ಮುಖಪುಟ ಅಯೋಧ್ಯೆಯಲ್ಲಿ ದಲಿತ ಹುಡುಗನನ್ನು ಥಳಿಸಲಾಯಿತು ಎಂದು ಹೇಳಲು ಹರಿಯಾಣದ ಸಂಬಂಧವಿಲ್ಲದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಅಯೋಧ್ಯೆಯಲ್ಲಿ ದಲಿತ ಹುಡುಗನನ್ನು ಥಳಿಸಲಾಯಿತು ಎಂದು ಹೇಳಲು ಹರಿಯಾಣದ ಸಂಬಂಧವಿಲ್ಲದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರಾಜೇಶ್ವರಿ ಪರಸ

ಜನವರಿ 4 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಅಯೋಧ್ಯೆಯಲ್ಲಿ ದಲಿತ ಹುಡುಗನನ್ನು ಥಳಿಸಲಾಯಿತು ಎಂದು ಹೇಳಲು ಹರಿಯಾಣದ ಸಂಬಂಧವಿಲ್ಲದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಲಾಜಿಕಲಿ ಫ್ಯಾಕ್ಟ್ಸ್ ಪೊಲೀಸರು ಮತ್ತು ಬಾಲಕನ ಪೋಷಕರೊಂದಿಗೆ ಮಾತನಾಡಿದ್ದು, ಘಟನೆ ನಡೆದಿರುವುದು ಹರಿಯಾಣದಲ್ಲಿ, ಅಯೋಧ್ಯೆಯಲ್ಲಿ ಅಲ್ಲ ಎಂದು ಖಚಿತಪಡಿಸಿದ್ದಾರೆ.

ಹೇಳಿಕೆ ಏನು?

ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ರಾಮ ಮಂದಿರ ಜನವರಿ ೨೨ ರಂದು ಉದ್ಘಾಟನೆಗೊಳ್ಳಲಿದ್ದು ಹಲವಾರು ಗಣ್ಯರು ಪಾಲ್ಗೊಳ್ಳುವ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕಾರ್ಯಕ್ರಮದ ಮೊದಲು, ಅಯೋಧ್ಯೆಯಲ್ಲಿ ರಾಮಮಂದಿರದ 'ಸಮಾರಂಭ' ದ ಸಂದರ್ಭದಲ್ಲಿ ಹೂವುಗಳನ್ನು ಎಸೆದಿದ್ದಕ್ಕಾಗಿ ಜನರು ಹುಡುಗನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಆತನನ್ನು ಥಳಿಸುತ್ತಿರುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. 

ವೀಡಿಯೋದಲ್ಲಿ ಮಹಿಳಾ ನೃತ್ಯಗಾರರ ಗುಂಪು ನಡೆದುಕೊಂಡು ಹೋಗುತ್ತಿರುವಾಗ ಕೇಸರಿ ಬಟ್ಟೆಗಳನ್ನು ಧರಿಸಿದ ಜನರು ಕೆಲವು ವಾದ್ಯಗಳನ್ನು ನುಡಿಸುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ಒಂದು ಜಗಳವು ಪ್ರಾರಂಭವಾಗುತ್ತದೆ ಮತ್ತು ಇಬ್ಬರು ಪುರುಷರು ಕೆಂಪು ಸ್ವೆಟರ್‌ ಧರಿಸಿದ್ದ ಹುಡುಗನಿಗೆ ಹೊಡೆಯಲು ಪ್ರಾರಂಭಿಸುತ್ತಾರೆ ಮತ್ತು ಅವನು ನೆಲಕ್ಕೆ ಬೀಳುತ್ತಾನೆ. ವೀಡಿಯೋದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಹಿಂದಿಯಲ್ಲಿ “ಅವನನ್ನು ಏಕೆ ಹೊಡೆಯುತ್ತಿದ್ದೀರಿ?” ಎಂದು ಕೇಳುತ್ತಿರುವುದು ನಾವು ಹೇಳಬಹುದು. 

ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಈ ವೀಡಿಯೋವನ್ನು "ಅಯೋಧ್ಯೆಯಲ್ಲಿ ರಾಮಮಂದಿರದ ಸಮಾರಂಭದಲ್ಲಿ ಹೂವುಗಳನ್ನು ಎಸೆದಿದ್ದಕ್ಕಾಗಿ ಸಂಘಟಕರಿಂದ ಥಳಿಸಲ್ಪಟ್ಟ ದಲಿತ ಹುಡುಗ ವಿಷ್ಣು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಪೋಷ್ಟ್ ಸುಮಾರು ೨೯,೬೦೦  ವೀಕ್ಷಣೆಗಳನ್ನು ಹೊಂದಿತ್ತು. ಈ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫೇಸ್‌ಬುಕ್‌ನಲ್ಲಿ ಇದೇ ರೀತಿಯ ಹೇಳಿಕೆಯೊಂದಿಗೆ ಹಂಚಿಕೊಂಡ ಮತ್ತೊಂದು ಪೋಷ್ಟ್ ಅನ್ನು ಇಲ್ಲಿ ನೋಡಬಹುದು.

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಸತ್ಯ ಏನು?

ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಡಿಸೆಂಬರ್ ೨೪, ೨೦೨೩ ರಂದು ಈಟಿವಿ ಭಾರತ್ ಹರಿಯಾಣದ ಹಿಂದಿ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ಯಿತು.ಈ ವರದಿಯ ಪ್ರಕಾರ, ಹರಿಯಾಣದ ಫರಿದಾಬಾದ್‌ನಲ್ಲಿ ಎರಡು ದಿನಗಳ ಗೀತಾ ಜಯಂತಿ ಆಚರಣೆಯನ್ನು ಆಯೋಜಿಸಿದಾಗ ಇದರಲ್ಲಿ ಹಲವಾರು ಶಾಲಾ ಮಕ್ಕಳು ಭಾಗವಹಿಸಿದ್ದರು. ಈ ಘಟನೆಯ ಹಿನ್ನಲೆಯಲ್ಲಿ ವೈರಲ್ ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಹುಡುಗನಿಗೆ ಥಳಿಸಿದ್ದಾರೆ ಎಂದು ವರದಿಯು ಗಮನಿಸಿದೆ. ಈ ವರದಿಯ ಪ್ರಕಾರ, ಬಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ಇಬ್ಬರು ಪುರುಷರು ಶಿಕ್ಷಕರು. ಈ ವರದಿಯೊಂದಿಗೆ ಹಂಚಿಕೊಳ್ಳಲಾದ ವೀಡಿಯೋ ವೈರಲ್ ವೀಡಿಯೋದಲ್ಲಿ ಕಂಡುಬರುವ ಅದೇ ದೃಶ್ಯಗಳನ್ನು ಹೊಂದಿದೆ.

ಹಿಂದೂಸ್ತಾನ್ ಟೈಮ್ಸ್‌ನ ಮತ್ತೊಂದು ಸುದ್ದಿ ವರದಿಯನ್ನು ನಾವು ಕಂಡುಕೊಂಡೆವು. ಇದು  "ಇಬ್ಬರು ಫರಿದಾಬಾದ್ ಶಿಕ್ಷಕರ ಮೇಲೆ ೧೫ ವರ್ಷದ ಬಾಲಕನ ಮೇಲೆ ಹಲ್ಲೆ ಮಾಡಿದ ಹೆನಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ" ಎಂಬ ಶೀರ್ಷಿಕೆಯನ್ನು ಹೊಂದಿದೆ. ೨೦೨೩ರ ಡಿಸೆಂಬರ್ ೨೨ ರಂದು ನಡೆದ ಶಾಲಾ ಕಾರ್ಯಕ್ರಮವೊಂದರಲ್ಲಿ ಹರ್ಯಾಣದ ಫರಿದಾಬಾದ್‌ನ ಇಬ್ಬರು ಶಿಕ್ಷಕರು ೧೫ ವರ್ಷದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಹುಡುಗನ ತಂದೆ ಪೊಲೀಸ್ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಈ ವರದಿಯು ಗಮನಿಸಿದೆ. "ಬಾಲಾಪರಾಧ ನ್ಯಾಯ ಕಾಯಿದೆಯ ಸೆಕ್ಷನ್ ೭೪ ಮತ್ತು ೭೫ ರು ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೨೩ (ದಾಳಿ) ಮತ್ತು ೫೦೬ ರ (ಅಪರಾಧ ಬೆದರಿಕೆ) ಅಡಿಯಲ್ಲಿ  ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಈ ವರದಿ ಹೇಳುತ್ತದೆ. 

