ಮೂಲಕ: ಉಮ್ಮೆ ಕುಲ್ಸುಮ್
ಆಗಸ್ಟ್ 25 2023
ಜುಲೈನಲ್ಲಿ ಬೆಂಗಳೂರಿನಲ್ಲಿ ಇಸ್ರೋ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ವೀಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಚಂದ್ರಯಾನ-೩ ಚಂದ್ರನ ಮೇಲೆ ಇಳಿಯುವುದಕ್ಕೂ ಇದಕ್ಕೂ ಸಂಬಂಧವಿಲ್ಲ.
ಸಂದರ್ಭ
ಭಾರತದ ಚಂದ್ರಯಾನ-೩ ಚಂದ್ರನ ಮೇಲೆ ಬುಧವಾರ ಸಂಜೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ನಂತರ, ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಬಾಹ್ಯಾಕಾಶ ಸಂಸ್ಥೆಯ ಇತ್ತೀಚಿನ ಸಾಧನೆಯ ಸಂಭ್ರಮದಲ್ಲಿ ನೃತ್ಯ ಮಾಡುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೋ ಈಗ ವೈರಲ್ ಆಗಿದ್ದು, ಕೆಲವು ಪೋಷ್ಟ್ ಗಳು ಇದನ್ನು ಎಕ್ಸ್ (X) (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿವೆ. ಹಲವಾರು ಬಳಕೆದಾರರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಅವರ ತಂಡದ ಭಕ್ತಿ ಮತ್ತು ಕಠಿಣ ಪರಿಶ್ರಮಕ್ಕಾಗಿ ಶ್ಲಾಘಿಸುವ ಶೀರ್ಷಿಕೆಗಳನ್ನು ಹಂಚಿಕೊಂಡಿದ್ದಾರೆ.
ಕ್ಲೈಮ್‌ನೊಂದಿಗೆ ಆನ್‌ಲೈನ್ ಪೋಸ್ಟ್‌ನ ಸ್ಕ್ರೀನ್‌ರಾಬ್ (ಮೂಲ: ಎಕ್ಸ್/@aestheticayush6)
ಆದರೆ, ವೈರಲ್ ವೀಡಿಯೋ ಹಳೆಯದಾಗಿದೆ ಮತ್ತು ಚಂದ್ರಯಾನ-೩ ರ ಯಶಸ್ವಿ ಲ್ಯಾಂಡಿಂಗ್ ಗಿಂತ ಮೊದಲು ಚಿತ್ರೀಕರಿಸಲಾಗಿದೆ.
ವಾಸ್ತವವಾಗಿ
ಲಾಜಿಕಲಿ ಫ್ಯಾಕ್ಟ್ಸ್ ಈ ವೀಡಿಯೋವನ್ನು ಮೊದಲು ಎಕ್ಸ್ ಬಳಕೆದಾರ ಸಿದ್ಧಾರ್ಥ್ ಎಂಪಿ (@sdhrthmp) ಹಂಚಿಕೊಂಡಿದ್ದಾರೆ ಎಂದು ಕಂಡುಹಿಡಿದಿದೆ, ಅವರು ಭಾರತೀಯ ಇಂಗ್ಲಿಷ್ ಭಾಷೆಯ ಸುದ್ದಿ ವಾಹಿನಿಯ WION, ಪತ್ರಕರ್ತ ಎಂದು ಗುರುತಿಸಿಕೊಂಡರು. "ಡಾ. ಎಸ್. ಸೋಮನಾಥ್ ಮತ್ತು ತಂಡ #ಇಸ್ರೋ... ಇಂದು ರಾತ್ರಿ ನಿಮ್ಮ ಹೃದಯಗಳನ್ನು ಆಚರಿಸಿ ಮತ್ತು ನೃತ್ಯ ಮಾಡಿ. ಜಗತ್ತಿನಲ್ಲಿ ಎಷ್ಟು ಜನರು ೧.೪+ ಬಿಲಿಯನ್ ಹೃದಯಗಳನ್ನು ಹೆಮ್ಮೆಯಿಂದ ಹಿಗ್ಗಿಸುವ ಶಕ್ತಿ ಮತ್ತು ಜ್ಞಾನವನ್ನು ಹೊಂದಿದ್ದಾರೆ!" ಎಂಬ ಶೀರ್ಷಿಕೆಯೊಂದಿಗೆ ಅವರು ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಆದರೆ, ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅದಕ್ಕೆ ಉತ್ತರವಾಗಿ, ಈ ವೀಡಿಯೋ ಇತ್ತೀಚಿನದಲ್ಲ ಎಂದು ಅವರು ಕಾಮೆಂಟ್ ಹಾಕಿದ್ದಾರೆ. "ದಯವಿಟ್ಟು ಗಮನಿಸಿ: ಇದು ಈ ವರ್ಷದ ಮೊದಲಿನ ವೀಡಿಯೋವಾಗಿದೆ, ಮತ್ತು ಈ ಸಂಪೂರ್ಣ ಕಾರ್ಯಕ್ರಮಕ್ಕೆ ನಾನು ಔಪಚಾರಿಕ ಪ್ರವೇಶವನ್ನು ಹೊಂದಿದ್ದ ಕಾರಣದಿಂದ ನಾನು ಅದನ್ನು ಚಿತ್ರೀಕರಿಸಿದ್ದೇನೆ. ಈ ವೀಡಿಯೊ ಇಂದಿನ ರಾತ್ರಿಯದ್ದಲ್ಲ!" ಅವರ X ಪ್ರೊಫೈಲ್‌ನ ಪ್ರಕಾರ, ಸಿದ್ಧಾರ್ಥ್ ಅವರ ವರದಿಗಾರಿಕೆಯ ಪ್ರಾಥಮಿಕ ಕ್ಷೇತ್ರಗಳು ಇಸ್ರೋ, ರಕ್ಷಣೆ, ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳು, ವೈಶಿಷ್ಟ್ಯಗಳು ಮತ್ತು ಶಿಕ್ಷಣವನ್ನು ಒಳಗೊಂಡಿವೆ.
