ಮೂಲಕ: ರಾಹುಲ್ ಅಧಿಕಾರಿ
ಡಿಸೆಂಬರ್ 8 2023
ವೈರಲ್ ವೀಡಿಯೋ ೨೦೨೧ ರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಸೆರೆಹಿಡಿಯಲಾಗಿದೆ. ಇತ್ತೀಚಿನ ಚೆನ್ನೈ ಮಳೆಗೂ ಇದಕ್ಕೂ ಸಂಬಂಧವಿಲ್ಲ.
ಮೈಚಾಂಗ್ ಚಂಡಮಾರುತವು ಇತ್ತೀಚೆಗೆ ಭಾರತದ ದಕ್ಷಿಣ ಕರಾವಳಿ ರಾಜ್ಯಗಳನ್ನು ಅಪ್ಪಳಿಸಿತು, ಇದರ ಪರಿಣಾಮವಾಗಿ ಗಮನಾರ್ಹ ಹಾನಿ ಸಂಭವಿಸಿದೆ. ಚಂಡಮಾರುತವು ಚೆನ್ನೈಗೆ ಭಾರಿ ಮಳೆಯನ್ನು ತಂಡಿದ್ದು, ಇದು ನಗರದಲ್ಲಿ ಪ್ರವಾಹದಂತಹ ಪರಿಸ್ಥಿತಿಗೆ ಕಾರಣವಾಯಿತು, ಬೀದಿಗಳು ಜಲಾವೃತಗೊಂಡಿವೆ ಮತ್ತು ದೈನಂದಿನ ಜೀವನವು ತೀವ್ರವಾಗಿ ಅಸ್ತವ್ಯಸ್ತವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮೈಚಾಂಗ್‌ನಿಂದ ಪ್ರಚೋದಿಸಲ್ಪಟ್ಟ ನಿರಂತರ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ ಚೆನ್ನೈನಲ್ಲಿ ಒಟ್ಟು ೧೭ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇಲ್ಲಿನ ಹೇಳಿಕೆ ಏನು?
ಈ ಹಿನ್ನೆಲೆಯಲ್ಲಿ ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ಮನೆ ಕೊಚ್ಚಿ ಹೋಗುತ್ತಿರುವುದನ್ನು ತೋರಿಸುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಒಂದು ಅಂತಸ್ತಿನ ನದಿ ತೀರದ ಮನೆ ನಿಧಾನವಾಗಿ ಹಿಂದಕ್ಕೆ ಉರುಳಿ ನದಿಗೆ ಬೀಳುವುದನ್ನು ವೀಡಿಯೋ ತೋರಿಸುತ್ತದೆ. ನದಿಯ ಭಾರೀ ಪ್ರವಾಹವು ಕಟ್ಟಡವನ್ನು ಅಳಿಸಿಹಾಕುತ್ತದೆ ಮತ್ತು ಅದು ಸೆಕೆಂಡುಗಳಲ್ಲಿ ನೀರಿನಲ್ಲಿ ಕಣ್ಮರೆಯಾಗುತ್ತದೆ. ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಘಟನೆಯನ್ನು ಪ್ರಸ್ತುತ ಚೆನ್ನೈನಲ್ಲಿನ ಪ್ರವಾಹದಂತಹ ಪರಿಸ್ಥಿತಿಗೆ ಲಿಂಕ್ ಮಾಡಿದ್ದಾರೆ. ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಬರೆಯುವ ಸಮಯದಲ್ಲಿ ೭೭,೦೦೦ ವೀಕ್ಷಣೆಗಳು ಮತ್ತು ೧೩೦ ಲೈಕ್ ಗಳನ್ನು ಗಳಿಸಿದೆ. ವೈರಲ್ ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಆತ್ಮೀಯ ಸ್ನೇಹಿತರೇ ಚೆನ್ನೈನಲ್ಲಿ.. ದಯವಿಟ್ಟು ಸುರಕ್ಷಿತವಾಗಿ ಮತ್ತು ಸುರಕ್ಷಿತವಾಗಿರಿ. ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಿ. ಸಾಕಷ್ಟು ಭಯಾನಕ ದೃಶ್ಯಗಳು. ಆದರೆ ಶಾಂತವಾಗಿರಿ. #ChennaiFloods #ChennaiRains2023 #ChennaiRains #ChennaiCyclone #CycloneMichuang @Portalcoin #Portalcoin. ”
ಆದರೆ ವೈರಲ್ ವೀಡಿಯೋವನ್ನು ೨೦೨೧ ರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಸೆರೆಹಿಡಿಯಲಾಗಿದೆ ಇತ್ತೀಚೆಗೆ ಚೆನ್ನೈನಲ್ಲಿ ಅಲ್ಲ.
