ಮುಖಪುಟ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಶಾಸಕರೊಬ್ಬರು ಥಳಿತಕ್ಕೆ ಒಳಗಾಗಿದ್ದರು ಎಂದು ಹೇಳಿಕೊಂಡು ಒಡಿಶಾದ ಹಳೆಯ ವೀಡಿಯೋ ಹಂಚಿಕೊಳ್ಳಲಾಗಿದೆ

ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಶಾಸಕರೊಬ್ಬರು ಥಳಿತಕ್ಕೆ ಒಳಗಾಗಿದ್ದರು ಎಂದು ಹೇಳಿಕೊಂಡು ಒಡಿಶಾದ ಹಳೆಯ ವೀಡಿಯೋ ಹಂಚಿಕೊಳ್ಳಲಾಗಿದೆ

ಮೂಲಕ: ರಜಿನಿ ಕೆ.ಜಿ

ಸೆಪ್ಟೆಂಬರ್ 20 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಶಾಸಕರೊಬ್ಬರು ಥಳಿತಕ್ಕೆ ಒಳಗಾಗಿದ್ದರು ಎಂದು ಹೇಳಿಕೊಂಡು ಒಡಿಶಾದ ಹಳೆಯ ವೀಡಿಯೋ ಹಂಚಿಕೊಳ್ಳಲಾಗಿದೆ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

೨೦೨೨ ರ ಬ್ಲಾಕ್ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಒಡಿಶಾದ ಸ್ಥಳೀಯ ಬಿಜೆಡಿ ಶಾಸಕ ಪ್ರಶಾಂತ್ ಜಗದೇವ್ ಅವರನ್ನು ಥಳಿಸುತ್ತಿರುವುದನ್ನು ಈ ವೀಡಿಯೋ ತೋರಿಸುತ್ತದೆ.

ಮಧ್ಯ ಭಾರತ ರಾಜ್ಯವಾದ ಮಧ್ಯಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರವು ತೀವ್ರಗೊಳ್ಳುತ್ತಿದ್ದಂತೆ ಹಲವಾರು ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೋಗಳನ್ನು ವಿವಿಧ ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇಲ್ಲಿನ ಹೇಳಿಕೆ 

ಸೆಪ್ಟೆಂಬರ್ ೧೩, ೨೦೨೩ ರಂದು, ಮುಂಬರುವ ಚುನಾವಣೆಗಳಿಗೆ ಪ್ರಚಾರ ಮಾಡುತ್ತಿದ್ದಾಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರೊಬ್ಬರ ಮೇಲೆ ಗುಂಪೊಂದು ದಾಳಿ ಮಾಡಿದೆ ಎಂದು ಹೇಳುವ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೋದ ಶೀರ್ಷಿಕೆಯು (ಮೂಲತಃ ಹಿಂದಿಯಲ್ಲಿದೆ) "ಧರ್ಮದ ಹೆಸರಿನಲ್ಲಿ ಮತ ಕೇಳಲು ಹೋದ ಮಧ್ಯಪ್ರದೇಶದ ಬಿಜೆಪಿ ಶಾಸಕರು ಮತ್ತು ಬೆಂಬಲಿಗರನ್ನು ಸಾರ್ವಜನಿಕರಿಂದ ಥಳಿಸಲಾಗಿದೆ. ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರದಿಂದ ಕೋಪಗೊಂಡ ಭಾರತದ ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ, ಅವರು ಬಿಜೆಪಿಗೆ ಪಾಠ ಕಲಿಸಲು ಪ್ರಾರಂಭಿಸಿದ್ದಾರೆ." ಎಂದು ಹೇಳಿಕೊಂಡಿದೆ.

