ಮುಖಪುಟ ನಿಜ್ಜರ ಸಾವಿನ ಕುರಿತು ಕೆನಡಾದಲ್ಲಿ ನಡೆದ ಪ್ರತಿಭಟನೆಯ ಹಳೆಯ ವೀಡಿಯೋವನ್ನು ರೈತರ ಪ್ರತಿಭಟನೆಯೊಂದಿಗೆ ತಪ್ಪಾಗಿ ಜೋಡಿಸಲಾಗಿದೆ

ನಿಜ್ಜರ ಸಾವಿನ ಕುರಿತು ಕೆನಡಾದಲ್ಲಿ ನಡೆದ ಪ್ರತಿಭಟನೆಯ ಹಳೆಯ ವೀಡಿಯೋವನ್ನು ರೈತರ ಪ್ರತಿಭಟನೆಯೊಂದಿಗೆ ತಪ್ಪಾಗಿ ಜೋಡಿಸಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ

ಫೆಬ್ರವರಿ 22 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ನಿಜ್ಜರ ಸಾವಿನ ಕುರಿತು ಕೆನಡಾದಲ್ಲಿ ನಡೆದ ಪ್ರತಿಭಟನೆಯ ಹಳೆಯ ವೀಡಿಯೋವನ್ನು ರೈತರ ಪ್ರತಿಭಟನೆಯೊಂದಿಗೆ ತಪ್ಪಾಗಿ ಜೋಡಿಸಲಾಗಿದೆ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋ ೨೦೨೩ ರ ಹಳೆಯ ವೀಡಿಯೋ ಆಗಿದ್ದು ಖಲಿಸ್ತಾನ್ ಬೆಂಬಲಿಗರು ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುತ್ತಿರುವುದನ್ನು ತೋರಿಸುತ್ತದೆ, ೨೦೨೪ ರ ರೈತರ ಪ್ರತಿಭಟನೆಗೆ ಸಂಭಂದಿಸಿಲ್ಲ.

೨೦೨೪ರ ರೈತರ ಪ್ರತಿಭಟನೆ ಫೆಬ್ರವರಿ ೧೩ ರಂದು ಪ್ರಾರಂಭವಾಯಿತು, ವಿವಿಧ ರಾಜ್ಯಗಳ ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸಪಿ) ಸ್ಥಾಪಿಸಬೇಕೆಂದು ಒತ್ತಾಯಿಸಿ 'ದೆಹಲಿಗೆ ಮೆರವಣಿಗೆ' ಆರಂಭಿಸಿದರು.

ಹೇಳಿಕೆ ಏನು?

ಪ್ರತಿಭಟನೆಯ ಸಮಯದಲ್ಲಿ,  ಸಾಮಾಜಿಕ ಮಾಧ್ಯಮಗಳಲ್ಲಿ ೧೧ ಸೆಕೆಂಡ್‌ಗಳ ವೀಡಿಯೋ ವೈರಲ್ ಆಗಿದೆ, ಪೇಟ ಧರಿಸಿದ ವ್ಯಕ್ತಿಗಳು ಭಾರತದ ರಾಷ್ಟ್ರಧ್ವಜದಲ್ಲಿ ಸುತ್ತಿದ ಫುಟ್‌ಬಾಲ್ ಅನ್ನು ಒದೆಯುತ್ತಿರುವುದನ್ನು ಚಿತ್ರಿಸಲಾಗಿದೆ. ಆಡಿಯೋದ ಅನುಪಸ್ಥಿತಿಯ ಹೊರತಾಗಿಯೂ, ವೀಡಿಯೋ ಮೆಗಾಫೋನ್‌ಗಳೊಂದಿಗೆ ಹಲವಾರು ಪುರುಷರನ್ನು ತೋರಿಸುತ್ತದೆ, ಮತ್ತು ಇತರ ಇಬ್ಬರು ಹಳದಿ ಧ್ವಜಗಳನ್ನು ಎತ್ತಿ ಹಿಡಿದಿದ್ದಾರೆ.