ಲಾಜಿಕಲಿ ಫ್ಯಾಕ್ಟ್ಸ್ ನೊಂದಿಗೆ ಮಾತನಾಡಿದ ಫರಿದಾಬಾದ್ ಕೇಂದ್ರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಣಬೀರ್ ಸಿಂಗ್, ವೈರಲ್ ವೀಡಿಯೋದ ದೃಶ್ಯಗಳು ಹರಿಯಾಣದ ಫರಿದಾಬಾದ್‌ನಲ್ಲಿ ನಡೆದ ಗೀತಾ ಮಹೋಸ್ತವ್ ಕಾರ್ಯಕ್ರಮದಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಿದರು. ಹಲ್ಲೆಗೊಳಗಾದವರು ದಲಿತ ಸಮುದಾಯಕ್ಕೆ ಸೇರಿದವರಲ್ಲ ಎಂದು ಅವರು ನಮಗೆ ತಿಳಿಸಿದರು.

ಹುಡುಗನ ಪೋಷಕರನ್ನು ನಾವು  ಸಂಪರ್ಕಿಸಿದಾಗ ಅವರು ಈ ಘಟನೆಯು ಫರಿದಾಬಾದ್ ಸೆಕ್ಟರ್ ೧೨ ರಲ್ಲಿ ಸಂಭವಿಸಿದೆ ಎಂದು ಖಚಿತಪಡಿಸಿದರು. ಮತ್ತು ಕಾರ್ಯಕ್ರಮವೊಂದರಲ್ಲಿ ಶಿಕ್ಷಕರು ತಮ್ಮ ಮಗನನ್ನು ಥಳಿಸಿದ್ದಾರೆ ಹಾಗು ಅವನು ಇನ್ನೂ  ವೈದ್ಯಕೀಯ ಆರೈಕೆಯಲ್ಲಿದ್ದು, ಘಟನೆಯಿಂದ ಉಂಟಾದ ಆಘಾತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕುಟುಂಬದವರು ಹೇಳಿದರು. 

ಅಯೋಧ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಬಿಪಿ ಲೈವ್‌ ನ್ಯೂಸ್ ನ ಗ್ರೌಂಡ್ ರಿಪೋರ್ಟರ್ ರಿಷಿ ಗುಪ್ತ ಅವರನ್ನು ಸಂಪರ್ಕಿಸಿದೆವು- ಅಯೋಧ್ಯೆಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಖಚಿತಪಡಿಸಿದರು. "ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭದ ದೃಶ್ಯಗಳು ವೈರಲ್ ವೀಡಿಯೋದಲ್ಲಿ ಕಂಡುಬರುವ ದೃಶ್ಯಗಳಿಗಿಂತ ಭಿನ್ನವಾಗಿವೆ" ಎಂದು ಅವರು ನಮಗೆ ತಿಳಿಸಿದರು. 

ಅಯೋಧ್ಯೆ ಪೊಲೀಸರು ಈ ಘಟನೆಯನ್ನು ಕುರಿತು ಎಕ್ಸ್ ನಲ್ಲಿ ಲಿಖಿತ ಸ್ಪಷ್ಟೀಕರಣವನ್ನು ನೀಡಿದ್ದಾರೆ. ವೀಡಿಯೋ ಅಯೋಧ್ಯೆಯದಲ್ಲ ಮತ್ತು ಅಯೋಧ್ಯೆಯಲ್ಲಿ ದಲಿತ ಹುಡುಗನನ್ನು ಥಳಿಸಲಾಗಿದೆ ಎಂಬ ಹೇಳಿಕೆಗಳು ಸುಳ್ಳು ಎಂದು ಹೇಳಿದ್ದಾರೆ.

ತೀರ್ಪು

ಹರ್ಯಾಣದ ಫರಿದಾಬಾದ್‌ನಲ್ಲಿ ಇಬ್ಬರು ಶಿಕ್ಷಕರು ೧೫ ವರ್ಷದ ಬಾಲಕನಿಗೆ ಥಳಿಸಿದ ವೀಡಿಯೋ ವೈರಲ್ ಆಗಿದ್ದು, ಅಯೋಧ್ಯೆಯಲ್ಲಿ ದಲಿತ ಬಾಲಕನ ಮೇಲೆ ಹಲ್ಲೆ ನಡೆದಿದೆ ಎಂಬ ತಪ್ಪಾದ ಹೇಳಿಕೆಯೊಂದಿಗೆ ಶೇರ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು  ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