ಮುಖಪುಟ ನಾಸಾ ಬಿಡುಗಡೆ ಮಾಡಿದ ಮಂಗಳ ಗ್ರಹದ ದೃಶ್ಯಗಳನ್ನು ಚಂದ್ರಯಾನ-೩ ಸೆರೆಹಿಡಿದ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ನಾಸಾ ಬಿಡುಗಡೆ ಮಾಡಿದ ಮಂಗಳ ಗ್ರಹದ ದೃಶ್ಯಗಳನ್ನು ಚಂದ್ರಯಾನ-೩ ಸೆರೆಹಿಡಿದ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ

ಸೆಪ್ಟೆಂಬರ್ 1 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ನಾಸಾ ಬಿಡುಗಡೆ ಮಾಡಿದ ಮಂಗಳ ಗ್ರಹದ ದೃಶ್ಯಗಳನ್ನು ಚಂದ್ರಯಾನ-೩ ಸೆರೆಹಿಡಿದ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ನಾಸಾ ರೋವರ್‌ಗಳು ಸೆರೆಹಿಡಿದ ಮಂಗಳ ಗ್ರಹದ ಸಂಬಂಧವಿಲ್ಲದ ಮೂರು ದೃಶ್ಯಗಳನ್ನು ಚಂದ್ರಯಾನ-೩ ತೆಗೆದ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಇಲ್ಲಿ ಹೇಳಿಕೊಂಡಿರುವುದೇನು?

ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರಯಾನ-೩ ಆಗಸ್ಟ್ ೨೩ ರಂದು ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿತು. ಇದನ್ನು ನೇರ ಪ್ರಸಾರ ಮಾಡುತ್ತಿದ್ದಂತೆ, ಸಾಧನೆಯನ್ನು ಆಚರಿಸಲು ಜನರು ಲ್ಯಾಂಡಿಂಗ್ ಕ್ಷಣದ ಫೋಟೋಗಳು ಮತ್ತು ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರ ಮಧ್ಯೆ, ಹಲವಾರು ಜನರು ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೋಗಳನ್ನು ಹಂಚಿಕೊಂಡು, ಅವುಗಳನ್ನು ಚಂದ್ರಯಾನ-೩ರೊಂದಿಗೆ ಲಿಂಕ್ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ಪ್ರಸಾರವಾಗುತ್ತಿರುವ ಅಂತಹ ಮೂರು ವೀಡಿಯೋಗಳನ್ನು ಭಾರತದ ಚಂದ್ರನ ಕಾರ್ಯಾಚರಣೆಗೆ ತಪ್ಪಾಗಿ ಹೋಲಿಸಲಾಗಿವೆ. ಎಲ್ಲಾ ವೈರಲ್ ವೀಡಿಯೋಗಳು ಧೂಳಿನಿಂದ ತುಂಬಿದ ನಿರ್ಜನ, ಕಲ್ಲಿನ ಪ್ರದೇಶವನ್ನು ತೋರಿಸುತ್ತವೆ. ವೀಡಿಯೋಗಳಲ್ಲಿ ಒಂದು, ಟೈರ್ ಗುರುತುಗಳನ್ನು ಹೊಂದಿದ್ದು, ಮತ್ತೊಂದು ವೀಡಿಯೋ ಟ್ರ್ಯಾಕ್‌ಗಳು ಮತ್ತು ಕೆಲವು ಬಂಡೆಗಳನ್ನು ತೋರಿಸುತ್ತದೆ. ಮೂರನೇ ವೀಡಿಯೋ ಒಂದು ರೋವರ್ ಅನ್ನು ತೋರಿಸುತ್ತದೆ. "ಚಂದ್ರನ ದಕ್ಷಿಣ ಧ್ರುವದಲ್ಲಿರುವ ಚಂದ್ರಯಾನದ ಸುಂದರ ದೃಶ್ಯಾವಳಿಗಳು, ಹಗಲು ಹೊತ್ತಿನಲ್ಲಿ ತೆಗೆದ ಚಂದ್ರನ ಕೆಲವು ಸುಂದರವಾದ ವೀಡಿಯೊಗಳು" ಎಂದು ಓದುವ  ಬಂಗಾಳಿ ಭಾಷೆಯಲ್ಲಿನ ಶೀರ್ಷಿಕೆಯೊಂದಿಗೆ ಬಳಕೆದಾರರು ಈ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.