ಕಾರಿನೊಳಗೆ ಕೆಂಪು ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬರು ಕುಳಿತಿದ್ದು, ಆತನ ಸುತ್ತ ದೊಡ್ಡ ಗುಂಪು ಜಮಾಯಿಸಿ ಆತನ ಮೇಲೆ ಹಲ್ಲೆಗೆ ಯತ್ನಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಕಾರಿನ ಬಳಿ ಒಬ್ಬ ಪೊಲೀಸ್ ಅಧಿಕಾರಿ ಜನಸಂದಣಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು ಮತ್ತು ಕಾರನ್ನು ದೊಣ್ಣೆಗಳಿಂದ ಹೊಡೆಯಲು ಆ ಗುಂಪು ಪ್ರಯತ್ನಿಸುವಾಗ ಜನಸಂದಣಿಯಿಂದ ದೂರ ಹೋಗಲು ಆ ಕಾರು ಪ್ರಯತ್ನಿಸುತ್ತಿರುವುದನ್ನು ಕೂಡ ಕಾಣಬಹುದು. ಈ ಪೋಷ್ಟ್ ೫,೦೦೦ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಇಂತಹ ಪೋಷ್ಟ್ ಗಳ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ ಈ ಹೇಳಿಕೆ ತಪ್ಪು. ೨೦೨೨ ರಲ್ಲಿ ಬಿಜು ಜನತಾ ದಳ (ಬಿಜೆಡಿ) ಶಾಸಕರೊಬ್ಬರ ಮೇಲೆ ಹಲ್ಲೆ ನಡೆದ ಪ್ರಕರಣದ ಈ ವೀಡಿಯೋ ಒಡಿಶಾದಿಂದ ಬಂದಿದೆ.

ನಾವು ಇದನ್ನು ಹೇಗೆ ಕಂಡುಕೊಂಡಿದ್ದೇವೆ?

ವೀಡಿಯೋ ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಮಾರ್ಚ್ ೧೩, ೨೦೨೨ ರಂದು ‘OTV’ (ಒಡಿಶಾ ಟಿವಿ) ಹಂಚಿಕೊಂಡ ವೀಡಿಯೋ ಕ್ಲಿಪ್‌ಗೆ ನಮ್ಮನ್ನು ಕರೆದೊಯ್ಯಿತು. ಇದು "ಒಡಿಶಾ ಎಂಎಲ್‌ಎ ಪ್ರಶಾಂತ್ ಜಗದೇವ್ ಬನ್‌ಪುರದಲ್ಲಿ ಜನಸಂದಣಿಯತ್ತ ಗಾಡಿ ಓಡಿಸುವುದನ್ನು ವೀಕ್ಷಿಸಿ (ಕನ್ನಡಕ್ಕೆ ಅನುವಾದಿಸಲಾಗಿದೆ)." ಈ ವೀಡಿಯೋದ ೦:೧೩ ಸೆಕೆಂಡುಗಳ ಸಮಯದಲ್ಲಿ, ನಾವು ವೈರಲ್ ಕ್ಲಿಪ್ ನ ಅದೇ ದೃಶ್ಯಗಳನ್ನು ನೋಡಬಹುದು.

ವೈರಲ್ ವೀಡಿಯೋ ಮತ್ತು ೨೦೨೨ ರ ಒಡಿಶಾ ವೀಡಿಯೋಗಳ ಮಧ್ಯೆ ಹೋಲಿಕೆ. (ಮೂಲ: ಎಕ್ಸ್/ಯೂಟ್ಯೂಬ್/ಸ್ಕ್ರೀನ್‌ಶಾಟ್)

ಒಡಿಶಾದ ಸುದ್ದಿ ವಾಹಿನಿ ಕಳಿಂಗ ಟಿವಿ ಇದೇ ಘಟನೆಯ ವೀಡಿಯೋವನ್ನು ಮಾರ್ಚ್ ೧೨, ೨೦೨೨ ರಂದು ವಿಭಿನ್ನ ಕೋನದಿಂದ ಪ್ರಕಟಿಸಿದೆ. ಅದರ ಶೀರ್ಷಿಕೆ ಹೀಗಿತ್ತು: “ಖೋರ್ಧಾದ ಬಾನಾಪುರದಲ್ಲಿ ಜನಸಮೂಹವನ್ನು ಕೆದಕಿದ ನಂತರ ಆತನ ಕಾರನ್ನು ಜನರ ಮಧ್ಯಕ್ಕೆ ಓಡಿಸಿದ ಶಾಸಕ ಪ್ರಶಾಂತ್ ಜಗದೇವ್ ಅವರನ್ನು ಥಳಿಸಲಾಗಿದೆ | ಕಳಿಂಗ ಟಿವಿ (ಕನ್ನಡಕ್ಕೆ ಅನುವಾದಿಸಲಾಗಿದೆ).”

