ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 10 2023
ಮುಸ್ಲಿಂ ಪ್ರಾರ್ಥನೆಗಳನ್ನು ಒಳಗೊಂಡಿರುವ 'ತೆಯ್ಯಂ' ಎಂಬ ಸಾಂಪ್ರದಾಯಿಕ ನೃತ್ಯದ ವೀಡಿಯೋವನ್ನು ತಪ್ಪಾದ ಕೋಮುವಾದ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಸಂದರ್ಭ
ಕಳೆದ ಕೆಲವು ವರ್ಷಗಳಲ್ಲಿ, ಕೋಮು ಸಾಮರಸ್ಯವನ್ನು ಹಾಳುಮಾಡುವಂತಹ ಹಲವಾರು ತಪ್ಪಾದ ನಿರೂಪಣೆಗಳಿಗೆ ಭಾರತದ ಕೇರಳ ರಾಜ್ಯವು ಕೇಂದ್ರ ಬಿಂದುವಾಗಿದೆ. ಇತ್ತೀಚೆಗೆ, ಮಾಸ್ಕ್ ಮತ್ತು ವೇಷಭೂಷಣವನ್ನು ಧರಿಸಿದ ವ್ಯಕ್ತಿಯ ಪಕ್ಕದಲ್ಲಿ ನಿಂತಿರುವ ಮತ್ತೊಬ್ಬ ವ್ಯಕ್ತಿಯು ಇಸ್ಲಾಂ ಪ್ರಾರ್ಥನೆಗೆ ಕರೆಯಾದ, ಅಧಾನ್ ನೀಡುತ್ತಿರುವ ವೀಡಿಯೋವೊಂದನ್ನು, ಇದು ಕೇರಳದ ದೇವಾಲಯಗಳಿಗೆ ಮುಸ್ಲಿಂ ಅರ್ಚಕರನ್ನು ನೇಮಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಹಂಚಿಕೊಂಡ ಬಳಕೆದಾರರ ಶೀರ್ಷಿಕೆ ಹೀಗಿದೆ, "ಸಾಮಾಜಿಕ ನ್ಯಾಯದ ಹೆಸರಲ್ಲಿ ಕೇರಳ ಸರ್ಕಾರ ನಮ್ಮ ದೇವಸ್ಥಾನಗಳಲ್ಲಿ ಮುಸ್ಲಿಂ, ಕ್ರೈಸ್ತರ ಅರ್ಚಕರನ್ನು ನೇಮಿಸಿದೆ. ಫಲಿತಾಂಶ. ಹನುಮಾನ್ ಚಿತ್ರಕ್ಕೆ ಏನು ತಿನ್ನಿಸಲಾಗುತ್ತಿದೆಯೋ ಗೊತ್ತಿಲ್ಲ, ಅವರ ಮುಂದೆ ಮಾಂಸಾಹಾರವನ್ನು ಇಡಲಾಗಿದೆ! ದೇವಾಲಯದಲ್ಲಿ, ಅರ್ಚಕ ಎಂದು ಕರೆಯಲ್ಪಡುವವರು 'ಅಲ್ಲಾ ಓ ಅಕ್ಬರ್' ಎಂದು ಜಪಿಸುತ್ತಿದ್ದಾರೆ ... ನಮಾಜ್ ನೀಡುತ್ತಿದ್ದಾರೆ.” ಟ್ವಿಟ್ಟರ್ ನಲ್ಲಿ ಇದೇ ವೀಡಿಯೋ ಹಂಚಿಕೊಂಡಿರುವ ಬಳಕೆದಾರನೋರ್ವನ ಪೋಷ್ಟ್ ಗೆ ೪೦,೦೦೦ ವೀಕ್ಷಣೆಗಳಿವೆ. ಆದರೆ ಆ ವೀಡಿಯೋ ತಪ್ಪಾಗಿ ಗ್ರಹಿಸಲಾಗಿದೆ.
