ಮುಖಪುಟ ಭಾರತ-ಕೆನಡಾ ಉದ್ವಿಗ್ನತೆ: ೨೦೨೧ ರ ಕನ್ನಡ ಧ್ವಜವನ್ನು ಸುಡುವ ಪ್ರತಿಭಟನಾಕಾರರ ಚಿತ್ರವನ್ನು ಬಿಜೆಪಿಯನ್ನು ಅಣಕಿಸಲು ಹಂಚಿಕೊಳ್ಳಲಾಗಿದೆ

ಭಾರತ-ಕೆನಡಾ ಉದ್ವಿಗ್ನತೆ: ೨೦೨೧ ರ ಕನ್ನಡ ಧ್ವಜವನ್ನು ಸುಡುವ ಪ್ರತಿಭಟನಾಕಾರರ ಚಿತ್ರವನ್ನು ಬಿಜೆಪಿಯನ್ನು ಅಣಕಿಸಲು ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಸೆಪ್ಟೆಂಬರ್ 27 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಭಾರತ-ಕೆನಡಾ ಉದ್ವಿಗ್ನತೆ: ೨೦೨೧ ರ ಕನ್ನಡ ಧ್ವಜವನ್ನು ಸುಡುವ ಪ್ರತಿಭಟನಾಕಾರರ ಚಿತ್ರವನ್ನು ಬಿಜೆಪಿಯನ್ನು ಅಣಕಿಸಲು ಹಂಚಿಕೊಳ್ಳಲಾಗಿದೆ ಭಾರತ-ಕೆನಡಾ ನಡುವಿನ ಜಗಳದ ನಡುವೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸದಸ್ಯರ ಗುಂಪು ಕನ್ನಡ ಧ್ವಜವನ್ನು ಸುಟ್ಟಿದೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು. (ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಚಿತ್ರದಲ್ಲಿ ಶಿವಸೇನೆಯ ಕಾರ್ಯಕರ್ತರು ದ್ವಿವರ್ಣ ಧ್ವಜವನ್ನು ಸುಡುತ್ತಿರುವುದನ್ನು ತೋರಿಸಲಾಗಿದೆ. ಚಿತ್ರವು ೨೦೨೧ ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಚಿತ್ರಿಕರಿಸಲಾಗಿದೆ.

ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಸಂಭಾವ್ಯ ಕೈವಾಡವಿದೆ ಎಂದು ಆರೋಪಿಸಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸೆಪ್ಟೆಂಬರ್ ೧೮ ರ ಭಾಷಣದ ನಂತರ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ನಡೆಯುತ್ತಿರುವ ಉದ್ವಿಗ್ನತೆಯ ಬೆಳಕಿನಲ್ಲಿ, ಹಲವಾರು ತಪ್ಪಾಗಿ ಹಂಚಲಾದ ವೀಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ನಿರೂಪಣೆ ಏನು?

ಜನರ ಗುಂಪೊಂದು ಕೆಂಪು-ಹಳದಿ ಧ್ವಜವನ್ನು ಸುಟ್ಟುಹಾಕುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಉತ್ತರ ಭಾರತದ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರು, ನಡೆಯುತ್ತಿರುವ ರಾಜತಾಂತ್ರಿಕ ವಿವಾದದ ಮಧ್ಯೆ ಕೆನಡಾದ ಧ್ವಜದ ಬದಲಿಗೆ ಕರ್ನಾಟಕದ ಅನಧಿಕೃತ ಧ್ವಜವನ್ನು ಸುಟ್ಟು ಹಾಕಿದ್ದಾರೆ. 

ಫೇಸ್‌ಬುಕ್‌ನಲ್ಲಿನ ಒಂದು ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಚಿತ್ರವನ್ನು ಹಂಚಿಕೊಳ್ಳುತ್ತಾ, "ಹಿಂದಿ ಪ್ರಾಂತ್ಯಗಳಲ್ಲಿ ಮೋದಿಯವರ ಗೆಲುವಿಗೆ ಕಾರಣವನ್ನು ಕೆಳಗೆ ನೀಡಲಾಗಿದೆ (ತಮಿಳಿನಿಂದ ಅನುವಾದಿಸಲಾಗಿದೆ).” ತಮಿಳಿನಲ್ಲಿ ಬರೆಯಲಾದ ಚಿತ್ರದ ಒಳಗಿನ ಪಠ್ಯವು ಹೀಗೆ ಅನುವಾದಿಸುತ್ತದೆ: "ಯು.ಪಿ.ಯಲ್ಲಿ ಕರ್ನಾಟಕದ ಧ್ವಜವನ್ನು ಸುಟ್ಟ ಬಿಜೆಪಿ ಜನರು ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಬಿಜೆಪಿ ಸದಸ್ಯರು ಭಾರತ-ಕೆನಡಾ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಕೆನಡಾದ ಧ್ವಜದ ಬದಲಿಗೆ ಕರ್ನಾಟಕ ರಾಜ್ಯ ಧ್ವಜವನ್ನು ಸುಟ್ಟುಹಾಕಿದರು." 

