ಮುಖಪುಟ ಯಾವುದೇ ಧರ್ಮದ ಆಧಾರದ ಮೇಲೆ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನವನ್ನು ನೀಡಲಾಗಿಲ್ಲ

ಯಾವುದೇ ಧರ್ಮದ ಆಧಾರದ ಮೇಲೆ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನವನ್ನು ನೀಡಲಾಗಿಲ್ಲ

ಮೂಲಕ: ರಜಿನಿ ಕೆ.ಜಿ

ಜನವರಿ 27 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಯಾವುದೇ ಧರ್ಮದ ಆಧಾರದ ಮೇಲೆ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನವನ್ನು ನೀಡಲಾಗಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು False

ವಿವಿಧ ಸಮುದಾಯಗಳ ೬೩೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂಬ ಹೇಳಿಕೆಯನ್ನು ಟ್ರಸ್ಟ್‌ ನಿರಾಕರಿಸಿದೆ.

ಸಂದರ್ಭ

ಕೋಮು ವಿಭಜಕ ನಿರೂಪಣೆಯೊಂದಿಗೆ, ವೇದಿಕೆಯ ಮೇಲೆ ಹುಡುಗಿಯರ ಗುಂಪು ತಮ್ಮ ಪ್ರಮಾಣಪತ್ರಗಳನ್ನು ಹಿಡಿದಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಶಕುಂತಲ/ Shakunthala ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಚಿತ್ರವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, "ಮಲಬಾರ್ ಗೋಲ್ಡ್ ಕಂಪನಿ ಮುಸ್ಲಿಮರಿಗೆ ಮಾತ್ರ ಸ್ಕಾಲರ್ ಶಿಪ್ ಕೊಟ್ಟಿದೆ ಅಂದ್ರೆ ಅವರಿಗೆ ಮುಸ್ಲಿಂ ಗ್ರಾಹಕರು ಮಾತ್ರ ಇದ್ದಾರಾ...?" ಚಿತ್ರವು ಬಹುತೇಕ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ, ವೇದಿಕೆಯ ಮೇಲೆ ನಿಂತಿರುವುದು ಹಾಗೂ ಅವರು ವಿದ್ಯಾರ್ಥಿವೇತನ ಪ್ರಮಾಣಪತ್ರವನ್ನು ಹಿಡಿದಿರುವುದನ್ನು ತೋರಿಸುತ್ತದೆ. ವೇದಿಕೆಯ ಮೇಲೆ ಹುಡುಗಿಯರು ಗ್ರೂಪ್ ಫೋಟೋಗೆ ಪೋಸ್ ನೀಡುತ್ತಿರುವ, ಹಿನ್ನಲೆಯಲ್ಲಿ ಮಲಬಾರ್ ಚಾರಿಟೇಬಲ್ ಟ್ರಸ್ಟ್‌ನ ಲೋಗೋ ದೊಡ್ಡದಾಗಿ ಕಾಣುತ್ತದೆ. ಟ್ವೀಟ್ ಇದುವರೆಗೆ ಸುಮಾರು ೪೦ ಸಾವಿರ ವೀಕ್ಷಣೆಗಳನ್ನು ಗಳಿಸಿದೆ ಮತ್ತು ೯೦೦ ಕ್ಕೂ ಹೆಚ್ಚು ಬಳಕೆದಾರರು ಇದನ್ನು ಲೈಕ್ ಮಾಡಿದ್ದಾರೆ. ಚಾರಿಟಬಲ್ ಟ್ರಸ್ಟ್ ಮುಸ್ಲಿಮರಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡಿದೆ ಎಂದು ಸೂಚಿಸುವ ಪೋಷ್ಟ್ ಗಳಲ್ಲಿ ಹಲವಾರು ಇತರ ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದರೆ, ಚಿತ್ರವನ್ನು ತಪ್ಪಾದ ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ.