ವಾಸ್ತವವಾಗಿ
ಈ ವೀಡಿಯೋ ಡಿಸೆಂಬರ್ ೨೩, ೨೦೨೩ ರಂದು ಮಲಯಾಳಂ ಸುದ್ದಿ ಚಾನೆಲ್ ಮೀಡಿಯಾ ಒನ್ ಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಷ್ಟ್ ಮಾಡಲಾಗಿದೆ ಎಂದು ರಿವರ್ಸ್ ಇಮೇಜ್ ಸರ್ಚ್ ನ ಮೂಲಕ ನಾವು ಕಂಡಿಕೊಂಡೆವು. ಮಲಯಾಳಂನಿಂದ ಅನುವಾದಿಸಲಾದ ವೀಡಿಯೋದ ಶೀರ್ಷಿಕೆ ಹೀಗೆ ಹೇಳುತ್ತದೆ, "ತೆಯ್ಯಂ ಅಧಾನ್ ಪಠಿಸುವ ವೀಡಿಯೋ ವೈರಲ್ ಆಗಿದೆ. ಕಾಸರಗೋಡಿನ ದೃಶ್ಯಗಳು," ಮತ್ತು ಅದರ ವೆವರಣೆಯ ಟಿಪ್ಪಣಿ ಹೀಗಿದೆ, "ಕಾಸರಗೋಡಿನ ಹಿಂದೂ ದೇವಾಲಯದಲ್ಲಿ ಪ್ರದರ್ಶಿಸಲಾದ ಬಪಿರಿಯನ್ ಥೀಯಾಟ್ ಮತ್ತು ಮಣಿಚಿಯ ವೀಡಿಯೋ." ಜನವರಿ ೧೬, ೨೦೨೩ರಂದು ಪ್ರಕಟವಾದ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಲೇಖನವು ಇದೇ ವೀಡಿಯೋವನ್ನು ವರದಿ ಮಾಡುತ್ತಾ, ಇದು ಕೇರಳದಲ್ಲಿ ಪ್ರದರ್ಶಿಸಲಾದ ತೆಯ್ಯಂ ಅನ್ನು ತೋರಿಸುತ್ತದೆ ಎಂದು ಹೇಳಿದೆ.
ರಾಜ್ಯ ಸರ್ಕಾರವು ನಡೆಸುತ್ತಿರುವ ಕೇರಳ ಪ್ರವಾಸೋದ್ಯಮ ವೆಬ್‌ಸೈಟ್ ಪ್ರಕಾರ, ತೆಯ್ಯಂ ಒಂದು ಧಾರ್ಮಿಕ ಕಲೆಯಾಗಿದ್ದು ಅದು ಸಮುದಾಯದಿಂದ ಪೂಜಿಸಲ್ಪಡುವ ಸ್ಥಳೀಯ ನಾಯಕ/ದೇವತೆಯ ಕಥೆಯನ್ನು ವಿವರಿಸುತ್ತದೆ. ಕಲಾ ಪ್ರದಶಿಸುವವರು ನಾಯಕರನ್ನು ಪ್ರತಿನಿಧಿಸಲು ಮೇಕ್ಅಪ್ ಮತ್ತು ವೇಷಭೂಷಣಗಳನ್ನು ಧರಿಸುವುದು ವಾಡಿಕೆಯಲ್ಲಿದೆ.
ತೆಯ್ಯಂ ಬಗ್ಗೆ ಇನ್ನಷ್ಟು ಹೆಚ್ಚು ತಿಳಿಯಲು ಕೇರಳ ಮೂಲದ ದಿ ಮಲಬಾರ್ ಜರ್ನಲ್ ಎಂಬ ವೆಬ್ ಪೋರ್ಟಲ್‌ನ ಪತ್ರಕರ್ತರ ತಂಡವನ್ನು ಲಾಜಿಕಲಿ ಫ್ಯಾಕ್ಟ್ಸ್ ಸಂಪರ್ಕಿಸಿತು. ಅವರು ವೈರಲ್ ವೀಡಿಯೋ ತೆಯ್ಯಂ ಪ್ರದರ್ಶನವನ್ನು ತೋರಿಸುತ್ತದೆ ಎಂದು ಸ್ಪಷ್ಟಪಡಿಸಿದರು. ತೆಯ್ಯಂ ನೃತ್ಯದಲ್ಲಿ ೫೦೦ ವಿವಿಧತೆಗಳಿವೆ ಎಂದು ತಂಡವು ವಿವರಿಸಿದೆ ಮತ್ತು ವೀಡಿಯೋದಲ್ಲಿ ಕಂಡುಬರುವ ಇಬ್ಬರು ವ್ಯಕ್ತಿಗಳು ಬಪ್ಪಿರಿಯನ್ (ಬಬ್ಬಿರಿಯನ್ ಎಂದೂ ಕರೆಯುತ್ತಾರೆ) ಮತ್ತು ಮಣಿಚಿಯಂತೆ ಧರಿಸಿದ್ದಾರೆ. ಅದಲ್ಲದೆ ವೈರಲ್ ಪೋಷ್ಟ್ ನಲ್ಲಿ ಹೇಳಿಕೊಂಡಂತೆ ಭಗವಾನ್ ಹನುಮಾನ್‌ಗೆ ಮತ್ತು ಈ ನೃತ್ಯಕ್ಕೆ ಸಂಬಂಧವಿಲ್ಲ ಎಂದು ತಂಡವು ವಿಶ್ಲೇಷಣೆ ನೀಡಿತು.
