ಮೂಲಕ: ರಜಿನಿ ಕೆ.ಜಿ
ಜುಲೈ 17 2023
ಜುಲೈ ೭ ರಂದು ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಫಲಕ್‌ನುಮಾ ರೈಲಿನ ಬೋಗಿಯ ಪಕ್ಕದಲ್ಲಿರುವ ಇತರ ಬೋಗಿಗಳನ್ನು ಬೇರ್ಪಡಿಸಲು ವೀಡಿಯೋದಲ್ಲಿರುವ ಪುರುಷರು ಪ್ರಯತ್ನಿಸುತ್ತಿದ್ದರು.
ಸಂದರ್ಭ
ಭಾರತೀಯ ಸೇನೆಯ ಜವಾನರು, ಪೊಲೀಸ್ ಸಿಬ್ಬಂದಿ, ರೈಲ್ವೆ ಸಿಬ್ಬಂದಿ ಮತ್ತು ನಾಗರಿಕರು ಸ್ಥಗಿತಗೊಂಡಿದ್ದ ರೈಲನ್ನು ತಳ್ಳುವ ವೀಡಿಯೋವನ್ನು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ವೀಡಿಯೋವನ್ನು ಹಂಚಿಕೊಳ್ಳುವವರು ಹೀಗೆ ಹೇಳಿಕೊಂಡಿದ್ದಾರೆ, ರೈಲು "ಥಟ್ಟನೆ ನಿಂತಿತು" ನಂತರ ಅದನ್ನು ಮರುಪ್ರಾರಂಭಿಸಲು ಜನರು ಅದನ್ನು ತಳ್ಳುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, "೯ ವರ್ಷಗಳ ವಿಕಾಸ್ ತುಂಬಿ ತುಳುಕುತ್ತಿದೆ. ರೈಲ್ವೇ ಪೊಲೀಸರು, ಆರ್ಮಿ ಜವಾನರು ಮತ್ತು ಪ್ರಯಾಣಿಕರು ರೈಲು ಥಟ್ಟನೆ ನಿಂತ ಕಾರಣ ಅದನ್ನು ತಳ್ಳಲು ಪ್ರಯತ್ನಿಸುತ್ತಿದ್ದರು. ೭೦ ವರ್ಷಗಳಲ್ಲಿ, ನೀವು ಎಂದಾದರೂ ಇಂತಹ ಸರ್ಕಾರವನ್ನು ನೋಡಿದ್ದೀರಾ?"
ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ (@srinivasiyc) ಅವರು ಜುಲೈ ೧೦ ರಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಹೀಗೆ ಬರೆದಿದ್ದಾರೆ “75 सालों में पहली बार.... New India में Train Start करने की Ninja Technique... Thank You Modi ji.” (ಅನುವಾದ: ೭೫ ವರ್ಷಗಳಲ್ಲಿ ಮೊದಲ ಬಾರಿಗೆ.... ಹೊಸ ಭಾರತದಲ್ಲಿ ರೈಲು ಆರಂಭಿಸಲು ನಿಂಜಾ ಟೆಕ್ನಿಕ್... ಧನ್ಯವಾದಗಳು ಮೋದಿ ಜೀ). ಅವರ ಟ್ವೀಟ್ ೬೮೩ ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ೬ ಸಾವಿರಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿದೆ. ಆದರೆ, ಈ ಹೇಳಿಕೆ ನಿಜವಲ್ಲ.
ನ್ಯೂಸ್ ೨೪ ಮತ್ತು ಇಂಡಿಯಾ ಟಿವಿಯಂತಹ ಮಾಧ್ಯಮ ಸಂಸ್ಥೆಗಳು ಇದೇ ರೀತಿಯ ಹೇಳಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿವೆ. ಆದರೆ, ನಂತರ ಅವುಗಳನ್ನು ತೆಗೆದು ಹಾಕಲಾಗಿದೆ.