ವಾಸ್ತವವಾಗಿ

ಲಾಜಿಕಲಿ (Logically) ಮಲಬಾರ್ ಚಾರಿಟೇಬಲ್ ಟ್ರಸ್ಟ್‌ನ ಪ್ರತಿನಿಧಿಯನ್ನು ಸಂಪರ್ಕಿಸಿತು, ಮಲಬಾರ್ ಗ್ರೂಪ್ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡಿದೆ ಎಂಬ ಹೇಳಿಕೆಯು ತಪ್ಪು ಸುದ್ದಿ ಎಂದು ಅವರು ಸ್ಪಷ್ಟವಾಗಿ ಹೇಳಿದರು. ಮಲಬಾರ್ ಕರ್ನಾಟಕದ ಪ್ರಾದೇಶಿಕ ಕಚೇರಿಯ ಹಿರಿಯ ಕಾರ್ಯನಿರ್ವಾಹಕರಾದ ಹೈದರ್ (ಒಂದೇ ಹೆಸರಿನಿಂದ ಹೋಗುತ್ತಾರೆ) ಲಾಜಿಕಲಿ (Logically) ಯೊಂದಿಗೆ ಮಾತನಾಡುತ್ತ, “ಜನವರಿ ೧೭ ರಂದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾವು ೬೩೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿದ್ದೇವೆ. ನಾವು ಅರ್ಹತೆಯ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ನೀಡುತ್ತೇವೆ ಹೊರತು ಜಾತಿ ಅಥವಾ ಧರ್ಮದ ಆಧಾರದ ಮೇಲಲ್ಲ. ಸಮಾರಂಭದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳ ಗ್ರೂಪ್ ಫೋಟೋಗಳನ್ನು ತೆಗೆಯಲಾಗಿದ್ದು, ಮುಸ್ಲಿಂ ವಿದ್ಯಾರ್ಥಿಗಳ ಒಂದು ನಿರ್ದಿಷ್ಟ ಗ್ರೂಪ್ ಫೋಟೋವನ್ನು ಆಯ್ದುಕೊಂಡು ತಪ್ಪು ಹೇಳಿಕೆಗಳೊಂದಿಗೆ ವೈರಲ್ ಮಾಡಲಾಗಿದೆ” ಎಂದು ಹೇಳಿದರು. "ಮಂಗಳೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿವೇತನ ಪಡೆದ ಸುಮಾರು ೮೦ ರಿಂದ ೯೦ ಪ್ರತಿಶತ ವಿದ್ಯಾರ್ಥಿಗಳು ಇತರ ಧರ್ಮದ ವಿದ್ಯಾರ್ಥಿಗಳು, ಶೇಕಡಾ ೨೦ ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಮುಸ್ಲಿಮರು" ಎಂದು ಅವರು ಹೇಳಿದ್ದಾರೆ.

ಮಲಬಾರ್ ಚಾರಿಟೇಬಲ್ ಟ್ರಸ್ಟ್‌ನ ವೆಬ್‌ಸೈಟ್ ಪ್ರಕಾರ, ವಿದ್ಯಾರ್ಥಿ ವೇತನವನ್ನು 'ಮೆರಿಟ್ ಮತ್ತು ಮೀನ್ಸ್ ಆಧಾರದ ಮೇಲೆ' ಮಾತ್ರ ನೀಡಲಾಗುತ್ತದೆ. ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಬಯಸುವವರು "ಅರ್ಹತಾ ಪರೀಕ್ಷೆಗೆ ಸಂಬಂಧಿಸಿದಂತೆ ಮಂಡಳಿ/ ಪರೀಕ್ಷಾ ನಿಯಂತ್ರಕರು ನೀಡಿದ ಪ್ರಮಾಣಪತ್ರಗಳು ಅಥವಾ ಮೆರಿಟ್‌ಗಳ ದೃಢೀಕೃತ ಪ್ರತಿಗಳನ್ನು ಮತ್ತು ಅರ್ಜಿಯೊಂದಿಗೆ ಕಂದಾಯ ಅಧಿಕಾರಿಗಳು ನೀಡಿದ ಆದಾಯ ಪ್ರಮಾಣಪತ್ರದ ಪ್ರತಿಯನ್ನು" ಸಲ್ಲಿಸಬೇಕು. ವಿದ್ಯಾರ್ಥಿವೇತನಕ್ಕೆ ಪರಿಗಣಿಸಲು ವಿದ್ಯಾರ್ಥಿಗಳಿಂದ ಜಾತಿ ಅಥವಾ ಧರ್ಮ ಆಧಾರಿತ ದಾಖಲೆಗಳ ಅಗತ್ಯವನ್ನು ವೆಬ್‌ಸೈಟ್ ಉಲ್ಲೇಖಿಸುವುದಿಲ್ಲ.

