ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 21 2023
ಶಾಲೆಗಳಲ್ಲಿ ತಯಾರಿಸುವ ಬಿಸಿಯೂಟವು ಆರೋಗ್ಯಕರ ಮತ್ತು ಸುರಕ್ಷಿತವಾಗಿರಲಿ ಎಂದು ಡ್ರೆಸ್ ಕೋಡ್ ಅನ್ನು ಖಚಿತಪಡಿಸಲಾಗಿದೆ. ಈ ಮಾರ್ಗಸೂಚಿಯ ಹಿಂದೆ ಯಾವುದೇ ಕೋಮು ಉದ್ದೇಶವಿಲ್ಲ.
ಸಂದರ್ಭ
ಕರ್ನಾಟಕದಲ್ಲಿ ಕಾಂಗ್ರೆಸ್ ಹೊರಡಿಸಿರುವ ಸುತ್ತೋಲೆಯಲ್ಲಿ, ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮಹಿಳಾ ಕಾರ್ಮಿಕರು ಬಳೆಗಳನ್ನು ಧರಿಸಬಾರದೆಂದು ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ), ಕಾಂಗ್ರೆಸ್ ರಾಜ್ಯದಲ್ಲಿ 'ಹಿಂದೂ ಆಚರಣೆಗಳನ್ನು ಹತ್ತಿಕ್ಕುತ್ತಿದೆ' ಎಂದು ಆರೋಪಿಸಿದೆ.
ಜುಲೈ ೧೫ ರಂದು ಪೋಷ್ಟ್ ಮಾಡಿದ ಟ್ವೀಟ್‌ನಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, "ಹಿಂದೂಗಳ ವಿರುದ್ಧ ಸದಾ ವಿಷಕಾರುವ ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ದ್ವೇಷದ ಆದೇಶ ಹೊರಬಿದ್ದಿದೆ .ʼಬಿಸಿಯೂಟ ಕಾರ್ಯಕರ್ತೆಯರುʼ ಕೈಗೆ ಬಳೆ ಧರಿಸಬಾರದು ಎಂದಿರುವ ಕಾಂಗ್ರೆಸಿಗರು ಆ ಬಳೆಗಳನ್ನು ತಾವು ಧರಿಸಿಕೊಳ್ಳಬೇಕೆಂದಿದ್ದಾರೆಯೇ? ಹಿಂದೂ ಆಚರಣೆಗಳನ್ನು ಹತ್ತಿಕ್ಕಬೇಕೆಂಬ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ." ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಬಿಸಿಯೂಟ ತಯಾರಿಸುವ ಮಹಿಳಾ ಕಾರ್ಮಿಕರು ಬಳೆಗಳನ್ನು ಧರಿಸುವುದನ್ನು ನಿಷೇಧಿಸಿದೆ ಎಂಬ ಹೇಳಿಕೆಯನ್ನು ಹಲವಾರು ಬಲಪಂಥೀಯ ಗುಂಪುಗಳು ಆನ್‌ಲೈನ್‌ನಲ್ಲಿ ಹಂಚಿಕೊಂಡಿವೆ. ಅನೇಕ ಪೋಷ್ಟ್ ಗಳು ಕಾಂಗ್ರೆಸ್ ಅನ್ನು "ಹಿಂದೂ ವಿರೋಧಿ" ಎಂದು ಆರೋಪಿಸಿವೆ ಮತ್ತು ಇಸ್ಲಾಮೋಫೋಬಿಕ್ ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ.
ಆದರೆ, ಕರ್ನಾಟಕ ಸರ್ಕಾರವು ಡ್ರೆಸ್ ಕೋಡ್ ಕುರಿತು ಹೊರಡಿಸಿರುವ ನಿರ್ದೇಶನವು ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿದೆ ಮತ್ತು ಇದರ ಹಿಂದೆ ಯಾವುದೇ ಕೋಮುವಾದಿ ಉದ್ದೇಶವಿಲ್ಲ.
