿ (ಇಲ್ಲಿ ಆರ್ಕೈವ್ ನೋಡಬಹುದು) ಹಿಂದಿ ಶೀರ್ಷಿಕೆಯೊಂದಿಗೆ ಹೀಗೆ ಹಂಚಿಕೊಂಡಿದ್ದಾರೆ, "“नेपाल सांसद ने नेपाल की संसद में मोदी के बारे में जो कुछ कहा हर भारतवासी जब भी वोट डालने बूथ पर जाएं तो यह वीडियो जरूर देखना चाहिए और अपने मोबाइल फोन के सभी व्हाट्सएप नम्बरों पर शेयर भी जरूर करना चाहिए. (ನೇಪಾಳದ ಸಂಸತ್ತಿನಲ್ಲಿ ಮೋದಿಯವರ ಬಗ್ಗೆ ನೇಪಾಳದ ಸಂಸದರು ಏನು ಹೇಳಿದರು ಎಂದು ಭಾರತೀಯರೆಲ್ಲರೂ ಮತ ಚಲಾಯಿಸಲು ಹೋಗುವ ಮುನ್ನ ನೋಡಬೇಕು. ಅವರು ಅದನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿನ ಎಲ್ಲಾ ವಾಟ್ಸಾಪ್ ಸಂಖ್ಯೆಗಳಲ್ಲಿ ಹಂಚಿಕೊಳ್ಳಬೇಕು (ಕನ್ನಡಕ್ಕೆ ಅನುವಾದಿಸಲಾಗಿದೆ))"
ಈ ಪೋಷ್ಟ್ ೨,೫೮,೦೦೦ ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಈ ಫ್ಯಾಕ್ಟ್-ಚೆಕ್ ಪ್ರಕಟಿಸುವ ಸಮಯದಲ್ಲಿ ೫,೦೦೦ ಕ್ಕೂ ಹೆಚ್ಚು ಬಾರಿ ಮರುಹಂಚಿಕೊಳ್ಳಲಾಗಿದೆ. ಇತರ ಎಕ್ಸ್ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ನಾಲ್ಕು ನಿಮಿಷಕ್ಕೂ ಹೆಚ್ಚು ಅವಧಿಯ ಈ ವೀಡಿಯೋ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಆನ್‌ಲೈನ್‌ನಲ್ಲಿ ಮಾಡಿದ ತಪ್ಪು ಹೇಳಿಕೆಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ವೀಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ನೇಪಾಳಿ ಸಂಸದರಲ್ಲ, ಹಿಮಾಚಲ ಪ್ರದೇಶದ ಕಾಂಗ್ರೆಸ್ ನಾಯಕ.
ಇಲ್ಲಿನ ಸತ್ಯವೇನು?
ನಾವು ವೀಡಿಯೋವನ್ನು ಸಂಶೋಧನೆ ಮಾಡಿದಾಗ, ಅದೇ ವೀಡಿಯೋವನ್ನು ಮಾರ್ಚ್ ೨೧, ೨೦೨೧ ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹಿಮಾಚಲ ಪ್ರದೇಶ ಪುಟದಿಂದ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದಾಗ, ಅದರ ಜೊತೆಗಿನ ಶೀರ್ಷಿಕೆಯು, "ಕಿನ್ನೌರ್ ಕಾಂಗ್ರೆಸ್ ಶಾಸಕ ಜಗತ್ ಸಿಂಗ್ ನೇಗಿ ಅವರಿಂದ ದೇಶದ ಮಹಾನ್ ಮತ್ತು ಯಶಸ್ವಿ ಪ್ರಧಾನ ಮಂತ್ರಿಯ ಬಗ್ಗೆ ಕೇಳಿ," ಎಂದು ಹೇಳುತ್ತದೆ.
ನಿಜವಾಗಿಯೂ, ವೀಡಿಯೋದಲ್ಲಿ ಕಂಡುಬಂದಿರುವ ವ್ಯಕ್ತಿ ನೇಪಾಳಿ ಸಂಸದರಲ್ಲ, ಆದರೆ ಹಿಮಾಚಲ ಪ್ರದೇಶದ ಕಿನ್ನೌರ್‌ನ ಕಾಂಗ್ರೆಸ್ ನಾಯಕ ಮತ್ತು ವಿಧಾನಸಭಾ ಸದಸ್ಯ ಜಗತ್ ಸಿಂಗ್ ನೇಗಿ.
ಇದಲ್ಲದೆ, ವೈರಲ್ ವೀಡಿಯೋದಲ್ಲಿ ೧:೫೭ ಟೈಮ್‌ಸ್ಟ್ಯಾಂಪ್ ನಲ್ಲಿ, ಸ್ಪೀಕರ್ ರಾಜಕಾರಣಿಯನ್ನು "ರಾಜ್ಯದ ಬಜೆಟ್" ಬಗ್ಗೆ ಮಾತನಾಡಲು ಕೇಳಿಕೊಳ್ಳುವುದನ್ನು ಕೇಳಬಹುದು.
ಈ ಮಾಹಿತಿಯನ್ನು ಸುಳಿವಿನಂತೆ ಬಳಸಿಕೊಂಡು, ನಾವು ಹಿಮಾಚಲ ಪ್ರದೇಶ ವಿಧಾನ ಸಭೆಯ ಅಧಿಕೃತ ವೆಬ್‌ಸೈಟ್‌ನಲ್ಲಿ "ಮಾರ್ಚ್ ೨೦೨೧ ರ ಬಜೆಟ್ ಅಧಿವೇಶನ"ಕ್ಕಾಗಿ ವೀಡಿಯೋವನ್ನು ಹುಡುಕಿದೆವು. ಮಾರ್ಚ್ ೧೫, ೨೦೨೧ ರಿಂದ ನಡೆದ ಅಸೆಂಬ್ಲಿ ಅಧಿವೇಶನದ ೨೫ ನಿಮಿಷಗಳ ರೆಕಾರ್ಡಿಂಗ್ ಅನ್ನು ನಾವು ನೋಡಿದ್ದೇವೆ. ವೀಡಿಯೋದ ಶೀರ್ಷಿಕೆಯು, "೧೫/೦೩/೨೦೨೧ ದಿನಾಂಕದ ಎಚ್.ಪಿ. ವಿಧಾನಸಭಾ ಬಜೆಟ್ ಅಧಿವೇಶನದ ಪ್ರಶ್ನೋತ್ತರ ಸಮಯದ ಎಡಿಟ್ ಮಾಡಿದ ವೀಡಿಯೋ" ಎಂದು ಹೇಳುತ್ತದೆ. ಮಾರ್ಚ್ ೨೦೨೧ ರಲ್ಲಿ ರಾಜ್ಯವು ಬಿಡುಗಡೆ ಮಾಡಿದ ವಾರ್ಷಿಕ ಹಣಕಾಸು ಬಜೆಟ್‌ಗೆ ಸಂಬಂಧಿಸಿದ ಪ್ರಶ್ನೋತ್ತರ ವೇಳೆಯ ವೀಡಿಯೋ ಇದಾಗಿದೆ.
ಹಿಮಾಚಲ ಪ್ರದೇಶ ರಾಜ್ಯ ಅಸೆಂಬ್ಲಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮೋದಿಯವರನ್ನು ಟೀಕಿಸುವ ನೇಗಿಯವರ ಭಾಷಣದ ಕ್ಲಿಪ್ ಇಲ್ಲದಿದ್ದರೂ, ಮೇಲೆ ತಿಳಿಸಿದ ಅಸೆಂಬ್ಲಿ ಅಧಿವೇಶನದ ವೀಡಿಯೋದ ದೃಶ್ಯಗಳು ವೈರಲ್ ಕ್ಲಿಪ್‌ನ ದೃಶ್ಯಗಳಿಗೆ ಹೊಂದಿಕೆಯಾಗುತ್ತವೆ. ಹಿಮಾಚಲ ಪ್ರದೇಶ ವಿಧಾನ ಸಭಾ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ೨೫ ನಿಮಿಷಗಳ ವೀಡಿಯೋದ ೨೦:೧೨ ಟೈಮ್‌ಸ್ಟ್ಯಾಂಪ್‌ನಲ್ಲಿ ಜಗತ್ ಸಿಂಗ್ ನೇಗಿ ಅದೇ ವಸ್ತ್ರಗಳನ್ನು ಧರಿಸಿ ಅದೇ ಹಸಿರು-ಬೂದು ಕ್ಯಾಪ್, ಸಾಂಪ್ರದಾಯಿಕ ಹಿಮಾಚಲಿ ಶಿರಸ್ತ್ರಾಣವನ್ನು ಧರಿಸಿರುವುದನ್ನು ನಾವು ಗುರುತಿಸಬಹುದು.
ಹಿಮಾಚಲ ಪ್ರದೇಶ ವಿಧಾನ ಸಭಾ ವೆಬ್‌ಸೈಟ್ ಮತ್ತು ವೈರಲ್ ಕ್ಲಿಪ್‌ನ ವೀಡಿಯೋದ ದೃಶ್ಯಗಳ ಹೋಲಿಕೆ. (ಮೂಲ: ಎಕ್ಸ್/ಹಿಮಾಚಲ ಪ್ರದೇಶ ವಿಧಾನ ಸಭೆ/ಸ್ಕ್ರೀನ್‌ಶಾಟ್‌ಗಳು)
ವೈರಲ್ ವೀಡಿಯೋ ಹಿಮಾಚಲ ಪ್ರದೇಶ ವಿಧಾನಸಭೆಯ ಹಳೆಯ ಅಧಿವೇಶನವಾಗಿದೆ ಮತ್ತು ನೇಪಾಳಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ಇದು ಖಚಿತಪಡಿಸುತ್ತದೆ.
ತೀರ್ಪು
ನೇಪಾಳಿ ಸಂಸದರೊಬ್ಬರು ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಾರೆ ಎಂದು ತಪ್ಪಾಗಿ ತೋರಿಸಿಕೊಂಡು, ಹಿಮಾಚಲ ಪ್ರದೇಶದ ಕಾಂಗ್ರೆಸ್ ಶಾಸಕ ಜಗತ್ ಸಿಂಗ್ ನೇಗಿ ಅವರ ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಅನುವಾದಿಸಿದವರು: ವಿವೇಕ್.ಜೆ