ಇದಲ್ಲದೆ, ಕೀವರ್ಡ್ ಹುಡುಕಾಟದ ಮೂಲಕ, ನಾವು ಫೇಸ್‌ಬುಕ್‌ನಲ್ಲಿ ಹೇಳಿದ ಕಾರ್ಯಕ್ರಮದ ಪೋಷ್ಟರ್ ಅನ್ನು ಕಂಡುಕೊಂಡಿದ್ದೇವೆ. ಇದನ್ನು ಜನವರಿ ೨೦, ೨೦೨೩ ರಂದು "ತಂಝೀಮ್ ಶಿರ್ವಾ" ಅವರು ಹಂಚಿಕೊಂಡಿದ್ದಾರೆ. ಪೋಷ್ಟರ್ ನ ಶೀರ್ಷಿಕೆ ಹೀಗಿದೆ: “೬೦ ಕಾಲೇಜುಗಳ ೬೩೦ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಣೆ," ಮತ್ತು ವಿದ್ಯಾರ್ಥಿವೇತನ ಪ್ರಮಾಣ ಪತ್ರಗಳನ್ನು ಪಡೆಯುವ ಬಹು ಚಿತ್ರಗಳನ್ನು ಹೊಂದಿತ್ತು. ಸರ್ಕಾರಿ ಪಿಯು (ಪೂರ್ವ ವಿಶ್ವವಿದ್ಯಾಲಯ) ಕಾಲೇಜು ಅಳದಂಗಡಿ, ಸರ್ಕಾರಿ ಪಿಯು ಕಾಲೇಜು ಬೆಳ್ತಂಗಡಿ, ಸರ್ಕಾರಿ ಪಿಯು ಕಾಲೇಜು ಕಾರ್‌ಸ್ಟ್ರೀಟ್‌ ಮಂಗಳೂರು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು. ಪೋಷ್ಟರ್ ಪ್ರಕಾರ, ಆಧಾರರಹಿತ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವೈರಲ್ ಫೋಟೋ ಉಪ್ಪಿನಂಗಡಿಯ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳದ್ದು. ಪೋಸ್ಟರ್‌ನಲ್ಲಿ ಕಾರ್ಯಕ್ರಮದ ವಿವರಗಳು ಮತ್ತು ಅಲ್ಲಿ ಹಾಜರಿದ್ದ ಮುಖ್ಯ ಅತಿಥಿಗಳ ವಿವರಗಳಿವೆ. ಶಿರ್ವಾ ಅವರು ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ತಮ್ಮ ವಿದ್ಯಾರ್ಥಿವೇತನ ಪ್ರಮಾಣಪತ್ರಗಳೊಂದಿಗೆ ಪ್ರತ್ಯೇಕವಾಗಿ ಪೋಸ್ ನೀಡುತ್ತಿರುವ ಗ್ರೂಪ್ ಫೋಟೋವನ್ನು ಪೋಷ್ಟ್ ಮಾಡಿದ್ದಾರೆ. ಕಾರ್ಯಕ್ರಮದ ಛಾಯಾಚಿತ್ರಗಳನ್ನು ಇತರ ಇಬ್ಬರು ಸಹ ಹಂಚಿಕೊಂಡಿದ್ದಾರೆ - ಗಿರೀಶ್ ಎಸ್ ರೈ ಮತ್ತು ಮೊಹಮ್ಮದ್ ಸಮೀರ್, ಅವರು ತಮ್ಮ ಫೇಸ್‌ಬುಕ್ ಬಯೋಸ್ ಪ್ರಕಾರ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನಲ್ಲಿ ಕೆಲಸ ಮಾಡುತ್ತಾರೆ.

