ಮೂಲಕ: ಅಂಕಿತಾ ಕುಲಕರ್ಣಿ
ಜೂನ್ 30 2023
ಈ ಪೋಷ್ಟರ್ ೨೦೨೨ ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗು ಮುನ್ನ ಹೈದರಾಬಾದ್‌ನಲ್ಲಿ ಹಾಕಲಾಗಿತ್ತು, ಯು.ಎಸ್. ನಲ್ಲಿ ಅಲ್ಲ.
ಸಂದರ್ಭ
ಹೋರ್ಡಿಂಗ್‌ನ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೂನ್ ೨೦೨೩ ರ ಯು.ಎಸ್. ಭೇಟಿಯ ಮುಂಚಿತವಾಗಿ ಅದನ್ನು ಅಲ್ಲಿ ಹಾಕಲಾಗಿತ್ತು ಎಂದು ಹೇಳಲಾಗಿದೆ. ಈ ಹೋರ್ಡಿಂಗ್ ನೆಟ್‌ಫ್ಲಿಕ್ಸ್ ನ ಒಂದು ಶೋ ಆದ ಮನಿ ಹೈಸ್ಟ್ ನ ಪಾತ್ರಗಳನ್ನು ತೋರಿಸುತ್ತದೆ.
ಅಂತಹ ಒಂದು ಟ್ವಿಟ್ಟರ್ ಪೋಷ್ಟ್ ನ ಶೀರ್ಷಿಕೆ, "ಯುಎಸ್‌ಎ ನ ಪೋಸ್ಟರ್ಗಳಲ್ಲಿ, ಮನಿ ಹೈಸ್ಟ್ ಅವರಿಂದ ಸ್ಪಷ್ಟವಾದ ಸಂದೇಶವಿದೆ, ಮಿಸ್ಟರ್ ಮೋದಿ ನಾವು ಬ್ಯಾಂಕ್ ಅನ್ನು ಮಾತ್ರ ದರೋಡೆ ಮಾಡುತ್ತೇವೆ, ನೀವು ಇಡೀ ರಾಷ್ಟ್ರವನ್ನೇ ದೂಚುತ್ತೀರ." ಎಂದು ಬರೆಯಲಾಗಿದೆ ಮತ್ತು "#ModiNotWelcome" ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಹೊಂದಿದೆ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಪೋಷ್ಟ್ ೨೮,೦೦೦ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ೩೦೦ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ಆದರೆ ವೈರಲ್ ಚಿತ್ರವು ಹಳೆಯದು ಮತ್ತು ಮೋದಿಯವರ ಇತ್ತೀಚಿನ ಯು.ಎಸ್. ಭೇಟಿಗೆ ಸಂಬಂಧಿಸಿದ್ದಲ್ಲ.
ವಾಸ್ತವವಾಗಿ
ಜುಲೈ ೧, ೨೦೨೨ ರಂದು ಪ್ರಕಟವಾದ ತೆಲಂಗಾಣ ಟುಡೇ ಲೇಖನವನ್ನು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ. ವರದಿಯಲ್ಲಿ ಹೋರ್ಡಿಂಗ್‌ನ ಅದೇ ಚಿತ್ರವಿದ್ದು, ಅದು ಹೈದೆರಾಬಾದ್ ನಲ್ಲಿ ೨೦೨೨ ರಲ್ಲಿ ನಡೆಯಬೇಕಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಮುಂಚಿತವಾಗಿ ಹಾಕಲಾಗಿತ್ತು ಎಂದು ತಿಳಿಸುತ್ತದೆ.
ಹಂಚಿಕೊಳ್ಳಲಾಗುತ್ತಿರುವ ಚಿತ್ರವು ತೆಲಂಗಾಣ ಟುಡೆಯಲ್ಲಿ ಪ್ರಕಟವಾದ ಚಿತ್ರದ ಕ್ರಾಪ್ ಮಾಡಿದ ಆವೃತ್ತಿಯಾಗಿದೆ.