ಟೈಮ್ಸ್ ಆಫ್ ಇಂಡಿಯಾ ನಡೆಸುತ್ತಿರುವ ಸಮಯಂ ಮಲಯಾಳಂನಲ್ಲಿನ ವರದಿಯೊಂದು, ಬಬ್ಬಿರಿಯನ್ ಜನಪದ ಕಥೆಯಲ್ಲಿನ ಪಾತ್ರವಾಗಿದ್ದು ಹಾಗು ಹಡಗಿನ ನಾಯಕ ಮತ್ತು ಮುಸ್ಲಿಂ ವ್ಯಾಪಾರಿಯಾಗಿದ್ದರು ಎಂದು ನಂಬಲಾಗಿದೆ. ಬಬ್ಬಿರಿಯನ್ ನಾಯಕನಾಗಿದ್ದ ಹಡಗಿನಲ್ಲಿ ಹಿಂದೂ ದೇವತೆ ಆರ್ಯ ಪೂಂಕಣಿ ಕೇರಳದಲ್ಲಿ ಪ್ರಯಾಣಿಸುತ್ತಿದ್ದರು ಎಂಬ ನಂಬಿಕೆಯು ಇದೆ. ಮಾಣಿಚಿಯು ಸ್ಥಳೀಯ ಮಹಿಳೆಯಾಗಿದ್ದು ಪ್ರೇಮದಿಂದ ಬಪ್ಪಿರಿಯನ್ನನ್ನು ವಿವಾಹವಾದರು. ಬಬ್ಬಿರಿಯನ್ ಯುದ್ಧದಲ್ಲಿ ನಿಧನರಾದರು ಮತ್ತು ಮಣಿಚಿ ವಿಧವೆಯಾಗಿ, ಆಕೆಯ ಮರಣದ ನಂತರ ತೆಯ್ಯಂ ದೇವತೆಯಾಗಿ ಅಂದಿನಿಂದ, ಸ್ಥಳೀಯ ಸಮುದಾಯದವರಿಂದ ಇಬ್ಬರನ್ನು ಪೂಜಿಸಲಾಗುತ್ತದೆ.
ದಿ ಮಲಬಾರ್ ಜರ್ನಲ್ ತಂಡದ ಪ್ರಕಾರ, ಬಬ್ಬಿರಿಯನ್ ಮತ್ತು ಹಿಂದೂ ದೇವತೆ ಆರ್ಯ ಪೂಂಕಣಿ ಅವರ ಕಥೆಯು ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಉದಾಹರಣೆಯಾಗಿದೆ. ಆದ್ದರಿಂದ ತೆಯ್ಯಂ ಮುಸ್ಲಿಂ ಪ್ರಾರ್ಥನೆಗಳನ್ನು ಒಳಗೊಂಡಿದೆ. ಈ ತೆಯ್ಯಂ ಅನ್ನು ಕೇರಳದ ಉತ್ತರ ಮಲಬಾರ್ ಜಿಲ್ಲೆಗಳಾದ ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಪ್ರದರ್ಶಿಸಲಾಗುತ್ತದೆ. ತಂಡದ ಸದಸ್ಯರೊಬ್ಬರು, "ನೋಟ ಮತ್ತು ಇತರ ವಿವರಗಳಿಂದ, ಇದು ಮುಸ್ಲಿಂ ತೆಯ್ಯಂ ಎಂದು ನಾವು ಅರ್ಥಮಾಡಿಕೊಳ್ಳಬಹುದು" ಎಂದು ಹೇಳಿದರು.