ವೀಡಿಯೋ ತುಣಿಕುಗಳನ್ನು ಒಳಗೊಂಡಿರುವ ಫೇಸ್‌ಬುಕ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಸ್ಕ್ರೀನ್‌ಶಾಟ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಆಲ್ಟೆರ್ ಮಾಡಲಾಗಿದೆ)

ಆದರೆ, ನಾಸಾ ರೋವರ್‌ಗಳು ಸೆರೆಹಿಡಿದ ದೃಶ್ಯಗಳನ್ನು ಜೂಮ್ ಮಾಡುವ ಮೂಲಕ ಈ ವೀಡಿಯೋಗಳನ್ನು ರಚಿಸಲಾಗಿದೆ ಮತ್ತು ಇವುಗಳಿಗೆ ಚಂದ್ರಯಾನ -೩ ಚಂದ್ರನ ಮಿಷನ್‌ಗೆ ಯಾವುದೇ ಸಂಬಂಧವಿಲ್ಲ.

ರೋವರ್ ತೋರಿಸುವ ವೀಡಿಯೋ ಹಿಂದಿನ ಸತ್ಯವೇನು?

ಈ ವೀಡಿಯೋ ಕಲ್ಲುಗಳಿರುವ, ಧೂಳಿನಿಂದ ತುಂಬಿರುವ ಮತ್ತು ನಿರ್ಜನ ಪ್ರದೇಶದ ದೃಶ್ಯವನ್ನು ತೋರಿಸುತ್ತದೆ. ಇದರ ಮಧ್ಯದಲ್ಲಿ ಕ್ಯಾಮೆರಾಗಳನ್ನು ಹೊಂದಿರುವ ದೊಡ್ಡ ರೋವರ್ ಅನ್ನು ನೋಡಬಹುದು. ವೀಡಿಯೋದ ಕೀಫ್ರೇಮ್‌ಗಳಲ್ಲಿನ ರಿವರ್ಸ್ ಇಮೇಜ್ ಸರ್ಚ್ ನಮ್ಮನ್ನು ನಾಸಾ ವೆಬ್‌ಸೈಟ್‌ಗೆ ನಿರ್ದೇಶಿಸಿತ್ತು. ಅಲ್ಲಿ ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ರೋವರ್ ಕ್ಯೂರಿಯಾಸಿಟಿ ರೋವರ್ ಎಂದು ನಾವು ಕಂಡುಕೊಂಡಿದ್ದೇವೆ. ಇದನ್ನು ನವೆಂಬರ್ ೨೬, ೨೦೧೧ ರಂದು ಉಡಾವಣೆ ಮಾಡಲಾಗಿದ್ದು ಆಗಸ್ಟ್ ೫, ೨೦೧೨ ರಂದು ಮಂಗಳನ ಮೇಲೆ ಇಳಿಸಲಾಯಿತು.

ಹೆಚ್ಚಿನ ಸಂಶೋಧನೆಯು ೨೦೧೪ರ ಏಪ್ರಿಲ್ ಮತ್ತು ಮೇ ನಡುವೆ ವಿಂಡ್‌ಜಾನಾ ಡ್ರಿಲ್ಲಿಂಗ್ ಸೈಟ್‌ನಲ್ಲಿ ನಾಸಾದ ಮಾರ್ಸ್ ರೋವರ್ ಕ್ಯೂರಿಯಾಸಿಟಿ ಸ್ವಯಂ ಭಾವಚಿತ್ರವನ್ನು ಸೆರೆಹಿಡಿದಿದೆ ಎಂದು  ಬಹಿರಂಗಪಡಿಸಿದೆ. ಈ ಸ್ವಯಂ-ಭಾವಚಿತ್ರದಲ್ಲಿ ಸಂಯೋಜಿಸಲಾದ ಡಜನ್ಗಟ್ಟಲೆ ಘಟಕ ಚಿತ್ರಗಳನ್ನು ಸೆರೆಹಿಡಿಯಲು ರೋವರ್ ತನ್ನ ತೋಳಿನ ತುದಿಯಲ್ಲಿ ಕ್ಯಾಮೆರಾವನ್ನು ಬಳಸಿಕೊಂಡಿತು. ಜೂನ್ ೨೩, ೨೦೧೪ ರಂದು ನಾಸಾ ತನ್ನ ವೆಬ್‌ಸೈಟ್‌ನಲ್ಲಿ ಚಿತ್ರವನ್ನು ಪ್ರಕಟಿಸಿತು. ತರುವಾಯ, ಕ್ಯೂರಿಯಾಸಿಟಿ ರೋವರ್ ಒಂದು ಮಂಗಳ ಗ್ರಹದ ವರ್ಷವನ್ನು (೬೮೭ ಭೂಮಿಯ ದಿನಗಳಿಗೆ ಸಮಾನ) ಪೂರ್ಣಗೊಳಿಸಿದೆ ಎಂದು ಜೂನ್ ೨೪ ರಂದು ನಾಸಾ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ವೈರಲ್ ವೀಡಿಯೋ ಮತ್ತು ನಾಸಾದ ಕ್ಯೂರಿಯಾಸಿಟಿ ರೋವರ್ ಚಿತ್ರಗಳ ನಡುವಿನ ಹೋಲಿಕೆ. (ಮೂಲ: ಸ್ಕ್ರೀನ್‌ಶಾಟ್/ಫೇಸ್‌ಬುಕ್/ನಾಸಾ/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಆಲ್ಟೆರ್ ಮಾಡಲಾಗಿದೆ)