ಅಂತಹ ಒಂದು ಪೋಷ್ಟ್ ನ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಶೀರ್ಷಿಕೆ ಹೀಗಿದೆ, "ದೇಶದ ಧ್ವಜವನ್ನು ಅವಮಾನಿಸುವ ರೈತರು." ಹಾಗು ಇದೇ ರೀತಿಯ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡ ಇತರ ಪೋಷ್ಟ್ ಗಳ ಆರ್ಕೈವ್ ಮಾಡಿದ ಲಿಂಕ್ ಅನ್ನು ಇಲ್ಲಿ, ಇಲ್ಲಿ, ಮತ್ತು ಇಲ್ಲಿ ಕಾಣಬಹುದು.  

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ೨೦೨೩ ರಲ್ಲಿ ಖಲಿಸ್ತಾನ್ ಬೆಂಬಲಿಗರು ಭಾರತೀಯ ಧ್ವಜವನ್ನು ಅವಮಾನಿಸುತ್ತಿರುವುದನ್ನು ವೀಡಿಯೋದಲ್ಲಿ ಚಿತ್ರಿಸಲಾಗಿದೆ ಮತ್ತು ೨೦೨೪ ರಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧವಿಲ್ಲ.

ಸತ್ಯಾಂಶಗಳು

ವೀಡಿಯೋದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಸೆಪ್ಟೆಂಬರ್ ೨೦೨೩ ರಿಂದ ಡೆಕ್ಕನ್ ಹೆರಾಲ್ಡ್ ವರದಿಗೆ ನಮ್ಮನ್ನು ಕರೆದೊಯ್ಯಿತು, "ವೀಕ್ಷಿಸಿ: ಪರ-ಖಲಿಸ್ತಾನಿಗಳು ಚೆಂಡಿನ ಸುತ್ತಲೂ ಭಾರತೀಯ ಧ್ವಜವನ್ನು ಸುತ್ತಿದ್ದಾರೆ, ಟೊರೊಂಟೊದಲ್ಲಿ ಮೋದಿಯವರ ಕಟೌಟ್‌ಗಳನ್ನು ತುಳಿದ ಮರುದಿನ ಅದನ್ನು ಒದೆಯುತ್ತಾರೆ." ವೈರಲ್ ವೀಡಿಯೋವನ್ನು ಹೋಲುವ ಸ್ಕ್ರೀನ್‌ಶಾಟ್ ಹೊಂದಿರುವ ಈ ವರದಿಯು ಜೂನ್ ೨೦೨೩ ರಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಗೆ ಸಂಬಂಧಿಸಿದ ಕೆನಡಾದಲ್ಲಿ ಪ್ರತಿಭಟನೆಗಳನ್ನು ಚರ್ಚಿಸಿದೆ.

ಚಿತ್ರದಲ್ಲಿ, ಕಪ್ಪು ಪೇಟ, ಬಿಳಿ ಮತ್ತು ಕಪ್ಪು ಚೆಕ್ಸ್ ಟೀ ಶರ್ಟ್ ಮತ್ತು ಬೀಜ್ ಬಣ್ಣದ ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜದಲ್ಲಿ ಮುಚ್ಚಿದ ಫುಟ್ಬಾಲ್ ಅನ್ನು ಒದೆಯುವುದನ್ನು ಕಾಣಬಹುದು.

ವೈರಲ್ ವೀಡಿಯೋ ಮತ್ತು ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ ಕಾಣಿಸಿಕೊಂಡ ಚಿತ್ರದ ನಡುವಿನ ಹೋಲಿಕೆ.
(ಮೂಲ: ಎಕ್ಸ್/ಡೆಕ್ಕನ್ ಹೆರಾಲ್ಡ್/ಸ್ಕ್ರೀನ್‌ಶಾಟ್)

ವರದಿಯು ಎಕ್ಸ್ ಪೋಷ್ಟ್ ಅನ್ನು ಸಹ ಹೊಂದಿದೆ,  ಅದು ವೈರಲ್ ವೀಡಿಯೋದ  ದೀರ್ಘ ಆವೃತ್ತಿಯನ್ನು ಹೊಂದಿದೆ. ವೀಡಿಯೋವನ್ನು ಸೆಪ್ಟೆಂಬರ್ ೨೬, ೨೦೨೩ ರಂದು ನಾರ್ಬರ್ಟ್ ಎಲೈಕ್ಸ್ ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ ಮತ್ತು ಈ ಘಟನೆಯು ಕೆನಡಾದಲ್ಲಿ ನಡೆದಿದೆ ಎಂದು ಶೀರ್ಷಿಕೆ ಹೇಳಿದೆ.

