ಮೂಲಕ: ರಾಜೇಶ್ವರಿ ಪರಸ
ಜೂನ್ 19 2024
೨೦೨೪ ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಶಿ ತರೂರ್ ಅವರು ತಿರುವನಂತಪುರಂ ಕ್ಷೇತ್ರದಿಂದ ಚಂದ್ರಶೇಖರ್ ಅವರನ್ನು ೧೬,೦೭೭ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಹೇಳಿಕೆ ಏನು?
ಭಾರತೀಯ ಜನತಾ ಪಕ್ಷದ (ಬಿಜೆಪಿ) ಲಾಂಛನದಿಂದ ಅಲಂಕರಿಸಲ್ಪಟ್ಟ ವಾಹನದಲ್ಲಿ ಹಲವಾರು ವ್ಯಕ್ತಿಗಳು ನಿಂತಿರುವಂತೆ ಚಿತ್ರಿಸುವ ಆರು ಸೆಕೆಂಡ್‌ಗಳ ವೀಡಿಯೋ ಹಂಚಿಕೊಳ್ಳಲಾಗಿದ್ದು, ಇದು ಬಿಜೆಪಿಯ ರಾಜೀವ್ ಚಂದ್ರಶೇಖರ್ ಅವರನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಅವರ ಪ್ರಚಾರ ಕಾರ್ಯಕ್ರಮಗಳಲ್ಲಿ ಕನಿಷ್ಠ ಹಾಜರಾತಿ ಇದ್ದರೂ, ಚಂದ್ರಶೇಖರ್ ಅವರು ೨೦೨೪ ರ ಲೋಕಸಭೆ ಚುನಾವಣೆಯಲ್ಲಿ ಗಣನೀಯ ಬಹುಮತ ೩.೨ ಲಕ್ಷ ಮತಗಳಿಂದ ಗೆದ್ದಿದ್ದಾರೆ ಎಂದು ಶೇರ್ ಮಾಡಲಾಗಿದೆ. ಈ ಫಲಿತಾಂಶವನ್ನು "ಇವಿಎಂಗಳ (ಎಲೆಕ್ಟ್ರಾನಿಕ್ ಮತಯಂತ್ರಗಳು) ಮ್ಯಾಜಿಕ್" ಹಾಗು ಸಂದೇಹವಾದಿಗಳು ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಮೂಲಕ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ವೀಡಿಯೋವನ್ನು ಹಂಚಿಕೊಂಡ ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಮಾಹಿತಿ ತಂತ್ರಜ್ಞಾನದ ಮಾಜಿ ಕೇಂದ್ರ ಸಚಿವ ಚಂದ್ರಶೇಖರ್ ಅವರು ಎಕ್ಸ್ (ಹಿಂದೆ ಟ್ವಿಟರ್) ಸಿಇಒ ಎಲಾನ್ ಮುಸ್ಕ್ ಅವರ ಹ್ಯಾಕಿಂಗ್ ಅಪಾಯದಿಂದಾಗಿ ಇವಿಎಂಗಳ ನಿಷೇಧಕ್ಕೆ ಪ್ರತಿಪಾದಿಸಿದ ಪೋಷ್ಟ್ ಗೆ ಪ್ರತಿಕ್ರಿಯಿಸಿದ ಸ್ವಲ್ಪ ಸಮಯದ ನಂತರ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಈ ಹೇಳಿಕೆಯನ್ನ ಹಂಚಿಕೊಳ್ಳಲಾಗಿದೆ.
ಚಂದ್ರಶೇಖರ್ ಅವರು ಎಕ್ಸ್ ನಲ್ಲಿ ಮಸ್ಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಭಾರತೀಯ ಇವಿಎಂ ಗಳು ಸುರಕ್ಷಿತ ಮತ್ತು ಸೀಮಿತ ಗುಪ್ತಚರ ಸಾಧನಗಳಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು. ಈ ವಿನಿಮಯವು ಇವಿಎಂ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿತು.
ಆದರೆ, ವೈರಲ್ ಹೇಳಿಕೆ ತಪ್ಪು. ಕೇರಳದಲ್ಲಿ ೨೦೨೪ ರ ಸಾರ್ವತ್ರಿಕ ಚುನಾವಣೆಯಲ್ಲಿ ಚಂದ್ರಶೇಖರ್ ಗೆಲ್ಲಲಿಲ್ಲ; ಅವರು ಕಾಂಗ್ರೆಸ್‌ನ ಶಶಿ ತರೂರ್ ವಿರುದ್ಧ ಸೋತರು.
ವಾಸ್ತವಾಂಶಗಳೇನು?
ಚಂದ್ರಶೇಖರ್ ಅವರು ೨೦೨೪ ರ ಲೋಕಸಭೆ ಚುನಾವಣೆಗೆ ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ ಸಿ ) ನಾಯಕ ಶಶಿ ತರೂರ್ ಅವರಿಗೆ ತಮ್ಮ ಸಂಸದೀಯ ಸ್ಥಾನವನ್ನು ಕಳೆದುಕೊಂಡರು. ತರೂರ್ ೩೫೮,೧೫೫ ಮತಗಳನ್ನು ಗಳಿಸಿ ೧೬,೦೭೭ ಮತಗಳ ಬಹುಮತದೊಂದಿಗೆ ಗೆದ್ದರೆ, ಚಂದ್ರಶೇಖರ್ ೩೪೨,೦೭೮ ಮತಗಳನ್ನು ಪಡೆದರು.
ತಿರುವನಂತಪುರ ಕ್ಷೇತ್ರದ ಚುನಾವಣಾ ಫಲಿತಾಂಶಗಳ ಸ್ಕ್ರೀನ್‌ಶಾಟ್. (ಮೂಲ: ಇಸಿಐ)
ತಿರುವನಂತಪುರಂ ಕ್ಷೇತ್ರದಲ್ಲಿ ಏಪ್ರಿಲ್ ೨೬, ೨೦೨೪ ರಂದು ಚುನಾವಣೆ ನಡೆಯಿತು ಮತ್ತು ಜೂನ್ ೪, ೨೦೨೪ ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು. ತರೂರ್ ನಾಲ್ಕನೇ ಬಾರಿ ಜಯ ಸಾಧಿಸಿದರು.
ಆದರೆ, ಹೇಳಿಕೆಯೊಂದಿಗೆ ಪ್ರಸಾರವಾಗುತ್ತಿರುವ ವೀಡಿಯೋ ಚಂದ್ರಶೇಖರ್ ಅವರ ಚುನಾವಣಾ ಪ್ರಚಾರದಿಂದ ಬಂದಿದೆ ಮತ್ತು ಏಪ್ರಿಲ್ ೧೧, ೨೦೨೪ ರಂದು ಏಷ್ಯಾನೆಟ್ ನ್ಯೂಸ್‌ನಿಂದ ಪ್ರಸಾರವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ವೀಡಿಯೋ ಏಷ್ಯಾನೆಟ್ ಲೈವ್‌ಸ್ಟ್ರೀಮ್‌ನಲ್ಲಿ ಕಂಡುಬಂದಿಲ್ಲವಾದರೂ, ಮೂಲ ದೃಶ್ಯಗಳು ಚಂದ್ರಶೇಖರ್ ಅವರ ಫೇಸ್‌ಬುಕ್ ಪ್ರೊಫೈಲ್ ನಲ್ಲಿ ಲಭ್ಯವಿದೆ, ಏಪ್ರಿಲ್ ೧೨, ೨೦೨೪ ರಂದು ಲೈವ್ ವೀಡಿಯೋಯಾಗಿ ಅಪ್‌ಲೋಡ್ ಮಾಡಲಾಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಮತ್ತು ಅದು ತಿರುವನಂತಪುರದಲ್ಲಿ ಅವರ ರೋಡ್‌ಶೋ ಅನ್ನು ಪ್ರದರ್ಶಿಸುತ್ತದೆ.
ಕೆಲವೇ ಜನರು ಗೋಚರಿಸುವ ಬೀದಿಗಳಲ್ಲಿ ಅವರ ವಾಹನವು ಪ್ರಯಾಣಿಸುವ ದೃಶ್ಯಗಳಿದ್ದರೂ, ವೀಡಿಯೋದಲ್ಲಿನ ಅನೇಕ ನಿದರ್ಶನಗಳು, ಉದಾಹರಣೆಗೆ ೧೭:೩೯ ಮತ್ತು ೧೯:೧೩ ಟೈಮ್ ಸ್ಟ್ಯಾಂಪ್ ನಲ್ಲಿ, ಅವರ ರೋಡ್‌ಶೋಗೆ ಗಮನಾರ್ಹ ಸಂಖ್ಯೆಯ ಜನರು ಹಾಜರಾಗುವುದನ್ನು ತೋರಿಸುತ್ತದೆ. ಅವರ ರ‍್ಯಾಲಿಗಳಲ್ಲಿ "10 ಕ್ಕಿಂತ ಕಡಿಮೆ" ಹಾಜರಾತಿ ಎಂದ ವೈರಲ್ ಹೇಳಿಕೆಗಳಿಗೆ ಇದು ವಿರುದ್ಧವಾಗಿದೆ.
ತೀರ್ಪು
ಕೇರಳದ ತಿರುವನಂತಪುರಂ ಕ್ಷೇತ್ರದಿಂದ ೨೦೨೪ ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಸಂಸದ ಶಶಿ ತರೂರ್ ವಿರುದ್ಧ ೧೬,೦೭೭ ಮತಗಳಿಂದ ಸೋತಿದ್ದಾರೆ. ಚಲಾವಣೆಯಲ್ಲಿರುವ ಹೇಳಿಕೆ ತಪ್ಪು ಮತ್ತು ಇವಿಎಂಗಳ ವಿಶ್ವಾಸಾರ್ಹತೆಯ ಮೇಲೆ ಅನುಮಾನವನ್ನು ಉಂಟುಮಾಡಲು ಪ್ರಸಾರ ಮಾಡಲಾಗಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here