ಮುಖಪುಟ ಇಲ್ಲ, ಆರ್ ಎಸ್ ಎಸ್೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕುರಿತು ಯಾವುದೇ ಸಮೀಕ್ಷೆ ನೆಡೆಸಿಲ್ಲ

ಇಲ್ಲ, ಆರ್ ಎಸ್ ಎಸ್೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕುರಿತು ಯಾವುದೇ ಸಮೀಕ್ಷೆ ನೆಡೆಸಿಲ್ಲ

ಮೂಲಕ: ರಜಿನಿ ಕೆ.ಜಿ

ಮಾರ್ಚ್ 21 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಆರ್ ಎಸ್ ಎಸ್೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕುರಿತು ಯಾವುದೇ ಸಮೀಕ್ಷೆ ನೆಡೆಸಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಆರ್ ಎಸ್ ಎಸ್ ಸಮೀಕ್ಷೆಯ ವರದಿಯನ್ನು ಬಿಂಬಿಸುವ ಕನ್ನಡ ಪ್ರಭ ಪತ್ರಿಕೆಯ ನಕಲಿ ಪ್ರಕಟಣೆಯ ತುಣುಕೊಂದು ಹರಿದಾಡುತ್ತಿದೆ. ಅಂತಹ ಯಾವುದೇ ಸಮೀಕ್ಷೆಯನ್ನು ಸಂಘಟನೆ ನಡೆಸಿಲ್ಲ.

ಸಂದರ್ಭ

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಭವನೀಯ ಫಲಿತಾಂಶದ ಕುರಿತು ಆರ್ ಎಸ್ ಎಸ್ ಸಮೀಕ್ಷೆ ನೆಡೆಸಿರುವ ಬಗ್ಗೆ ಪತ್ರಿಕೆಯ ತುಣುಕೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು ಎಂದು ಹೇಳಲಾಗಿದೆ. ಫೇಸ್‌ಬುಕ್ ಬಳಕೆದಾರರು ಮಾರ್ಚ್ ೬, ೨೦೨೩ ರಂದು ಪತ್ರಿಕೆಯ ತುಣಕನ್ನು ಹಂಚಿಕೊಂಡಿದ್ದಾರೆ ಮತ್ತು ಬರೆದಿದ್ದಾರೆ: “ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲು ಕಾಣಲಿದೆಯೇ??? ಆರ್ ಎಸ್ ಎಸ್ ಆಂತರಿಕ ಸಮೀಕ್ಷೆ ಬಹಿರಂಗ.. ೨೦೨೩ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.” ಫೇಸ್‌ಬುಕ್ ಪೋಷ್ಟ್ ಮತ್ತು ಇತರ ರೀತಿಯ ಪೋಷ್ಟ್ಗಳಲ್ಲಿ ಹಂಚಿಕೊಂಡ ಪತ್ರಿಕೆಯ ತುಣುಕಿನ ಪ್ರಕಾರ, ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಂತರಿಕ ಸಮೀಕ್ಷೆಯನ್ನು ನಡೆಸಿತು ಮತ್ತು ಮುಂಬರುವ ಹದಿನಾರನೇ ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ನಷ್ಟವಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಮೇ ತಿಂಗಳಲ್ಲಿ ನಡೆಯಲಿರುವ ೨೨೪ ಸ್ಥಾನಗಳ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ೧೧೫-೧೨೦ ಸ್ಥಾನಗಳು, ಬಿಜೆಪಿ ೬೫-೭೦ ಸ್ಥಾನಗಳು ಮತ್ತು ಜನತಾ ದಳ (ಜಾತ್ಯತೀತ) ೨೯ -೩೪ ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಯು ಅಂದಾಜಿಸಿದೆ. ಇದಲ್ಲದೆ, ಆರ್ ಎಸ್ ಎಸ್ ಕಾರ್ಯಾಧ್ಯಕ್ಷ ವಿ ನಾಗರಾಜ್ ಅವರು ಸಮೀಕ್ಷೆಯ ಫಲಿತಾಂಶಗಳನ್ನು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರಿಗೆ ಸಲ್ಲಿಸಿದ್ದಾರೆ ಎಂದು ಪತ್ರಿಕೆಯ ತುಣುಕು ಹೇಳುತ್ತದೆ.

ವಾಸ್ತವವಾಗಿ

ಮಾರ್ಚ್ ೧೫, ೨೦೨೩ ರಂದು, ಟ್ವೀಟ್ ಮೂಲಕ ಕನ್ನಡ ಪ್ರಭ ಭಾಗವಾಗಿರುವ ಮೀಡಿಯಾ ಗ್ರೂಪ್, ಏಷ್ಯಾನೆಟ್ ನ್ಯೂಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಕಲ್ರಾ ಅವರು ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ. ವೈರಲ್ ಪತ್ರಿಕೆಯ ತುಣಕನ್ನು ಉಲ್ಲೇಖಿಸಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ: “@RSSorg ನಡೆಸಿದ ಮತ್ತು @kprabhanews ನಲ್ಲಿ ಪ್ರಸಾರವಾದ ಈ ಉದ್ದೇಶಿತ ಸಮೀಕ್ಷೆಯು ನಕಲಿಯಾಗಿದೆ. ಅಂತಹ ಯಾವುದೇ ಸಮೀಕ್ಷೆ ನಡೆದಿಲ್ಲ ಮತ್ತು ನಾವು ಅಂತಹ ಯಾವುದೇ ಸುದ್ದಿಯನ್ನು ಪ್ರಕಟಿಸಿಲ್ಲ. ನಾವು ಸೈಬರ್ ಪೊಲೀಸರಿಗೆ ದೂರು ನೀಡುತ್ತಿದ್ದೇವೆ. ನಮ್ಮ ಬ್ರ್ಯಾಂಡ್ ನೇರ, ದಿಟ್ಟ, ನಿರಂತರ ಪತ್ರಿಕೋದ್ಯಮವನ್ನು ಪ್ರತಿನಿಧಿಸುತ್ತದೆ ಮತ್ತು ಅದು ಎಂದಿಗೂ ರಾಜಿಯಾಗುವುದಿಲ್ಲ.” ಅದೇ ದಿನ, ಕನ್ನಡ ಪ್ರಭದ ಅಧಿಕೃತ ಟ್ವಿಟ್ಟರ್ ಖಾತೆಯು ಮತದಾನದ ಕುರಿತು ಆರ್ ಎಸ್ ಎಸ್ ನಡೆಸಿದ ಸಮೀಕ್ಷೆಯ ಬಗ್ಗೆ ಲೇಖನವನ್ನು ಪ್ರಕಟಿಸಿದೆ ಎಂಬ ಹೇಳಿಕೆಯನ್ನು ನಿರಾಕರಿಸಿದೆ. ಟ್ವೀಟ್‌ನಲ್ಲಿ ಕನ್ನಡ ಪ್ರಭ ಪತ್ರಿಕೆಯು ವೈರಲ್ ಪತ್ರಿಕೆಯ ತುಣುಕು ಮತ್ತು ಅದರ ಹೇಳಿಕೆಯನ್ನು 'ಸುಳ್ಳು ಸುದ್ದಿ' ಎಂದು ಕರೆದಿದೆ.

ಇತ್ತೀಚಿನ ಪೋಷ್ಟ್ಗಳಲ್ಲಿ ಹಂಚಿಕೊಂಡಿರುವ ಪತ್ರಿಕೆಯ ತುಣುಕು ನಕಲಿ ಎಂದು ಕನ್ನಡ ಪ್ರಭ ಮತ್ತು ಆರ್‌ಎಸ್‌ಎಸ್‌ನ ಮೂಲಗಳಿಂದ ಲಾಜಿಕಲಿ ದೃಢೀಕರಿಸಲು ಸಾಧ್ಯವಾಯಿತು. ನಾವು ಪತ್ರಿಕೆಯ ವೆಬ್‌ಸೈಟ್ ಅನ್ನು ಮತ್ತು ಇ-ಪೇಪರ್ ಆರ್ಕೈವ್ ಅನ್ನು ಸಹ ಪರಿಶೀಲಿಸಿದ್ದೇವೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ನ ಯಾವುದೇ ಆಂತರಿಕ ಸಮೀಕ್ಷೆಯ ಕುರಿತು ಇತ್ತೀಚಿನ ವರದಿಗಳು ಕಂಡುಬಂದಿಲ್ಲ. ಅಂತಹ ಸಮೀಕ್ಷೆಯ ವರದಿಗಳಿಗಾಗಿ ನಾವು ಇತರ ಸಂಬಂಧಿತ ಸುದ್ದಿ ಮೂಲಗಳನ್ನು ಸಹ ಹುಡುಕಿದ್ದೇವೆ ಆದರೆ ಸಮೀಕ್ಷೆಯ ಕುರಿತು ಯಾವುದೇ ವಿಶ್ವಾಸಾರ್ಹ ಸುದ್ದಿಯನ್ನು ನೋಡಲಿಲ್ಲ.

