ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಮೇ 17 2024
ಈ ವೀಡಿಯೋ ಕೇರಳದ ವಯನಾಡ್ ನಲ್ಲಿ ಸೆರೆಹಿಡಿಯಲಾಗಿದ್ದು, ಅರಣ್ಯ ಇಲಾಖೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹುಲಿ ಕೊಂದ ಗೂಳಿಯ ಶವವನ್ನು ಜೀಪ್ ಮೇಲೆ ಇರಿಸಿದ್ದನ್ನು ತೋರಿಸುತ್ತದೆ.
ಹೇಳಿಕೆ ಏನು?
(ಪ್ರಚೋದಕ ಎಚ್ಚರಿಕೆ: ಈ ಘಟನೆಯು ದುಃಖಕರ ದೃಶ್ಯಗಳನ್ನು ಒಳಗೊಂಡಿರುವ ಕಾಣರ ಲಾಜಿಕಲಿ ಫ್ಯಾಕ್ಟ್ಸ್ ವೀಡಿಯೋದ ಡೈರೆಕ್ಟ್ ಲಿಂಕ್‌ಗಳನ್ನು ಲೇಖನದಲ್ಲಿ ಸೇರಿಸಿಲ್ಲ. ಆದರೆ, ಅದರ ಆರ್ಕೈವ್ ಲಿಂಕ್‌ಗಳ ಇರುವುದರಿಂದ , ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)
ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವೀಡಿಯೋದಲ್ಲಿ ಜೀಪ್‌ನ ಬಾನೆಟ್‌ನಲ್ಲಿ ಹಸುವಿನ ಶವವನ್ನು ನೋಡಬಹುದು. ಕರ್ನಾಟಕ ರಾಜ್ಯದಲ್ಲಿರುವ ಮುಸ್ಲಿಂ ಸಮುದಾಯದ ಸದಸ್ಯರು ಬೀದಿಗಳಲ್ಲಿ "ಬಹಿರಂಗವಾಗಿ ಗೋಹತ್ಯೆ ಮಾಡುತ್ತಿದ್ದಾರೆ" ಎಂಬ ಹೇಳಿಕೆಯೊಂದಿಗೆ ಶೇರ್ ಮಾಡಲಾಗುತ್ತಿದೆ.
೧೭ ಸೆಕೆಂಡುಗಳ ಈ ವೀಡಿಯೋ ಒಂದು ಪ್ರಾಣಿಯ ಮೃತದೇಹದೊಂದಿಗೆ ವಾಹನವನ್ನು ಸುತ್ತುವರೆದಿರುವ ದೊಡ್ಡ ಗುಂಪನ್ನು ತೋರಿಸುತ್ತದೆ. ಕೆಲವು ಪುರುಷರು ವಾಹನದ ಮೇಲೆ, ಏನೂ ಕಟ್ಟುತ್ತಿರುವಂತೆ ತೋರುತ್ತದೆ. ವೀಡಿಯೋದ ಮೇಲೆ ಆಂಗ್ಲ ಭಾಷೆಯ ಪಠ್ಯವು "ಜೈ ಶ್ರೀ ರಾಮ್" ಎಂದು ಓದುತ್ತದೆ, ಆದರೆ ಕೆಲವು ಪೋಷ್ಟ್ ಗಳಲ್ಲಿ ಹಿಂದಿ ಪಠ್ಯವು "ಈ ವೀಡಿಯೋವನ್ನು ಸಾಧ್ಯವಾದಷ್ಟು ಹಂಚಿಕೊಳ್ಳಿ; ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದ ಜನರು ಬೀದಿಗಳಲ್ಲಿ ಬಹಿರಂಗವಾಗಿ ಗೋವುಗಳನ್ನು ಕೊಲ್ಲುತ್ತಿದ್ದಾರೆ (ಅನುವಾದ)" ಎಂದು ಹೇಳುತ್ತದೆ.
ಅಂತಹ ಒಂದು ಪೋಷ್ಟ್ ಸುಮಾರು ೩೩,೬೦೦ ವೀಕ್ಷಣೆಗಳನ್ನು ಗಳಿಸಿದೆ. ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಎಕ್ಸ್ ನಲ್ಲಿ ಹಂಚಿಕೊಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಈ ನಿರೂಪಣೆಯನ್ನು ಯೂಟ್ಯೂಬ್‌ನಲ್ಲಿಯೂ ಪ್ರಸಾರ ಮಾಡಲಾಗಿದ್ದು, ಅದರ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ಹೇಳಿಕೆಗಳಿಗೆ ವ್ಯತಿರಿಕ್ತವಾಗಿ, ವೀಡಿಯೋ ದಕ್ಷಿಣ ಭಾರತದ ಕೇರಳ ರಾಜ್ಯದ ವಯನಾಡ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸೆರೆಹಿಡಿಯಲಾಗಿದೆ, ಕರ್ನಾಟಕದಲ್ಲ ಅಲ್ಲ. ಹುಲಿಯಿಂದ ಕೊಂದ ಗೂಳಿಯ ಮೃತದೇಹವನ್ನು ಸ್ಥಳೀಯರು ಅರಣ್ಯ ಇಲಾಖೆಯ ಜೀಪಿಗೆ ಕಟ್ಟಿ ಪ್ರತಿಭಟನೆ ನಡೆಸಿದ ಘಟನೆಯನ್ನು ಇದು ಚಿತ್ರಿಸುತ್ತದೆ.
