ಮೂಲಕ: ಅಂಕಿತಾ ಕುಲಕರ್ಣಿ
ಜೂನ್ 30 2023
ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಷ್ಟ್ ಗಳನ್ನು ಎಡಿಟ್ ಮಾಡಿ ತಪ್ಪಾದ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಸಂದರ್ಭ
ಕಳೆದ ವಾರ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ೧೩೫ ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ೬೬ ಸ್ಥಾನಗಳನ್ನು ಗಳಿಸಿತು. ಮೇ ೧೩, ೨೦೨೩ ರಂದು ಫಲಿತಾಂಶಗಳನ್ನು ಪ್ರಕಟಿಸಿದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣೆಯ ಬಗ್ಗೆ ಅನೇಕ ರೀತಿಯ ತಪ್ಪಾದ ನಿರೂಪಣೆಗಳು ಹರಿದಾಡತೊಡಗಿದವು. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಇನ್ಸ್ಟಾಗ್ರಾಮ್ ಸ್ಟೋರೀಸ್ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಅದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಚಿತ್ರಗಳನ್ನು ತೋರಿಸುತ್ತದೆ ಮತ್ತು ಅವರ ಪಕ್ಷವು ಕರ್ನಾಟಕ ಚುನಾವಣೆಯಲ್ಲಿ ಗೆದ್ದ ನಂತರ ಈ ಮೂಲಕ ಕೊಹ್ಲಿ ರಾಹುಲ್ ಗಾಂಧಿಯವರಿಗೆ ಪ್ರಶಂಸೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಒಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಗಾಂಧಿ ಕುಳಿತಿರುವ ಛಾಯಾಚಿತ್ರದಲ್ಲಿ ಕೊಹ್ಲಿ "ದಿ ಮ್ಯಾನ್, ದಿ ಮಿಥ್, ದಿ ಲೀಡರ್ @ರಾಹುಲ್‌ಗಾಂಧಿ" ಎಂದು ಬರೆದಿದ್ದಾರೆ, ಇನ್ನೊಂದರಲ್ಲಿ ಗಾಂಧಿ ವೇದಿಕೆಯ ಮೇಲೆ ನಿಂತಿದ್ದಾರೆ ಅದರಲ್ಲಿ, "ಇ ಸಲಾ ಸರ್ಕಾರ ನಮ್ದೇ @ರಾಹುಲ್‌ಗಾಂಧಿ" ಎಂದು ಬರೆದಿರುವುದನ್ನು ನಾವು ನೋಡಬಹುದು.
ಆದರೆ ಕೊಹ್ಲಿ ಅಭಿನಂದನೆಗಳನ್ನು ತಿಳಿಸಿದ್ದಾರೆ ಎನ್ನಲಾದ ಇನ್ಸ್ಟಾಗ್ರಾಮ್ ಸ್ಟೋರೀಸ್ ಗಳ ಸ್ಕ್ರೀನ್‌ಶಾಟ್ ಎಡಿಟ್ ಮಾಡಲಾಗಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ ಅಥವಾ ಅಭಿನಂದಿಸಿದ್ದಾರೆ ಎಂಬ ಹೇಳಿಕೆಗೆ ಯಾವುದೇ ಪುರಾವೆಗಳಿಲ್ಲ. ಈ ಚಿತ್ರಗಳನ್ನು ಜನಪ್ರಿಯ ವಿಡಂಬನೆ ಟ್ವಿಟರ್ ಖಾತೆಯಾದ 'ಡಾ. ನಿಮೋ ಯಾದವ್’ (ಟ್ವಿಟ್ಟರ್ ಹ್ಯಾಂಡಲ್ -@niiravmodi) ನಿಂದ ಹಂಚಿಕೊಳ್ಳಲಾಗಿದೆ ಆದರೆ ಅನೇಕ ಬಳಕೆದಾರರು ಇದನ್ನು ನಿಜವೆಂದು ನಂಬಿದ್ದಾರೆ.
ವಾಸ್ತವಾಗಿ
ಮೊದಲ ಸ್ಕ್ರೀನ್‌ಶಾಟ್‌ನಲ್ಲಿ ನಾವು ಹಲವಾರು ವ್ಯತ್ಯಾಸಗಳನ್ನು ಗಮನಿಸಿದ್ದೇವೆ, ಇದು ರಾಹುಲ್ ಗಾಂಧಿ ಕೈಯಲ್ಲಿ ಮೈಕ್‌ನೊಂದಿಗೆ ಕುಳಿತು ನಗುತ್ತಿರುವುದನ್ನು ತೋರಿಸುತ್ತದೆ.
