ಮೂಲಕ: ರಾಜೇಶ್ವರಿ ಪರಸ
ಡಿಸೆಂಬರ್ 12 2023
ಈ ವೀಡಿಯೋ ಜೂಲೈನಲ್ಲಿ ಸೆರೆಹಿಡಿಯಲಾಗಿದ್ದು, ತೆಲಂಗಾಣ ರಾಜ್ಯದ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಹೊಸ ಯೋಜನೆಯನ್ನು ಟೀಕಿಸಲು ಹಂಚಿಕೊಳ್ಳಲಾಗುತ್ತಿದೆ.
ಇಲ್ಲಿನ ಹೇಳಿಕೆ ಏನು?
ಇತ್ತೀಚೆಗೆ ದಕ್ಷಿಣ ಭಾರತದ ರಾಜ್ಯವಾದ ತೆಲಂಗಾಣದಲ್ಲಿ ಸರ್ಕಾರವನ್ನು ರಚಿಸಿದ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಏನ್ ಸಿ ), ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದಲ್ಲಿ, ಡಿಸೆಂಬರ್ ೯ ರಂದು ಮಹಾಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, ಮಹಿಳೆಯರು ಐಷಾರಾಮಿ ರಾಜ್ಯ ಬಸ್ಸುಗಳನ್ನು ಹೊರೆತುಪಡಿಸಿ ಇತರ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಯೋಜನೆ ಪ್ರಾರಂಭವಾದ ನಂತರ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಮಹಿಳೆಯರು ಜಗಳವಾಡುತ್ತಿದ್ದಾರೆ ಎಂದು ಹೇಳುವ ವೀಡಿಯೋವನ್ನು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಈ ಕ್ಲಿಪ್ ಅನ್ನು ತೆಲುಗು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದು ಅದರ ಶೀರ್ಷಿಕೆ, "ರೇವಂತ್ ರೆಡ್ಡಿ ಮೊದಲ ಯೋಜನೆ ಯಶಸ್ವಿಯಾಗಿದೆ. ಮಹಿಳೆಯರು ಉಚಿತ ಬಸ್‌ನಲ್ಲಿ ಜಗಳವಾಡುತ್ತಿದ್ದಾರೆ," ಎಂದು ಬರೆಯಲಾಗಿದೆ. ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಈ ವೀಡಿಯೋ ಕರ್ನಾಟಕದ್ದು, ತೆಲಂಗಾಣದಲ್ಲ.
ವಾಸ್ತವಾಂಶಗಳು
ಮೊದಲನೆಯದಾಗಿ, ವೀಡಿಯೋದಲ್ಲಿ ಮಾತನಾಡುವ ಭಾಷೆ ಕನ್ನಡ - ಕರ್ನಾಟಕದ ಅಧಿಕೃತ ರಾಜ್ಯ ಭಾಷೆ. ಎರಡನೆಯದಾಗಿ, ರಿವರ್ಸ್-ಇಮೇಜ್ ಸರ್ಚ್ ಮಾಡಿದಾಗ ಈ ವೀಡಿಯೋ ತೆಲಂಗಾಣದಲ್ಲಿ ಕಾಂಗ್ರೆಸ್ ವಿಜಯಶಾಲಿಯಾಗಿ ಹೊರಹೊಮ್ಮಿದ ಚುನಾವಣೆಗೂ ಮೊದಲೇ ಜುಲೈನಿಂದ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿತ್ತು ಎಂದು ನಾವು ಕಂಡುಕೊಂಡೆವು.
ಕನ್ನಡದ ಸುದ್ದಿವಾಹಿನಿ- ನ್ಯೂಸ್ ಫಸ್ಟ್ ನ ಎಕ್ಸ್ ಖಾತೆಯು ಈ ವೀಡಿಯೋವನ್ನು ಜುಲೈ ೧ ರಂದು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ, "ಫ್ರೀ ಬಸ್‌ನಲ್ಲಿ ಸೀಟ್‌ಗಾಗಿ ಮತ್ತೊಂದು ಜಡೆ ಜಗಳ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸೀಟ್‌ಗಾಗಿ ಮಹಿಳೆಯರು ಮಾರಾಮಾರಿಗಿಳಿದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. "
ವೀಡಿಯೋ ಮೊದಲ ಬಾರಿಗೆ ಕಾಣಿಸಿಕೊಂಡಾಗ ಸ್ಥಳೀಯ ಮಾಧ್ಯಮಗಳು ಕೂಡ ಘಟನೆಯ ಬಗ್ಗೆ ವರದಿ ಮಾಡಿದ್ದವು. ಸುದ್ದಿ ವೆಬ್‌ಸೈಟ್ ಕಲ್ಯಾಣ ವಾಯ್ಸ್ ಜುಲೈ ೨ ರಂದು "ರಾಯಚೂರಿನಲ್ಲಿ ಬಸ್ ಸೀಟುಗಳಿಗಾಗಿ ಮಹಿಳೆಯರ ಜಗಳ. ವಿಡಿಯೋ ವೈರಲ್" ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿತ್ತು. ವರದಿಯು ವೈರಲ್ ಕ್ಲಿಪ್‌ನ ಸ್ಪಷ್ಟ ಆವೃತ್ತಿಯನ್ನು ಹೊಂದಿದ್ದು, ಸಿರವಾರ ನಗರದಿಂದ ರಾಯಚೂರಿಗೆ ಹೋಗುತ್ತಿದ್ದ ಬಸ್‌ನಲ್ಲಿ ಜಗಳ ನಡೆದಿದೆ ಎಂದು ಉಲ್ಲೇಖಿಸಿದೆ.
