ಮೂಲಕ: ಮೊಹಮ್ಮದ್ ಸಲ್ಮಾನ್
ಜನವರಿ 18 2024
ಅಯೋಧ್ಯೆಯಲ್ಲಿ ರಾಮಮಂದಿರವನ್ನು ಧ್ವಂಸಗೊಂಡ ಬಾಬರಿ ಮಸೀದಿ ಇರುವ ವಿವಾದಿತ ಸ್ಥಳದಲ್ಲಿಯೇ ನಿರ್ಮಿಸಲಾಗುತ್ತಿದೆ.
ಹೇಳಿಕೆ ಏನು?
ಅಯೋಧ್ಯೆ ರಾಮಮಂದಿರದ ಪ್ರತಿಷ್ಠಾಪನೆಯ ದಿನಾಂಕವು ಸಮೀಪಿಸುತ್ತಿದ್ದಂತೆ, ಪ್ರಶ್ನಾರ್ಹ ಹೇಳಿಕೆಗಳು ವಿವಿಧ ನಿರೂಪಣೆಗಳು ಮತ್ತು ಚಿತ್ರಗಳು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿವೆ. ಗೂಗಲ್ ಮ್ಯಾಪ್ಸ್‌ನ ನಿರ್ದಿಷ್ಟ ಸ್ಕ್ರೀನ್‌ಶಾಟ್, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ರಾಮ ಮಂದಿರವನ್ನು ಕೆಡವಲಾದ ಬಾಬರಿ ಮಸೀದಿಯ ಸ್ಥಳದಲ್ಲಿ ಅಲ್ಲ, ಆದರೆ ಮೂರು ಕಿಲೋಮೀಟರ್ ದೂರದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ರಾಮಮಂದಿರವನ್ನು ಬೇರೆಡೆ ನಿರ್ಮಿಸಲು ಯೋಜಿಸಿದ್ದರೆ ಬಾಬರಿ ಮಸೀದಿಯನ್ನು ಏಕೆ ಧ್ವಂಸಗೊಳಿಸಲಾಯಿತು ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ. ವೈರಲ್ ಸ್ಕ್ರೀನ್‌ಶಾಟ್ ಎರಡು ವೃತ್ತಾಕಾರದ ಸ್ಥಳಗಳನ್ನು ಹಸಿರು ಬಣ್ಣದಲ್ಲಿ ತೋರಿಸುತ್ತಿದೆ - ಪ್ರಸ್ತುತ ರಾಮಮಂದಿರದ ಸ್ಥಳ ಮತ್ತು ಹಿಂದಿನ ಬಾಬರಿ ಮಸೀದಿಯ ಸ್ಥಳ.
ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಈ ಸ್ಕ್ರೀನ್‌ಶಾಟ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) “#ನಿಮಗೆ_ಗೊತ್ತಾ ?ಈಗ ಮಂದಿರ ನಿರ್ಮಾಣ ಆಗುತ್ತಿರುವುದು ಮಸೀದಿ ಉರುಳಿಸಿದ ಜಾಗದಲ್ಲಿ ಅಲ್ಲ .
ಮಂದಿರ ಕೆಡವಿ ಮಸೀದಿ ಕಟ್ಟಲಾಗಿದೆ ಎಂದು ಪ್ರಚಾರ ಮಾಡಿದರು .ಈಗಿನ ಮಂದಿರ ಸ್ಥಳಕ್ಕು ಮಸೀದಿ ಉರುಳಿಸಿದ ಸ್ಥಳಕ್ಕು ಮೂರು ಕಿಮೀ ಅಂತರವಿದೆ .ಮಸೀದಿ ಜಾಗದಲ್ಲಿ ಮಂದಿರ ಕಟ್ಟುವ ಉದ್ದೇಶ ಇರದಿದ್ದಾಗ ಮಸೀದಿ ಉರುಳಿಸಿದ್ದು ಏಕಾಗಿ ?," ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಗಳನ್ನು ಮಾಡುವ ಪೋಷ್ಟ್ ಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ನಾವು ಎಲ್ಲಿ ಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದೇವೋ ಅಲ್ಲಿ ಮಂದಿರವನ್ನು ನಿರ್ಮಿಸಿಲ್ಲ. ಆ ವಿವಾದಿತ ಸ್ಥಳ ಈಗಲೂ ಹಾಗೆಯೇ ಇದೆ. ಅಲ್ಲಿಂದ ಮೂರು ಕಿಲೋಮೀಟರ್ ದೂರದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ," ಎಂದು ಹೇಳಿದ್ದಾರೆ.
ರಾವುತ್ ಅವರ ಹೇಳಿಕೆಯನ್ನು ಹರಿಯಾಣ ಕಾಂಗ್ರೆಸ್ ನಾಯಕ ವಿಕಾಸ್ ಬನ್ಸಾಲ್ ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ಸಂಜಯ್ ರಾವುತ್ ಅವರ ಹೇಳಿಕೆಯನ್ನು ಹೊಂದಿರುವ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)
ಗೂಗಲ್ ನಕ್ಷೆಗಳಲ್ಲಿ 'ಬಾಬರ್ ಮಸೀದಿ' ಎಂದು ಲೇಬಲ್ ಮಾಡಲಾದ ರಚನೆಯು ವಾಸ್ತವವಾಗಿ ಸೀತಾ ರಾಮ ದೇವಾಲಯವಾಗಿದೆ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿಜವಾಗಿಯೂ ಹಿಂದಿನ ಬಾಬರಿ ಮಸೀದಿಯ ಸ್ಥಳದಲ್ಲಿ ನಿರ್ಮಿಸಲಾಗುತ್ತಿದೆ ಎಂದು ನಮ್ಮ ತನಿಖೆಯು ಬಹಿರಂಗಪಡಿಸುತ್ತದೆ.
ನಾವು ಸತ್ಯವನ್ನು ಕಂಡುಹಿಡಿದದ್ದು ಹೇಗೆ?
ನಾವು ಗೂಗಲ್ ಮ್ಯಾಪ್ಸ್ ನಲ್ಲಿ ಎರಡೂ ಸ್ಥಳಗಳನ್ನು ಹುಡುಕುವ ಮೂಲಕ ಪ್ರಾರಂಭಿಸಿದೆವು: ಒಂದನ್ನು 'ಶ್ರೀ ರಾಮ ಜನ್ಮಭೂಮಿ ಮಂದಿರ' ಮತ್ತು ಇನ್ನೊಂದು 'ಶ್ರೀ ಸೀತಾ ರಾಮಮಂದಿರ' ಎಂದು ಲೇಬಲ್ ಮಾಡಲಾಗಿದೆ. ಎರಡನೆಯದನ್ನು ತಪ್ಪಾಗಿ 'ಬಾಬರ್ ಮಸೀದಿ' ಎಂದು ಗುರುತಿಸಲಾಗಿದೆ.
ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ಮತ್ತು ಗೂಗಲ್ ನಕ್ಷೆಗಳಲ್ಲಿ ಸೀತಾ ರಾಮ ದೇವಾಲಯವು ಗೋಚರಿಸುತ್ತದೆ.
(ಮೂಲ: ಎಕ್ಸ್/ ಗೂಗಲ್ ಮ್ಯಾಪ್/ಸ್ಕ್ರೀನ್‌ಶಾಟ್)
ಗೂಗಲ್ ಮ್ಯಾಪ್‌ನಲ್ಲಿ ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ 'ಬಾಬರ್ ಮಸೀದಿ' ಅನ್ನು ಝೂಮ್ ಇನ್ ಮಾಡಿದಾಗ, ಅದು ಶ್ರೀ ಸೀತಾ ರಾಮ ಮಂದಿರ ಎಂಬ ಹೆಸರಿನ ರಚನೆಯನ್ನು ತೋರಿಸುತ್ತದೆ ಎಂದು ನಾವು ಕಂಡುಕೊಂಡೆವು. ನಕ್ಷೆಯಲ್ಲಿ ಕಾಣುವ ರಚನೆಯು ಸೀತಾ ರಾಮ ದೇವಾಲಯದಂತೆಯೇ ಇದೆ ಎಂದು ನಾವು ಗೂಗಲ್ ಅರ್ಥ್‌ನಲ್ಲಿ ಖಚಿತಪಡಿಸಿಕೊಂಡೆವು.
ಶ್ರೀ ಸೀತಾ ರಾಮ ಮಂದಿರವು ಗೂಗಲ್ ನಕ್ಷೆಗಳಲ್ಲಿ ಗೋಚರಿಸುತ್ತದೆ (ಮೂಲ: ಗೂಗಲ್ ನಕ್ಷೆಗಳು/ಸ್ಕ್ರೀನ್‌ಶಾಟ್)
'ಬಾಬರ್ ಮಸೀದಿ'ಗಾಗಿ ಪ್ರತ್ಯೇಕ ಹುಡುಕಾಟವು ಬಾಬರಿ ಮಸೀದಿಯ ಹಳೆಯ ಚಿತ್ರವನ್ನು ನೀಡಿತು, ಅದು ವೈರಲ್ ಪೋಷ್ಟ್ ನಲ್ಲಿರುವ ರಚನೆಯನ್ನು ಹೋಲುವುದಿಲ್ಲ. ಹೊಸ ರಾಮಮಂದಿರದ ಸ್ಥಳದಿಂದ ದೂರದಲ್ಲಿರುವ ಸೀತಾ ರಾಮ ಮಂದಿರವನ್ನು ‘ಬಾಬರ್ ಮಸೀದಿ’ ಎಂದು ತಪ್ಪಾಗಿ ಟ್ಯಾಗ್ ಮಾಡಲಾಗಿದೆ ಎಂದು ಇದು ಸೂಚಿಸುತ್ತದೆ.
'ಬಾಬರ್ ಮಸೀದಿ' ಚಿತ್ರ ಮತ್ತು ಗೂಗಲ್ ಸ್ಯಾಟಲೈಟ್ ಚಿತ್ರದ ನಡುವಿನ ವ್ಯತ್ಯಾಸ.
(ಮೂಲ: ಗೂಗಲ್ ನಕ್ಷೆಗಳು/ಸ್ಕ್ರೀನ್‌ಶಾಟ್)
ನಾವು ನಂತರ ಗೂಗಲ್ ಅರ್ಥ್ ಪ್ರೊನಲ್ಲಿ ರಾಮ ಮಂದಿರದ ಸ್ಥಳವನ್ನು ಪರಿಶೀಲಿಸಿದೆವು, ನಡೆಯುತ್ತಿರುವ ನಿರ್ಮಾಣ ಚಟುವಟಿಕೆಯನ್ನು ತೋರಿಸುವ ೨೦೨೩ರ ಸ್ಯಾಟಲೈಟ್ ಚಿತ್ರವನ್ನು ವೀಕ್ಷಿಸಿಬಹುದು. ಗೂಗಲ್ ಅರ್ಥ್ ಪ್ರೊನಲ್ಲಿನ ಐತಿಹಾಸಿಕ ಚಿತ್ರಣ ಉಪಕರಣದ ಸಹಾಯದಿಂದ ನಾವು ಅದೇ ಸ್ಥಳದ ಹಳೆಯ ಸ್ಯಾಟಲೈಟ್ ಚಿತ್ರಗಳನ್ನು ಪ್ರವೇಶಿಸಲು ಪ್ರಯತ್ನಿಸಿದಾಗ, ನಮಗೆ ೨೦೧೧ ರ ಸ್ಯಾಟಲೈಟ್ ಚಿತ್ರವು ಕಣ್ಣಿಗೆ ಬಿದ್ದಿತು, ಅಲ್ಲಿ ಆ ಸಮಯದಲ್ಲಿ ಯಾವುದೇ ನಿರ್ಮಾಣ ಕಾರ್ಯಗಳು ಪ್ರಾರಂಭವಾಗಲಿಲ್ಲ ಎಂದು ನೋಡಬಹುದು.
೨೦೧೧ ಮತ್ತು ೨೦೨೩ ರಲ್ಲಿ ರಾಮಮಂದಿರದ ಸ್ಯಾಟಲೈಟ್ ಚಿತ್ರಗಳು (ಮೂಲ: ಗೂಗಲ್ ಅರ್ಥ್ ಪ್ರೊ/ಸ್ಕ್ರೀನ್‌ಶಾಟ್)
ಗೂಗಲ್ ಅರ್ಥ್ ಪ್ರೊನಿಂದ ೨೦೧೧ರ ಸ್ಯಾಟಲೈಟ್ ಚಿತ್ರದೊಂದಿಗೆ ಬಾಬರಿ ಮಸೀದಿಯ ಹಳೆಯ ಛಾಯಾಚಿತ್ರಗಳನ್ನು ಹೋಲಿಸಿದಾಗ ಅದು ರಾಮಮಂದಿರದ ನಿರ್ಮಾಣ ಪ್ರಾರಂಭವಾಗಿರಲಿಲ್ಲ ಎಂದು ದೃಢಪಡಿಸಿತು.
ತೀರ್ಪು
ಬಾಬರಿ ಮಸೀದಿ ಇದ್ದ ಸ್ಥಳದಲ್ಲಿಯೇ ಶ್ರೀರಾಮ ಜನ್ಮಭೂಮಿ ಮಂದಿರವನ್ನು ನಿರ್ಮಿಸಲಾಗುತ್ತಿದೆ ಎಂದು ನಮ್ಮ ತನಿಖೆಯು ನಿರ್ಣಾಯಕವಾಗಿ ತೋರಿಸುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.