ಮೂಲಕ: ವಿವೇಕ್ ಜೆ
ಜುಲೈ 5 2023
ವೈರಲ್ ಆಗಿರುವುದು ಮಲಪ್ಪುರಂನ ಕಾಳಿಕಾವು ಎಂಬಲ್ಲಿ ಡಿವೈಎಫ್‌ಐ ಆಯೋಜಿಸಿದ್ದ ಬೀದಿ ನಾಟಕದ ವೈರಲ್ ವೀಡಿಯೋವಾಗಿದ್ದು, ಇದು ನೈಜ ಘಟನೆಯಲ್ಲ.
ಸಂದರ್ಭ
ಕೇರಳದಲ್ಲಿ ಮಹಿಳಾ ಆರ್.ಎಸ್.ಎಸ್ ಕಾರ್ಯಕರ್ತೆಯೊಬ್ಬರನ್ನು ಇಬ್ಬರು ಪುರುಷರು ಕೊಂದಿದ್ದಾರೆಂದು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇಬ್ಬರು ವ್ಯಕ್ತಿಗಳು ಒಬ್ಬ ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಗುಂಡು ಹೊಡೆಯುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಹಲವಾರು ಬಲಪಂಥೀಯ ವ್ಯಕ್ತಿಗಳು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿರುವ ಪೋಷ್ಟ್ ನ ಶೀರ್ಷಿಕೆಗಳಲ್ಲಿ ಒಂದನ್ನು ಕನ್ನಡಕ್ಕೆ ಅನುವಾದಿಸಿದಾಗ “ಜಿಹಾದಿಗಳು ಆರ್.ಎಸ್.ಎಸ್ ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಗುಂಡು ಹಾರಿಸಿದ್ದಾರೆ” ಎಂದು ಹೇಳುತ್ತದೆ. ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇಂತಹ ಹಲವಾರು ಪೋಷ್ಟ್ ಗಳು ಕಂಡುಬಂದಿವೆ. ಆದರೆ, ಈ ವೀಡಿಯೋವನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಆರ್.ಎಸ್.ಎಸ್ ಕಾರ್ಯಕರ್ತೆಯ ಮೇಲೆ ಗುಂಡು ಹಾರಿಸಲಾಗಿಲ್ಲ.
ವಾಸ್ತವವಾಗಿ
ಮಲಯಾಳಂನಲ್ಲಿರುವ ವೈರಲ್ ವೀಡಿಯೋದ ಸಂಭಾಷಣೆಯನ್ನು ಸೂಕ್ಷ್ಮವಾಗಿ ಆಲಿಸಿದಾಗ, ಈ ವೀಡಿಯೋ ಬೀದಿ ನಾಟಕದಿಂದ ಬಂದಿದೆ ಎಂಬುದು ಸ್ಪಷ್ಟವಾಗುತ್ತದೆ, ಏಕೆಂದರೆ ಸಂಭಾಷಣೆಗಳು ಸ್ಕ್ರಿಪ್ಟ್ ಮಾಡಿದಂತೆ ಕೇಳುತ್ತಿವೆ. ಕನ್ನಡಕ್ಕೆ ಅನುವಾದಿಸಿದಾಗ ಅದರ ಆಡಿಯೋ ಹೀಗೆ ಹೇಳುತ್ತದೆ, “ಅವಳು ಹೋರಾಟಗಾರ್ತಿ... ಹೋರಾಟ ಮಾಡು... ಆರ್.ಎಸ್.ಎಸ್‌ನ ವಿರುದ್ಧ ಮಾತಾಡಿದಳು... ಕೊನೆಗೆ ನೋಡು... ಈಗ ಆರ್.ಎಸ್.ಎಸ್ ನವರು ಆಕೆಯನ್ನೂ ಕೊಂದಿದ್ದಾರೆ…ಅವನನ್ನು ಕಟ್ಟಿಹಾಕಿ!... ಏನು…? ನೀವು ಈ ಬಡ ಪತ್ರಕರ್ತೆಯನ್ನು ಏಕೆ ಕೊಂದಿದ್ದೀರಿ?" ಇದಕ್ಕೆ ದಾಳಿಕೋರರಲ್ಲಿ ಒಬ್ಬರು, "ನಾವು ಆರ್.ಎಸ್.ಎಸ್‌ನವರು ರಾಷ್ಟ್ರೀಯವಾದಿಗಳು" ಎಂದು ಹೇಳುತ್ತಾರೆ.
ಕೇರಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತೆಯೊಬ್ಬರನ್ನು ಹತ್ಯೆಗೈದಿರುವ ವರದಿಗಳನ್ನು ಹುಡುಕುತ್ತಾ ಹೋದಾಗ, ಬೀದಿ ನಾಟಕದ ವೀಡಿಯೋವನ್ನು ಆರ್.ಎಸ್.ಎಸ್ ಮಹಿಳಾ ಕಾರ್ಯಕರ್ತೆಯ ಕೊಲೆ ಎಂದು ತಪ್ಪಾಗಿ ಶೇರ್ ಮಾಡಿರುವ ಹಲವಾರು ವರದಿಗಳು ನಮಗೆ ಕಂಡುಬಂದಿವೆ. ಇದೇ ವೀಡಿಯೋ ಸೆಪ್ಟೆಂಬರ್ ೨೦೧೭ ರಲ್ಲಿ ವೈರಲ್ ಆಗಿತ್ತು. ಅದೇ ತಿಂಗಳು ಬೆಂಗಳೂರಿನಲ್ಲಿ ಕಾರ್ಯಕರ್ತೆ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿತ್ತು ಮತ್ತು ವೀಡಿಯೋದಲ್ಲಿ ಉಲ್ಲೇಖಿಸಲಾದ ಪತ್ರಕರ್ತೆ ಅವರೇ ಎಂದು ಸುದ್ದಿ ವರದಿಗಳು ಗಮನಿಸಿವೆ.
ಸೆಪ್ಟೆಂಬರ್ ೧೩, ೨೦೧೭ ರಂದು ಪ್ರಕಟವಾದ ನ್ಯೂಸ್ ಕ್ಲಿಕ್‌ನ ಒಂದು ವರದಿಯು ಈ ವೀಡಿಯೋ "ಮೌನವು ಅಪಾಯಕಾರಿ" ಎಂಬ ಅರ್ಥವನ್ನು ಕೊಡುವ ಹೆಸರಿನ ಬೀದಿ ನಾಟಕದಿಂದ ಬಂದಿದೆ ಮತ್ತು ಇದನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಕಾಳಿಕಾವುನಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಕ್ಷದ ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಆಯೋಜಿಸಿದೆ ಎಂದು ವರದಿಮಾಡಿದೆ. ಈ ವರದಿಯು ಡಿವೈಎಫ್‌ಐ ಕಾಳಿಕಾವು ಏರಿಯಾ ಕಾರ್ಯದರ್ಶಿ ಸಿ.ಟಿ ಸಕ್ಕರಿಯಾ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ, “ಆರೆಸ್ಸೆಸ್ ಹಿಂಸಾಚಾರದ ವಿರುದ್ಧದ ಅಭಿಯಾನದ ಭಾಗವಾಗಿ ಈ ನಾಟಕವನ್ನು ಆಯೋಜಿಸಲಾಗಿದೆ. ಇದು ಜಾತ್ಯತೀತ ಜನರ ಮೇಲೆ ಸಂಘಪರಿವಾರದ ಹಿಂಸಾಚಾರ ಮತ್ತು ದೈಹಿಕ ದಾಳಿಯ ಬಗ್ಗೆ ಮಾತನಾಡುತ್ತದೆ. ಸೆಪ್ಟೆಂಬರ್ ೨೦೧೭ ರ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಸಕ್ಕರಿಯಾ ಬೀದಿ ನಾಟಕದಲ್ಲಿ ಪಾತ್ರರಾಗಿ ಪಾಲ್ಗೊಂಡಿದ್ದರು.