ವಾಸ್ತವವಾಗಿ
ನಾವು ವೀಡಿಯೋದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿದ್ದೇವೆ ಮತ್ತು ಜುಲೈ ೧೦ ರಂದು ಎನ್ ಡಿ ಟಿವಿ ಯ (NDTV) ಸುದ್ದಿ ವರದಿಯನ್ನು ಕಂಡುಕೊಂಡಿದ್ದೇವೆ. ಜುಲೈ ೭ ರಂದು ಹೌರಾ-ಸಿಕಂದರಾಬಾದ್ ಮಾರ್ಗದಲ್ಲಿ ಫಲಕ್‌ನುಮಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಭವಿಸಿದ ಬೆಂಕಿಯ ತುಣುಕು ಎಂದು ವೈರಲ್ ವೀಡಿಯೊವನ್ನು ಬಳಸಿರುವ ವರದಿಯು ಹೇಳುತ್ತದೆ. ಬೆಂಕಿ ಹೊತ್ತಿಕೊಂಡ ಬೋಗಿಗಳ ಪಕ್ಕದಲ್ಲಿರುವ ಬೋಗಿಗಳನ್ನು ಸರಿಸಲು ಪುರುಷರು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ವರದಿ ಹೇಳಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ರೈಲು ತೆಲಂಗಾಣದ ಯಾದಾದ್ರಿ ಜಿಲ್ಲೆಯನ್ನು ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ರೈಲಿನ ಹಲವಾರು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಆದರೆ ಪ್ರಯಾಣಿಕರು ಉರಿಯುತ್ತಿರುವ ರೈಲಿನಿಂದ ಜಿಗಿಯಲು ಸಾಧ್ಯವಾಯಿತು ಎಂದು ಅದು ಹೇಳಿದೆ.
ಜುಲೈ ೭ ರಂದು ಹಂಚಿಕೊಂಡ ಟ್ವೀಟ್‌ನಲ್ಲಿ, ತೆಲಂಗಾಣದ ಪೊಲೀಸ್ ಮಹಾನಿರ್ದೇಶಕ ಅಂಜನಿ ಕುಮಾರ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ "ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ" ಎಂದು ಉಲ್ಲೇಖಿಸಲಾಗಿದೆ. ಅವರು ಬರೆದಿದ್ದಾರೆ, “ಭೋಂಗಿರ್ ಗ್ರಾಮಾಂತರ ಪಿಎಸ್ ಮಿತಿಯ ಬಳಿ ಫಲಕ್‌ನುಮಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಮತ್ತು ಬಸ್‌ಗಳಲ್ಲಿ ಸ್ಥಳಾಂತರಿಸಲಾಗಿದೆ. ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ರೈಲ್ವೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ೧೮ ಬೋಗಿಗಳ ಪೈಕಿ ೧೧ ಬೋಗಿಗಳನ್ನು ಬೇರ್ಪಡಿಸಿ ಸುರಕ್ಷಿತವಾಗಿ ತೆಗೆದುಕೊಂಡು ಹೋಗಲಾಗಿದೆ. ೭ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸದ್ಯ ೩ ಬೋಗಿಗಳಲ್ಲಿ ಬೆಂಕಿ ನಂದಿಸಲಾಗಿದೆ.”
ಜುಲೈ ೧೦ ರಂದು ಟ್ವಿಟರ್ ಥ್ರೆಡ್‌ನಲ್ಲಿ, ರೈಲ್ವೇ ಸಚಿವಾಲಯದ ಅಧಿಕೃತ ವಕ್ತಾರ ಅಮಿತಾಭ್ ಶರ್ಮಾ, ವೈರಲ್ ವೀಡಿಯೊ ಜುಲೈ ೭ ರಂದು ರೈಲು ಸಂಖ್ಯೆ 12703 (HWH-SC) ನಲ್ಲಿ "ಬೆಂಕಿ ಘಟನೆ" ಗೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. “ಬೆಂಕಿ ಘಟನೆಯ ಸುದ್ದಿಯನ್ನು ಸಂವೇದನಾಶೀಲ ಮತ್ತು ಬೇಜವಾಬ್ದಾರಿ ರೀತಿಯಲ್ಲಿ ಬಳಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಬೆಂಕಿಯು ಇತರೆ ಬೋಗಿಗಳನ್ನು ಆವರಿಸುವುದನ್ನು ತಡೆಯಲು ಎಂಜಿನ್ ಅನ್ನು ಕಳುಹಿಸಲಾಯಿತು, ಆದರೆ ಇಂಜಿನ್ ಬರುವವರೆಗೆ ಕಾಯುವ ಬದಲು ನಮ್ಮ ರೈಲ್ವೆ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡರು ಎಂದು ಅವರು ಹೇಳಿದರು. "ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಹಿಂಭಾಗದ ಬೋಗಿಗಳನ್ನು ಬೇರ್ಪಡಿಸಲು ಮತ್ತು ಬೆಂಕಿಯ ಹೆಚ್ಚಿನ ವೇಗವನ್ನು ತಪ್ಪಿಸಲು ಕೈಜೋಡಿಸಿದರು. ಕೂಡಲೇ ಸ್ಪಂದಿಸಿದ ಎಚ್ಚೆತ್ತ ಪೊಲೀಸ್ ಸಿಬ್ಬಂದಿಗೆ ನಮ್ಮ ಕೃತಜ್ಞತೆಗಳು,'' ಎಂದರು.
ಜುಲೈ ೮ ರಂದು ರಾಚಕೊಂಡ ಪೊಲೀಸರು ಹಂಚಿಕೊಂಡಿರುವ ಇದೇ ರೀತಿಯ ವೀಡಿಯೋವನ್ನು ಪೊಲೀಸರು, ಸೇನೆ ಮತ್ತು ರೈಲ್ವೆ ಸಿಬ್ಬಂದಿ ರೈಲನ್ನು ತಳ್ಳುತ್ತಿರುವುದನ್ನು ನಾವು ಕಂಡುಕೊಂಡಿದ್ದೇವೆ. ಶೀರ್ಷಿಕೆಯಲ್ಲಿರುವ ಪಠ್ಯವು ಹೀಗೆ ಓದುತ್ತದೆ, “ಒಂದು ತಂಡವು ಅನೇಕ ಕೈಗಳು ಒಂದೇ ಮನಸ್ಸಿನಲ್ಲಿ. #ರಾಚಕೊಂಡ ಪೋಲೀಸ್ ನಾಗರಿಕರಿಗೆ ಸೇವೆ ಸಲ್ಲಿಸಲು ಮತ್ತು ಅವರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ೨೪ ಗಂಟೆಗಳ ಕಾಲ ಬದ್ಧವಾಗಿದೆ. ಭೋಂಗಿರ್‌ನಲ್ಲಿ #ಫಲಕ್‌ನುಮಾ ಎಕ್ಸ್‌ಪ್ರೆಸ್ ಬೆಂಕಿಯ ಘಟನೆಯ ಸಮಯದಲ್ಲಿ ಪ್ರಯತ್ನಗಳು. ಉತ್ತಮವಾದ ತಂಡ #RCKP! ಸ್ಥಳದಿಂದ ನಿಮ್ಮೆಲ್ಲರನ್ನೂ ದೈನ್ಯತೆಯಿಂದ ಕೆಲಸ ಮಾಡುತ್ತಿರುವುದನ್ನು ನೋಡಲು ತುಂಬಾ ಸಂತೋಷವಾಯಿತು.”
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ವಜಾಗೊಳಿಸಿ ದಕ್ಷಿಣ ಮಧ್ಯ ರೈಲ್ವೆ ಕೂಡ ಸ್ಪಷ್ಟೀಕರಣವನ್ನು ನೀಡಿದೆ. ಜುಲೈ ೧೦ ರಂದು ಟ್ವಿಟರ್‌ನಲ್ಲಿ ಹೀಗೆ ಬರೆದಿದೆ, “ವೀಡಿಯೋವು ಮತ್ತಷ್ಟು ಬೆಂಕಿ ಹರಡುವುದನ್ನು ತಪ್ಪಿಸಲು ಹಿಂಭಾಗದ ಬೋಗಿಗಳನ್ನು ಬೇರ್ಪಡಿಸಲು ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರ ಪ್ರಜ್ಞಾಪೂರ್ವಕ ನಿರ್ಧಾರದ ಬಗ್ಗೆ ಇದೆ. ಇಂಜಿನ್‌ನಿಂದ ಸಹಾಯಕ್ಕಾಗಿ ಕಾಯದೆ ತುರ್ತು ಕ್ರಮ ತೆಗೆದುಕೊಳ್ಳಲಾಗಿದೆ.”
ತೀರ್ಪು
ಫಲಕ್‌ನುಮಾ ಎಕ್ಸ್‌ಪ್ರೆಸ್‌ನ ಹಲವು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬೆಂಕಿ ಮತ್ತಷ್ಟು ಹರಡುವುದನ್ನು ತಡೆಯಲು ರೈಲ್ವೆ ಸಿಬ್ಬಂದಿ ಮತ್ತು ಭದ್ರತಾ ಪಡೆಗಳು ರೈಲಿನ ಬಾಧಿತವಲ್ಲದ ಕೋಚ್‌ಗಳನ್ನು ಬೇರ್ಪಡಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಂತೆ ರೈಲನ್ನು ಪುನಾರಂಭಿಸಲು ಅಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.