ವಾಸ್ತವಾಂಶಗಳು
ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್-ಇಮೇಜ್ ಸರ್ಚ್ ಮಾಡಿದಾಗ ಈ ವೀಡಿಯೋ ೨೦೨೧ರ ಹಿಂದಿನದ್ದು ಎಂದು ತಿಳಿದುಬಂದಿದೆ. ಹಲವಾರು ಮುಖ್ಯವಾಹಿನಿಯ ಮಾಧ್ಯಮಗಳು ಅಕ್ಟೋಬರ್ ೨೦೨೧ ರಲ್ಲಿ ವೀಡಿಯೋವನ್ನು ಪ್ರಕಟಿಸಿವೆ. ಸಿ ಏನ್ ಏನ್ -ನ್ಯೂಸ್ ೧೮ ಅಕ್ಟೋಬರ್ ೧೮, ೨೦೨೧ ರಂದು ಯೂಟ್ಯೂಬ್ ನಲ್ಲಿ ವೀಡಿಯೋವನ್ನು ಹಂಚಿಕೊಂಡಿದೆ. ಕೊಟ್ಟಾಯಂನ ಮುಂಡಕಯಂನಲ್ಲಿ ನದಿಯ ಬಲವಾದ ಪ್ರವಾಹದಲ್ಲಿ ಮನೆ ಕೊಚ್ಚಿಹೋಗಿದೆ ಎಂದು ವಿವರಿಸಲಾಗಿದೆ.
ಅಕ್ಟೋಬರ್ ೧೮, ೨೦೨೧ ರಂದು ದಿ ಹಿಂದೂ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಸಹ ವೀಡಿಯೋವನ್ನು ಪ್ರಕಟಿಸಲಾಗಿದೆ. ವೀಡಿಯೋದ ವಿವರಣೆಯು ಈ ಪ್ರದೇಶದಲ್ಲಿ ಭಾರೀ ಮಳೆಯಿಂದ ಉಂಟಾದ ನದಿಯ ಬಲವಾದ ಪ್ರವಾಹಗಳು ಕೊಟ್ಟಾಯಂನ ಮುಂಡಕಾಯಂನಲ್ಲಿ ಮನೆಯನ್ನು ಕೊಚ್ಚಿಹಾಕಿದೆ ಎಂದು ಹೇಳುತ್ತದೆ.
ಅಕ್ಟೋಬರ್ ೧೮, ೨೦೨೧ ರಂದು ಟೈಮ್ಸ್ ಆಫ್ ಇಂಡಿಯಾ ವೈರಲ್ ವೀಡಿಯೋದೊಂದಿಗೆ ಪ್ರಕಟಿಸಿದ ಘಟನೆಯ ವಿಸ್ತೃತ ವರದಿಯನ್ನು ನಾವು ಕಂಡುಕೊಂಡೆವು. ವರದಿಯ ಪ್ರಕಾರ, ಈ ಮನೆಯು ಮುಂಡಕಾಯಂ ಪಟ್ಟಣದ ಬಳಿ ಕಲ್ಲೆಪ್ಪಲಂ ರಸ್ತೆಯಲ್ಲಿರುವ ನದಿಯ ದಡದಲ್ಲಿ ಸಥಳಿಸಿದೆ. ಮಾಲೀಕ ಕೆಪಿ ಜೆಬಿ ಕೆಲಸಕ್ಕೆ ಹೋಗಿದ್ದು, ಪತ್ನಿ ಪುಷ್ಪಾ ಹಾಗೂ ಮಗಳು ರೇವತಿ ಮನೆಯಲ್ಲಿದ್ದರು. ನೆರೆಹೊರೆಯವರು ಮನೆಯಲ್ಲಿ ಬಿರುಕುಗಳನ್ನು ಕಂಡು ಪುಷ್ಪಾ ಅವರನ್ನು ಎಚ್ಚರಿಸಿದರು, ನಂತರ ತಾಯಿ ಮತ್ತು ಮಗಳು ಮನೆ ಕೊಚ್ಚಿಕೊಂಡು ಹೋಗುವ ಕೆಲವೇ ನಿಮಿಷಗಳ ಮೊದಲು ಮನೆಯನ್ನು ಖಾಲಿ ಮಾಡಿದರು. ನೆರೆಹೊರೆಯವರು ಕುಸಿತದ ವೀಡಿಯೋವನ್ನು ಚಿತ್ರೀಕರಿಸಿದ್ದರು ಎಂದು ವರದಿ ಹೇಳುತ್ತದೆ.