ನಾವು ಕೊಹ್ಲಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಲಭ್ಯವಿರುವ ಇನ್‌ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ವೈರಲ್ ಚಿತ್ರಕ್ಕೆ ಹೋಲಿಸಿದೆವು ಮತ್ತು 'ಕೊಹ್ಲಿ' ಅವರ ಹೆಸರಲ್ಲಿ 'ಎಲ್' ಅಕ್ಷರದ ಫಾಂಟ್ ವಿಭಿನ್ನವಾಗಿರಿವುದನ್ನು ನಾವು ಗಮನಿಸಬಹುದು. ಆಪಲ್ ಮತ್ತು ಆಂಡ್ರಾಯ್ಡ್ ಫೋನ್‌ಗಳೆರಡರಿಂದಲೂ ತೆಗೆದ ಸ್ಕ್ರೀನ್‌ಶಾಟ್‌ಗಳು ವೈರಲ್ ಪೋಷ್ಟ್ ನಲ್ಲಿ ಕಂಡುಬರುವಂತೆ 'ಎಲ್' ಅಕ್ಷರಕ್ಕಿರುವ ಸುರುಳಿಯನ್ನು ತೋರಿಸುವುದಿಲ್ಲ. ಇದಲ್ಲದೆ, ವೈರಲ್ ಪೋಷ್ಟ್ ನಲ್ಲಿ ಇನ್ಸ್ಟಾಗ್ರಾಮ್ ಪರಿಶೀಲನೆ ಬ್ಯಾಡ್ಜ್ ನ ಸ್ಥಾನವೂ ವಿಭಿನ್ನವಾಗಿದೆ. ನಾವು ತೆಗೆದುಕೊಂಡ ಕೊಹ್ಲಿಯ ಇನ್ಸ್ಟಾಗ್ರಾಮ್ ಸ್ಟೋರೀಸ್ ನ ಸ್ಕ್ರೀನ್‌ಶಾಟ್‌ಗಳಲ್ಲಿ ಬ್ಯಾಡ್ಜ್ ನ ಸ್ಥಾನವು ಹೆಸರಿಗೆ ಅನುಗುಣವಾಗಿರುವುದನ್ನು ತೋರಿಸುತ್ತವೆ. ಇದಲ್ಲದೆ, ಕಾಂಗ್ರೆಸ್ ಗೆಲುವಿಗೆ ಗಾಂಧಿಯನ್ನು ಅಭಿನಂದಿಸಿ ಕೊಹ್ಲಿ ಇನ್ಸ್ಟಾಗ್ರಾಮ್ ಸ್ಟೋರಿ ಪೋಷ್ಟ್ ಮಾಡಿದ್ದೇಯಾದರೆ ಸುದ್ದಿ ವರದಿಗಳು ಇದನ್ನು ದಾಖಲಿಸುತ್ತಿದವು. ಆದರೆ ಆ ವಿಷಯವನ್ನು ಕುರಿತು ವರದಿ ಮಾಡಿದ ಯಾವುದೇ ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ. ಎಲ್ಲಾ ಪುರಾವೆಗಳು ಸ್ಕ್ರೀನ್‌ಶಾಟ್ ಅನ್ನು ಡಿಜಿಟಲಿ ನಿರ್ಮಿಸಲಾಗಿದೆ ಎಂದು ತೋರಿಸುತ್ತದೆ ಮತ್ತು ಕೊಹ್ಲಿ ಈ ಸ್ಟೋರೀಸ್ ಅನ್ನು ಪೋಷ್ಟ್ ಮಾಡಿಲ್ಲವೆಂದು ತಿಳಿದುಬರುತ್ತದೆ.