ಜುಲೈ ೧, ೨೦೨೨ ರಂದು, ಆಡಳಿತದಲ್ಲಿರುವ ಭಾರತೀಯ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಸಾಮಾಜಿಕ ಮಾಧ್ಯಮ ಸಂಚಾಲಕ ಸತೀಶ್ ರೆಡ್ಡಿ ಅವರು ಟ್ವಿಟ್ಟರ್‌ನಲ್ಲಿ “ಏನು ಸೃಜನಶೀಲತೆ!” ಎಂಬ ಶೀರ್ಷಿಕೆಯೊಂದಿಗೆ ಹೋರ್ಡಿಂಗ್‌ನ ಮೂಲ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಜುಲೈ ೨೦೨೨ ರಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಮುನ್ನ ಬಿಆರ್‌ಎಸ್ (ಆಗ ತೆಲಂಗಾಣ ರಾಷ್ಟ್ರ ಸಮಿತಿ ಎಂದು ಕರೆಯಲಾಗುತ್ತಿತ್ತು) ಈ ಹೋರ್ಡಿಂಗ್ ಅನ್ನು ಹಾಕಲಾಗಿತ್ತು ಎಂದು ಬಿಆರ್‌ಎಸ್ ನ ಮೂಲವೊಂದು ಲಾಜಿಕಲಿ ಫ್ಯಾಕ್ಟ್ಸ್‌ಗೆ ದೃಢಪಡಿಸಿದೆ.
ಅದಲ್ಲದೆ, ವೈರಲ್ ಚಿತ್ರದಲ್ಲಿ ಹೋರ್ಡಿಂಗ್‌ನ ಹಿಂದೆ 'ಶ್ರೀ ಗಣಪತಿ ಗ್ಲಾಸ್ ಮತ್ತು ವುಡ್ಸ್' ಹೆಸರಿನ ಅಂಗಡಿಯನ್ನು ನಾವು ನೋಡಬಹುದು ಮತ್ತು ಅಂಗಡಿಯ ಹೆಸರನ್ನು ತೆಲುಗು ಭಾಷೆಯಲ್ಲಿ ಬರೆಯಲಾಗಿದೆ. ಈ ಪುರವೆಯು ಚಿತ್ರವು ಯು.ಎಸ್ ನಲ್ಲಿ ಅಲ್ಲ, ಹೈದರಾಬಾದ್ ನಲ್ಲಿ ಹಾಕಲಾಗಿತ್ತು ಎಂದು ಸೂಚಿಸುತ್ತದೆ.
ನರೇಂದ್ರ ಮೋದಿಯವರು ಬುಧುವಾರ ನ್ಯೂಯಾರ್ಕ್‌ಗೆ ತಲುಪಿದ್ದು, ಯುನೈಟೆಡ್ ನೇಷನ್ಸ್ ನ ಪ್ರಧಾನ ಕಛೇರಿಯಲ್ಲಿ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆಯಲ್ಲಿ ನೇತೃತ್ವವನ್ನು ವಹಿಸಿದ್ದರು. ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ನೇರ ಮಾತುಕತೆ ನಡೆಸುವ ಮೊದಲು ಭಾರತದ ಪ್ರಧಾನಿಗೆ ಗುರುವಾರ ವೈಟ್ ಹೌಸ್ ನಲ್ಲಿ ವಿಧ್ಯುಕ್ತ ಸ್ವಾಗತ ನೀಡಲಾಗಿತ್ತು.
ತೀರ್ಪು
ಮೋದಿಯವರ ವಿರುದ್ಧ ಕಂಡುಬಂದ ಹೋರ್ಡಿಂಗ್‌ನ ಚಿತ್ರವು ಹೈದೆರಾಬಾದ್ ನಲ್ಲಿ ೨೦೨೨ ರಲ್ಲಿ ಕಂಡುಬಂದದ್ದು. ಬಿಆರ್‌ಎಸ್ ಪಕ್ಷದ ಮೂಲವೊಂದು ೨೦೨೨ ರಲ್ಲಿ ಹೈದರಾಬಾದ್‌ನಲ್ಲಿ ತಮ್ಮ ಪಕ್ಷದಿಂದ ಇದನ್ನು ಹಾಕಲಾಗಿತ್ತು ಎಂದು ದೃಢಪಡಿಸಿದೆ. ಆದ್ದರಿಂದ ನಾವು ಈ ಹೇಳಿಕೆಯು ತಪ್ಪು ಎಂದು ಗುರುತಿಸಿದ್ದೇವೆ.