ಮೂಲಕ: ರಜಿನಿ ಕೆ.ಜಿ
ಫೆಬ್ರವರಿ 8 2023
ತಮಿಳುನಾಡು ಪೊಲೀಸರು ರಾಜ್ಯದಲ್ಲಿ ಜಲ್ಲಿಕಟ್ಟು ಅಥವಾ ಕಂಬಳದಂತಹ ಪ್ರಾಣಿಗಳ ಕ್ರೀಡೆಗಳಿಗೆ ಯಾವುದೇ ನಿಷೇಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂದರ್ಭ
ತಮಿಳುನಾಡು ಪೊಲೀಸರು ಮಾರ್ಚ್ ವರೆಗೆ ರಾಜ್ಯದಲ್ಲಿ ಎಲ್ಲಾ ಪ್ರಾಣಿಗಳ ಕ್ರೀಡೆಗಳನ್ನು ನಿಷೇಧಿಸಿದ್ದಾರೆ ಎಂದು ಹೇಳುವ ಟ್ವೀಟ್ ಇತ್ತೀಚೆಗೆ ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಯೂಟ್ಯೂಬರ್ ಸಾವುಕ್ಕು ಶಂಕರ್ ಅವರು ಹಂಚಿಕೊಂಡ ಟ್ವೀಟ್ ಅನ್ನು ಫೆಬ್ರವರಿ ೨, ೨೦೨೩ ರಂದು ಪೋಷ್ಟ್ ಮಾಡಲಾಗಿದೆ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು-ಬೆಂಗಳೂರು ಹೆದ್ದಾರಿಯನ್ನು ಸಾವಿರಾರು ಜನರು ತಡೆದು "ಈರುತ್ತು ವಿದು" ಅಥವಾ ಜಲ್ಲಿಕಟ್ಟುಗೆ ಅನುಮತಿ ನೀಡಲು ಜಿಲ್ಲಾಡಳಿತದ ನಿರಾಕರಣೆಯನ್ನು ಪ್ರತಿಭಟಿಸಿದರು (ಸಾಂಪ್ರದಾಯಿಕ ಬುಲ್‌ಫೈಟಿಂಗ್ ಕ್ರೀಡೆ). ಹಲವಾರು ಸುದ್ದಿ ವರದಿಗಳ ಪ್ರಕಾರ, ಪ್ರತಿಭಟನೆಯು ಗಂಭೀರ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಸೃಷ್ಟಿಸಿದೆ, ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುವಾಗ ಕನಿಷ್ಠ ೧೫ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೃಷ್ಣಗಿರಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಶಂಕರ್ ಇಂಗ್ಲೀಷಲ್ಲಿ ಟ್ವೀಟ್ ಮಾಡಿದ್ದಾರೆ: "ಮೂಲಗಳು: ಎಡಿಜಿಪಿ ಎಲ್ & ಒ (ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆಯ)) ಎಲ್ಲಾ ಪ್ರಾಣಿ ಕ್ರೀಡೆಗಳಾದ ಜಲ್ಲಿಕಟ್ಟು, ಕಂಬಳ ಇತ್ಯಾದಿಗಳನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದ್ದಾರೆ. ಅಂತಹ ಎಲ್ಲಾ ಅನುಮತಿ ಕೋರಿಕೆಯನ್ನು ತಿರಸ್ಕರಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಶ್ರೇಣಿಯ ಡಿಐಜಿಗಳು (ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್) ಎಸ್‌ಪಿಗಳೊಂದಿಗೆ (ಪೊಲೀಸ್ ವರಿಷ್ಠಾಧಿಕಾರಿ) ಚರ್ಚಿಸಬೇಕು ಮತ್ತು ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.” ಮತ್ತೊಂದು ಟ್ವೀಟ್‌ನಲ್ಲಿ ಅವರು ಹೀಗೆ ಹೇಳಿದ್ದಾರೆ, “ಎಡಿಜಿಪಿ ಎಲ್ & ಒ ಅವರ ಈ ಆದೇಶವು ಮಾರ್ಚ್ ಅಂತ್ಯದವರೆಗೆ ಜಾರಿಯಲ್ಲಿರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇಂದು ಹೊಸೂರಿನಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ನಂತರ ಸುತ್ತೋಲೆಯನ್ನು ಹೊರಡಿಸಲಾಗಿದೆ.”