ಜನವರಿ ೨೧, ೨೦೨೩ ರಂದು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಕಾರ್ಯಕ್ರಮದ ವೀಡಿಯೋವನ್ನು ಅಪ್‌ಲೋಡ್ ಮಾಡಿದೆ. "ಶೈಕ್ಷಣಿಕ ವಿದ್ಯಾರ್ಥಿವೇತನ ಕಾರ್ಯಕ್ರಮ | ಸಿಎಸ್ಆರ್ ಇನಿಶಿಯೇಟಿವ್ | ಮಲಬಾರ್ ಗ್ರೂಪ್" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ, ಹಣಕಾಸಿನ ವರ್ಷ ೨೦೨೨-೨೦೨೩ ರಲ್ಲಿ ಕರ್ನಾಟಕ ಪ್ರದೇಶದ ವಿದ್ಯಾರ್ಥಿನಿಯರಿಗೆ ಒದಗಿಸಲಾದ ವಿದ್ಯಾರ್ಥಿವೇತನದ ಕುರಿತು ವೀಡಿಯೋ ವಿವರಗಳನ್ನು ನೀಡುತ್ತದೆ. ವೈರಲ್ ಚಿತ್ರವನ್ನು ೧:೦೨ ಕ್ಕೆ ವೀಡಿಯೋದಲ್ಲಿ ನಾವು ನೋಡಬಹುದು. ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಫೋಟೋ, ಪೋಷ್ಟ್ರ್‌ಗಳು ಮತ್ತು ಯೂಟ್ಯೂಬ್ ವೀಡಿಯೋದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡಲಾಗಿತ್ತು ಎಂಬ ಯಾವುದೇ ಸೂಚನೆಯಿಲ್ಲ.

ಕನ್ನಡ ಸುದ್ದಿ ವಾಹಿನಿ V4ನ್ಯೂಸ್ ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೋ ವರದಿಯು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದ ದೃಶ್ಯಗಳನ್ನು ಸಹ ತೋರಿಸಿದೆ. ವರದಿಯ ಪ್ರಕಾರ ಮಂಗಳೂರಿನ ಕುದ್ಮುಲ್ ರಂಗರಾವ್ ಟೌನ್ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಾನೆಲ್ 9 ಲೈವ್, ಮತ್ತೊಂದು ಕನ್ನಡ ನ್ಯೂಸ್ ಚಾನೆಲ್ ಕೂಡ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಕಾರ್ಯಕ್ರಮದ ಬಗ್ಗೆ ವರದಿ ಮಾಡಿದೆ. ಎರಡೂ ಚಾನೆಲ್‌ಗಳು ತಮ್ಮ ವರದಿಗಳಲ್ಲಿ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ವಿತರಿಸುವ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ.

ತೀರ್ಪು

ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ತೆಗೆದ ಹಲವು ಫೋಟೋಗಳಲ್ಲಿ ಒಂದನ್ನು ಆಯ್ದುಕೊಂಡು ಕೋಮುವಾದದ ಕಾರಣ ನೀಡಲಾಗಿದೆ. ಚಾರಿಟಬಲ್ ಟ್ರಸ್ಟ್‌ ಕೇವಲ ಒಂದು ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸಲಾಗಿದೆ ಎಂಬ ಹೇಳಿಕೆಯನ್ನು ನಿರಾಕರಿಸಿದೆ. ಆದ್ದರಿಂದ, ನಾವು ಹೇಳಿಕೆ ತಪ್ಪು ಎಂದು ಗುರುತಿಸುತ್ತೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