ಮೂಲಕ: ವಿವೇಕ್ ಜೆ
ಜುಲೈ 21 2023
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಫೋನ್ ಸಂಖ್ಯೆಯು ಭಾರತೀಯ ಜನತಾ ಪಕ್ಷದ ಪ್ರಚಾರದೊಂದಿಗೆ ಸಂಬಂಧಿಸಿದೆ ಮತ್ತು ಇದು ಏಕರೂಪ ನಾಗರಿಕ ಸಂಹಿತೆಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
ಸಂದರ್ಭ
ಎಲ್ಲಾ ಧರ್ಮಗಳು ಮತ್ತು ಸಮುದಾಯಗಳಿಗೆ ಸಾಮಾನ್ಯ ವೈಯಕ್ತಿಕ ಕಾನೂನುಗಳನ್ನು ರಚಿಸುವ ಗುರಿಯನ್ನು ಹೊಂದಿರುವ ಏಕರೂಪ ನಾಗರಿಕ ಸಂಹಿತೆಯ (ಯುನಿಫಾರ್ಮ್ ಸಿವಿಲ್ ಕೋಡ್ ಅಥವಾ ಯುಸಿಸಿ) ಅನುಷ್ಠಾನವು ಭಾರತದಲ್ಲಿ ವರ್ಷಗಳಿಂದ ವಿವಾದಾತ್ಮಕ ವಿಷಯವಾಗಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಯುಸಿಸಿಯನ್ನು ದೀರ್ಘಕಾಲದವರೆಗೆ ತನ್ನ ಕಾರ್ಯಸೂಚಿಯಲ್ಲಿ ಹೊಂದಿದೆ ಮತ್ತು ಈಗ ಹಲವಾರು ವಲಯಗಳಿಂದ ಪ್ರತಿರೋಧವನ್ನು ನಿರೀಕ್ಷಿಸುತ್ತಿದ್ದರೂ, ಶೀಘ್ರದಲ್ಲೇ ಅದನ್ನು ಕಾರ್ಯಗತಗೊಳಿಸಲು ದಾರಿ ತೋರುತ್ತಿದೆ. ಅನೇಕ ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಮತ್ತು ಬುಡಕಟ್ಟು ಸಮುದಾಯಗಳ ಮುಖಂಡರು ವೈಯಕ್ತಿಕ ಕಾನೂನುಗಳನ್ನು ತೆಗೆದುಹಾಕಿದ ನಂತರ - ಇದು ಪ್ರಸ್ತುತ ಮದುವೆ, ವಿಚ್ಛೇದನ, ದತ್ತು, ಉತ್ತರಾಧಿಕಾರ ಇತ್ಯಾದಿ ವಿಷಯಗಳನ್ನು ನಿಯಂತ್ರಿಸುತ್ತದೆ - ಯುಸಿಸಿ ವಿವಿಧ ಗುಂಪುಗಳ ವಿಭಿನ್ನ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಉಲ್ಲಂಘಿಸುತ್ತದೆ ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ಕಾನೂನು ಆಯೋಗವು ವಿವಾದಾತ್ಮಕ ವಿಷಯವನ್ನು ಹೊಸದಾಗಿ ಪರಿಶೀಲಿಸಲು ಪ್ರಯತ್ನಿಸಿದೆ ಮತ್ತು ಜೂನ್ ೧೪ ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾರ್ವಜನಿಕರು ಮತ್ತು ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳನ್ನು ಆಹ್ವಾನಿಸಿದೆ.