ಇದಲ್ಲದೆ, ಅದೇ ವೀಡಿಯೋವನ್ನು ಎಕ್ಸ್ ನಲ್ಲಿ ಜುಲೈ ೨೫, ೨೦೨೩ ರಂದು ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ, ಸುಮಾರು ೮-ಸೆಕೆಂಡ್ ಮಾರ್ಕ್‌ನಿಂದ ಸರಿಸುಮಾರು ೧೯-ಸೆಕೆಂಡ್‌ವರೆಗಿನ ವಿಭಾಗವು ವೈರಲ್ ಫೂಟೇಜ್‌ನೊಂದಿಗೆ ನಿಖರವಾಗಿ ಹೊಂದಾಣಿಕೆಯಾಗುತ್ತದೆ. ವೀಡಿಯೋವನ್ನು ಕೆನಡಾದಲ್ಲಿ ಸೆರೆಹಿಡಿಯಲಾಗಿದೆ ಎಂದು ಬಳಕೆದಾರರು ಒಂದು ಉತ್ತರದಲ್ಲಿ ತಿಳಿಸಿದ್ದಾರೆ.

ದೃಶ್ಯ ಸೂಚನೆಗಳು

ವೈರಲ್ ವೀಡಿಯೋ ಮತ್ತು ಅದರ ವಿಸ್ತೃತ ಆವೃತ್ತಿ ಎರಡರಲ್ಲೂ, ಹಲವಾರು ಪುರುಷರು "Khalistan" ಎಂಬ ಪದವನ್ನು ಹೊಂದಿರುವ ಹಳದಿ ಧ್ವಜಗಳನ್ನು ಹಿಡಿದಿರುವುದನ್ನು ಮತ್ತು "Khalistan" ಎಂಬ ಅದೇ ಪದವನ್ನು ಹೊಂದಿರುವ ವಾಹನದ ಮೇಲೆ ಪೋಷ್ಟರ್ ಅನ್ನು ಹಿಡಿದಿರುವುದನ್ನು ಗಮನಿಸಬಹುದು.

ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್ ಮತ್ತು ಹಳದಿ ಧ್ವಜಗಳನ್ನು ಚಿತ್ರಿಸುವ ಅದರ ವಿಸ್ತೃತ ಆವೃತ್ತಿ ಮತ್ತು "ಖಾಲಿಸ್ತಾನ್" ಪದವನ್ನು ಹೊಂದಿರುವ  ಪೋಷ್ಟರ್.  (ಮೂಲ: ಎಕ್ಸ್ / ಸ್ಕ್ರೀನ್‌ಶಾಟ್)

ಹಾಗು, ವೀಡಿಯೋದಲ್ಲಿ , ಬ್ಯಾನರ್ ಹೊಂದಿರುವ ವಾಹನದ ಮುಂದೆ ಪುರುಷರು ನಿಂತಿದ್ದಾರೆ. 

ಬ್ಯಾನರ್‌ನಲ್ಲಿನ ಕೆಲವು ಪದಗಳನ್ನು ಅದರ ಮುಂದೆ ನಿಂತಿರುವ ಪುರುಷರು ಭಾಗಶಃ ಅಸ್ಪಷ್ಟಗೊಳಿಸಿದ್ದರೂ, "FACES OF SHAHEED NIJJAR’S KILLERS IN CANADA" ಎಂಬ ವಾಕ್ಯವನ್ನು ಓದಬಹುದು. ಪೋಷ್ಟರ್ ಭಾರತದ ಲಾಂಛನವನ್ನು ಹೊಂದಿದೆ "High Commission of India" ಜೊತೆಗೆ, ಬ್ಯಾನರ್ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯ ಚಿತ್ರಗಳನ್ನು ಪ್ರದರ್ಶಿಸುತ್ತದೆ.