ಒಡಿಶಾದ ಬಾನಾಪುರದ ಶಾಸಕ ಪ್ರಶಾಂತ್ ಜಗದೇವ್ ಅವರ ೨೦೨೨ ರ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್)

ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಮಾರ್ಚ್ ೧೨, ೨೦೨೨ ರಂದು, ಬ್ಲಾಕ್ ಅಧ್ಯಕ್ಷರ ಚುನಾವಣೆಗಾಗಿ ಬಿಜೆಪಿ ಬೆಂಬಲಿಗರು ಸೇರಿದಂತೆ ಭಾರಿ ಜನಸಮೂಹವು ಬಾಣಾಪುರ ಬ್ಲಾಕ್ ಅಭಿವೃದ್ಧಿ ಕಚೇರಿ (ಬಿಡಿಒ) ಮುಂದೆ ಜಮಾಯಿಸಿತು. ಒಡಿಶಾದ ಚಿಲಿಕಾ ಕ್ಷೇತ್ರದ ಶಾಸಕ ಪ್ರಶಾಂತ್ ಜಗದೇವ್ ಅವರು ಅತ್ಯಂತ ಇಕ್ಕಟ್ಟಾದ ರಸ್ತೆಯ ಮೂಲಕ ಕಾರನ್ನು ಓಡಿಸಲು ಪ್ರಯತ್ನಿಸಿದಾಗ, ಜನರು ತಕ್ಷಣವೇ ಅವರನ್ನು ತಡೆದರು. ಆದಾಗ್ಯೂ, ಅವರು ಜನಸಂದಣಿಯ ಮೂಲಕ ವಾಹನವನ್ನು ಚಲಾಯಿಸಿ ಹಲವಾರು ಜನರನ್ನು ಗಾಯಗೊಳಿಸಿದರು. ನಂತರ ಕೋಪಗೊಂಡ ಗುಂಪು ಬಿಜೆಡಿ ಶಾಸಕ ಮತ್ತು ಅವರ ವಾಹನದ ಮೇಲೆ ದಾಳಿ ನಡೆಸಿದ್ದು, ಅಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಚೇತರಿಸಿಕೊಂಡ ನಂತರ ಅವರನ್ನು ಬಂಧಿಸಲಾಯಿತು ಎಂದು ಕೂಡ ವರದಿ ಮಾಡಿದೆ.

ಜುಲೈ ೨೯, ೨೦೨೨ ರಂದು, ಲೀಗಲ್ ನ್ಯೂಸ್ ಪೋರ್ಟಲ್ ಲೈವ್ ಲಾ, "ಈ ರೋಡ್ ರೇಜ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಗದೇವ್‌ಗೆ ಜಾಮೀನು ನೀಡಿದೆ ಆದರೆ ಒಂದು ವರ್ಷದವರೆಗೆ ಯಾವುದೇ ಸಾರ್ವಜನಿಕ ರಾಲಿಗಳನ್ನು ಉದ್ದೇಶಿಸಿ ಮಾತನಾಡುವುದನ್ನು ನಿಷೇಧಿಸಿದೆ" ಎಂದು ವರದಿ ಮಾಡಿದೆ.

ತೀರ್ಪು 

ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಒಡಿಶಾದ ಹಳೆಯ ವೀಡಿಯೋವನ್ನು ತಪ್ಪಾಗಿ ಲಿಂಕ್ ಮಾಡಲಾಗಿದೆ. ವೀಡಿಯೋದಲ್ಲಿರುವ ವ್ಯಕ್ತಿ ಒಡಿಶಾದ ಚಿಲಿಕಾ ಕ್ಷೇತ್ರದ ಬಿಜೆಡಿ ಶಾಸಕರಾಗಿದ್ದು, ಮಧ್ಯಪ್ರದೇಶದ ಬಿಜೆಪಿ ಶಾಸಕರಲ್ಲ.

ಅನುವಾದಿಸಿದವರು: ವಿವೇಕ್.ಜೆ 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