ಈ ರೀತಿಯ ಕಲೆಯನ್ನು ಕಳಿಯಾಟ್ಟಂನಲ್ಲಿ ಆಚರಿಸಲಾಗುತ್ತದೆ, ಇದು ಪ್ರತಿ ವರ್ಷ ಡಿಸೆಂಬರ್‌ನಲ್ಲಿ ನಡೆಯುವ ಎಲ್ಲಾ ಸ್ಥಳೀಯ ದೇವತೆಗಳನ್ನು ತೆಯ್ಯಂ ನೃತ್ಯದ ಮೂಲಕ ಪೂಜಿಸಿ ರೂಪಿಸಲಾಗುತ್ತದೆ. "ಈ ನೃತ್ಯ ಆಚರಣೆಯನ್ನು ಮಾಡುವ ಹಕ್ಕು ನಿರ್ದಿಷ್ಟ ಹಿಂದೂ ಸಮುದಾಯಗಳಿಗೆ ಸೇರಿದೆ, ಮತ್ತು ನಲ್ಕಡೆಯ ಜಾತಿಯ ವ್ಯಕ್ತಿಯೊಬ್ಬರು ವೀಡಿಯೋದಲ್ಲಿ ಪ್ರದರ್ಶನ ನೀಡಿದ್ದಾರೆ" ಎಂದು ತಂಡದ ಸದಸ್ಯರು ಲಾಜಿಕಲಿ ಫ್ಯಾಕ್ಟ್ಸ್ ಗೆ ಹೇಳಿದರು.
ತೆಯ್ಯಂಗಳು ಸ್ಥಳೀಯ ಸಂಸ್ಕೃತಿಯ ಮಹತ್ವದ ಭಾಗವಾಗಿದೆ ಎಂದು ತಂಡವು ಹೇಳುತ್ತದೆ. ವ್ಯಕ್ತಿಯು ವೇಷಭೂಷಣಗಳನ್ನು ಧರಿಸಿ ಅನುಕ್ರಮವಾಗಿ ದೇವತೆಗಳಾಗಿ ನೃತ್ಯದಲ್ಲಿ ರೂಪಾಂತರವಾಗುತ್ತಾರೆ. ಇದು ಆರಾಧನೆಯಲ್ಲಿ ಭಕ್ತಿ ಮತ್ತು ನಂಬಿಕೆಯನ್ನು ತೋರಿಸುತ್ತದೆ. ಎರಡೂ ಸಮುದಾಯಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳ ಮುಂದುವರಿಕೆಯನ್ನು ಚಿತ್ರಿಸುತ್ತದೆ. ತೆಯ್ಯಂಗಳಲ್ಲಿ ಮುಸ್ಲಿಮರು ಸಹ ಭಾಗವಹಿಸುತ್ತಾರೆ. ವೈದಿಕ ಆರಾಧನಾ ವ್ಯವಸ್ಥೆಗಳಿಗೆ ಸಮಾನಾಂತರವಾಗಿ ತೆಯ್ಯಂಗಳು ಅಸ್ತಿತ್ವದಲ್ಲಿವೆ ಎಂದು ತಂಡವು ವಿವರಿಸುತ್ತದೆ.
ತೀರ್ಪು
ವೀಡಿಯೋ ತೆಯ್ಯಂ ಎಂಬ ಉತ್ತರ ಕೇರಳದ ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಪ್ರಸಿದ್ಧ ನೃತ್ಯ ಕಲೆಯನ್ನು ತೋರಿಸುತ್ತದೆ. ಒಂದು ಜಾನಪದದ ಕಾರಣದಿಂದಾಗಿ ಮುಸ್ಲಿಂ ಪ್ರಾರ್ಥನೆಗಳನ್ನು ಒಳಗೊಂಡಿದೆ. ಈ ಕ್ಲಿಪ್ ಬಳಸಿ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಕೇರಳದ ಹಿಂದೂ ದೇವಾಲಯಕ್ಕೆ ಮುಸ್ಲಿಂ ಅರ್ಚಕರನ್ನು ನೇಮಿಸಲಾಗಿದೆ ಎಂದು ತಪ್ಪು ಮಾಹಿತಿಯನ್ನು ಹರಡುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.