ನಾಸಾ ಸೆಪ್ಟೆಂಬರ್ ೨೦೧೫ ರಲ್ಲಿ, ನಾಸಾ ೩೬೦ ಎಂಬ ತಮ್ಮ ಎಕ್ಸ್ (X) ಖಾತೆಯಲ್ಲಿ ಈ ಚಿತ್ರವನ್ನು ಪ್ರಕಟಿಸಿತು. ಇದಲ್ಲದೆ, ರೋವರ್ ಮಂಗಳ ಗ್ರಹದಲ್ಲಿ ಮೂರು ವರ್ಷಗಳ ಕಾಲ ಕಳೆದ ನಂತರ ಆಗಸ್ಟ್ ೨೦೧೫ ರಲ್ಲಿ ನಾಸಾ ಕ್ಯೂರಿಯಾಸಿಟಿ ರೋವರ್ ಕುರಿತು ವೀಡಿಯೋ ವರದಿಯನ್ನು ಕೂಡ ಪ್ರಕಟಿಸಿತು. ವೈರಲ್ ಪೋಷ್ಟ್ ನಲ್ಲಿ ಬಳಸಲಾದ ಚಿತ್ರವನ್ನು ವೀಡಿಯೋದಲ್ಲಿ ಸೇರಿಸಲಾಗಿದೆ ಮತ್ತು ೧:೨೪ ಟೈಮ್ ಸ್ಟ್ಯಾಂಪ್ ನಲ್ಲಿ ಇದನ್ನು ನೋಡಬಹುದು.

ನಾಸಾ ಬಿಡುಗಡೆ ಮಾಡಿದ ಕ್ಯೂರಿಯಾಸಿಟಿ ರೋವರ್‌ನ ೨೦೧೫ರ ವೀಡಿಯೋ ವರದಿ. (ಮೂಲ: ಯೂಟ್ಯೂಬ್)

ಕಲ್ಲುಗಳು ಮತ್ತು ಟೈರ್ ಗುರುತುಗಳನ್ನು ತೋರಿಸುವ ವೀಡಿಯೋ

ಟೈರ್ ಗುರುತುಗಳು ಮತ್ತು ಚದುರಿದ ಬಂಡೆಗಳ ಪ್ಯಾಚ್ ಹೊಂದಿರುವ ಧೂಳಿನ ಪ್ರದೇಶವನ್ನು ಈ ವೀಡಿಯೋ ಚಿತ್ರಿಸುತ್ತದೆ. ನಾಸಾ ರೋವರ್ ಸೆರೆಹಿಡಿದ ಮಂಗಳ ಗ್ರಹದ ಚಿತ್ರವನ್ನು ಬಳಸಿಕೊಂಡು ವೀಡಿಯೋವನ್ನು ರಚಿಸಲಾಗಿದೆ ಎಂದು ನಮ್ಮ ಸಂಶೋಧನೆಯು ಬಹಿರಂಗಪಡಿಸಿದೆ. ಅದೇ ಚಿತ್ರವನ್ನು ೨೦೦೮ರ ಜನವರಿ ೩ರಂದು ನಾಸಾದ ಮಾರ್ಸ್ ಎಕ್ಸ್‌ಪ್ಲೋರೇಶನ್ ವೆಬ್‌ಸೈಟ್‌ನಲ್ಲಿ "ಡಿ-ಸ್ಟಾರ್ ಪನೋರಮಾ ಬೈ ಆಪರ್ಚುನಿಟಿ" ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಯಿತು. ಇದನ್ನು ಕೆಳಗೆ ಕಾಣುವಂತೆ ವೈರಲ್ ವೀಡಿಯೋದೊಂದಿಗೆ ಹೋಲಿಸಿನೋಡಿದಾಗ, ಈ ಎರಡೂ ದೃಶ್ಯಗಳಲ್ಲಿ ಹಲವಾರು ಸಮಾನತೆಗಳು ಕಂಡುಬಂದಿವೆ. 

ವೈರಲ್ ವೀಡಿಯೋ ಮತ್ತು ನಾಸಾ ಪ್ರಕಟಿಸಿದ ಚಿತ್ರದ ನಡುವಿನ ಚಿತ್ರ ಹೋಲಿಕೆ. (ಮೂಲ: ಸ್ಕ್ರೀನ್‌ಶಾಟ್/ಫೇಸ್‌ಬುಕ್/ನಾಸಾ/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಆಲ್ಟೆರ್ ಮಾಡಲಾಗಿದೆ)

ಮಾರ್ಸ್ ರೋವರ್ ಗಳ ಯಾವುದೇ ಡ್ರೈವ್‌ನಲ್ಲಿ ಬಳಸುವುದಕ್ಕಿಂತ ಹೆಚ್ಚಿನ ಆನ್‌ಬೋರ್ಡ್ ಸ್ವಾಯತ್ತತೆಯೊಂದಿಗೆ ಕಾರ್ಯಗತಗೊಳಿಸಿದ ಡ್ರೈವ್‌ನಿಂದ ಉಳಿದಿರುವ ಟ್ರ್ಯಾಕ್‌ಗಳನ್ನು ಚಿತ್ರವು ಪ್ರದರ್ಶಿಸುತ್ತದೆ ಎಂದು ನಾಸಾ ಹೇಳಿದೆ. ೨೦೦೩ರಲ್ಲಿ ಉಡಾವಣೆಗೊಂಡ ಆಪರ್ಚುನಿಟಿ ರೋವರ್ ಈ ಚಿತ್ರವನ್ನು ಸೆರೆಹಿಡಿದಿದೆ ಎಂದು ವೆಬ್‌ಸೈಟ್ ಸೇರಿಸಿದೆ, ಇದು ಜನವರಿ ೨೦೦೪ರಲ್ಲಿ ಮಂಗಳ ಗ್ರಹದ ಮೇಲೆ ಇಳಿಯಿತು ಮತ್ತು ಜೂನ್ ೨೦೧೮ರವರೆಗೆ ಕೆಂಪು ಗ್ರಹದಲ್ಲಿ ಸಕ್ರಿಯವಾಗಿತ್ತು. ಮಂಗಳ ಗ್ರಹದ ತೀವ್ರ ಧೂಳಿನ ಚಂಡಮಾರುತವು ಅದನ್ನು ಆವರಿಸಿದ ನಂತರ ಅದರೊಂದಿಗಿನ ಸಂಪರ್ಕವು ಕಡಿತಗೊಂಡಿತು.