ವಾಸ್ತವವಾಗಿ
ಜಲ್ಲಿಕಟ್ಟು ಅಥವಾ ಕಂಬಳ (ಸಾಂಪ್ರದಾಯಿಕ ಎಮ್ಮೆ ಓಟ) ದಂತಹ ಪ್ರಾಣಿ ಕ್ರೀಡೆಗಳನ್ನು ನಿಷೇಧಿಸುವ ಸುತ್ತೋಲೆಯನ್ನು ತಮಿಳುನಾಡು ಪೊಲೀಸರು ಹೊರಡಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ತಮಿಳುನಾಡು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕೆ. ಶಂಕರ್ ಅವರನ್ನು ಲಾಜಿಕಲಿ (Logically) ಸಂಪರ್ಕಿಸಿತು. ಪೊಲೀಸ್ ಅಧಿಕಾರಿ ಲಾಜಿಕಲಿಗೆ, "ಈ ಸುದ್ದಿ ಸುಳ್ಳು, ಜಲ್ಲಿಕಟ್ಟು ನಿಷೇಧಿಸುವ ಬಗ್ಗೆ ಎಡಿಜಿಪಿ ಅಥವಾ ಎಡಿಜಿಪಿ ಕೇಂದ್ರ ಕಚೇರಿಯಿಂದ ಯಾವುದೇ ಸುತ್ತೋಲೆ ಹೊರಡಿಸಲಾಗಿಲ್ಲ" ಎಂದು ಹೇಳಿದರು. ತಮಿಳುನಾಡು ಪೊಲೀಸರ ಅಧಿಕೃತ ಹ್ಯಾಂಡಲ್ ಕೂಡ ಟ್ವಿಟರ್‌ನಲ್ಲಿ ಹೇಳಿಕೆಯನ್ನು ನಿರಾಕರಿಸಿದೆ. ಫೆಬ್ರವರಿ ೨ ರಂದು ಸವುಕ್ಕು ಶಂಕರ್ ಅವರ ಟ್ವೀಟ್ ಅನ್ನು ಉಲ್ಲೇಖಿಸಿ, ತಮಿಳುನಾಡು ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್ ಪೋಷ್ಟ್ ಮಾಡಿದೆ: "ಇದು ಸಂಪೂರ್ಣ ತಪ್ಪು ಮಾಹಿತಿ. ಅಂತಹ ಯಾವುದೇ ಸುತ್ತೋಲೆಯನ್ನು ಹೊರಡಿಸಲಾಗಿಲ್ಲ. ಅಂತಹ ತಪ್ಪು ಮಾಹಿತಿಯನ್ನು ಹರಡುವ ಯಾವುದೇ ವ್ಯಕ್ತಿಯ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲಾಗುವುದು."
ಜಲ್ಲಿಕಟ್ಟು, ಗೂಳಿ ಕಾಳಗ ಅಥವಾ ಇತರ ಸ್ಪರ್ಧೆಗಳಿಗೆ ಯಾವುದೇ ನಿಷೇಧವಿಲ್ಲ ಎಂದು ತಮಿಳುನಾಡು ಡಿಜಿಪಿ ಹೇಳಿದ್ದಾರೆ ಎಂದು ತಮಿಳು ಸುದ್ದಿ ವಾಹಿನಿ ಥಂತಿ ಟಿವಿ ವರದಿ ಮಾಡಿದೆ. “ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವದಂತಿ ತಪ್ಪು. ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಮನಪ್ಪಾರೈ ಪಟ್ಟಣದಲ್ಲಿ ನಡೆದ ಜಲ್ಲಿಕಟ್ಟು ಕಾರ್ಯಕ್ರಮದ ನೇರ ಪ್ರಸಾರವನ್ನು ಫೆಬ್ರವರಿ ೨, ೨೦೨೩ ರಂದು ಪ್ರಾದೇಶಿಕ ಸುದ್ದಿ ಸಂಸ್ಥೆ ಸನ್ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ನಾವು ಕಂಡುಕೊಂಡಿದ್ದೇವೆ, ಇದು ತಮಿಳುನಾಡಿನ ಹಲವು ಭಾಗಗಳಲ್ಲಿ ಜಲ್ಲಿಕಟ್ಟು ನಡೆಸಲಾಗಿದೆ ಎಂದು ಸೂಚಿಸುತ್ತದೆ. ವೀಡಿಯೋ ಶೀರ್ಷಿಕೆ: "ಲೈವ್ : ಮಣಪರೈ ಜಲ್ಲಿಕಟ್ಟು ೨೦೨೩| ಮನಪಾರೈ ಜಲ್ಲಿಕಟ್ಟು ಉತ್ಸವ | ಸನ್ ನ್ಯೂಸ್ ಲೈವ್."
ಸಾಕಷ್ಟು ಸುರಕ್ಷತಾ ಮುನ್ನೆಚ್ಚರಿಕೆಗಳ ಕೊರತೆಯಿಂದಾಗಿ ಕೃಷ್ಣಗಿರಿ ಜಿಲ್ಲಾಡಳಿತ ಜಲ್ಲಿಕಟ್ಟು ನಡೆಸಲು ಅನುಮತಿ ನೀಡಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಹಲವು ವರ್ಷಗಳಿಂದ ಜಲ್ಲಿಕಟ್ಟು ಮೆರವಣಿಗೆಯಲ್ಲಿ ಭಾಗವಹಿಸುವವರು ಮತ್ತು ಪ್ರಾಣಿಗಳ ಸುರಕ್ಷತೆಯ ಬಗ್ಗೆ ಹಲವಾರು ಕಾಳಜಿಗಳನ್ನು ಎತ್ತಲಾಗಿದೆ. ಜನವರಿ ೧೬, ೨೦೨೩ ರಂದು, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕಾರ್ಯಕ್ರಮದ ಸಮಯದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಗೂಳಿ ಪಳಗಿಸುವ ಮತ್ತು ಪ್ರೇಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ.
ತೀರ್ಪು
ಫೆಬ್ರವರಿ ೨ ರಂದು ಜಲ್ಲಿಕಟ್ಟು ಮತ್ತು ಇತರ ಸಾಂಪ್ರದಾಯಿಕ ಪ್ರಾಣಿ ಕ್ರೀಡೆಗಳ ಮೇಲೆ ರಾಜ್ಯಾದ್ಯಂತ ನಿಷೇಧ ಹೇರುವ ಸುತ್ತೋಲೆ ಹೊರಡಿಸಿರುವ ವದಂತಿಗಳನ್ನು ತಮಿಳುನಾಡು ಪೊಲೀಸರು ತಳ್ಳಿಹಾಕಿದ್ದಾರೆ. ಅದೇ ದಿನ ತಮಿಳುನಾಡಿನ ಹಲವು ಕಡೆ ಜಲ್ಲಿಕಟ್ಟು ಕಾರ್ಯಕ್ರಮಗಳು ನಡೆದವು. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.