ಜೂನ್ ೨೭ ರಂದು ಪ್ರಧಾನಿ ನರೇಂದ್ರ ಮೋದಿಯವರು ಭೋಪಾಲ್‌ನಲ್ಲಿ ಬಿಜೆಪಿ ಬೂತ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಯುಸಿಸಿ ಅನುಷ್ಠಾನದ ಅಗತ್ಯವನ್ನು ಒತ್ತಿ ಹೇಳಿದರು. "ಪ್ರತ್ಯೇಕ ಸಮುದಾಯಗಳಿಗೆ ಪ್ರತ್ಯೇಕ ಕಾನೂನುಗಳ ಉಭಯ ವ್ಯವಸ್ಥೆಯೊಂದಿಗೆ ಭಾರತವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
ಇಂತಹ ಬೆಳವಣಿಗೆಗಳ ಮಧ್ಯೆ, ಯುಸಿಸಿ ಆನ್‌ಲೈನ್ ಮತ್ತು ಆಫ್‌ಲೈನ್ ಚರ್ಚೆಗಳಿಗೆ ಬಿಸಿ ವಿಷಯವಾಗಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು "ಯುಸಿಸಿಗೆ ತಮ್ಮ ಬೆಂಬಲವನ್ನು ತೋರಿಸಲು" ಫೋನ್ ಸಂಖ್ಯೆ '೯೦೯೦೯೦೨೦೨೪' ಗೆ ಮಿಸ್ಡ್ ಕಾಲ್ ನೀಡಲು ಇತರರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆದರೆ, ಅಂತಹ ಪೋಷ್ಟ್ ಗಳು ರಚಿಸುವ ಗ್ರಹಿಕೆಗೆ ವಿರುದ್ಧವಾಗಿ, ಫೋನ್ ಸಂಖ್ಯೆಯು ಕಾನೂನು ಆಯೋಗದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಈ ಸಂಖ್ಯೆಯು ವಾಸ್ತವವಾಗಿ, ಬಿಜೆಪಿ ಪ್ರಚಾರಕ್ಕೆ ಸಂಬಂಧಿಸಿದೆ ಮತ್ತು ಯುಸಿಸಿಯ ಪ್ರಚಾರ ಅಥವಾ ಅನುಷ್ಠಾನದೊಂದಿಗೆ ಯಾವುದೇ ನೇರವಾದ ಸಂಪರ್ಕವನ್ನು ಹೊಂದಿಲ್ಲ.
ವಾಸ್ತವವಾಗಿ
ಜೂನ್ ೧೪ ರಂದು ಹೊರಡಿಸಲಾದ ನೋಟಿಸ್‌ನಲ್ಲಿ, ಯುಸಿಸಿ ಕುರಿತು ತಮ್ಮ ಅಭಿಪ್ರಾಯಗಳನ್ನು ಇಮೇಲ್ ಮೂಲಕ ಅಥವಾ ನೋಟಿಸ್‌ನಲ್ಲಿ ಒದಗಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಹಂಚಿಕೊಳ್ಳಲು ಕಾನೂನು ಆಯೋಗವು ಸಾರ್ವಜನಿಕರನ್ನು ಆಹ್ವಾನಿಸಿದೆ. ವ್ಯಕ್ತಿಗಳು ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಥವಾ ಆಯೋಗಕ್ಕೆ ಇಮೇಲ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದು ನೋಟಿಸ್ ತಿಳಿಸಿದೆ. ಗಮನಾರ್ಹವಾಗಿ, ಸೂಚನೆಯು ಯಾವುದೇ ಫೋನ್ ಸಂಖ್ಯೆಯನ್ನು ಒಳಗೊಂಡಿಲ್ಲ ಅಥವಾ ಮಿಸ್ಡ್ ಕಾಲ್ ಅಭಿಯಾನದ ಮೂಲಕ ಯುಸಿಸಿ ಗೆ ಬೆಂಬಲವನ್ನು ವ್ಯಕ್ತಪಡಿಸಲು ಸೂಚಿಸುವುದಿಲ್ಲ.
ಜೂನ್ ೧೭, ೨೦೧೬ ರಂದು ಕಾನೂನು ಮತ್ತು ನ್ಯಾಯ ಸಚಿವಾಲಯದ ಉಲ್ಲೇಖಕ್ಕೆ ಪ್ರತಿಕ್ರಿಯೆಯಾಗಿ ಆಯೋಗದ ಸೂಚನೆಯಾಗಿದೆ. ಕಾನೂನು ಆಯೋಗವು ಈ ಹಿಂದೆ ೨೦೧೮ ರಲ್ಲಿ ಯುಸಿಸಿ ಕುರಿತು ಸಮಾಲೋಚನಾ ಪತ್ರವನ್ನು ಸಿದ್ಧಪಡಿಸಿತ್ತು ಆದರೆ "ವಿಷಯದ ಬಗ್ಗೆ (ಯುಸಿಸಿ) ಹೊಸದಾಗಿ ಉದ್ದೇಶಪೂರ್ವಕವಾಗಿ ಪರಿಗಣಿಸಲಾಗಿದೆ" "ಸಮಾಲೋಚನಾ ಪತ್ರವನ್ನು ನೀಡಿದ ದಿನಾಂಕದಿಂದ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಕಳೆದುಹೋಗಿದೆ."
ದೂರವಾಣಿ ಮೂಲಕ ಯುಸಿಸಿಗೆ ಬೆಂಬಲ ವ್ಯಕ್ತಪಡಿಸುವ ಬಗ್ಗೆ, ಕಾನೂನು ಆಯೋಗವು ಜುಲೈ ೭ ರಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಆಯೋಗದೊಂದಿಗೆ ತಪ್ಪು ಸಂಬಂಧ ಹೊಂದಿಸಿ 'ಕೆಲವು ದೂರವಾಣಿ ಸಂಖ್ಯೆಗಳು' ಪ್ರಚರಿತಗೊಂಡಿವೆ ಎಂಬುದು ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದೆ. ಯುಸಿಸಿ ಕುರಿತು ಯಾವುದೇ ವಾಟ್ಸ್ಆಪ್ ಪಠ್ಯಗಳು, ಕರೆಗಳು ಅಥವಾ ಸಂದೇಶಗಳೊಂದಿಗೆ ಆಯೋಗವು ಯಾವುದೇ ಸಂಪರ್ಕ ಅಥವಾ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿಕೆ ತಿಳಿಸಿದೆ. ಅದರ ಅಧಿಕೃತ ಸಂವಹನ ವಿಧಾನವು ಅಧಿಕೃತ ಚಾನಲ್‌ಗಳಿಗೆ ಸೀಮಿತವಾಗಿದೆ ಎಂದು ಕಾನೂನು ಆಯೋಗವು ಒತ್ತಿಹೇಳಿದೆ; ಅದರ ವೆಬ್‌ಸೈಟ್ (https://lawcommissionofindia.nic.in) ಮತ್ತು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಅಧಿಕೃತ ಪ್ರಕಟಣೆ. ಆಯೋಗವು ಜೂನ್ ೧೪ ರಂದು ತನ್ನ ಹಿಂದಿನ ಸೂಚನೆಯನ್ನು ಪುನರುಚ್ಛರಿಸುತ್ತಾ, ಒದಗಿಸಿದ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಥವಾ ಕಾರ್ಯನಿರ್ವಾಹಕ ಸಂಸ್ಥೆಗೆ ಇಮೇಲ್ ಮಾಡುವ ಮೂಲಕ ಯುಸಿಸಿ ಗೆ ಸಂಬಂಧಿಸಿದ ಯಾವುದೇ ಸಲಹೆಗಳು ಅಥವಾ ಅಭಿಪ್ರಾಯಗಳನ್ನು ಸಲ್ಲಿಸಬೇಕು ಎಂದು ಹೇಳಿಕೊಂಡಿದೆ.
ಈ ವಿಚಾರದಲ್ಲಿ ನಾವು ಇನ್ನಷ್ಟು ತನಿಖೆ ಮಾಡಿದಾಗ, ಮೇ ೩೧ ರಂದು ಪ್ರಕಟವಾದ ಇಂಡಿಯಾ ಟುಡೇ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಮುಂಬರುವ ೨೦೨೪ ರ ಲೋಕಸಭಾ ಚುನಾವಣೆಯ ಬೆಳಕಿನಲ್ಲಿ ಬಿಜೆಪಿ ವಿಶಿಷ್ಟವಾದ 'ಮಿಸ್ಡ್ ಕಾಲ್' ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಈ ವರದಿಯು ಹೇಳಿದೆ. ಪ್ರಚಾರವು ಮೋದಿ ಸರ್ಕಾರದ ಒಂಬತ್ತು ವರ್ಷಗಳು ಮತ್ತು ಚುನಾವಣಾ ವರ್ಷ ೨೦೨೪ ರ ಸಂಕೇತವಾಗಿ ೯೦೯೦೯೦೨೦೨೪ ಎಂಬ ವಿಶೇಷ ಸಂಖ್ಯೆಯನ್ನು ಒಳಗೊಂಡಿದೆ. ಜನರು ತಮ್ಮ ಬೆಂಬಲವನ್ನು ತೋರಿಸಲು ಈ ಸಂಖ್ಯೆಗೆ 'ಮಿಸ್ಡ್ ಕಾಲ್' ನೀಡಬಹುದು.