ಮಹಿಳೆಯರಿಗೆ ಉಚಿತ ಸಾರ್ವಜನಿಕ ಸಾರಿಗೆಯನ್ನು ಒದಗಿಸುವ ಶಕ್ತಿ ಯೋಜನೆಯು ರಾಜ್ಯದಲ್ಲಿ ಜಾರಿಗೆ ಬಂದ ಕೂಡಲೇ ಕರ್ನಾಟಕದ ರಾಯಚೂರಿನಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪತ್ರಕರ್ತ ನೀಲಕಂಠ ಅವರು ಲಾಜಿಕಲ್ ಫ್ಯಾಕ್ಟ್ಸ್‌ಗೆ ತಿಳಿಸಿದರು.
ಲಾಜಿಕಲಿ ಫ್ಯಾಕ್ಟ್ಸ್ ಕೆಎಸ್‌ಆರ್‌ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಡಿಪೋ ಮ್ಯಾನೇಜರ್ ಒಬ್ಬರನ್ನು ಸಂಪರ್ಕಿಸಿತು, ಅವರು ಅನಾಮಧೇಯತೆಯ ಷರತ್ತಿನ ಮೇಲೆ ವೀಡಿಯೋ ಕರ್ನಾಟಕದದ್ದು ಎಂದು ಖಚಿತಪಡಿಸಿದರು. "ಇದು ಕರ್ನಾಟಕದ ಹಳೆಯ ವೀಡಿಯೋ. ರಾಜ್ಯದಲ್ಲಿ ಇದೇ ರೀತಿಯ ಹಲವಾರು ಘಟನೆಗಳು ನಡೆದಿದ್ದವು ಮತ್ತು ಉಚಿತ ಬಸ್ ಉಪಕ್ರಮ, ಶಕ್ತಿ ಯೋಜನೆ ಜಾರಿಗೆ ಬಂದಾಗ ಮಹಿಳೆಯರ ಹೋರಾಟದ ವೀಡಿಯೋಗಳು ವೈರಲ್ ಆಗಿದ್ದವು. ಆದರೆ, ಆರಂಭಿಕ ದಿನಗಳಲ್ಲಿ ಈ ರೀತಿಯ ಘಟನೆಗಳು ಸಾಮಾನ್ಯವಾಗಿದೆ ಹಾಗು ಕ್ರಮೇಣವಾಗಿ, (ಬಸ್) ಸೇವೆಗಳ ಸಂಖ್ಯೆ ಹೆಚ್ಚಾಯಿತು ಮತ್ತು ಅಂತಹ ಸಮಸ್ಯೆಗಳು ಕಡಿಮೆಯಾದವು" ಎಂದು ಅಧಿಕಾರಿ ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ, ಜೂನ್ ತಿಂಗಳಿನಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತು- ಅದು ಪಕ್ಷದ ಚುನಾವಣಾ ಭರವಸೆಗಳಲ್ಲಿ ಒಂದಾಗಿತ್ತು. ತೆಲಂಗಾಣ ಚುನಾವಣೆಯ ಪೂರ್ವದಲ್ಲಿ 'ಮಹಾ ಲಕ್ಷ್ಮಿ' ಎಂಬ ಇದೇ ರೀತಿಯ ಯೋಜನೆಯನ್ನು ಪಕ್ಷವು ಭರವಸೆ ನೀಡಿತ್ತು, ಇದರ ಅಡಿಯಲ್ಲಿ ಮಹಿಳೆಯರು ಉಚಿತ ಸಾಮಾನ್ಯ ರಾಜ್ಯ ಬಸ್‌ಗಳಲ್ಲಿ ಪ್ರಯಾಣಿಸಬಹುದು.
ತೀರ್ಪು
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೆಲವು ಮಹಿಳೆಯರು ಜಗಳವಾಡುತ್ತಿರುವ ಕರ್ನಾಟಕದ ಹಳೆಯ ವೀಡಿಯೋವನ್ನು ತೆಲಂಗಾಣದ ಇತ್ತೀಚಿನ ಕ್ಲಿಪ್‌ನಂತೆ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )