ಮೂಲಕ: ರಜಿನಿ ಕೆ.ಜಿ
ಜನವರಿ 12 2023
ಅಹಮದಾಬಾದ್‌ನ ಸಬರಮತಿ ನದಿಯ ಮುಂಭಾಗದಲ್ಲಿ ಸಾಂಪ್ರದಾಯಿಕ ಉಯ್ಯಾಲೆಯಲ್ಲಿ ಜಿನ್‌ಪಿಂಗ್ ಮತ್ತು ಮೋದಿಯವರು ಕುಳಿತಿರುವ ೨೦೧೪ ರ ಚಿತ್ರವು ತಪ್ಪು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಸಂದರ್ಭ
ಡಿಸೆಂಬರ್ ೯, ೨೦೨೨ ರಂದು, ಭಾರತೀಯ ಸೇನೆಯ ಪ್ರಕಾರ, ಭಾರತದ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಗಳ ಸಿಬ್ಬಂದಿ ನಡುವೆ ಸಂಘರ್ಷ ಸಂಭವಿಸಿದೆ. ಭಾರತ ಮತ್ತು ಚೀನೀ ಪಡೆಗಳೆರಡಕ್ಕೂ ಸಣ್ಣಪುಟ್ಟ ಗಾಯಗಳಾಗಿವೆ. ಹಾಗೂ ಘಟನೆಯ ನಂತರ, ಪರಿಸ್ಥಿತಿಯನ್ನು ಚರ್ಚಿಸಲು ಪ್ರದೇಶದ ಕಮಾಂಡರ್ ತನ್ನ ಚೀನೀ ಸಹವರ್ತಿಯೊಂದಿಗೆ ಭೇಟಿಯಾದರು, ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತಪ್ಪು ಚಿತ್ರಗಳು ಮತ್ತು ವೀಡಿಯೋಗಳು ಹರಿದಾಡತೊಡಗಿದವು. ಅಂತಹ ಒಂದು ಚಿತ್ರವನ್ನು ಡಿಸೆಂಬರ್ ೧೭, ೨೦೨೨ ರಂದು ಟ್ವಿಟರ್‌ನಲ್ಲಿ ಪೋಷ್ಟ್ ಮಾಡಲಾಗಿದೆ. ಪೋಷ್ಟ್ ನ ಶೀರ್ಷಿಕೆಯು ಹೀಗಿದೆ: "ಚೀನಾ ಸೈನಿಕರು ದೇಶದ ಗಡಿಯೊಳಗೆ ನುಗ್ಗುತ್ತಿರುವಾಗ ಫಕಿರೇಂದ್ರ ಉಯ್ಯಾಲೆ ಆಡುವುದರಲ್ಲಿ ನಿರತರಾಗಿದ್ದಾರೆ." ಚಿತ್ರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಉಯ್ಯಾಲೆಯಲ್ಲಿ ಕುಳಿತಿದ್ದಾರೆ.
ಆದರೆ ಈ ಹೇಳಿಕೆ ತಪ್ಪು. ಈ ಚಿತ್ರವು ಡಿಸೆಂಬರ್ ೨೦೨೨ ರಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಭಾರತ-ಚೀನಾ ಗಡಿ ಸಂಘರ್ಷದ ನಂತರ ತೆಗೆದಿರುವುದಲ್ಲ. ಚಿತ್ರವು ೨೦೧೪ ರದ್ದಾಗಿದೆ.
ವಾಸ್ತವವಾಗಿ
ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ, ಷಿ ಜಿನ್‌ಪಿಂಗ್ ಮತ್ತು ನರೇಂದ್ರ ಮೋದಿ ಅವರ ಛಾಯಾಚಿತ್ರವು ೨೦೧೪ ರಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದ ಸಮಯದ್ದು ಎಂದು ನಾವು ಕಂಡುಕೊಂಡಿದ್ದೇವೆ. ಜಿನ್‌ಪಿಂಗ್ ಅವರು ತಮ್ಮ ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿ ಮಹಾತ್ಮ ಗಾಂಧಿಯವರ ಮನೆಯಾದ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಿದ ಸಬರಮತಿ ನದಿ ಮುಂಭಾಗದ ಉದ್ಯಾನವನದಲ್ಲಿ ಅವರು ಖಾಸಗಿ ಭೋಜನವನ್ನು ಸಹ ಹೊಂದಿದ್ದರು. ಸೆಪ್ಟೆಂಬರ್ ೧೮, ೨೦೧೪ ರಂದು ಚೀನಾದ ನ್ಯೂಸ್ ವೆಬ್‌ಸೈಟ್ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC) ನ್ಯೂಸ್ ಈ ವೈರಲ್ ಚಿತ್ರವನ್ನು ಹಂಚಿಕೊಂಡಿದೆ. ಚೀನೀ ಭಾಷೆಯಿಂದ ಅನುವಾದಿಸಲಾದ ಶೀರ್ಷಿಕೆಯು ಹೀಗಿದೆ: "ಸೆಪ್ಟೆಂಬರ್ ೧೭ ರಂದು, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗುಜರಾತ್‌ಗೆ ಭೇಟಿ ನೀಡಿದ್ದರು. ಇದು ಷಿ ಜಿನ್‌ಪಿಂಗ್ ಮತ್ತು ಮೋದಿ ಅವರು ನದಿ ದಂಡೆಯ ಉದ್ಯಾನವನ ಅಭಿವೃದ್ಧಿ ಯೋಜನೆಗೆ ಭೇಟಿ ನೀಡಿದಾಗ ಅವರ ನಡುವಿನ ಆತ್ಮೀಯ ಸಂಭಾಷಣೆ."
ಈ ಚಿತ್ರವನ್ನು ಸೆಪ್ಟೆಂಬರ್ ೧೭, ೨೦೧೪ ರಂದು ಪತ್ರಿಕಾ ಮಾಹಿತಿ ಬ್ಯೂರೋದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ, "ಪಿಎಂ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನಲ್ಲಿ #INCHtowardsMILES" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ಇದೇ ರೀತಿಯ ಚಿತ್ರವನ್ನು ಸೆಪ್ಟೆಂಬರ್ ೧೮, ೨೦೧೪ ರಂದು "ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಬುಧವಾರ ಅಹಮದಾಬಾದ್‌ನ ಸಬರಮತಿ ನದಿಯ ಮುಂಭಾಗದಲ್ಲಿ ಸಾಂಪ್ರದಾಯಿಕ ಉಯ್ಯಾಲೆಯಲ್ಲಿ ಕುಳಿತಿದ್ದಾರೆ." ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿತು. ಹಾಗೂ ಜಿನ್‌ಪಿಂಗ್ ಅವರ ಸಬರಮತಿ ಭೇಟಿಯ ಬಹು ಛಾಯಾಚಿತ್ರಗಳನ್ನು ಲೇಖನದಲ್ಲಿ ಪ್ರಕಟಿಸಲಾಗಿದೆ.
ಕೀವರ್ಡ್ ಸರ್ಚ್ ಮೂಲಕ, ನರೇಂದ್ರ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ ಸೆಪ್ಟೆಂಬರ್ ೧೭, ೨೦೧೪ ರಂದು ಜಿನ್‌ಪಿಂಗ್ ಅವರ ಭೇಟಿಯ ವೀಡಿಯೋವನ್ನು ಪೋಷ್ಟ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ೦:೫೬ ಸೆಕೆಂಡುಗಳಲ್ಲಿ, ಷಿ ಜಿನ್‌ಪಿಂಗ್ ಮತ್ತು ಮೋದಿ ಉಯ್ಯಾಲೆಯಲ್ಲಿ ಕುಳಿತು ಸಂಭಾಷಣೆ ನಡೆಸುವುದನ್ನು ನಾವು ನೋಡಬಹುದು. ಅವರ ಉಡುಗೆ ತೊಡುಗೆ, ಅವರು ಕುಳಿತಿರುವ ಉಯ್ಯಾಲೆ ಈಗ ವೈರಲ್ ಆಗಿರುವ ಚಿತ್ರಕ್ಕೆ ಹೊಂದಿಕೆಯಾಗುತ್ತಿದೆ. ಆದ್ದರಿಂದ, ಚಿತ್ರವು ೨೦೨೨ ರದಲ್ಲ, ೨೦೧೪ ರದ್ದಾಗಿದೆ ಎಂದು ಇದು ಖಚಿತಪಡಿಸುತ್ತದೆ.
ತೀರ್ಪು
ಷಿ ಜಿನ್‌ಪಿಂಗ್ ಅವರು ಅಹಮದಾಬಾದ್‌ಗೆ ಭೇಟಿ ನೀಡಿದ ಎಂಟು ವರ್ಷಗಳ ಹಳೆಯ ಚಿತ್ರವನ್ನು ತಪ್ಪು ಹೇಳಿಕೆಯೊಂದಿಗೆ ಮರುಹಂಚಿಕೊಳ್ಳಲಾಗಿದೆ. ಡಿಸೆಂಬರ್ ೯, ೨೦೨೨ ರಂದು ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಪಡೆಗಳ ಘರ್ಷಣೆಯ ನಂತರ ಮೋದಿ ಮತ್ತು ಜಿನ್‌ಪಿಂಗ್ ಯಾವುದೇ ವೈಯಕ್ತಿಕ ಭೇಟಿಗಳನ್ನು ನಡೆಸಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.