ಜೂನ್ ೨೯ ರಂದು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ೯೦೯೦೯೦೨೦೨೪ ಗೆ ಮಿಸ್ಡ್ ಕಾಲ್ ನೀಡುವ ಮೂಲಕ 'ಜನ ಸಂಪರ್ಕ್ ಸೇ ಜನ ಸಮರ್ಥನ್' ಅಭಿಯಾನದಲ್ಲಿ ಭಾಗವಹಿಸುವಂತೆ ಜನರನ್ನು ಕೋರಿದೆ.
ಈ ವಿವರವನ್ನು ಹೋಲಿಸಿ ನೋಡಲು ನಾವು ಆ ಸಂಖ್ಯೆಯನ್ನು ಡಯಲ್ ಮಾಡಿದೆವು ಮತ್ತು ಒಂದೇ ರಿಂಗ್ ನಂತರ ಕರೆ ಸಂಪರ್ಕ ಕಡಿತಗೊಂಡಿದೆ. ಇದಾದ ಕೆಲವೇ ದಿನಗಳಲ್ಲಿ ನಮಗೆ ಸಂದೇಶ ಬಂದಿತು: "ಸೇವಾ, ಸುಶಾಸನ್ ಮತ್ತು ಗರೀಬ್ ಕಲ್ಯಾಣ್‌ಗೆ ಬದ್ಧವಾಗಿರುವ ಮೋದಿ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು. ಮೋದಿ ಸರ್ಕಾರದ ೯ ವರ್ಷಗಳ ಸಾಧನೆಗಳನ್ನು ತಿಳಿಯಲು 9yearsofseva.bjp.org ಕ್ಲಿಕ್ ಮಾಡಿ. ಬಿಜೆಪಿ." ಈ ಸಂದೇಶವು ನಿಜವಾಗಿಯೂ ಬಿಜೆಪಿ ಪ್ರಚಾರದೊಂದಿಗೆ ಸಂಬಂಧಿಸಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ಹೇಳಿಕೆಗಳಿಗೆ ವಿರುದ್ಧವಾಗಿ ಇದು ಕಾನೂನು ಆಯೋಗದೊಂದಿಗಾಗಲಿ ಅಥವಾ ಯುಸಿಸಿ ಯೊಂದಿಗೆ ಆಗಲಿ ಯಾವುದೇ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟವಾಗಿದೆ.
ತೀರ್ಪು
ಭಾರತದ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಬೆಂಬಲಿಸಲು ಅಥವಾ ವಿರೋಧಿಸಲು ‘ಮಿಸ್ಡ್ ಕಾಲ್’ ಅಭಿಯಾನವನ್ನು ಆರಂಭಿಸಿಲ್ಲ. ‘೯೦೯೦೯೦೨೦೨೪’ ಸಂಖ್ಯೆಯು ಬಿಜೆಪಿ ಪ್ರಚಾರದೊಂದಿಗೆ ಸಾಮೂಹಿಕ ಬೆಂಬಲವನ್ನು ಸಂಗ್ರಹಿಸಲು ಸಂಬಂಧಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಹೇಳಿಕೊಂಡಿರುವ ಹಾಗೆ ಯುಸಿಸಿ ಯೊಂದಿಗೆ ಈ ದೂರವಾಣಿ ಸಂಖ್ಯೆಯು ಯಾವುದೇ ಸಂಬಂಧವನ್ನು ಹೊಂದಿಲ್ಲ.