ಬಿಜೆಪಿಯನ್ನು ಅಪಹಾಸ್ಯ ಮಾಡುವ ಅದೇ ನಿರೂಪಣೆ ಹೊಂದಿರುವ ಇತರ ಪೋಷ್ಟ್‌ಗಳ ಆರ್ಕೈವ್ ಮಾಡಿದ ಲಿಂಕ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಕ್ಲೈಮ್‌ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಫೇಸ್‌ಬುಕ್/ಎಕ್ಸ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಹೇಳಿಕೆ ತಪ್ಪಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

  • ಮೊದಲನೆಯದಾಗಿ, ಚಿತ್ರವು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನಾ ಪಕ್ಷದ ಕಾರ್ಯಕರ್ತರನ್ನು ತೋರಿಸುತ್ತದೆ ಮತ್ತು ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತರನಲ್ಲ.

  • ಎರಡನೆಯದಾಗಿ, ಚಿತ್ರವು ಹಳೆಯದಾಗಿದೆ ಮತ್ತು ಭಾರತ-ಕೆನಡಾ ಉದ್ವಿಗ್ನತೆಗೆ ಸಂಬಂಧಿಸಿಲ್ಲ.

ವಾಸ್ತವಾಂಶಗಳೇನು?

ವೈರಲ್ ಕ್ಲಿಪ್‌ನ ಸ್ಕ್ರೀನ್‌ಶಾಟ್‌ನ ಮೇಲೆ ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿದಾಗ, ಕರ್ನಾಟಕ ಮೂಲದ ಪ್ರಾದೇಶಿಕ ಮಾಧ್ಯಮವಾದ ನ್ಯೂಸ್ ೧೮ ಕನ್ನಡ, ಡಿಸೆಂಬರ್ ೧೬, ೨೦೨೧ ರಂದು ಅಪ್‌ಲೋಡ್ ಮಾಡಿದ ವೀಡಿಯೋ ವರದಿಯನ್ನು ನಾವು ಕಂಡುಕೊಂಡೆವು. ೩:೦೩ ಮತ್ತು ೩:೩೭ ಟೈಮ್‌ಸ್ಟ್ಯಾಂಪ್‌ಗಳ ನಡುವೆ, ವೀಡಿಯೋ ಪರದೆಯ ಮೇಲಿನ ಎಡ ಫಲಕವು ದ್ವಿವರ್ಣ ಕನ್ನಡ ಧ್ವಜವನ್ನು (೧೯೬೦ ರ ದಶಕದಿಂದಲೂ ಬಳಕೆಯಲ್ಲಿರುವ ವಾಸ್ತವಿಕ ಕರ್ನಾಟಕ ರಾಜ್ಯ ಧ್ವಜ) ಹಿಡಿದಿರುವ ಜನರ ಗುಂಪನ್ನು ತೋರಿಸುತ್ತದೆ  ಮತ್ತು ವೀಡಿಯೋ ಮುಂದುವರೆದಂತೆ ಅದನ್ನು ಸುಡುತ್ತಿರುವುದನ್ನು ತೋರುತ್ತದೆ. 

ವೀಡಿಯೋ ವರದಿ ಪ್ರಕಾರ, ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದ ವಿರುದ್ಧ ರ‍್ಯಾಲಿ ನಡೆಸಿದ್ದಕ್ಕಾಗಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತನ ಮೇಲೆ ಮಸಿ ಎರಚಿದ್ದಕ್ಕೆ ಪ್ರತೀಕಾರವಾಗಿ ಶಿವಸೇನೆ ಸದಸ್ಯರು ಕನ್ನಡ ಧ್ವಜವನ್ನು ಸುಟ್ಟಿದ್ದಾರೆ.