ವೈರಲ್ ವೀಡಿಯೋದ ವಿಸ್ತೃತ ಆವೃತ್ತಿಯ ಸ್ಕ್ರೀನ್‌ಶಾಟ್ "ಫೇಸಸ್ ಆಫ್" ಮತ್ತು "KILLERS IN CANADA", ಎಡಭಾಗದಲ್ಲಿ "High commission of India" ಎಂಬ ಪದಗಳನ್ನು ಪ್ರದರ್ಶಿಸುತ್ತದೆ. (ಮೂಲ: ಎಕ್ಸ್/ ಸ್ಕ್ರೀನ್‌ಶಾಟ್)

ಬ್ಯಾನರ್‌ನ ಮೇಲ್ಭಾಗವು 'referendum' ಎಂಬ ಪದಗಳನ್ನು ಸಹ ಹೊಂದಿದೆ ಮತ್ತು ''Hardeep Singh Nijjar"ಎಂಬ ಹೆಸರನ್ನು ಸಹ ನೋಡಬಹುದು.

ವೈರಲ್ ವೀಡಿಯೋದ ವಿಸ್ತೃತ ಆವೃತ್ತಿಯ ಸ್ಕ್ರೀನ್‌ಶಾಟ್ "referendum" ಎಂಬ ಪದವನ್ನು ಪ್ರದರ್ಶಿಸುತ್ತದೆ ಮತ್ತು ಹೆಸರು 'Hardeep Singh Nijjar.' (ಮೂಲ: ಎಕ್ಸ್/ ಸ್ಕ್ರೀನ್‌ಶಾಟ್)

ಜುಲೈ ೨೦೨೩ ರ ಖಲಿಸ್ತಾನ್ ಪರ ಪ್ರತಿಭಟನೆಯ ಸಮಯದಲ್ಲಿ ವೈರಲ್ ವೀಡಿಯೋದಲ್ಲಿ ಕಂಡುಬರುವ ಈ ರೀತಿಯ ಬ್ಯಾನರ್‌ಗಳು ಕಂಡುಬಂದಿವೆ ಎಂದು ವರದಿಯಾಗಿದೆ. ಬ್ಯಾನರ್‌ಗಳು "SHAHEED JATHEDAR HARDEEP SINGH NIJJAR REFERENDUM" ಮತ್ತು "WAR ZONE" ನಂತಹ ಸಂದೇಶಗಳನ್ನು ಪ್ರದರ್ಶಿಸಿದವು, ಜೊತೆಗೆ "FACES OF SHAHEED NIJJAR'S KILLERS IN CANADA" ಎಂಬ ಪದಗಳನ್ನು ಪ್ರದರ್ಶಿಸಲಾಯಿತು. ಜುಲೈ ೨೦೨೩ ರ ಪ್ರತಿಭಟನೆಯ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ ಕಂಡುಬರುವ ಕೆಳಗಿನ ಪೋಷ್ಟರ್, ವೈರಲ್ ವೀಡಿಯೋದಲ್ಲಿ ಕಂಡುಬರುವ ಪೋಷ್ಟರ್‌ನೊಂದಿಗೆ ನಿಖರವಾಗಿ ಹೊಂದಿಕೆಯಾಗುತ್ತದೆ.