ವಾಸ್ತವವಾಗಿ
ಭಾರತದಲ್ಲಿನ ಸರ್ಕಾರಿ ಶಾಲೆಗಳಲ್ಲಿ ೧ ರಿಂದ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಪ್ರಾಯೋಜಿತ ಯೋಜನೆಯಾದ 'ಪ್ರಧಾನ ಮಂತ್ರಿ ಪೋಶನ್ ಶಕ್ತಿ ನಿರ್ಮಾಣ್ (ಪಿಎಂ ಪೋಷನ್)' ಅಡಿಯಲ್ಲಿ ಬಿಸಿಯಾಗಿ-ಬೇಯಿಸಿದ ಊಟವನ್ನು ಒದಗಿಸುತ್ತದೆ. ಇದನ್ನು ಮೊದಲು ಬಿಸಿಯೂಟ ಯೋಜನೆ ಎಂದು ಕರೆಯಲಾಗುತ್ತಿತ್ತು. ಪತ್ರಿಕಾ ಮಾಹಿತಿ ಬ್ಯೂರೋದಲ್ಲಿನ (ಪಿಐಬಿ) ಹೇಳಿಕೆಯ ಪ್ರಕಾರ, ಕೇಂದ್ರ ಸರ್ಕಾರವು ಭಾರತದಾದ್ಯಂತ ೧೧.೨೦ ಲಕ್ಷ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಯೋಜನೆಯನ್ನು ಪ್ರಾಯೋಜಿಸಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಕರ್ನಾಟಕ ಸರ್ಕಾರವು ಕಲಬುರ್ಗಿ ವಿಭಾಗದ ಸಾರ್ವಜನಿಕ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯಲ್ಲಿ ಸ್ವಚ್ಛತೆ, ನೈರ್ಮಲ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಪಡೆಯನ್ನು ರಚಿಸಿದೆ. ಟಾಸ್ಕ್ ಫೋರ್ಸ್ ರಚನೆಯ ನಂತರ ರಾಜ್ಯ ಸರ್ಕಾರ ಜುಲೈ ೧೦ ರಂದು ಸುತ್ತೋಲೆ ಹೊರಡಿಸಿದ್ದು, ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಶಾಲೆಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದೆ.
ಪಿಎಂ ಪೋಶನ್ ಯೋಜನೆಯ ಕರ್ನಾಟಕ ನಿರ್ದೇಶಕರು ಹೊರಡಿಸಿದ ಅಧಿಕೃತ ಸುತ್ತೋಲೆಯನ್ನು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ. ಬಿಸಿಯೂಟವನ್ನು ತಯಾರಿಸಲು ಶಾಲಾ ಅಧಿಕಾರಿಗಳು ಅನುಸರಿಸಬೇಕಾದ ೧೨ ಮಾರ್ಗಸೂಚಿಗಳನ್ನು ಪಟ್ಟಿಮಾಡಲಾಗಿದೆ. ಪ್ರತಿದಿನ ಗುಡಿಸುವುದು ಮತ್ತು ಶುಚಿಗೊಳಿಸುವುದು ಹಾಗು ಕಂಟೇನರ್‌ಗಳಲ್ಲಿ ಆಹಾರವನ್ನು ಸರಿಯಾಗಿ ಸಂಗ್ರಹಿಸುವುದನ್ನು ಸೂಚಿಸಲಾಗಿದೆ, ಅದನ್ನು ಹೊರೆತುಪಡಿಸಿ ಪಠ್ಯಕ್ರಮದ ಟಿಪ್ಪಣಿಗಳು "ಅಡುಗೆ ಸಿಬ್ಬಂಧಿ ಏಪ್ರಾನ್, ತಲೆಗವಸು ಮತ್ತು ಕೈಗವಸುಗಳು ಧರಿಸುವುದು. ಕೈಗಳಲ್ಲಿ ಬಳೆಗಳನ್ನು ತೊಟ್ಟಿರಬಾರದು," ಎಂದು ಹೇಳುತ್ತದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಏನು ಹೇಳುತ್ತದೆ?