ನ್ಯೂಸ್ ೧೮ ಕನ್ನಡದ ವೈರಲ್ ಚಿತ್ರ ಮತ್ತು ವೀಡಿಯೋ ವರದಿಯ ನಡುವಿನ ಹೋಲಿಕೆ.
(ಮೂಲ: ಫೇಸ್ಬುಕ್/ಯೂಟ್ಯೂಬ್/ಸ್ಕ್ರೀನ್ಶಾಟ್)

ವೈರಲ್ ಚಿತ್ರದಲ್ಲಿ ಕಂಡುಬರುವ ಅದೇ ಜನರನ್ನು ವೀಡಿಯೋ ವರದಿಯಲ್ಲಿ ಗುರುತಿಸಬಹುದು. ಎರಡು ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪುರುಷರು ಧರಿಸಿರುವ ಸ್ಕಾರ್ಫ್‌ಗಳಲ್ಲಿ ಮರಾಠಿಯಲ್ಲಿ 'ಶಿವಸೇನೆ' ಎಂದು ಬರೆಯಲಾಗಿದೆ, ಅದು ಅವರು ಬಿಜೆಪಿ ಸದಸ್ಯರಲ್ಲ ಎಂದು ಸೂಚಿಸುತ್ತದೆ.

ಡಿಸೆಂಬರ್ ೧೪, ೨೦೨೧ ರಂದು ಕೊಲ್ಲಾಪುರದಲ್ಲಿ ಶಿವಸೇನೆಯ ಸಕ್ರಿಯ ಸದಸ್ಯೆಯಾಗಿರುವಂತೆ ತೋರುತ್ತಿರುವ ಸ್ಮಿತಾ ಸಾವಂತ್ ಅವರು ಹಂಚಿಕೊಂಡ ಫೇಸ್‌ಬುಕ್ ಪೋಷ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಪೋಷ್ಟ್‌ನಲ್ಲಿ ಘಟನೆಯ ವೀಡಿಯೋ ಮತ್ತು ಚಿತ್ರಗಳು ಇದ್ದು, ಮತ್ತೊಮ್ಮೆ, ವೈರಲ್ ಚಿತ್ರದಲ್ಲಿರುವಂತೆ ಅದೇ ಜನರನ್ನು ಕಾಣಬಹುದು. ಮರಾಠಿಯಿಂದ ಅನುವಾದಿಸಲಾದ ಪೋಷ್ಟ್ ಶೀರ್ಷಿಕೆಯು, "ಮಹಾರಾಷ್ಟ್ರ ಏಕೀಕರಣ ಸಮಿತಿಯ ದೀಪಕ್ ದಳವಿಯನ್ನು ಕನ್ನಡ ವೇದಿಕೆಯ ಗೂಂಡಾಗಳು ಮಸಿ ಬಳಿದಿರುವುದನ್ನು ಪ್ರತಿಭಟಿಸಿ ಶಿವಸೇನೆಯ ಪರವಾಗಿ ಪ್ರತಿಭಟನೆ" ಎಂದು ಬರೆಯಲಾಗಿದೆ.

ಪ್ರತಿಭಟನೆಯ ದೃಶ್ಯಗಳೊಂದಿಗೆ ಸ್ಮಿತಾ ಸಾವಂತ್ ಫೇಸ್‌ಬುಕ್‌ನಲ್ಲಿ ಪೋಷ್ಟ್ ಮಾಡಿದ್ದಾರೆ.
(ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್)

ಮಹಾರಾಷ್ಟ್ರದ ಸ್ಥಳೀಯ ಮಾಧ್ಯಮವಾದ ಲೋಕಶಾಹಿ ಮರಾಠಿ ಫೇಸ್‌ಬುಕ್‌ನಲ್ಲಿ ಪೋಷ್ಟ್ ಮಾಡಿದ ಅದೇ ಘಟನೆಯ ಕುರಿತು ಮತ್ತೊಂದು ವೀಡಿಯೋ ವರದಿಯನ್ನು ನಾವು ನೋಡಿದ್ದೇವೆ. ಡಿಸೆಂಬರ್ ೧೪, ೨೦೨೧ ರಂದು ಹಂಚಿಕೊಳ್ಳಲಾದ ವರದಿಯಲ್ಲಿ ಶಿವಸೇನೆಯ ಸದಸ್ಯರು ಕೊಲ್ಲಾಪುರದ ಬಿಂದು ಚೌಕ್‌ನಲ್ಲಿ ಕನ್ನಡ ಧ್ವಜವನ್ನು ಸುಟ್ಟು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ಹೇಳಲಾಗಿದೆ.

