ಮೂಲಕ: ರೋಹಿತ್ ಗುಟ್ಟಾ
ಆಗಸ್ಟ್ 16 2024
ಈ ಘಟನೆ ನಡೆದಿರುವುದು ಆಂಧ್ರಪ್ರದೇಶದಲ್ಲಲ್ಲ, ಕರ್ನಾಟಕದ ಕೊಪ್ಪಳ ಜಿಲ್ಲೆಯ ಗುಂಡೂರು ಗ್ರಾಮದಲ್ಲಿ.
ಹೇಳಿಕೆ ಏನು?
ಮಹಿಳೆಯೊಬ್ಬರು ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆಗಳನ್ನು ಬಡಿಸಿ ಅವರು ತಿನ್ನುವ ಮೊದಲು ಅವುಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಮತ್ತು ಇನ್ನೊಬ್ಬ ಮಹಿಳೆ ತನ್ನ ಫೋನ್‌ನಲ್ಲಿ ವೀಡಿಯೋ ಮಾಡುತ್ತಿರುವ ೩೭ ಸೆಕೆಂಡುಗಳ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಅದು ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡ ಬಳಕೆದಾರರು (ಇಲ್ಲಿ ಆರ್ಕೈವ್ ಮಾಡಲಾಗಿದೆ) ತೆಲುಗಿನಲ್ಲಿ ಹೀಗೆ ಬರೆದಿದ್ದಾರೆ, "ಕರುಣೆಯಿಲ್ಲದ ಮೈತ್ರಿ ಸರ್ಕಾರದ ಅಂಗನವಾಡಿ ಶಿಕ್ಷಕಿ. ಮೊಟ್ಟೆಗಳನ್ನು ಬಡಿಸುವ ಫೋಟೋವನ್ನು ತೆಗೆದ ನಂತರ, ಮೋಸ ಹೋದ ಅಂಗನವಾಡಿ ಶಿಕ್ಷಕಿ ಅವುಗಳನ್ನು ಕಿತ್ತುಕೊಂಡರು. ನಾವು ಅವಳನ್ನು ಏನು ತೊಗೊಂಡು ಹೊಡೆಯಬೇಕು. ?," ಮತ್ತು ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿದ್ದಾರೆ. ಆಂಧ್ರಪ್ರದೇಶದ ಸರ್ಕಾರವು ತೆಲುಗು ದೇಶಂ ಪಕ್ಷ (ಟಿಡಿಪಿ), ಜನಸೇನಾ ಪಕ್ಷ (ಜೆಎಸ್ಪಿ), ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಗಳ ಮೈತ್ರಿಯಾಗಿದೆ. ಮೈತ್ರಿ ಸರ್ಕಾರವು ಈ ಸರ್ಕಾರಕ್ಕೆ ಸಂಕ್ಷಿಪ್ತ ಉಲ್ಲೇಖವಾಗಿದೆ. ಅದೇ ರೀತಿಯ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು.
(ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
೧೯೭೫ ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಈ ಕೇಂದ್ರಗಳು ಆರು ವರ್ಷದೊಳಗಿನ ಮಕ್ಕಳು, ಹದಿಹರೆಯದ ಹುಡುಗಿಯರು ಮತ್ತು ೧೫ ರಿಂದ ೪೫ ವರ್ಷದೊಳಗಿನ ಮಹಿಳೆಯರಿಗೆ ವಿವಿಧ ಪೌಷ್ಟಿಕಾಂಶ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತವೆ. ಅಂಗನವಾಡಿ ಕಾರ್ಯಕರ್ತೆಯರು ಈ ಕೇಂದ್ರಗಳಲ್ಲಿ ಈ ಸೇವೆಗಳನ್ನು ಒದಗಿಸುತ್ತಾರೆ. ಅವರು ಆರು ವರ್ಷದೊಳಗಿನ ಮಕ್ಕಳಿಗೆ ಮಧ್ಯಾಹ್ನದ ಊಟವನ್ನೂ ನೀಡುತ್ತಾರೆ.
ಆದರೆ, ಈ ಘಟನೆ ನಡೆದಿರುವುದು ಆಂಧ್ರಪ್ರದೇಶದಲ್ಲಿ ಅಲ್ಲ ಕರ್ನಾಟಕದಲ್ಲಿ.
ನಾವು ಕಂಡುಕೊಂಡಿದ್ದು ಏನು?
ವಿದ್ಯಾರ್ಥಿಗಳ ಹಿಂದಿನ ಗೋಡೆಯ ಮೇಲಿನ ಬರಹವು ಕರ್ನಾಟಕದಲ್ಲಿ ಪ್ರಧಾನವಾಗಿ ಮಾತನಾಡುವ ಕನ್ನಡ ಭಾಷೆಯಲ್ಲಿದೆ ಎಂದು ನಾವು ಗಮನಿಸಿದ್ದೇವೆ.