ನಾವು ಕಂಡುಹಿಡಿದದ್ದು ಏನು?
ಮುಸ್ಲಿಂ ಸಮುದಾಯದ ಆಪಾದಿತ "ಗೋವುಗಳ ಬಹಿರಂಗ ವಧೆ" ಕುರಿತು ಕರ್ನಾಟಕದಿಂದ ಯಾವುದೇ ಇತ್ತೀಚಿನ ವರದಿಗಳು ನಮಗೆ ಕಂಡುಬಂದಿಲ್ಲ.
ಅದಲ್ಲದೆ, ವೈರಲ್ ವೀಡಿಯೋದಲ್ಲಿ ಜೀಪ್‌ನ ಹಿಂದಿನ ಕಟ್ಟಡದ ಮೇಲಿನ ಫಲಕವು ಮಲಯಾಳಂನಲ್ಲಿ ಪಠ್ಯವನ್ನು ಒಳಗೊಂಡಿರುವುದನ್ನು ನಾವು ಗಮನಿಸಿದ್ದೇವೆ, ಕನ್ನಡ ಅಲ್ಲ.
ವೈರಲ್ ವೀಡಿಯೋದ ರಿವರ್ಸ್ ಇಮೇಜ್ ಸರ್ಚ್ ಮೂಲಕ, ಫೆಬ್ರವರಿ ೧೭, ೨೦೨೪ ರಂದು ಪೋಷ್ಟ್ ಮಾಡಲಾದ 'wayanadview' ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೋ ಮಲಯಾಳಂ ಶೀರ್ಷಿಕೆಯನ್ನು ಒಳಗೊಂಡಿದೆ, ಅದು "ಕಾನೂನನ್ನು ಜನರು ಪುಲ್ಪಲ್ಲಿಯಲ್ಲಿ ಕೈಗೆ ತಗೆದುಕೊಂಡಾಗ," ಎಂದು ಹೇಳುತ್ತದೆ.
ಪುಲ್ಪಲ್ಲಿ ಕೇರಳದ ವಯನಾಡು ಜಿಲ್ಲೆಯಲ್ಲಿರುವ ಒಂದು ಪಟ್ಟಣ.
WayanadView ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಷ್ಟ್ ಮಾಡಿದ ವೀಡಿಯೋದ ಸ್ಕ್ರೀನ್‌ಶಾಟ್. ಮೂಲ: (ಇನ್‌ಸ್ಟಾಗ್ರಾಮ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
ಘಟನೆಯ ಕುರಿತು ಸುದ್ದಿ ವಿಭಾಗದಿಂದ ಅಪ್ಲೋಡ್ ಮಾಡಲಾದ ಯೂಟ್ಯೂಬ್ ವೀಡಿಯೋವನ್ನೂ ಸಹ ನಾವು ಕಂಡುಕೊಂಡಿದ್ದೇವೆ, ಇದನ್ನು ಕೇರಳದ ಸುದ್ದಿ ಪೋರ್ಟಲ್ ಕೇರಳ ವಿಷನ್ ನ್ಯೂಸ್ ೨೪ x ೭ ಚಾನೆಲ್‌ನಲ್ಲಿ ನೋಡಬಹುದು. ವೀಡಿಯೋದ ಮಲಯಾಳಂ ವಿವರಣೆಯು, "ವನ್ಯಜೀವಿಗಳ ದಾಳಿ; ವಯನಾಡಿನಲ್ಲಿ ಜನರ ಕೋಪವು ಘರ್ಜಿಸುತ್ತಿದೆ" ಎಂದು ಅನುವಾದಿಸುತ್ತದೆ. ವಯನಾಡಿನ ಪುಲ್ಪಲ್ಲಿಯಲ್ಲಿ ಕಾಡು ಪ್ರಾಣಿಗಳ ದಾಳಿಗೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಶದ ಕುರಿತು ಮಲಯಾಳಂ ಸುದ್ದಿ ನಿರೂಪಕ ವರದಿ ಮಾಡುವುದನ್ನು ಒಳಗೊಂಡಿದೆ.