ನಾವು ಕೊಲ್ಲಾಪುರದ ಬಿಂದು ಚೌಕ್ ಅನ್ನು ಗೂಗಲ್ ಮ್ಯಾಪ್‌ನಲ್ಲಿ ಜಿಯೋಲೊಕೇಟ್ ಮಾಡಿದ್ದೇವೆ ಮತ್ತು ಸ್ಮಿತಾ ಸಾವಂತ್ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ಕಂಡುಬರುವ ಸ್ಥಳದ ಫೋಟೋಗಳು ಸ್ಥಳಕ್ಕೆ ಹೊಂದಿಕೆಯಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಹೊರತು ಉತ್ತರ ಪ್ರದೇಶದಲ್ಲ ಎಂಬುದು ದೃಢಪಟ್ಟಿದೆ.

ಸ್ಮಿತಾ ಸಾವಂತ್ ಅವರ ಫೇಸ್‌ಬುಕ್ ಪೋಸ್ಟ್ ಮತ್ತು ಬಿಂದು ಚೌಕ್‌ನ ಗೂಗಲ್ ಚಿತ್ರದ ನಡುವಿನ ಹೋಲಿಕೆ.
(ಮೂಲ: ಗೂಗಲ್ (L)/ ಫೇಸ್‌ಬುಕ್ (R)/ಸ್ಕ್ರೀನ್‌ಶಾಟ್)

ಪ್ರತಿಭಟನೆ ಯಾವುದರ ಬಗ್ಗೆ?

ಕರ್ನಾಟಕದ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತ ದೀಪಕ್ ದಳವಿಗೆ ಮಸಿ ಬಳಿದಿದ್ದಕ್ಕೆ ಪ್ರತಿಯಾಗಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು ಎಂದು ಲೋಕಶಾಹಿ ಮರಾಠಿ ವರದಿ ಹೇಳಿದೆ.

ಡಿಸೆಂಬರ್ ೧೪, ೨೦೨೧ ರಂದು ಡೆಕ್ಕನ್ ಹೆರಾಲ್ಡ್ ವರದಿಯು ಕನ್ನಡ ಕಾರ್ಯಕರ್ತರೊಬ್ಬರು ದಳವಿ ಅವರ ಮುಖಕ್ಕೆ ಕಪ್ಪು ಮಸಿ ಬಳಿದಿದ್ದರು ಎಂದು ಹೇಳಿದೆ. ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ವಿರೋಧಿಸಿ ದಳವಿ ಅವರು 'ಮಹಾ ಮೇಳವ' ನಡೆಸುತ್ತಿದ್ದರು ಎಂದು ವರದಿಯಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಿನ ಸುದೀರ್ಘ ಗಡಿ ವಿವಾದದ ಹಿನ್ನೆಲೆಯಲ್ಲಿ ಈ ಘಟನೆಗಳು ಸಂಭವಿಸಿವೆ.

ಸ್ಥಳೀಯ ಮಾಧ್ಯಮ ಕನ್ನಡ ಔಟ್ಲೆಟ್, ಉದಯವಾಣಿಯ ಮತ್ತೊಂದು ವರದಿಯು ಕೊಲ್ಲಾಪುರದಲ್ಲಿ ಧ್ವಜ ಸುಡುವ ಪ್ರತಿಭಟನೆಯ ಬಗ್ಗೆ ವರದಿ ಮಾಡಿದೆ ಮತ್ತು ಇದು ಮಸಿ ಬಳಿದ ಘಟನೆಗೆ ಪ್ರತಿಕ್ರಿಯೆಯಾಗಿ ಎಂದು ಗಮನಿಸಿದೆ.

ತೀರ್ಪು

೨೦೨೧ ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆಯ ಸದಸ್ಯರು ಕನ್ನಡ ಅಥವಾ ಕರ್ನಾಟಕ ಧ್ವಜವನ್ನು ಸುಟ್ಟುಹಾಕಿದ ಹಳೆಯ ಚಿತ್ರವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಭಾರತ-ಕೆನಡಾ ರಾಜತಾಂತ್ರಿಕ ಭಿನ್ನಾಭಿಪ್ರಾಯಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ಕೆನಡಾದ ಧ್ವಜದ ಬದಲು ಉತ್ತರ ಪ್ರದೇಶದಲ್ಲಿ ಬಿಜೆಪಿ ಸದಸ್ಯರು ಕನ್ನಡ ಧ್ವಜವನ್ನು ಸುಟ್ಟು ಹಾಕುತ್ತಿರುವುದನ್ನು ಫೋಟೋದಲ್ಲಿ ತೋರಿಸಲಾಗಿಲ್ಲ. ಆದ್ದರಿಂದ, ನಾವು ಹೇಳಿಕೆ ತಪ್ಪು ಎಂದು ಗುರುತಿಸುತ್ತೇವೆ.

ಅನುವಾದಿಸಿದವರು: ರಜಿನಿ ಕೆ.ಜಿ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