ಹಿಂದೂಸ್ತಾನ್ ಟೈಮ್ಸ್ ಪೋಷ್ಟ್ ಮಾಡಿದ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್, ಕೆನಡಾದ ಗ್ರೇಟರ್ ಟೊರೊಂಟೊ ಏರಿಯಾದಲ್ಲಿರುವ ಭಾರತೀಯ ರಾಜತಾಂತ್ರಿಕರನ್ನು ಗುರಿಯಾಗಿಸುವ ಪೋಷ್ಟರ್ ಅನ್ನು ಒಳಗೊಂಡಿದೆ. (ಮೂಲ: ಯೂಟ್ಯೂಬ್/ಹಿಂದೂಸ್ತಾನ್ ಟೈಮ್ಸ್)

ಜುಲೈ ೨೦೨೩ ರಲ್ಲಿ, ಹಿಂದೂಸ್ತಾನ್ ಟೈಮ್ಸ್ "ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಪೋಷ್ಟರ್ಗಳನ್ನು ಕೆನಡಾದಲ್ಲಿ ಹಾಕಲಾಗಿತ್ತು" ಎಂದು ವರದಿ ಮಾಡಿದೆ. ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಭಾರತ್ ಮಾತಾ ಮಂದಿರದ ಹೊರಗೆ ಕಂಡುಬಂದಿರುವ ಈ ಪೋಷ್ಟರ್ಗಳಲ್ಲಿ ಕೆನಡಾದಲ್ಲಿರುವ ಭಾರತದ ಹೈಕಮಿಷನರ್, ಸಂಜಯ್ ಕುಮಾರ್ ವರ್ಮಾ, ಟೊರೊಂಟೊದಲ್ಲಿ ಭಾರತದ ಕಾನ್ಸುಲ್ ಜನರಲ್ ಅಪೂರ್ವ ಶ್ರೀವಾಸ್ತವ ಮತ್ತು ವ್ಯಾಂಕೋವರ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಮನೀಶ್ ಅವರ ಛಾಯಾಚಿತ್ರಗಳಿವೆ. ಪೋಷ್ಟರ್ಗಳಲ್ಲಿ ಅಧಿಕಾರಿಗಳು ನಿಜ್ಜರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಮೇಲಿನ ಮಾಹಿತಿಯಿಂದ, ವೀಡಿಯೋದಲ್ಲಿ ಸೆರೆಹಿಡಿಯಲಾದ ಘಟನೆಯು ಕೆನಡಾದಲ್ಲಿ ಜುಲೈ ೨೦೨೩ ರಲ್ಲಿ ನಡೆದಿದ್ದು, ನಿಜ್ಜರ್ ಹತ್ಯೆಯ ಪ್ರತಿಕ್ರಿಯೆಯಾಗಿದೆ ಎಂದು ಹೇಳಬಹುದು.

ಖಲಿಸ್ತಾನ್ ಪರ ಪ್ರತಿಭಟನೆ
ಜುಲೈ ೨೦೨೩ ರಲ್ಲಿ, ಖಲಿಸ್ತಾನ್ ಬೆಂಬಲಿಗರು ಕೆನಡಾ, ಯು.ಕೆ.  ಮತ್ತು ಯು.ಎಸ. ನಲ್ಲಿರುವ ಭಾರತೀಯ ಕಾನ್ಸುಲೇಟ್‌ಗಳ ಹೊರಗೆ ನಿಜ್ಜರ್‌ನ ಆಪಾದಿತ ಹತ್ಯೆಗೆ ಪ್ರತಿಕ್ರಿಯೆಯಾಗಿ ಪ್ರತಿಭಟನೆಗಳನ್ನು ಆಯೋಜಿಸಿದ್ದರು. ಈ ರ‍್ಯಾಲಿಗಳು ಪ್ರಮುಖವಾಗಿ ಹಳದಿ ಖಲಿಸ್ತಾನ್ ಧ್ವಜಗಳು ಮತ್ತು ಬ್ಯಾನರ್‌ಗಳನ್ನು ಒಳಗೊಂಡಿದ್ದವು.

ತೀರ್ಪು
ಕೆನಡಾದಲ್ಲಿ ಖಲಿಸ್ತಾನ್ ಬೆಂಬಲಿಗರು ಭಾರತೀಯ ಧ್ವಜವನ್ನು ಅವಮಾನಿಸುತ್ತಿರುವುದನ್ನು ಚಿತ್ರಿಸುವ ಹಳೆಯ ವೀಡಿಯೋವನ್ನು ೨೦೨೪ ರ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ರೈತರು ಧ್ವಜವನ್ನು ಅಗೌರವಿಸಿದ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