ಪ್ರಧಾನ ಮಂತ್ರಿ ಪೋಶನ್ ಯೋಜನೆಯ ಅನುಷ್ಠಾನಕ್ಕಾಗಿ ಶಿಕ್ಷಣ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳನ್ನು ಲಾಜಿಕಲಿ ಫ್ಯಾಕ್ಟ್ಸ್ ಪರಿಶೀಲಿಸಿದೆ. ಈ ಇತ್ತೀಚಿನ ಮಾರ್ಗಸೂಚಿಗಳನ್ನು ಶಾಲಾ ಶಿಕ್ಷಣ ಸಚಿವಾಲಯದ ಇಲಾಖೆಯು ಡಿಸೆಂಬರ್ ೨೦೨೨ ರಲ್ಲಿ ಬಿಡುಗಡೆ ಮಾಡಿದೆ. 'ವೈಯಕ್ತಿಕ ನೈರ್ಮಲ್ಯ, ಶುಚಿತ್ವ ಮತ್ತು ಕುಕ್ ಕಮ್ ಹೆಲ್ಪೇರ್ಸ್ ಗಳ ಆರೋಗ್ಯ ತಪಾಸಣೆ' ವಿಭಾಗದ ಅಡಿಯಲ್ಲಿ ಒಂದು ಸೂಚನೆಯು ಹೀಗಿದೆ: "ನೇಲ್ ಪಾಲಿಷ್ ಅಥವಾ ಕೃತಕ ಉಗುರುಗಳನ್ನು ಧರಿಸಬಾರದು ಏಕೆಂದರೆ ಅವು ಅಡುಗೆಗಳಲ್ಲಿ ಬಿದ್ದರೆ ಆಹಾರದ ಸುರಕ್ಷತೆಯನ್ನು ಕಾಪಾಡುವುದರಲ್ಲಿ ಅಡ್ಡಿಯಾಗುತ್ತದೆ. ಯಾವುದೇ ಕೈಗಡಿಯಾರಗಳು, ಉಂಗುರಗಳು, ಆಭರಣಗಳು ಮತ್ತು ಬಳೆಗಳನ್ನು ಅಡುಗೆ ಮಾಡುವಾಗ, ಬಡಿಸುವಾಗ ಮತ್ತು ವಿತರಣೆಯ ಸಮಯದಲ್ಲಿ ಹಾಗು ಆಹಾರವು ಮಾಲಿನ್ಯ ಅಪಾಯವಿರುವಲ್ಲಿ ಧರಿಸಬಾರದು," ಎಂದು ಹೇಳುತ್ತದೆ. ಡ್ರೆಸ್ ಕೋಡ್ ಕುರಿತು ಕರ್ನಾಟಕ ಸರ್ಕಾರದ ನಿರ್ದೇಶನವು ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಆಧರಿಸಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.
ನಿರ್ದೇಶನದ ಮೇಲೆ ಬಂದ ಚರ್ಚೆಗಳ ನಂತರ ಜುಲೈ ೧೬ ರಂದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟರ್‌ನಲ್ಲಿ ಸ್ಪಷ್ಟೀಕರಣವನ್ನು ಪೋಷ್ಟ್ ಮಾಡಿದ್ದರು, “ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಪೋಶನ್ ಯೋಜನೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ, ಅಲ್ಲಿ ಅವರು ಡ್ರೆಸ್ ಕೋಡ್ ಅನ್ನು ನೀಡಿದ್ದಾರೆ ಮತ್ತು ಮಹಿಳಾ ಸಿಬ್ಬಂದಿ ಅಡುಗೆ ಮಾಡುವಾಗ ಬಳೆಗಳನ್ನು ಧರಿಸದಂತೆ ಸೂಚಿಸಿದ್ದಾರೆ” ಎಂದು ಹೇಳಿದ್ದಾರೆ. ಅವರ ಟ್ವೀಟ್ ಕೇಂದ್ರ ಯೋಜನೆಯ ಮಾರ್ಗಸೂಚಿಗಳ ಸ್ಕ್ರೀನ್‌ಶಾಟ್ ಅನ್ನು ಸಹ ಒಳಗೊಂಡಿದೆ.
ತೀರ್ಪು
ಬಿಸಿಯೂಟ ಅಡುಗೆ ಮಾಡುವಾಗ ಮಹಿಳಾ ಕಾರ್ಮಿಕರು ಬಳೆಗಳನ್ನು ಧರಿಸುವುದನ್ನು ನಿಷೇಧಿಸುವ ನಿರ್ದೇಶನವು ಸ್ವಚ್ಛತೆ, ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ನಿಯೋಜಿಸಲಾಗಿದೆ ಮತ್ತು ಅದರ ಹಿಂದೆ ಯಾವುದೇ ಧಾರ್ಮಿಕ ಉದ್ದೇಶವಿಲ್ಲ. ಇದು ಕರ್ನಾಟಕವು ಪರಿಚಯಿಸಿದ ಹೊಸ ಆದೇಶವಲ್ಲ ಆದರೆ ಕೇಂದ್ರ ಪ್ರಾಯೋಜಿತ ಪಿಎಂ ಪೋಶನ್ ಯೋಜನೆಯಡಿ ಹೊರಡಿಸಲಾದ ನಿರ್ದೇಶನವಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತಿದ್ದೇವೆ.