ಕೊಟ್ಟಾಯಂ ಮೂಲದ ಒನ್ಮನೋರಮಾ ಎಂಬ ಮಾಧ್ಯಮವು ಅಕ್ಟೋಬರ್ ೧೮, ೨೦೨೧ ರಂದು ಜೆಬಿ ಮತ್ತು ಪುಷ್ಪಾ ಅವರೊಂದಿಗಿನ ಸಂದರ್ಶನವನ್ನು ಪ್ರಕಟಿಸಿತ್ತು. ವರದಿಯು ವೈರಲ್ ವೀಡಿಯೋವನ್ನೂ ಸಹ ಒಳಗೊಂಡಿದೆ ಮತ್ತು ಇದನ್ನು ಜೆಬಿಯ ನೆರೆಯ ಅಮೀರ್ ಇಸ್ಮಾಯಿಲ್ ಅವರು ಸೆರೆಹಿಡಿಡಿದ್ದರು ಎಂದು ಹೇಳಲಾಗಿದೆ.
೨೦೨೧ ಕೊಟ್ಟಾಯಂ ಮಳೆ
ಅಕ್ಟೋಬರ್ ೨೩, ೨೦೨೧ ರಂದು ಪ್ರಕಟವಾದ ದಿ ಹಿಂದೂ ವರದಿಯ ಪ್ರಕಾರ, ಕೊಟ್ಟಾಯಂ ಮತ್ತು ಪತ್ತನಂತಿಟ್ಟದ ಪೂರ್ವದ ಉನ್ನತ ಶ್ರೇಣಿಗಳಲ್ಲಿ ಭಾರೀ ಮಳೆಯು ಮಧ್ಯ ತಿರುವಾಂಕೂರ್‌ನಲ್ಲಿ ಪ್ರವಾಹದ ಭೀತಿಯನ್ನು ಹೆಚ್ಚಿಸುತ್ತು. ಭಾರೀ ಮಳೆಯಿಂದಾಗಿ ಕೊಟ್ಟಾಯಂನ ಮಣಿಮಲಯಾರ್ ನದಿಯ ನೀರಿನ ಮಟ್ಟದಲ್ಲಿ ತೀವ್ರ ಏರಿಕೆಯಾಗಿತ್ತು ಎಂದು ವರದಿ ತಿಳಿಸುತ್ತದೆ. ಅಕ್ಟೋಬರ್ ೧೭, ೨೦೨೧ ರಿಂದ ಟೈಮ್ಸ್ ಆಫ್ ಇಂಡಿಯಾದ ಮತ್ತೊಂದು ವರದಿಯು ಕೊಟ್ಟಾಯಂನಲ್ಲಿ ಭೂಕುಸಿತಗಳು ಮತ್ತು ಪ್ರವಾಹದಂತಹ ಪರಿಸ್ಥಿತಿಯ ನಡುವೆ ೧೩ ಸಾವುಗಳು ವರದಿಯಾಗಿವೆ ಎಂದು ಹೇಳಲಾಗಿದೆ.
ತೀರ್ಪು
ಕೇರಳದಲ್ಲಿ ನದಿ ನೀರಿನಿಂದ ಮನೆಯೊಂದು ಕೊಚ್ಚಿಹೋಗುತ್ತಿರುವ ಹಳೆಯ ವೀಡಿಯೋವನ್ನು ಮೈಚಾಂಗ್ ಚಂಡಮಾರುತಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ವೈರಲ್ ವೀಡಿಯೋವನ್ನು ಅಕ್ಟೋಬರ್ ೨೦೨೧ ರಲ್ಲಿ ಕೊಟ್ಟಾಯಂನ ಮುಂಡಕಾಯಂನಲ್ಲಿ ಸೆರೆಹಿಡಿಯಲಾಗಿದೆ ಮತ್ತು ಇತ್ತೀಚಿನ ಚೆನ್ನೈ ಮಳೆಗೆ ಸಂಬಂಧಿಸಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)