ಮೂಲಕ: ವಿವೇಕ್ ಜೆ
ಜೂನ್ 26 2023
ವಿದ್ಯುತ್ ಬಿಲ್ ಬಗ್ಗೆ ವ್ಯಕ್ತಿಯೊಬ್ಬ ಜಗಳವಾಡುತ್ತಿರುವ ವೀಡಿಯೋ ಕರ್ನಾಟಕದಲ್ಲಿ ೨೦೨೩ರಲ್ಲಿ ನಡೆದ ಘಟನೆಯದ್ದಲ್ಲ. ಇದು ಪಾಕಿಸ್ತಾನದ ಕರಾಚಿಯಲ್ಲಿ ೨೦೨೦ರಲ್ಲಿ ನಡೆದದ್ದು.
ಸಂದರ್ಭ
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಹೊಸ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ೨೦೦ ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಸೇರಿದಂತೆ ಚುನಾವಣಾ ಭರವಸೆಗಳ ಬಗ್ಗೆ ಸರ್ಕಾರದ ವಿರುದ್ಧ ಹಲವಾರು ಆರೋಪಗಳನ್ನು ಮಾಡಲಾಗಿದೆ. ಈ ಮಧ್ಯೆ, ಕರ್ನಾಟಕ ವಿದ್ಯುತ್ ಇಲಾಖೆಯು ತಮ್ಮ ಗ್ರಾಹಕರಿಂದ ಬಾಕಿ ಇರುವ ಹಣವನ್ನು ಸಂಗ್ರಹಿಸಲು ಹೆಣಗಾಡುತ್ತಿದೆ ಎಂದು ತೋರಿಸುವಂತೆ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಮತ್ತು ಬಾಕಿ ಪಾವತಿಸುವುದಕ್ಕಿಂತ ಸಾಯುತ್ತೇನೆ ಎಂದು ಆತ ಹೇಳುವುದನ್ನು ಕೂಡ ವೀಡಿಯೋದಲ್ಲಿ ನೋಡಬಹುದು.
ಫೇಸ್‌ಬುಕ್‌ನಲ್ಲಿ ಕಂಡುಬಂದ ಅಂತಹ ಪೋಷ್ಟ್ ಒಂದರ ಶೀರ್ಷಿಕೆಯು "#ಕರ್ನಾಟಕ ವಿದ್ಯುತ್ ಇಲಾಖೆಯು #ಕಾಂಗ್ರೆಸ್‌ನ ಭರವಸೆಗಳಿಗೆ ಬೆಲೆ ತೆರುತ್ತಿದೆ" ಎಂದು ಹೇಳುತ್ತದೆ. ಈ ಪೋಷ್ಟ್ ನಲ್ಲಿ ವ್ಯಕ್ತಿಯೊಬ್ಬ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡುತ್ತಿರುವ ವೀಡಿಯೋ ಕೂಡ ಇದೆ. ಆದರೆ, ಈ ವೀಡಿಯೋ ಇತ್ತೀಚಿನಲ್ಲಿ ಕರ್ನಾಟಕದಲ್ಲಿ ನಡೆದ ಘಟನೆಯದ್ದಲ್ಲ.
ವಾಸ್ತವವಾಗಿ
ಈ ವೀಡಿಯೋ ೨೦೨೦ ರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ನಿರೂಪಣೆಗಳೊಂದಿಗೆ, ಇದು ಭಾರತದಲ್ಲಿ ನಡೆದ ಘಟನೆಯದ್ದು ಎಂದು ಹಲವಾರು ಸಂದರ್ಭಗಳಲ್ಲಿ ಹಂಚಿಕೊಳ್ಳಲಾಗಿದೆ. ಲಾಜಿಕಲಿ ಫ್ಯಾಕ್ಟ್ಸ್ ಈ ಹಿಂದೆ ಇದೇ ವೀಡಿಯೋವನ್ನು ತಪ್ಪಾದ ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕಂಡುಹಿಡಿದಿತ್ತು. ಭಾರತವನ್ನು ತಾಲಿಬಾನ್ ತರಹದ ರಾಜ್ಯವನ್ನಾಗಿ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಸೂಚಿಸುವಂತೆ ಕೋಮು ಸ್ಪಿನ್‌ನೊಂದಿಗೆ ಇದನ್ನು ಹಂಚಿಕೊಳ್ಳಲಾಗಿತ್ತು.