ವೈರಲ್ ವೀಡಿಯೋದ ಕುರಿತು ಹೆಚ್ಚಿನ ಮಾಹಿತಿಗಾಗಿ ಲಾಜಿಕಲಿ ಫ್ಯಾಕ್ಟ್ಸ್ ಸಿದ್ಧಾರ್ಥ್ ಎಂಪಿ ಅವರನ್ನು ಸಂಪರ್ಕಿಸಿತು ಮತ್ತು ಅವರು "ಜುಲೈ ೨೦೨೩ ರ ೧ನೇ ವಾರದಲ್ಲಿ" ವೀಡಿಯೋವನ್ನು ಸೆರೆಹಿಡಿದಿದ್ದಾರೆ ಎಂದು ನಮಗೆ ತಿಳಿಸಿದರು.
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಅವರು, "ಇದು (ವಿಡಿಯೋ) ಬೆಂಗಳೂರಿನಲ್ಲಿ ಜುಲೈನಲ್ಲಿ (ಕಳೆದ ತಿಂಗಳು) ನಡೆದ ಕಾರ್ಯಕ್ರಮದಿಂದ ಬಂದಿದೆ. ಇದು ಜಿ೨೦ ಬಾಹ್ಯಾಕಾಶ ಆರ್ಥಿಕ ನಾಯಕರ ಸಭೆಯ ಸಾಂಸ್ಕೃತಿಕ ರಾತ್ರಿ ಕಾರ್ಯಕ್ರಮ."
ಇಸ್ರೋದ ಅಧಿಕೃತ ವೆಬ್‌ಸೈಟ್ ಪ್ರಕಾರ, ಭಾರತದ ಜಿ೨೦ ಪ್ರೆಸಿಡೆನ್ಸಿ ಅಡಿಯಲ್ಲಿ, ಬಾಹ್ಯಾಕಾಶ ಆರ್ಥಿಕ ನಾಯಕರ ಸಭೆಯ (Space Economy Leaders Meeting) ನಾಲ್ಕನೇ ಆವೃತ್ತಿಯು ಜುಲೈ ೬ ರಂದು ಬೆಂಗಳೂರಿನಲ್ಲಿ ನಡೆಯಿತು. ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು "೧೮ ಜಿ ೨೦ ದೇಶಗಳು, ೮ ಆಹ್ವಾನಿತ ದೇಶಗಳು ಮತ್ತು ೧ ಅಂತರರಾಷ್ಟ್ರೀಯ ಸಂಸ್ಥೆಯ ಬಾಹ್ಯಾಕಾಶ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳೊಂದಿಗೆ" ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವೆಬ್‌ಸೈಟ್ ತಿಳಿಸುತ್ತದೆ. "ದಿನದ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಲು, ಸಂತೋಷಕರ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಾಲಾ ಭೋಜನವನ್ನು ಆಯೋಜಿಸಲಾಗಿದೆ, ಇದು ಭಾರತದ ಶ್ರೀಮಂತ ಪರಂಪರೆ ಮತ್ತು ಆತಿಥ್ಯವನ್ನು ಪ್ರದರ್ಶಿಸುತ್ತದೆ" ಎಂದು ವೆಬ್‌ಸೈಟ್ ವರದಿ ಮಾಡಿದೆ.
ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ದಿನದಂದು ಎಸ್ ಸೋಮನಾಥ್ ಅವರ ಉಡುಗೆ ಮತ್ತು ವೈರಲ್ ವೀಡಿಯೋದಲ್ಲಿರುವ ಅವರ ಉಡುಪಿನ ಹೋಲಿಕೆ (ಮೂಲ: ಯೂಟ್ಯೂಬ್/ಇಸ್ರೋ, ಎಕ್ಸ್/@aestheticayush6/ಲಾಜಿಕಲಿ ಫ್ಯಾಕ್ಟ್ಸ್ ಇಂದ ಬದಲಾಯಿಸಲಾಗಿದೆ)
ಚಂದ್ರಯಾನ-೩ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡಿದ ನಂತರ ಇಸ್ರೋ ಮುಖ್ಯಸ್ಥರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ, ಸೋಮನಾಥ್ ಅವರು ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದರು ಮತ್ತು ವೈರಲ್ ವೀಡಿಯೋದಲ್ಲಿ ನೋಡಿದಂತೆ ಬ್ಲೇಜರ್ ಅಲ್ಲ ಎಂದು ಗಮನಿಸಬಹುದು.
ತೀರ್ಪು
ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಡ್ಯಾನ್ಸ್ ಮಾಡಿರುವ ವೀಡಿಯೋ ಇತ್ತೀಚಿನದಲ್ಲ ಮತ್ತು ಜುಲೈನಲ್ಲಿ ಆಯೋಜಿಸಲಾಗಿದ್ದ ಇಸ್ರೋ-ಜಿ೨೦ ಕಾರ್ಯಕ್ರಮದಲ್ಲಿ ಚಿತ್ರಿಕರಿಸಿದ್ದು. ಆದ್ದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.
ಅನುವಾದಿಸಿದವರು: ರಜಿನಿ ಕೆ.ಜಿ