ಟೈರ್ ಟ್ರ್ಯಾಕ್ ನ ವೀಡಿಯೋ 

ಮೂರನೇ ವೈರಲ್ ವೀಡಿಯೋವು ಧೂಳಿನ ಮತ್ತು ನಿರ್ಜನ ಪ್ರದೇಶದಲ್ಲಿ ಟೈರ್ ಗುರುತುಗಳನ್ನು ತೋರಿಸುತ್ತದೆ. ನಾಸಾ ರೋವರ್ ಸೆರೆಹಿಡಿದ ಮಂಗಳದ ಚಿತ್ರವನ್ನು ಬಳಸಿಕೊಂಡು ಈ ವೀಡಿಯೋವನ್ನು ಸಹ ರಚಿಸಲಾಗಿದೆ. ಈ ಚಿತ್ರವನ್ನು ಫೆಬ್ರವರಿ ೧೪, ೨೦೨೩ ರಂದು ನಾಸಾದ ಮಾರ್ಸ್ ಎಕ್ಸ್‌ಪ್ಲೋರೇಷನ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ವೈರಲ್ ವೀಡಿಯೋ ಮತ್ತು ನಾಸಾ ಪ್ರಕಟಿಸಿದ ಚಿತ್ರದ ನಡುವಿನ ಚಿತ್ರ ಹೋಲಿಕೆ. (ಮೂಲ: ಸ್ಕ್ರೀನ್‌ಶಾಟ್/ಫೇಸ್‌ಬುಕ್/ನಾಸಾ/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಆಲ್ಟೆರ್ ಮಾಡಲಾಗಿದೆ)

ಚಿತ್ರದ ಶೀರ್ಷಿಕೆಯ ಪ್ರಕಾರ, ನಾಸಾದ ಪರ್ಸೆವೆರೆನ್ಸ್ ಮಾರ್ಸ್ ರೋವರ್ ತನ್ನ ಇತ್ತೀಚೆಗೆ ಪೂರ್ಣಗೊಂಡ ಮಾದರಿ ಡಿಪೋದ ಈ ಭಾವಚಿತ್ರವನ್ನು ಜನವರಿ ೩೧, ೨೦೨೩ ರಂದು ತನ್ನ ಮಸ್ತಕಾಮ್ -Z ಕ್ಯಾಮೆರಾವನ್ನು ಬಳಸಿಕೊಂಡು ಸೆರೆಹಿಡಿದಿದೆ. ಪರ್ಸೆವೆರೆನ್ಸ್ ರೋವರ್ ಅನ್ನು ಜುಲೈ ೩೦, ೨೦೨೦ ರಂದು ಉಡಾಯಿಸಲಾಯಿತು ಮತ್ತು ಫೆಬ್ರವರಿ ೧೮, ೨೦೨೧ ರಂದು ಮಂಗಳನ ಮೇಲೆ ಇಳಿಯಿತು.

ಇಸ್ರೋ ಪೋಷ್ಟ್ ಮಾಡಿದ ಅಂತಹ ಯಾವುದೇ ವೀಡಿಯೋಗಳನ್ನು ನಾವು ಹುಡುಕಲಾಗಲಿಲ್ಲ. ಆಗಸ್ಟ್ ೨೩ ರಂದು ಲ್ಯಾಂಡಿಂಗ್ ನಂತರ, ಇಸ್ರೋ ಚಂದ್ರನ ಹಲವಾರು ಚಿತ್ರಗಳನ್ನು ಹಂಚಿಕೊಂಡಿದೆ, ಇದರಲ್ಲಿ ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್ ಮತ್ತು ಚಂದ್ರನ ಮೇಲ್ಮೈಯಲ್ಲಿರುವ ಕ್ರೇಟರ್ ಸೇರಿವೆ.

ತೀರ್ಪು

ವೈರಲ್ ವೀಡಿಯೋಗಳನ್ನು ಚಂದ್ರಯಾನ-೩  ಸೆರೆಹಿಡಿದಿದೆ ಎಂಬ ಹೇಳಿಕೆಗಳು ತಪ್ಪು. ನಾಸಾ ಮಾರ್ಸ್ ರೋವರ್‌ಗಳು ವರ್ಷಗಳಿಂದ ಸೆರೆಹಿಡಿಯಲಾದ ಮಂಗಳನ ಚಿತ್ರಗಳನ್ನು ಇತ್ತೀಚಿನ ವೀಡಿಯೋಗಳಾಗಿ ಹಂಚಿಕೊಳ್ಳಲಾಗಿದೆ. ಭಾರತದ ಚಂದ್ರನ ಕಾರ್ಯಾಚರಣೆಯ ತಪ್ಪಾದ ಸಂದರ್ಭದೊಂದಿಗೆ ಈ ದೃಶ್ಯಗಳು ಇಸ್ರೋ ಅಥವಾ ಚಂದ್ರಯಾನ-೩ ರೊಂದಿಗೆ ಸೇರಿಸಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಅನುವಾದಿಸಿದವರು: ವಿವೇಕ್ ಜೆ 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