ಮೂಲಕ: ಅಂಕಿತಾ ಕುಲಕರ್ಣಿ
ಜನವರಿ 22 2024
ವೈರಲ್ ಕ್ಲಿಪ್ ರಾಮ ಮಂದಿರದ ಪ್ರತಿಷ್ಠಾಪನೆಗೆ ಮುಂಚಿತವಾಗಿ ದೆಹರಾದೂನ್ ನ ಗಡಿಯಾರ ಗೋಪುರದ ಮೇಲೆ ಶ್ರೀ ರಾಮನ ಚಿತ್ರಣವನ್ನು ತೋರಿಸುತ್ತದೆ.
ಹೇಳಿಕೆ ಏನು?
ಜನವರಿ ೨೨ ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೊಸ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ಮೊದಲು ಶ್ರೀನಗರದ ಜನಪ್ರಿಯ ಲಾಲ್ ಚೌಕ್‌ನಲ್ಲಿರುವ ಗಡಿಯಾರ ಗೋಪುರದಲ್ಲಿ ಶ್ರೀ ರಾಮನ ಚಿತ್ರವನ್ನು ಪ್ರದರ್ಶಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಬಳಕೆದಾರರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದರ ಶೀರ್ಷಿಕೆ, "ಇಂದು, ನಮ್ಮ ಪೂಜ್ಯ ಭಗವಾನ್ ಶ್ರೀ ರಾಮ್ ಜಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಎಂದಿಗೂ ಹಾರಿಸದ ಸ್ಥಳದಲ್ಲಿ ಕುಳಿತಿದ್ದಾರೆ," ಎಂದು ಅನುವಾದಿಸಲಾಗಿದೆ.
ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಇದೇ ರೀತಿಯ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಮತ್ತು ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಆನ್‌ಲೈನ್‌ನಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ವಾಸ್ತವಾಂಶಗಳು
ವೈರಲ್ ಕ್ಲಿಪ್ ನ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಜನವರಿ ೧೫ ರಂದು 'WHEELS_ON_AIR' ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಯೂಟ್ಯೂಬ್ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. ಈ ಯೂಟ್ಯೂಬ್ ವೀಡಿಯೋ ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಅದೇ ಗಡಿಯಾರ ಗೋಪುರವನ್ನು ತೋರಿಸುತ್ತದೆ ಜೊತೆಗೆ ಹಿಂದೂ ದೇವರ ಅದೇ ರೀತಿಯ ಫೋಟೋವನ್ನು ರಚನೆಯ ಮೇಲೆ ತೋರಿಸುತ್ತದೆ. ಗಡಿಯಾರದ ಗೋಪುರದ ಮೇಲೆ ಜನರು ಶ್ರೀ ರಾಮನನ್ನು ಗುರುತಿಸಬಹುದು ಎಂದು ವೀಡಿಯೋದಲ್ಲಿ ಕೇಳಿದ ಧ್ವನಿ ಹಿಂದಿಯಲ್ಲಿ ಹೇಳುತ್ತದೆ. 'SUBHASH CHAUDHARY VLOGS' ಚಾನೆಲ್ ಯೂಟ್ಯೂಬ್‌ನಲ್ಲಿ ಪೋಷ್ಟ್ ಮಾಡಿದ ಮತ್ತೊಂದು ಇದೇ ರೀತಿಯ ವೀಡಿಯೋದಲ್ಲಿ ಅದೇ ಗೋಪುರ ಮತ್ತು ಅದೇ ರಾಮನ ಚಿತ್ರವನ್ನು ತೋರಿಸುತ್ತದೆ. ಎರಡನೇ ವೀಡಿಯೋದ ಶೀರ್ಷಿಕೆ ಮತ್ತು ವಿವರಣೆಯ ಪ್ರಕಾರ, ವೀಡಿಯೋದಲ್ಲಿ ಕಂಡುಬರುವ ಗೋಪುರವು ಉತ್ತರ ಭಾರತದ ಉತ್ತರಾಖಂಡ ರಾಜ್ಯದ ರಾಜಧಾನಿ ದೆಹರಾದೂನ್ ನಲ್ಲಿ ಇದೆ. ಎರಡೂ ವೀಡಿಯೋಗಳಲ್ಲಿ, ಉತ್ತರಾಖಂಡದ ನೋಂದಣಿ ಕೋಡ್ ಆಗಿರುವ ಯುಕೆಯಿಂದ (UK) ಪ್ರಾರಂಭವಾಗುವ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ಕಾರುಗಳನ್ನೂ ಸಹ ನಾವು ಗುರುತಿಸಬಹುದು.