ವೈರಲ್ ವೀಡಿಯೋದಲ್ಲಿ ಕಾಣುವ ಕನ್ನಡ ಬರಹಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್)
ನಾವು ನಂತರ ವೀಡಿಯೋ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಘಟನೆಯು ಕರ್ನಾಟಕದಲ್ಲಿ ನಡೆದಿದೆ ಎಂದು ಕಂಡುಬಂದಿತು.
ವೀಡಿಯೋದ ದೃಶ್ಯಗಳನ್ನು ಒಳಗೊಂಡಿರುವ ಸ್ಥಳೀಯ ಸುದ್ದಿವಾಹಿನಿ ಪ್ರಜಾವಾಣಿಯಲ್ಲಿನ ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ ೧೦, ೨೦೨೪ ರಂದು ಕರ್ನಾಟಕದ ಕೊಪ್ಪಳ ಜಿಲ್ಲೆಯ ಗುಂಡೂರು ಗ್ರಾಮದ ಅಂಗನವಾಡಿ ೨ ಕೇಂದ್ರದಲ್ಲಿ ಸಂಭವಿಸಿದೆ. ಛಾಯಾಚಿತ್ರಕ್ಕಾಗಿ ಮಕ್ಕಳಿಗೆ ಮೊಟ್ಟೆಗಳನ್ನು ಬಡಿಸಿದ ನಂತರ, ಮೊಟ್ಟೆಗಳನ್ನು ಅವರಿಂದ ತೆಗೆದುಕೊಳ್ಳಲಾಗಿದೆ ಎಂದು ವರದಿ ಗಮನಿಸುತ್ತದೆ. ಮತ್ತೊಂದು ಕನ್ನಡ ದಿನಪತ್ರಿಕೆ, ಕನ್ನಡಪ್ರಭಾ ಕೂಡ ಈಗ ವೈರಲ್ ಆಗಿರುವ ವೀಡಿಯೋದ ದೃಶ್ಯಗಳನ್ನು ಒಳಗೊಂಡಿದೆ.
ಈಗ ವೈರಲ್ ಆಗಿರುವ ವೀಡಿಯೋವನ್ನು ಒಳಗೊಂಡಿರುವ ಇಂಡಿಯಾ ಟುಡೇ ಮತ್ತು ಬೆಂಗಳೂರು ಮಿರರ್ ವರದಿಗಳು ಈ ವಿವರಗಳನ್ನು ದೃಢೀಕರಿಸುತ್ತವೆ.
ವೈರಲ್ ವೀಡಿಯೋದ ದೃಶ್ಯಗಳೊಂದಿಗೆ ಇಂಡಿಯಾ ಟುಡೇ ವರದಿಯ ಸ್ಕ್ರೀನ್‌ಶಾಟ್ (ಮೂಲ: ಇಂಡಿಯಾ ಟುಡೇ)
ಕೊಪ್ಪಳ ಜಿಲ್ಲಾಧಿಕಾರಿಯನ್ನು ಉಲ್ಲೇಖಿಸಿ ದಿ ಹಿಂದೂ ಪತ್ರಿಕೆಯ ವರದಿಯು ಕೊಪ್ಪಳದಲ್ಲಿ ಘಟನೆ ನಡೆದಿರುವುದನ್ನು ದೃಢಪಡಿಸಿದೆ. ವಾರದ ಹಿಂದೆ ಈ ಘಟನೆ ನಡೆದಿದ್ದು, ಆಗಸ್ಟ್ ೮ ರಂದು ವೀಡಿಯೋ ವೈರಲ್ ಆಗಿದೆ ಎಂದು ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಾರ್ಯಕ್ರಮ ಅಧಿಕಾರಿ ತಿಳಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಹಾಗು ವಿಚಾರಣೆ ಬಾಕಿಯಿದೆ ಎಂದು ಸೂಚಿಸಲಾಗಿದೆ.
ಈ ಘಟನೆ ನಡೆದಿರುವುದು ಕರ್ನಾಟಕದಲ್ಲಿ ಎಂಬುದನ್ನು ವರದಿಗಳು ಖಚಿತಪಡಿಸಿವೆ.
ತೀರ್ಪು
ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಕ್ಕಳಿಂದ ಮೊಟ್ಟೆ ತೆಗೆದುಕೊಂಡ ವೀಡಿಯೋವನ್ನು ಆಂಧ್ರಪ್ರದೇಶದಲ್ಲಿ ನಡೆದಿದೆ ಎಂಬ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here