ಆದರೆ, ಈ ಘಟನೆ ಪಾಕಿಸ್ತಾನದಲ್ಲಿನ ಅಧಿಕಾರಿಗಳು ವಿದ್ಯುತ್ ಬಿಲ್ ನ ಹಣವನ್ನು ಪಾವತಿಸದ ವ್ಯಕ್ತಿಯೊಬ್ಬನನ್ನು ಹಿಡಿದಾಗ ನಡೆದದ್ದು. ಆ ವ್ಯಕ್ತಿಯು ಅಧಿಕಾರಿಗಳನ್ನು ನಿಂದಿಸುತ್ತಿರುವಂತೆ ಕಂಡುಬಂದಿದ್ದು, ಹಣ ಪಾವತಿಸುವುದಿಲ್ಲ ಎಂದು ಹಠ ಹಿಡಿಯುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಪಾಕಿಸ್ತಾನದ ಪ್ರಮುಖ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಒಂದಾದ ಕೆ-ಎಲೆಕ್ಟ್ರಿಕ್ ಲಿಮಿಟೆಡ್ ಇದೇ ವೀಡಿಯೋವನ್ನು ತಮ್ಮ ಅಧಿಕೃತ ಫೇಸ್ಬುಕ್ ಅಕೌಂಟ್ ನಲ್ಲಿ ಜುಲೈ ೨೭, ೨೦೨೦ ರಂದು ಹಂಚಿಕೊಂಡಿದೆ.
ಜುಲೈ ೨೮, ೨೦೨೦ ರಂದು ನಡೆದ ಘಟನೆಯ ಬಗ್ಗೆ ಪಾಕಿಸ್ತಾನದ ಸುದ್ದಿವಾಹಿನಿಯಾದ ಸಿಯಾಸತ್ ವರದಿ ಮಾಡಿದೆ ಮತ್ತು ಕರಾಚಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಿಕೊಂಡು ಅದೇ ವೀಡಿಯೋವನ್ನು ಹಂಚಿಕೊಂಡಿದೆ. ಈ ವರದಿಯ ಲಿಂಕ್ ಅನ್ನು ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿಯೂ ನೋಡಬಹುದು.
ಅದೇ ರೀತಿ, ಪಾಕಿಸ್ತಾನ ಮೂಲದ ಮತ್ತೊಂದು ಸುದ್ದಿವಾಹಿನಿ ಎ.ಆರ್.ವೈ ನ್ಯೂಸ್ ಘಟನೆಯ ಕುರಿತು ವೀಡಿಯೋ ವರದಿಯನ್ನು ಹೊಂದಿದ್ದು, ಅವರು ವೀಡಿಯೋದಲ್ಲಿನ ವ್ಯಕ್ತಿಯನ್ನು ಶೆಹ್ರಿ ಅತಾ-ಉರ್-ರೆಹಮಾನ್ ಎಂದು ಗುರುತಿಸಿದ್ದಾರೆ ಮತ್ತು ವಿದ್ಯುತ್ ಕದಿಯುತ್ತಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದಾನೆ ಎಂದು ವರದಿ ಮಾಡಿದೆ. ಹೀಗಾಗಿ, ಇದು ಕರ್ನಾಟಕದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಬರುವ ಮುಂಚೆಯೇ ಪಾಕಿಸ್ತಾನದಲ್ಲಿ ನಡೆದ ಘಟನೆಯ ಹಳೆಯ ವೀಡಿಯೋ ಎಂಬುದು ಸ್ಪಷ್ಟವಾಗಿದೆ.
ಸಿದ್ದರಾಮಯ್ಯ ಸರ್ಕಾರ ಘೋಷಿಸಿದ ಉಚಿತ ಕೊಡುಗೆಗಳ ಬಗ್ಗೆ ಇಂತಹದ್ದೇ ಆದ ಸಂಬಂಧವಿಲ್ಲದ ವೀಡಿಯೋವನ್ನು ಬಳಸಿ ವ್ಯಕ್ತಿಯೊಬ್ಬರು ವಿದ್ಯುತ್ ಇಲಾಖೆ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ್ದು ನಿರೂಪಿಸುವ ಹೇಳಿಕೆಯನ್ನು ಲಾಜಿಕಲಿ ಫ್ಯಾಕ್ಟ್ಸ್ ತಪ್ಪು ಎಂದು ಕಂಡುಹಿಡಿದಿತ್ತು.
ತೀರ್ಪು
ಕರ್ನಾಟಕದ ವಿದ್ಯುತ್ ಇಲಾಖೆ ಅಧಿಕಾರಿಗಳೊಂದಿಗೆ ಜನರು ಜಗಳವಾಡುತ್ತಿದ್ದಾರೆ ಎಂದು ತೋರಿಸುವ ವೀಡಿಯೋ ಭಾರತದ್ದಲ್ಲ. ಈ ವೀಡಿಯೋ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಘಟನೆಯದ್ದು ಹಾಗು ಅಲ್ಲಿ ಅಧಿಕಾರಿಗಳು ೨೦೨೦ ರಲ್ಲಿ ವಿದ್ಯುತ್ ಕದಿಯುತ್ತಿದ್ದ ವ್ಯಕ್ತಿಯನ್ನು ಹಿಡಿದಾಗಿನ ವೀಡಿಯೋ ಎಂದು ವರದಿಯಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.