ಜನವರಿ ೧೭ ರಂದು ದೆಹರಾದೂನ್ ನಗರದ ಗಡಿಯಾರ ಗೋಪುರದ ಮೇಲೆ ಶ್ರೀ ರಾಮನ ಚಿತ್ರಗಳನ್ನು ಪ್ರದರ್ಶಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಜನವರಿ ೧೮ ರಂದು ವರದಿ ಮಾಡಿದೆ. ವರದಿಯು ಸುದ್ದಿ ಸಂಸ್ಥೆ ಎಏನ್ಐ ಹಂಚಿಕೊಂಡ ವೀಡೀಯೋವನ್ನೂ ಸಹ ಒಳಗೊಂಡಿದೆ.
ಗೂಗಲ್ ಮ್ಯಾಪ್ಸ್ ನಲ್ಲಿ ಘಂಟಾಘರ್ ಪ್ರದೇಶದಲ್ಲಿ ನೆಲೆಗೊಂಡಿರುವ ದೆಹರಾದೂನ್‌ನಲ್ಲಿರುವ ಗಡಿಯಾರ ಗೋಪುರವನ್ನು ಲಾಜಿಕಲಿ ಫ್ಯಾಕ್ಟ್ಸ್ ಜಿಯೋಲೊಕೇಟ್ ಮಾಡಿದೆ. ಗೋಪುರದ 360° ನೋಟವು ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಭೌಗೋಳಿಕ ಸ್ಥಳ ಮತ್ತು ಗೋಪುರದ ರಚನೆಯು ಒಂದೇ ಆಗಿವೆ ಎಂದು ನಿರ್ಣಯಿಸಲು ನಮಗೆ ಸಹಾಯ ಮಾಡಿತು.
ವೈರಲ್ ಕ್ಲಿಪ್ ಮತ್ತು ಗೂಗಲ್ ನಕ್ಷೆಗಳ ದೃಶ್ಯಗಳ ನಡುವಿನ ಹೋಲಿಕೆ. (ಮೂಲ: ಎಕ್ಸ್ /ಗೂಗಲ್ ಮ್ಯಾಪ್ಸ್/ಸ್ಕ್ರೀನ್‌ಶಾಟ್)
ನಾವು ಗೂಗಲ್ ಮ್ಯಾಪ್‌ನಲ್ಲಿ ಶ್ರೀನಗರದ ಲಾಲ್ ಚೌಕ್ ಗಡಿಯಾರ ಗೋಪುರವನ್ನು ಹುಡುಕಿದೆವು ಮತ್ತು ಗೋಪುರದ ರಚನೆ ಹಾಗು ಅದರ ಸುತ್ತಲಿನ ಪ್ರದೇಶವು ವೈರಲ್ ಕ್ಲಿಪ್‌ನಲ್ಲಿ ಕಂಡುಬರುವುದಕ್ಕಿಂತ ಗಮನಾರ್ಹವಾಗಿ ಭಿನ್ನವಾಗಿದೆ ಎಂದು ಕಂಡುಬಂದಿದೆ.
ಲಾಲ್ ಚೌಕ್‌ನಲ್ಲಿರುವ ಗಡಿಯಾರ ಗೋಪುರ ಮತ್ತು ದೆಹರಾದೂನ್ ಗಡಿಯಾರ ಗೋಪುರದ ನಡುವಿನ ಹೋಲಿಕೆ.
(ಮೂಲ: ಗೂಗಲ್ ನಕ್ಷೆಗಳು/ಸ್ಕ್ರೀನ್‌ಶಾಟ್)
ಅದಲ್ಲದೆ, ಶ್ರೀನಗರದ ಲಾಲ್ ಚೌಕ್ ಗಡಿಯಾರ ಗೋಪುರದ ಮೇಲೆ ಶ್ರೀ ರಾಮನ ಚಿತ್ರಗಳ ಪ್ರದರ್ಶನದ ಬಗ್ಗೆ ಯಾವುದೇ ಸುದ್ದಿ ವರದಿಗಳಿಲ್ಲ.
ಆದ್ದರಿಂದ, ಮೇಲಿನ ಪುರಾವೆಗಳು ವೈರಲ್ ಕ್ಲಿಪ್‌ನಲ್ಲಿರುವ ಗಡಿಯಾರ ಗೋಪುರವು ದೆಹರಾದೂನ್‌ನಲ್ಲಿದೆ ಮತ್ತು ಶ್ರೀನಗರದ ಲಾಲ್ ಚೌಕ್‌ನಲ್ಲಿ ಅಲ್ಲ ಎಂದು ಸ್ಥಾಪಿಸುತ್ತದೆ.
ತೀರ್ಪು
ದೆಹರಾದೂನ್‌ನಲ್ಲಿರುವ ಗಡಿಯಾರ ಗೋಪುರದ ವೀಡೀಯೋವನ್ನು ಶ್ರೀನಗರದ ಲಾಲ್ ಚೌಕ್‌ನಲ್ಲಿರುವ ಗಡಿಯಾರ ಗೋಪುರದಲ್ಲಿ ಶ್ರೀ ರಾಮನ ಚಿತ್ರಗಳನ್ನು ಪ್ರದರ್ಶಿಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this check in English here.