ಮೂಲಕ: ಇಶಿತಾ ಗೋಯಲ್ ಜೆ
ಜನವರಿ 12 2024
ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿರುವ ಈ ವೀಡಿಯೋ ಬಾಲಿಯಿಂದ ಬಂದಿದ್ದು, ಮಾಲ್ಡೀವ್ಸ್ ನಿಂದ ಅಲ್ಲ.
ಸಂದರ್ಭ
ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಹೇಳಿಕೆಗಳನ್ನು ರವಾನಿಸಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಮಾಲ್ಡೀವ್ಸ್ ಬಹಿಷ್ಕಾರಕ್ಕೆ ಕರೆ ನೀಡುತ್ತಿದ್ದಾರೆ. ಇದರ ಮಧ್ಯೆ, ಮಾಲ್ಡೀವ್ಸ್ ಮಹಿಳೆಯರಿಗೆ ಅಸುರಕ್ಷಿತವಾಗಿದೆ ಎಂದು ಆರೋಪಿಸುವ ನಿರೂಪಣೆ ಹೊರಹೊಮ್ಮುತ್ತಿದೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಬೆದರಿಕೆಗಳ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇಲ್ಲಿನ ಹೇಳಿಕೆಯೇನು?
ಟ್ಯಾಕ್ಸಿಯಲ್ಲಿ ಇಬ್ಬರು ಮಹಿಳೆಯರಿಗೆ ಚಾಲಕ ಬೆದರಿಕೆ ಹಾಕುತ್ತಿರುವ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಮಾಲ್ಡೀವ್ಸ್‌ನಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳಲಾಗಿದೆ. ವೀಡಿಯೋದಲ್ಲಿ ಟ್ಯಾಕ್ಸಿ ಚಾಲಕ ಮತ್ತು ಇಬ್ಬರು ಮಹಿಳೆಯರ ನಡುವೆ ಹಣದ ವಿಷಯದಲ್ಲಿ ನಡೆದ ತೀವ್ರ ವಾಗ್ವಾದವನ್ನು ನಾವು ಕೇಳಬಹುದು. ನಂತರ ಚಾಲಕ ಮಹಿಳೆಯೊಬ್ಬರಿಗೆ ಚಾಕುವಿನಿಂದ ಬೆದರಿಕೆ ಹಾಕುವುದನ್ನು ಕೂಡ ನಾವು ನೋಡಬಹುದು. ಇದನ್ನು ಎಕ್ಸ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) "ಮಾಲ್ಡೀವ್ಸ್ ಈಗ ಪಾಕಿಸ್ತಾನದಂತೆ ಆಗಿದೆ.. ಪ್ರವಾಸಿಗರಿಗೆ ಅಸುರಕ್ಷಿತವಾಗಿದೆ, ವಿಶೇಷವಾಗಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇನ್ನೊಬ್ಬ ಬಳಕೆದಾರರು ಹೀಗೆ ಹೇಳಿದರು (ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) "ಸ್ಪಷ್ಟ ಕಾರಣಗಳಿಗಾಗಿ #ಮಾಲ್ಡೀವ್ಸ್ ಮಹಿಳೆಯರಿಗೆ ತುಂಬಾ ಅಸುರಕ್ಷಿತವಾಗಿದೆ. ಅನೇಕ ಹುಡುಗಿಯರು #ಮಾಲ್ಡೀವ್ಸ್‌ನಲ್ಲಿ ಅತ್ಯಾಚಾರ, ಕಿರುಕುಳ, ಸುಲಿಗೆ ಇತ್ಯಾದಿಗಳನ್ನು ವರದಿ ಮಾಡಿದ್ದಾರೆ. ಹುಡುಗಿಯರು ಅಲ್ಲಿಗೆ ಹೋಗುವುದನ್ನು ತಪ್ಪಿಸಬೇಕು."
ಸಾಮಾಜಿಕ ಮಾಧ್ಯಮದಲ್ಲಿನ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಇನ್ಸ್ಟಾಗ್ರಾಮ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಸತ್ಯಂಶಗಳೇನು?
ವೈರಲ್ ವೀಡಿಯೋದಲ್ಲಿ, ೧:೫೮ ನಿಮಿಷದ ಟೈಮ್ ಸ್ಟ್ಯಾಂಪ್ ನಲ್ಲಿ, ನಾವು ಕಾರಿನ ನಂಬರ್ ಪ್ಲೇಟ್ "DK-1841 AAX" ಎಂಬುದನ್ನು ನೋಡಬಹುದು. DK ಅನ್ನು ಡೆನ್ಮಾರ್ಕ್ ಮತ್ತು ಬಾಲಿಯಲ್ಲಿ ವಾಹನ ಸಂಖ್ಯೆಯಾಗಿ ನೋಂದಾಯಿಸಲಾಗಿದೆ.