ಈ ವನ್ಯಜೀವಿ ದಾಳಿಯ ಬಗ್ಗೆ ಪ್ರತಿಭಟನಾಕಾರರು ಹತಾಶೆ ವ್ಯಕ್ತಪಡಿಸಿ ಅರಣ್ಯ ಇಲಾಖೆಯ ವಾಹನವನ್ನು ತಡೆದಿದ್ದರು ಎಂದು ವರದಿ ಹೇಳುತ್ತದೆ. ನಂತರ ಕಾಡುಪ್ರಾಣಿಯಿಂದ ಕೊಂದ ಹಸುವಿನ ಮೃತದೇಹವನ್ನು ವಾಹನದ ಮೇಲೆ ಇಟ್ಟು ಹಾರ ಹಾಕಲಾಗಿತ್ತು.
೫೦-ಸೆಕೆಂಡ್‌ನಿಂದ ಸುಮಾರು ೧-ನಿಮಿಷದವರೆಗೆ, ಪುರುಷರು ಹಸುವಿನ ಮೃತದೇಹವನ್ನು ವಾಹನದ ಬಾನೆಟ್‌ಗೆ ಇಡುವುದನ್ನು ವೀಡಿಯೋ ತೋರಿಸುತ್ತದೆ. ಹಿನ್ನೆಲೆಯಲ್ಲಿ ಕಾಣುವ ಕಟ್ಟಡದಂತೆ ವರದಿಯಲ್ಲಿರುವ ದೃಶ್ಯಾವಳಿಗಳು ವೈರಲ್ ವೀಡಿಯೋಗೆ ಹೊಂದಿಕೆಯಾಗುತ್ತವೆ.
ಯೂಟ್ಯೂಬ್‌ನಲ್ಲಿ ಕೇರಳ ವಿಷನ್ ನ್ಯೂಸ್ ೨೪ x ೭ ಪ್ರಕಟಿಸಿದ ಸುದ್ದಿ ವಿಭಾಗದೊಂದಿಗೆ ವೈರಲ್ ತುಣುಕಿನ ಹೋಲಿಕೆ. (ಮೂಲ: ಎಕ್ಸ್ /ಯೂಟ್ಯೂಬ್)
ಇದಲ್ಲದೆ, ವೀಡಿಯೋದಲ್ಲಿ ಕಾಣುವ ಕಟ್ಟಡವು "ಕಂಪ್ಯೂಟರ್ ತರಬೇತಿ ಕೇಂದ್ರ" ಎಂದು ಅನುವಾದಿಸುವ "കമ്പ്യൂട്ടർ പരിശീലന കേന്ദ്രം" ಎಂಬ ಮಲಯಾಳಂ ಪಠ್ಯವನ್ನು ಒಳಗೊಂಡಿರುವುದನ್ನು ನಾವು ಗಮನಿಸಿದ್ದೇವೆ. ಈ ಮಾಹಿತಿಯನ್ನು ಬಳಸಿಕೊಂಡು, ಇದು ಕೇರಳದ ಪುಲ್ಪಲ್ಲಿ-ಸೀತಾಮೌಂಟ್-ಕೊಲವಲ್ಲಿ ರಸ್ತೆಯ ಬಸ್ ನಿಲ್ದಾಣ ಎಂದು ಗೂಗಲ್ ಮ್ಯಾಪ್ಸ್ ನಲ್ಲಿ ನಿಖರವಾದ ಸ್ಥಳವನ್ನು ನಾವು ಗುರುತಿಸಿದ್ದೇವೆ.
ವೈರಲ್ ದೃಶ್ಯಗಳು ಮತ್ತು ಗೂಗಲ್ ಮ್ಯಾಪ್ಸ್ ನ ಸ್ಕ್ರೀನ್‌ಶಾಟ್ ಕೇರಳದ ಪುಲ್ಪಲ್ಲಿ, ಕೊಲವಲ್ಲಿ ರಸ್ತೆಯ ಸ್ಥಳವನ್ನು ತೋರಿಸುತ್ತದೆ. (ಮೂಲ: ಎಕ್ಸ್ /ಗೂಗಲ್ ಮ್ಯಾಪ್ಸ್)
ವಯನಾಡಿನ ಪುಲ್ಪಲ್ಲಿಯಲ್ಲಿ ಪ್ರತಿಭಟನೆ
ಫೆಬ್ರವರಿ ೨೦೨೪ ರಲ್ಲಿ ಕೇರಳದ ವಯನಾಡ್ ಜಿಲ್ಲೆಯ ಪುಲ್ಪಲ್ಲಿಯಲ್ಲಿ ಸರ್ವಪಕ್ಷಗಳ ಕ್ರಿಯಾ ಮಂಡಳಿಯು ಆಯೋಜಿಸಿದ್ದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತು ಎಂದು ದಿ ಹಿಂದೂ ವರದಿ ಮಾಡಿದೆ. ಆನೆ ದಾಳಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಆರಂಭಿಸಲಾಗಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಪ್ರತಿಭಟನಾಕಾರರಿಗೆ ಲಿಖಿತ ಭರವಸೆ ನೀಡಲು ವಿಫಲವಾದಾಗ ಅದು ಹಿಂಸಾಚಾರಕ್ಕೆ ತಿರುಗಿತ್ತು.
ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ, ಪ್ರತಿಭಟನಾಕಾರರು ಪುಲ್ಪಲ್ಲಿ ಬಳಿ ಹುಲಿಯಿಂದ ಕೊಂದ ಗೂಳಿಯ ಮೃತದೇಹವನ್ನು ತಂದು ಅರಣ್ಯ ಇಲಾಖೆಯ ಯುಟಿಲಿಟಿ ವಾಹನದ ಬೋನಿಗೆ ಕಟ್ಟಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರತಿಭಟನಾಕಾರರು ಅದರ ಮೇಲೆ ಹಾರವನ್ನು ಹಾಕಿದರು ಮತ್ತು ಕೆಲವು ಪ್ರತಿಭಟನಾಕಾರರು ವಾಹನವನ್ನು ಹಾನಿಗೊಳಿಸಿದರು ಎಂದು ಹೇಳಲಾಗಿದೆ.
ವರದಿಯು ವೈರಲ್ ವೀಡಿಯೋದಲ್ಲಿನ ದೃಶ್ಯವನ್ನು ಹೋಲುವ ಫೋಟೋ ಮತ್ತು ಗೂಗಲ್ ಮ್ಯಾಪ್ಸ್ ನಲ್ಲಿ ನೋಡಿದಂತೆ ಬಸ್ ನಿಲ್ದಾಣವನ್ನು ಒಳಗೊಂಡಿದೆ.
ವೈರಲ್ ವೀಡಿಯೋ ಕುರಿತು ವಿವರಣೆಗಾಗಿ ಲಾಜಿಕಲಿ ಫ್ಯಾಕ್ಟ್ಸ್ ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯನ್ನು ಸಂಪರ್ಕಿಸಿತು. ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ವಯನಾಡ್‌ನ ರಾಪಿಡ್ ರೆಸ್ಪಾನ್ಸ್ ಟೀಮ್‌ನ ರೇಂಜ್ ಫಾರೆಸ್ಟ್ ಆಫೀಸರ್ ಕೆ.ವಿ ಬಿಜು ಅವರು ನಮಗೆ ಹೀಗೆ ಮಾಹಿತಿ ನೀಡಿದರು, “ಈ ಘಟನೆಯು ಕೇರಳ, ವಯನಾಡ್ ಮತ್ತು ಪುಲ್ಪಲ್ಲಿಯಲ್ಲಿ ನಡೆದಿದೆ. ನಿಜವಾದ ಘಟನೆ ಏನೆಂದರೆ, ಹುಲಿ ಕೊಂದಿದ್ದ ಹಸುವಿನ ಮೃತದೇಹವನ್ನು ಸ್ಥಳೀಯರು ಅರಣ್ಯ ಇಲಾಖೆಯ ಜೀಪಿನ ಮೇಲೆ ಹಾಕಿದರು." ಮತ್ತು ಫೆಬ್ರವರಿ ೨೦೨೪ ರಲ್ಲಿ ಈ ಘಟನೆ ಸಂಭವಿಸಿದೆ ಎಂದು ಅವರು ದೃಢಪಡಿಸಿದರು.
ತೀರ್ಪು
ವೈರಲ್ ಆಗಿರುವ ವೀಡಿಯೋದಲ್ಲಿ ಕರ್ನಾಟಕದಲ್ಲಿ ಮುಸ್ಲಿಮರು ಬಹಿರಂಗವಾಗಿ ಗೋಹತ್ಯೆ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಹೇಳಲಾಗಿದೆ. ವಾಸ್ತವದಲ್ಲಿ, ವೀಡಿಯೋ ಕೇರಳದ ವಯನಾಡ್ ನಲ್ಲಿ ಸೆರೆಹಿಡಿಯಲಾಗಿದ್ದು, ಅದು ಫೆಬ್ರವರಿ ೨೦೨೪ ರಲ್ಲಿ ಪ್ರತಿಭಟನಾಕಾರರು ಹುಲಿಯಿಂದ ಕೊಲ್ಲಲ್ಪಟ್ಟ ಗೂಳಿಯ ಮೃತದೇಹವನ್ನು ಅರಣ್ಯ ಇಲಾಖೆಯ ಜೀಪ್‌ಗೆ ಕಟ್ಟಿ ನಡೆಸಿದ ಪ್ರತಿಭಟನೆಯನ್ನು ತೋರಿಸುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.