ಮೂಲಕ: ಅಂಕಿತಾ ಕುಲಕರ್ಣಿ
ಜೂನ್ 23 2023
ಬೆಂಗಳೂರಿನ ಹಜ್ ಭವನದ ನವೀಕರಣಕ್ಕೆ ಕಾಂಗ್ರೆಸ್ ಸರ್ಕಾರ ರೂ.೫ ಕೋಟಿ ಅನುದಾನ ನೀಡಿದ ಬಗ್ಗೆ ಸಚಿವ ಜಮೀರ್ ಅಹಮದ್ ಅವರ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ.
ಸಂದರ್ಭ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೂನ್ ೬, ೨೦೨೩ರಂದು ಬೆಂಗಳೂರಿನ ಹಜ್ ಭವನದಲ್ಲಿ ಮೊದಲ ಬ್ಯಾಚ್ ನ ಹಜ್ ಯಾತ್ರಾರ್ಥಿಗಳಿಗೆ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿಯವರೊಡನೆ ಕರ್ನಾಟಕದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಜಮೀರ್ ಅಹ್ಮದ್ ಖಾನ್ ಮತ್ತು ಪುರಸಭೆ ಆಡಳಿತ ಹಾಗು ಹಜ್ ನ ಸಚಿವರಾದ ರಹೀಂ ಖಾನ್ ಭಾಗಿಯಾಗಿದ್ದರು.
ಕಾರ್ಯಕ್ರಮ ನಡೆದ ಕೆಲವೇ ದಿನಗಳಲ್ಲಿ, ಕಾಂಗ್ರೆಸ್ ನೇತೃತ್ವದಲ್ಲಿ ಹೊಸದಾಗಿ ರಚನೆಯಾದ ಹಜ್ ಭವನದ ನವೀಕರಣಕ್ಕಾಗಿ ಕರ್ನಾಟಕ ಸರ್ಕಾರವು ರೂ.೫,೦೦೦ ಕೋಟಿಗಳನ್ನು ದೇಣಿಗೆ ನೀಡಲಾಗಿತ್ತು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿತು. ಒಬ್ಬ ಟ್ವಿಟ್ಟರ್ ಬಳಕೆದಾರರು ಕನ್ನಡ ಸುದ್ದಿ ವಾಹಿನಿಯಾದ ಪಬ್ಲಿಕ್ ಟಿವಿಯ ಪ್ರಸಾರವೊಂದರ ಸ್ಕ್ರೀನ್‌ಶಾಟ್ ಚಿತ್ರವನ್ನು ಪೋಷ್ಟ್ ಮಾಡಿದ್ದಾರೆ. ಅದರ ಶೀರ್ಷಿಕೆ, "ಎಲ್ಲದರ ಬೆಲೆ ಏರಿಸಿ, ಈಗ ರೂ.೫೦೦೦ ಕೋಟಿ ರೂಪಾಯಿ ಹಜ್ ಭವನಕ್ಕೆ ದಾನ ಸಿಎಂ ಇಂದ!! ಹಿಂದೂಗಳೇ, ಅನುಭವಿಸಿ ಈಗ," ಎಂದು ಬರೆಯಲಾಗಿದೆ. ಪೋಷ್ಟ್ ನಲ್ಲಿ ಕಾಣುವ ಕನ್ನಡ ಸುದ್ದಿ ವಾಹಿನಿಯ ಸ್ಕ್ರೀನ್‌ಶಾಟ್ ನಲ್ಲಿ, "ಹಾಜ್ ಭಾವ್ ನೆವೀಕರಣಕ್ಕೆ ಸಿಎಂ ೫ ಸಾವಿರ ಕೋಟಿ ನೀಡಿದ್ದಾರೆ," ಎಂದು ಬರೆದಿದೆ. ಈ ಸ್ಕ್ರೀನ್‌ಶಾಟ್ ಅನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ.
ವಾಸ್ತವವಾಗಿ
ಲಾಜಿಕಲಿ ಫ್ಯಾಕ್ಟ್ಸ್ ವೈರಲ್ ಸ್ಕ್ರೀನ್‌ಶಾಟ್ ಅನ್ನು ಪರಿಶೀಲಿಸಿತು ಮತ್ತು ಸುದ್ದಿ ವಾಹಿನಿಗಳು ೨೦೨೩ರ ಹಜ್ ಯಾತ್ರೆಯ ಉದ್ಘಾಟನೆಯ ಬಗ್ಗೆ ಪ್ರಕಟಿಸಿದ ವೀಡಿಯೋಗಳನ್ನು ಕಂಡುಕೊಂಡಿತು. ಪಬ್ಲಿಕ್ ಟಿವಿ ಜೂನ್ ೬, ೨೦೨೩ರಂದು ಯೂಟ್ಯೂಬ್ ನಲ್ಲಿ ಪ್ರಕಟಿಸಲಾದ ಹಜ್ ಯಾತ್ರೆಯ ಟಿವಿ ಪ್ರಸಾರದ ಆರ್ಕೈವ್ ಆವೃತ್ತಿಯನ್ನು ನಾವು ಕಂಡುಕೊಂಡೆವು.
ವೀಡಿಯೋ ವರದಿಯ ಶೀರ್ಷಿಕೆ ಹೀಗಿದೆ, "2023 ನೇ ಸಾಲಿನ ಹಜ್ ಯಾತ್ರಿಕರ ವಿಮಾನಯಾನ | Haj Bhavan | Public ಟಿವಿ." ವೀಡಿಯೋದ ೦೨:೦೨ ಟೈಮ್‌ಸ್ಟ್ಯಾಂಪ್‌ನಲ್ಲಿ ವೈರಲ್ ಸ್ಕ್ರೀನ್‌ಶಾಟ್ ನಲ್ಲಿ ಉಲ್ಲೇಖಿಸಲಾದ ಅದೇ ಪದಗಳನ್ನು ನೋಡಬಹುದು. ಹಜ್ ಭವನ ನವೀಕರಣಕ್ಕೆ ಕರ್ನಾಟಕ ಸರ್ಕಾರ ರೂ.೫,೦೦೦ ಕೋಟಿ ಮಂಜೂರು ಮಾಡಲಾಗಿದೆ ಎಂದು ನಿರೂಪಕರೂ ಸಹ ಹೇಳಿರುವ ವೀಡಿಯೋ ವರದಿಯನ್ನು ನೋಡಬಹುದು. ವೀಡಿಯೋ ಈಗ ಡಿಲೀಟ್ ಮಾಡಲಾಗಿದೆ ಆದರೆ ಇದೇ ವರದಿಯಿಂದ ತೆಗದ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.
ನಾವು ನಂತರ ಜೂನ್ ೬ರ ಈ ಕಾರ್ಯಕ್ರಮದ ಲೈವ್‌ಸ್ಟ್ರೀಮ್ ಅಲ್ಲಿ ಹಾಜ್ ಭವನದ ನವೀಕರಣದ ಬಗ್ಗೆ ಮಾಡಲಾದ ಪ್ರಕಟಣೆಗಳನ್ನು ನೋಡಿದೆವು. ಲೈವ್‌ಸ್ಟ್ರೀಮ್ ಅನ್ನು ನ್ಯೂಸ್ ೧೮ ಕನ್ನಡ ವಾಹಿನಿಯು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ, "LIVE | CM Siddaramaiah in Haj Bhavan | ಬೆಂಗಳೂರಿನಲ್ಲಿ ಅತ್ಯಾಧುನಿಕ ಹಜ್ ಭವನ ಉದ್ಘಾಟನೆ | CM ಸಿದ್ದರಾಮಯ್ಯ," ಎಂಬ ಶೀರ್ಷಿಕೆಯೊಂದಿಗೆ ನೋಡಬಹುದು. ೪೯:೪೩ ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ, ಜಮೀರ್ ಅಹ್ಮದ್ ಹಿಂದಿಯಲ್ಲಿ ಹೀಗೆ ಹೇಳುತ್ತಾರೆ: ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಸಿದ್ದರಾಮಯ್ಯ ಅವರು ಭವನದ ನವೀಕರಣಕ್ಕೆ ರೂ.೫ ಕೋಟಿ ಮಂಜೂರು ಮಾಡಿದ್ದರು. ೨೦೧೮ರ ನಂತರ ಸಮ್ಮಿಶ್ರ ಸರ್ಕಾರ ಬಂದು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆಗ ಅವರನ್ನು ಸಂಪರ್ಕಿಸಿ ಸಿದ್ದರಾಮಯ್ಯನವರು ನವೀಕರಣಕ್ಕೆ ರೂ.೫ ಕೋಟಿ ಮಂಜೂರು ಮಾಡಿ ಎಂದು ಮನವಿ ಮಾಡಿದರೂ ಕುಮಾರಸ್ವಾಮಿ ಕೂಡ ಆ ಹಣ ಬಿಡುಗಡೆ ಮಾಡಿಲ್ಲ. ನಂತರ ಬಿಜೆಪಿ ಸರ್ಕಾರ ಬಂದರೂ ಆ ಹಣವನ್ನೂ ಬಿಡುಗಡೆ ಮಾಡಲಿಲ್ಲ. ನಂತರ ಸಿದ್ದರಾಮಯ್ಯ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಾಗ ನೀವು ಘೋಷಣೆ ಮಾಡಿದ್ದ ರೂ.೫ ಕೋಟಿ, ಯಾವ ಸರ್ಕಾರವೂ ಮಂಜೂರು ಮಾಡಿಲ್ಲ ಎಂದು ಅವರ ಬಳಿ ಹೋಗಿದ್ದೆವು. ಅವರು ಪತ್ರವನ್ನು ಒಮ್ಮೆ ನೋಡಿ, 'ನಿಮಗೆ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಬೇಕೇ?' ಎಂದು ಕೇಳಿ ನವೀಕರಣಕ್ಕಾಗಿ ರೂ. 5 ಕೋಟಿ ಬಿಡುಗಡೆಗೆ ತಕ್ಷಣವೇ ಸಹಿ ಹಾಕಿದರು."
ನ್ಯೂಸ್ ಫಸ್ಟ್ ಕನ್ನಡ ವಾಹಿನಿಯೂ ಕೂಡ ಅದೇ ವಿವರಗಳನ್ನು ಪ್ರಕಟಿಸಿತ್ತು. ಹಜ್ ಭವನದ ನವೀಕರಣಕ್ಕೆ ಕರ್ನಾಟಕ ಸರ್ಕಾರ ರೂ.೫ ಕೋಟಿ ಮಂಜೂರು ಮಾಡಿದೆ ಎಂದು ವೀಡಿಯೋ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಲಾಜಿಕಲಿ ಫ್ಯಾಕ್ಟ್ಸ್ ಕಾಂಗ್ರೆಸ್ ಪಕ್ಷದ ವಕ್ತಾರರೊಂದಿಗೆ ಸಂಪರ್ಕಿಸಿದಾಗ ಅವರು ನಮ್ಮನ್ನು ಪ್ರಜಾವಾಣಿ ನ್ಯೂಸ್ ಪ್ರಕಟಿಸಿದ, ಜಮೀರ್ ಅಹ್ಮದ್ ಅವರ ಸ್ಪಷ್ಟಿಕರಣದ ಬಗ್ಗೆ ತಿಳಿಸಿದರು. ಜೂನ್ ೯, ೨೦೨೩ರಂದು, ಅಹ್ಮದ್ ಅವರು ಪ್ರಜಾವಾಣಿಗೆ ಹೀಗೆ ತಿಳಿಸಿದ್ದರು, "ನಾನು ಅಂತಹ ಹೇಳಿಕೆಯನ್ನು ನೀಡಿಲ್ಲ (ರೂ.೫,೦೦೦ ಕೋಟಿ ಬಿಡುಗಡೆ ಮಾಡುವ ಬಗ್ಗೆ) ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಕೆಲವರು ಸುಳ್ಳು ಸುದ್ದಿ ಸೃಷ್ಟಿಸಿ ಹರಿಯಬಿಟ್ಟಿದ್ದಾರೆ. ನನ್ನ ಹೆಸರನ್ನು ಬಳಸಿಕೊಂಡು ಸುಳ್ಳು ಸುದ್ದಿ ಸೃಷಿತಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುತ್ತೇನೆ." ಕನ್ನಡದ ಇನ್ನೊಂದು ವಾಹಿನಿಯಾದ ವಾರ್ತಾ ಭಾರತೀ ಯೂ ಸಹ ಅಹ್ಮದ್ ಅವರ ಸ್ಪಷ್ಟಿಕರಣವನ್ನು ಪ್ರಕಟಿಸಿದೆ.
ತೀರ್ಪು
ಬೆಂಗಳೂರಿನ ಹಜ್ ಭವನದ ನವೀಕರಣಕ್ಕೆ ಕರ್ನಾಟಕ ಸರ್ಕಾರ ಕೇವಲ ರೂ. ೫ ಕೋಟಿ ಬಿಡುಗಡೆ ಮಾಡಿದೆ. ಇದಕ್ಕಾಗಿ ರೂ.೫ ,೦೦೦ ಕೋಟಿ ಬಿಡುಗಡೆ ಮಾಡಲಾಗಿತ್ತು ಎಂಬ ಮಾತು ತಪ್ಪು.