ಕಾರಿನ ನಂಬರ್ ಪ್ಲೇಟ್ ತೋರಿಸುವ ಚಿತ್ರ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ರಿವರ್ಸ್ ಇಮೇಜ್ ಸರ್ಚ್ ನಮ್ಮನು ಜನವರಿ ೫, ೨೦೨೪ ರಂದು ದಿ ಬಾಲಿ ಸನ್ ಪ್ರಕಟಿಸಿದ ವರದಿಗೆ ನಮ್ಮನ್ನು ಕರೆದೊಯ್ಯಿತು.ಈ ವರದಿಯು ವೈರಲ್ ವೀಡಿಯೋದ ದೀರ್ಘ ಆವೃತ್ತಿಯೊಂದಿಗೆ ಅನೇಕ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳನ್ನು ಹೊಂದಿದೆ. ಈ ಘಟನೆಯು ಬಾಲಿಯಲ್ಲಿ ಸಂಭವಿಸಿದೆ ಎಂದು ವರದಿಯು ದೃಢಪಡಿಸಿತು; ಇಂಡೋನೇಷಿಯನ್ ಪ್ರಾಂತ್ಯದಲ್ಲಿ ಟ್ಯಾಕ್ಸಿ ಡ್ರೈವರ್ ಇಬ್ಬರು ಅಮೇರಿಕನ್ ಪ್ರವಾಸಿಗರಿಗೆ ಬೆದರಿಕೆ ಹಾಕುತ್ತಿರುವುದನ್ನು ವೀಡಿಯೋ ತೋರಿಸಿದೆ. ಚಾಲಕ ಇಬ್ಬರು ಮಹಿಳೆಯರಿಂದ ಯುಎಸ್ ಡಾಲರ್ ೫೦ ಸುಲಿಗೆ ಮಾಡಲು ಪ್ರಯತ್ನಿಸಿದರು ಎಂದು ವರದಿಯಲ್ಲಿ ಸೇರಿಸಲಾಗಿದೆ.
ಇದೇ ಜನವರಿ ೧೦ ರಂದು ದಿ ಇಂಡಿಪೆಂಡೆಂಟ್ ಈ ಬಗ್ಗೆ ವರದಿ ಮಾಡಿದೆ. ಪ್ರವಾಸಿಗರು ದ್ವೀಪದ ದಕ್ಷಿಣದಲ್ಲಿರುವ ಜನಪ್ರಿಯ ಬೀಚ್ ರೆಸಾರ್ಟ್ ಕುಟಾ ಮೂಲಕ ಪ್ರಯಾಣಿಸುತ್ತಿದ್ದರು ಎಂದು ಯಾಹೂ ನ್ಯೂಸ್ ಅನ್ನು ಉಲ್ಲೇಖಿಸಿ ವರದಿ ಮಾಡಿದೆ. ಅವರು ಚಾಲಕನಿಗೆ ೫೦,೦೦೦ ಇಂಡೋನೇಷಿಯನ್ ರೂಪಿಯಾವನ್ನು ನೀಡಿದರು, ಇದು ಸುಮಾರು £೨.೫೦ ಶುಲ್ಕವಾಗಿದೆ. ಆದರೆ ಚಾಲಕ $೫೦ (£೩೯.೨೯) ಕೇಳಿದರು. ವಿಎನ್ ಎಕ್ಸ್‌ಪ್ರೆಸ್ ಅನ್ನು ಉಲ್ಲೇಖಿಸಿ, ಆ ಚಾಲಕನನ್ನು ನಂತರ ಬಂಧಿಸಲಾಯಿತು ಮತ್ತು ಆತನನ್ನು "ಸುಲಿಗೆ ಮತ್ತು ಬೆದರಿಕೆ" ಯ ಆರೋಪ ಹೊರಿಸಬಹುದೆಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.
ಇಂಡಿಪೆಂಡೆಂಟ್ ಮತ್ತು ದಿ ಬಾಲಿ ಸನ್ ನಲ್ಲಿ ಇದೇ ರೀತಿಯ ದೃಶ್ಯಗಳನ್ನು ಪ್ರಕಟಿಸಲಾಗಿದೆ. (ಮೂಲ: ಸ್ಕ್ರೀನ್‌ಶಾಟ್‌ಗಳು/ದಿ ಇಂಡಿಪೆಂಡೆಂಟ್/ದಿ ಬಾಲಿ ಸನ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಇಂಡೋನೇಷ್ಯಾ ರಾಷ್ಟ್ರೀಯ ಪೊಲೀಸರು, ಬಾಲಿ ಪ್ರಾದೇಶಿಕ ಪೊಲೀಸರು ನಿರ್ದಿಷ್ಟ ಟ್ಯಾಕ್ಸಿ ಚಾಲಕನನ್ನು ನ್ಗುರಾ ರಾಯ್ ವಿಮಾನ ನಿಲ್ದಾಣದಿಂದ ಬಂಧಿಸಿದರು ಎಂದು ಜನವರಿ ೬ ರಂದು ಹೇಳಿಕೊಂಡಿದ್ದಾರೆ. ಇದಲ್ಲದೆ, ಜನವರಿ ೧೧ ರಂದು, ಮತ್ತೊಂದು ಪ್ರಕಟಣೆಯು ೨೦ ವರ್ಷದ ಟ್ಯಾಕ್ಸಿ ಡ್ರೈವರ್, ಯಾನುರಿಯಸ್ ಟೋಬ್ಕೆ, "ಟ್ಯಾಕ್ಸಿ ದರದ ಬಗ್ಗೆ ತಪ್ಪು ತಿಳುವಳಿಕೆಯಿಂದಾಗಿ ಬೆದರಿಕೆ ಮತ್ತು ಸುಲಿಗೆಗೆ ಮುಂದಾಗಿದ್ದ" ಎಂದು ಹೇಳಿದೆ. ಹಿರಿಯ ಸೂಪರಿಂಟೆಂಡೆಂಟ್ ವಿಸ್ನು ಪ್ರಬೋವೊ (ಡೆನ್‌ಪಾಸರ್ ಪೊಲೀಸ್ ಮುಖ್ಯಸ್ಥರು) ಪ್ರಕಾರ, ಎಲ್‌ಎನ್ ಮತ್ತು ಎಲ್‌ಜೆ ಎಂದು ಗುರುತಿಸಲಾದ ಪ್ರಯಾಣಿಕರು ಟ್ಯಾಕ್ಸಿಯನ್ನು ಬುಕ್ ಮಾಡುವಾಗ ಆರ್‌ಪಿ ೫೦,೦೦೦ ಎಂದು ಉಲ್ಲೇಖಿಸಿ ೫೦ ಎಂದು ಸಂವಹಿಸಿದರು. ಆದರೆ ಚಾಲಕ ಅದನ್ನು ಡಾಲರ್‌ಗಳಲ್ಲಿ ತಪ್ಪಾಗಿ ಅರ್ಥೈಸಿಕೊಂಡಿದ್ದಾನೆ. ಈ ಘಟನೆಯು ಜನವರಿ ೨, ೨೦೨೪ ರಂದು ಬಾಲಿಯ ಸೆಮಿನ್ಯಾಕ್ ಪ್ರದೇಶದಲ್ಲಿ ಸಂಭವಿಸಿದೆ ಎಂದು ಪ್ರಕಟಣೆ ದೃಢಪಡಿಸಿದೆ.
"ಯಾನುರಿಯಸ್ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ, ಕ್ರಿಮಿನಲ್ ಕೋಡ್ ನ ಆರ್ಟಿಕಲ್ ೩೬೮ ರ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ, ಇದು ಹಿಂಸೆಯೊಂದಿಗೆ ಸುಲಿಗೆಗೆ ಒಳಗಾಗುತ್ತದೆ ಮತ್ತು ಗರಿಷ್ಠ ಒಂಬತ್ತು ವರ್ಷಗಳ ಜೈಲು ಶಿಕ್ಷೆಯನ್ನು ನೀಡುತ್ತದೆ" ಎಂದು ಈ ಪ್ರಕಟಣೆ ಹೇಳಿಕೊಂಡಿದೆ.
ತೀರ್ಪು
ವೈರಲ್ ವೀಡಿಯೋ ಜನವರಿ ೨ ರಂದು ಬಾಲಿಯಲ್ಲಿ ನಡೆದ ಘಟನೆಯಾಗಿದೆ. ಇತ್ತೀಚಿನ ಭಾರತ-ಮಾಲ್ಡೀವ್ಸ್ ವಿವಾದದ ನಡುವೆ ಮಾಲ್ಡೀವ್ಸ್‌ನಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ ಎಂದು ಹಂಚಿಕೊಳ್ಳಲಾಗಿದೆ. ಆದ್ದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು:ವಿವೇಕ್.ಜೆ)
Read this fact-check in English here.