ಗಾಂಧಿ ನಿಂತಿರುವ ಎರಡನೇ ಸ್ಕ್ರೀನ್‌ಶಾಟ್‌ನಲ್ಲಿ "೫ ಮಿನಿಟ್ಸ್ ಆಗೋ" ಎಂಬ ಸಮಯದ ಮುದ್ರೆಯನ್ನು ನಾವು ನೋಡಬಹುದು ಹಾಗು ಗಾಂಧಿಯವರ ಫೋಟೋದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚಿಹ್ನೆಯಾದ ಕೈ ಕೆಳಗೆ ನೀಲಿ ಬಟ್ಟೆಯನ್ನು ನಾವು ಕಾಣಬಹುದು. ಕೊಲ್ಹಿ ಅವರ ನಿಜವಾದ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಎಡಿಟ್ ಮಾಡಿ ವೈರಲ್ ಸ್ಕ್ರೀನ್‌ಶಾಟ್ ಅನ್ನು ರಚಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
ಕೊಹ್ಲಿ ಮೇ ೧೨ ರಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಮೊದಲ ಶತಕವನ್ನು ಹೊಗಳುತ್ತಾ ಪೋಷ್ಟ್ ಅನ್ನು ಮಾಡಿದ್ದರು. ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ನೀಲಿ ಸಮವಸ್ತ್ರದಲ್ಲಿರುವ ಯಾದವ್ ಅವರ ಫೋಟೋವನ್ನು ಕೊಹ್ಲಿ ಹಂಚಿಕೊಂಡಿದ್ದರು ಮತ್ತು "ತುಲಾ ಮಾನ್ಲಾ ಭೌ @surya_14kumar,” ಎಂದು ಬರೆದಿದ್ದಾರೆ. ಆರ್‌ವಿಸಿಜೆ ಮೀಡಿಯಾ ಮೇ ೧೨ ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿಯ ಸ್ಟೋರಿಯ ಸ್ಕ್ರೀನ್‌ಶಾಟ್ ಅನ್ನು ಅಪ್‌ಲೋಡ್ ಮಾಡಿದೆ ಮತ್ತು ಅದಕ್ಕೆ ಶೀರ್ಷಿಕೆ: "ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೊಗಳಿದ್ದಾರೆ." ಎಂದು ಬರೆದಿದೆ. ಚಿತ್ರದಲ್ಲಿ, ಟೈಮ್ ಸ್ಟ್ಯಾಂಪ್ '೨ ಮಿನಿಟ್ಸ್ ಆಗೋ' ಎಂದು ತೋರುತ್ತದೆ. ಈ ಪುರಾವೆಯು ಕೊಹ್ಲಿ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಮೇ ೧೨ ರಂದು ಪೋಷ್ಟ್ ಮಾಡಿದ್ದಾರೆ, ಮೇ ೧೩ರ, ಕರ್ನಾಟಕ ಚುನಾವಣೆಯ ಎಣಿಕೆಯ ನಂತರವಲ್ಲ ಎಂದು ಸ್ಪಷ್ಟಪಡಿಸುತ್ತದೆ. ಇದಲ್ಲದೆ, ಫೋಟೋದಲ್ಲಿ ಯಾದವ್ ಧರಿಸಿರುವ ನೀಲಿ ತಂಡದ ಸಮವಸ್ತ್ರವು ಗಾಂಧಿಯವರ ಚಿತ್ರದ ಹಿನ್ನೆಲೆಯಲ್ಲಿ ಕಂಡುಬರುವ ನೀಲಿ ಟೀ ಶರ್ಟ್ ಆಗಿದ್ದು, ಇದು ಕೊಹ್ಲಿಯವರ ಮೇ ೧೨ ರ ಪೋಷ್ಟ್ ಅನ್ನು ಡಿಜಿಟಲಿ ಎಡಿಟ್ ಮಾಡಲಾಗಿದೆ ಎಂದು ದೃಢಪಡಿಸುತ್ತದೆ. ಹೆಚ್ಚಿನ ಸಂಶೋಧನೆಯ ನಂತರ, ಕರ್ನಾಟಕ ಚುನಾವಣೆಯಲ್ಲಿ ಕೊಹ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ನಮಗೆ ಕಂಡುಬಂದಿಲ್ಲ. ಕೊಹ್ಲಿ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಯಾವುದೇ ದಾಖಲೆಗಳೂ ಸಹ ಇಲ್ಲ.
ತೀರ್ಪು
ಎರಡೂ ವೈರಲ್ ಸ್ಕ್ರೀನ್‌ಶಾಟ್‌ಗಳನ್ನು ಎಡಿಟ್ ಮಾಡಲಾಗಿದೆ. ಒಂದು ಸ್ಕ್ರೀನ್‌ಶಾಟ್ ಸಂಪೂರ್ಣವಾಗಿ ಫ್ಯಾಬ್ರಿಕೇಟೆಡ್ ಆಗಿದ್ದು, ಮೇ ೧೨ರಂದು ಕೊಹ್ಲಿ ಸಹ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರನ್ನು ಹೊಗಳಿದ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಎಡಿಟ್ ಮಾಡಿ ಕೊಹ್ಲಿ ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ ಎಂದು ಹೇಳಲು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದರಿಂದ ನಾವು ಈ ಹೇಳಿಕೆಯು ತಪ್ಪು ಎಂದು ಗುರುತಿಸಿದ್ದೇವೆ.