ಮೂಲಕ: ವಿವೇಕ್ ಜೆ
ಡಿಸೆಂಬರ್ 8 2022
ನರೇಂದ್ರ ಮೋದಿಯವರ ಫೋಟೋ ತೆಗೆಯಲು ನೆಲದ ಮೇಲೆ ಮಲಗಿರುವಂತೆ ಓರ್ವ ಛಾಯಾಗ್ರಾಹಕರ ಚಿತ್ರವನ್ನು ಎಡಿಟ್ ಮಾಡಿ ಹಾಕುವ ಮೂಲಕ ತಪ್ಪು ನಿರೂಪಣೆ ಹರಡಿಸಲಾಗಿದೆ.
ಸಂದರ್ಭ
ನವೆಂಬರ್ ೨೦೨೨ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಒಂದರ ಮೂಲಕ ಛಾಯಾಗ್ರಾಹಕರು ಜೊತೆಯಲ್ಲಿ ಇಲ್ಲದಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕರ ಮುಂದೆ ಬರುವುದಿಲ್ಲ ಎಂದು ತೋರಿಸುವ ಹಾಗೆ ಫೋಟೋವೊಂದನ್ನು ಪ್ರಚಾರ ಮಾಡಲಾಗಿದೆ. ಈ ಫೋಟೋವನ್ನು ಹಲವಾರು ಭಾಷೆಗಳಲ್ಲಿ, ವಿವಿಧ ಶೀರ್ಷಿಕೆಗಳೊಂದಿಗೆ ವೈರಲ್ ಆಗಿದೆ. ಛಾಯಾಗ್ರಾಹಕರೊಬ್ಬರು ಮೋದಿಯವರ ಫೋಟೋ ತೆಗೆಯಲು ನೆಲದ ಮೇಲೆ ಮಲಗಿರುವ ಹಾಗೆ ಈ ಚಿತ್ರವೂ ತೋರಿಸುತ್ತದೆ. ಹೀಗೆ ಹಂಚಿಕೊಳ್ಳಲಾದ ಶೀರ್ಷಿಕೆಯೊಂದು ಹೀಗೆ ಹೇಳುತ್ತದೆ "ದಿನಕ್ಕೆ ೧೮ರಿಂದ ೨೦ ಘಂಟೆಗಳವರೆಗೂ ಕೆಲಸ ಮಾಡುವ ವ್ಯಕ್ತಿ. ನರೇಂದ್ರ ಮೋದಿಯವರ ಛಾಯಾಗ್ರಾಹಕ."
ವಾಸ್ತವವಾಗಿ
ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಚಿತ್ರದ ಹಾಗೆಯೇ ಇರುವ ಇನ್ನೊಂದು ಚಿತ್ರವೊಂದು ನರೇಂದ್ರ ಮೋದಿಯವರ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಕಂಡುಬಂದಿದೆ. ಈ ಚಿತ್ರವು ಮೋದಿಯವರು ದೆಹಲಿಯ ಗಾಂಧಿ ಸ್ಮೃತಿಯಲ್ಲಿ ಅಕ್ಟೋಬರ್ ೨, ೨೦೨೧ರಂದು ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾದಾಗ ತೆಗೆದದ್ದು ಎಂದು ತಿಳಿದುಬಂದಿದೆ. ಆದರೆ ವೈರಲ್ ಆದ ಚಿತ್ರದಲ್ಲಿರುವ ಛಾಯಾಗ್ರಾಹಕರನ್ನು ಮೋದಿಯವರು ಹಂಚಿಕೊಂಡ ಚಿತ್ರದಲ್ಲಾಗಲಿ, ಈ ಪ್ರಾರ್ಥನಾ ಸಭೆಯ ಬಗ್ಗೆಯ ವರದಿಯಲ್ಲಾಗಲೀ ಕಾಣಿಸಿಕೊಳ್ಳಲಿಲ್ಲ. ಮೋದಿಯವರ ಅಧಿಕೃತ ಯುಟ್ಯೂಬ್ ಚಾನೆಲ್ ಹಂಚಿಕೊಂಡ ವೀಡಿಯೋದಲ್ಲಿ ಕೂಡಾ ಛಾಯಾಗ್ರಾಹಕರು ಕಂಡು ಬಂದಿಲ್ಲ. ಇದರಿಂದ ಛಾಯಾಗ್ರಾಹಕರ ಚಿತ್ರವನ್ನು ಮೋದಿಯವರ ಚಿತ್ರದೊಂದಿಗೆ ಸೇರಿಸಲಾಗಿದೆ ಎಂದು ನಮಗೆ ತಿಳಿದು ಬಂದಿದೆ.
ಅಲಮಿ (Alamy) ಎಂಬ ವೆಬ್ಸೈಟ್ ಛಾಯಾಗ್ರಾಹಕನ ಚಿತ್ರವನ್ನು ಮಾರಾಟಕ್ಕೆ ಇಟ್ಟಿದ್ದು ಅದರಲ್ಲಿ ಕಂಡುಬಂದ ಮಾಹಿತಿಯ ಪ್ರಕಾರ ಆ ಛಾಯಾಗ್ರಾಹಕರ ಚಿತ್ರವನ್ನು ಮಾರ್ಚ್ ೧೫, ೨೦೧೭ರಲ್ಲಿ ಇಂಗೇಮರ್ ಮ್ಯಾಗ್ನ್ಯೂಸಾನ್ ಎಂಬವರು ತೆಗೆದಿದ್ದು. ಹೀಗಾಗಿ ಛಾಯಾಗ್ರಾಹಕರ ಚಿತ್ರವನ್ನು ಮೋದಿಯವರ ೨೦೨೧ರಲ್ಲಿ ತೆಗೆದ ಚಿತ್ರದೊಂದಿಗೆ ಸೇರಿಸಲಾಗಿದೆ ಎಂದು ಸ್ಪಷ್ಟವಾಗಿದೆ.
ತೀರ್ಪು
ನರೇಂದ್ರ ಮೋದಿಯವರಿಗೆ ಸಂಬಂಧವಿಲ್ಲದ ಛಾಯಾಗ್ರಾಹಕರ ಚಿತ್ರವೊಂದನ್ನು ಡಿಜಿಟಲ್ ಎಡಿಟಿಂಗ್ ಮೂಲಕ ಸೇರಿಸಿಕೊಂಡು ತಪ್ಪಾದ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ವೈರಲ್ ಚಿತ್ರದಲ್ಲಿ ಕಂಡುಬಂದದ್ದು ನರೇಂದ್ರ ಮೋದಿಯವರ ಛಾಯಾಗ್ರಾಹಕರಲ್ಲ. ಆದ್ದರಿಂದ ನಾವು ಈ ಮೇಲಿನ ಹೇಳಿಕೆಯನ್ನು ತಪ್ಪು ಎಂದು ಹೇಳಿದ್ದೇವೆ.