ಮೂಲಕ: ವಿವೇಕ್ ