ಮೂಲಕ: ರಜಿನಿ ಕೆ.ಜಿ
ಜುಲೈ 3 2023
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಮುಂದುವರಿದಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ಲಾಜಿಕಲಿ ಫ್ಯಾಕ್ಟ್ಸ್ ಗೆ ಖಚಿತಪಡಿಸಿದ್ದಾರೆ.
ಸಂದರ್ಭ
ಮೇ ೧೦ ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ತಮ್ಮ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಭಾರತೀಯ ಸುದ್ದಿ ವೆಬ್‌ಸೈಟ್ ಒನ್ಇಂಡಿಯಾ ಹಿಂದಿ ಫೇಸ್‌ಬುಕ್‌ನಲ್ಲಿ ವೀಡಿಯೋವನ್ನು ಹಿಂದಿಯ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಶೀರ್ಷಿಕೆ: "ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಪದಚ್ಯುತಗೊಳಿಸಿದೆ. ಅವರ ಸ್ಥಾನಕ್ಕೆ ಬಿಎನ್ ಚಂದ್ರಪ್ಪ ಅವರನ್ನು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಾಗಿದೆ." ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಜಗಳದ ವರದಿಗಳ ನಂತರ ಈ ನಿರ್ಧಾರಕ್ಕೆ ಬಂದಿರುವುದಾಗಿ ವೀಡಿಯೋದಲ್ಲಿ ಹೇಳಲಾಗಿದೆ.
ಆದರೆ, ಈ ಹೇಳಿಕೆ ತಪ್ಪು. ಚಂದ್ರಪ್ಪ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಶಿವಕುಮಾರ್ ಅವರನ್ನು ಪದಚ್ಯುತಗೊಳಿಸಿದ ಬಗ್ಗೆ ಯಾವುದೇ ವರದಿಗಳಿಲ್ಲ.
ವಾಸ್ತವವಾಗಿ
ಲಾಜಿಕಲಿ ಫ್ಯಾಕ್ಟ್ಸ್ ಕೆಪಿಸಿಸಿ ವೆಬ್‌ಸೈಟ್ ಮತ್ತು ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದಾಗ ಶಿವಕುಮಾರ್ ಅವರನ್ನು ತೆಗೆದುಹಾಕಲಾಗಿದೆ ಅಥವಾ ಬದಲಾಯಿಸಲಾಗಿದೆ ಎಂಬ ಯಾವುದೇ ಅಧಿಕೃತ ಪ್ರಕಟಣೆಗಳು ಕಂಡುಬಂದಿಲ್ಲ. ಶಿವಕುಮಾರ್ ಅವರ ಟ್ವಿಟರ್ ಬಯೋ ಈಗಲೂ ಅವರು ಅಧ್ಯಕ್ಷರು ಎಂದು ತೋರುತ್ತದೆ.
ಲಾಜಿಕಲಿ ಫ್ಯಾಕ್ಟ್ಸ್ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಮಾಧ್ಯಮ ಮತ್ತು ಸಂವಹನಗಳ ಪ್ರಧಾನ ಕಾರ್ಯದರ್ಶಿ ಐಶ್ವರ್ಯ ಮಹಾದೇವ ಅವರನ್ನು ಸಂಪರ್ಕಿಸಿತು. “ಈ ಸುದ್ದಿ ಸಂಪೂರ್ಣ ಸುಳ್ಳು. ಶಿವಕುಮಾರ್ ಕರ್ನಾಟಕದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ದೃಢವಾಗಿ ಮತ್ತು ಬಲವಾಗಿ ಉಳಿದುಕೊಂಡಿದ್ದಾರೆ, ಈ ಚುನಾವಣೆಗಳಲ್ಲಿ ನಮ್ಮನ್ನು ಮುನ್ನಡೆಸುತ್ತಿದ್ದಾರೆ. ಜವಾಬ್ದಾರಿಯುತ ಮಾಧ್ಯಮವಾಗಬೇಕಾದ ಒನ್ಇಂಡಿಯಾ ಹೊರತಂದಿರುವ ಸುದ್ದಿ ಸಂಪೂರ್ಣ ಸುಳ್ಳು,” ಎಂದು ಅವರು ಫೋನ್ ಮೂಲಕ ಲಾಜಿಕಲಿ ಫ್ಯಾಕ್ಟ್ಸ್ ಗೆ ಹೇಳಿದರು. “ನಮ್ಮ ಮಾಜಿ ಕಾರ್ಯಾಧ್ಯಕ್ಷರು ನಿಧನರಾದ ನಂತರ ತೆರವಾದ ಸ್ಥಾನಕ್ಕೆ ಇತ್ತೀಚೆಗೆ ಚಂದ್ರಪ್ಪ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಹಿಂದೆ ಇದ್ದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸಮಿತಿಗೆ ಇಲ್ಲಿ ಒಬ್ಬ ಅಧ್ಯಕ್ಷ ಶಿವಕುಮಾರ್ ಮತ್ತು ಹಲವಾರು ಕಾರ್ಯಾಧ್ಯಕ್ಷರು ಇದ್ದಾರೆ. ಈ ಸುದ್ದಿ ವಿರುದ್ಧ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳಲಿದೆ,” ಎಂದು ಹೇಳಿದರು.
ಏಪ್ರಿಲ್ ೯ ರಂದು ಪಕ್ಷದ ನೂತನ ಕಾರ್ಯಾಧ್ಯಕ್ಷರಾಗಿ ಚಂದ್ರಪ್ಪ ಅವರನ್ನು ಆಯ್ಕೆ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿದ ನಂತರ ಶಿವಕುಮಾರ್ ಪದಚ್ಯುತಿ ಗೊಳಿಸಿರುವ ಗೊಂದಲವು ಶುರವಾಯಿತು.
ಚಂದ್ರಪ್ಪ ಅವರು ಚಿತ್ರದುರ್ಗದ ಮಾಜಿ ಸಂಸದರಾಗಿದ್ದು, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ತೀರ್ಪು
ಡಿಕೆ ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಮತ್ತು ಬಿ.ಎನ್.ಚಂದ್ರಪ್ಪ ಕಾರ್ಯಾಧ್ಯಕ್ಷರಲ್ಲಿ ಒಬ್ಬರು. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.