ಏಷ್ಯಾನೆಟ್‌ನ ಮಾತೃಸಂಸ್ಥೆಯಾದ ಜುಪಿಟರ್ ಕ್ಯಾಪಿಟಲ್‌ನ ಮಾಲಿಕರಾಗಿರುವ ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಉದ್ದೇಶಿತ ಪತ್ರಿಕೆ ತುಣಿಕಿನಲ್ಲಿ ಮಾಡಿದ ಹಕ್ಕುಗಳನ್ನು ತಳ್ಳಿಹಾಕಿದ್ದಾರೆ ಮತ್ತು ಲೇಖನ ಹಾಗು ಸಮೀಕ್ಷೆಯನ್ನು ನಕಲಿ ಎಂದು ಹೇಳಿದ್ದಾರೆ. 

ಐದು ವರ್ಷಗಳ ಹಿಂದೆ ೨೦೧೮ ರಲ್ಲಿ ಹದಿನೈದನೇ ಕರ್ನಾಟಕ ವಿಧಾನಸಭೆಗೆ ಚುನಾವಣೆಗೆ ಮುನ್ನ ಇದೇ ಪತ್ರಿಕೆಯ ತುಣಕನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂಬುದನ್ನು ಗಮನಿಸಬೇಕು. ಫ್ಯಾಕ್ಟ್-ಚೆಕಿಂಗ್ ಪ್ಲಾಟ್‌ಫಾರ್ಮ್ ಬೂಮ್ (BOOM ) ಮೇ ೨೦೧೮ ರಲ್ಲಿ ಇದೇ ಪತ್ರಿಕೆಯ ತುಣಕನ್ನು ಮತ್ತು ವರದಿ ಮಾಡಿದ ಸಮೀಕ್ಷೆಯ ಬಗ್ಗೆ ಇದೇ ರೀತಿಯ ತಪ್ಪು ಹೇಳಿಕೆಗಳನ್ನು ನಿರಾಕರಿಸಿದೆ. ಆ ಸಮಯದಲ್ಲಿ, ಆರ್‌ಎಸ್‌ಎಸ್ ವಕ್ತಾರ ರಾಜೇಶ್ ಪದ್ಮಾರ್, ಆರ್‌ಎಸ್‌ಎಸ್ ಅಂತಹ ಯಾವುದೇ ಸಮೀಕ್ಷೆಯನ್ನು ನಡೆಸಿಲ್ಲ ಎಂದು ಬೂಮ್‌ಗೆ (BOOM) ಮಾಹಿತಿ ನೀಡಿದ್ದರು. ಕನ್ನಡ ಪ್ರಭ ಕೂಡ ಅಂತಹ ಯಾವುದೇ ಲೇಖನವನ್ನು ಪ್ರಕಟಿಸಿಲ್ಲ ಎಂದು ಖಚಿತಪಡಿಸಿತ್ತು. ಆದ್ದರಿಂದ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೃತ್ತಪತ್ರಿಕೆ ತುಣುಕು ನಕಲಿ ಮತ್ತು ೨೦೧೮ ರಲ್ಲಿ ತಳ್ಳಿಹಾಕಿದ ನಂತರ ಮತ್ತೆ ಮರುಕಳಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ.

ತೀರ್ಪು

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆ ಆರ್ ಎಸ್ ಎಸ್ ಸಮೀಕ್ಷೆಯ ಕುರಿತು ಯಾವುದೇ ಲೇಖನವನ್ನು ಪ್ರಕಟಿಸಿರುವುದನ್ನು ಕನ್ನಡ ಪ್ರಭ ಪತ್ರಿಕೆ ನಿರಾಕರಿಸಿದೆ. ವೈರಲ್ ಪತ್ರಿಕೆಯ ತುಣಕನ್ನು ಈ ಹಿಂದೆ ೨೦೧೮ ರಲ್ಲಿ ಹಂಚಿಕೊಳ್ಳಲಾಗಿತ್ತು ಮತ್ತು ಕನ್ನಡ ಪ್ರಭ ಪತ್ರಿಕೆಯು ಮತ್ತು ಆರ್‌ಎಸ್‌ಎಸ್‌ ನಿಂದ ನಕಲಿ ಎಂದು ಪರಿಗಣಿಸಲಾಗಿತ್ತು. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