ಮಲಯಾಳಂನಲ್ಲಿ 'ಗೌರಿ ಲಂಕೇಶ್,' 'ಸ್ಟ್ರೀಟ್ ಪ್ಲೇ,' ಮತ್ತು 'ಮಲಪ್ಪುರಂ ಡಿವೈಎಫ್‌ಐ' ಮೊದಲಾದ ಕೀವರ್ಡ್‌ಗಳನ್ನು ಬಳಸಿ ಸರ್ಚ್ ಮಾಡುವ ಮೂಲಕ, ಸೆಪ್ಟೆಂಬರ್ ೨೦೧೭ ರಲ್ಲಿ ಹಂಚಿಕೊಂಡ ಹಲವಾರು ಫೇಸ್‌ಬುಕ್ ವೀಡಿಯೋಗಳನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊಗಳಲ್ಲಿ ಒಂದಾದ ಹೆಚ್ಚು ವಿಸ್ತೃತ ಐದು ನಿಮಿಷಗಳ ಆವೃತ್ತಿಯನ್ನು "DYFI Kalikavu MC" ಎಂಬ ಹೆಸರಿನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಪೋಷ್ಟ್ ನ ಶೀರ್ಷಿಕೆಯು, "ಇದು ಕಾಳಿಕಾವು ಡಿವೈಎಫ್‌ಐ...ಇಲ್ಲಿ ಆರ್.ಎಸ್.ಎಸ್ ವಿರುದ್ಧದ ಒಂದು ಅದ್ಭುತ ಅಂಶವಿದೆ... ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗಾಗಿ ಆರ್.ಎಸ್.ಎಸ್ ವಿರುದ್ಧ ಸಾರ್ವಜನಿಕ ವಿಚಾರಣೆಯ ಬೀದಿ ನಾಟಕ ಇದಾಗಿದೆ." ಇದೇ ರೀತಿಯ ವೀಡಿಯೋಗಳನ್ನು ಕೇರಳದಾದ್ಯಂತ ಡಿವೈಎಫ್‌ಐ ಸದಸ್ಯರು ಹಂಚಿಕೊಂಡಿದ್ದಾರೆ. ಬೀದಿ ನಾಟಕದ ಕುರಿತು ಹೆಚ್ಚಿನ ವಿವರಗಳಿಗಾಗಿ ನಾವು ಮಲಪ್ಪುರಂನಲ್ಲಿರುವ ಡಿವೈಎಫ್‌ಐ ಅನ್ನು ಸಂಪರ್ಕಿಸಿದ್ದೇವೆ ಮತ್ತು ಅವರ ಪ್ರತಿಕ್ರಿಯೆ ಸಿಕ್ಕಿದ ನಂತರ ಈ ಫ್ಯಾಕ್ಟ್ ಚೆಕ್ ಅನ್ನು ನವೀಕರಿಸುತ್ತೇವೆ.
ತೀರ್ಪು
ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿರುವ ವೀಡಿಯೋ ಇತ್ತೀಚಿನದಲ್ಲ ಮತ್ತು ನೈಜ ಘಟನೆಯನ್ನು ತೋರಿಸುವುದಿಲ್ಲ. ಕೇರಳದ ಮಲಪ್ಪುರಂನಲ್ಲಿ ಸಿಪಿಐ(ಎಂ) ಯುವ ಘಟಕ ಡಿವೈಎಫ್‌ಐ ಪ್ರದರ್ಶಿಸಿದ ಬೀದಿ ನಾಟಕವನ್ನು ಈ ವೀಡಿಯೋ ತೋರಿಸುತ್ತದೆ. ವೀಡಿಯೋದ ವಿಸ್ತೃತ ಆವೃತ್ತಿಯು ಇದು ಬೀದಿ ನಾಟಕ ಎಂದು ಖಚಿತಪಡಿಸುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.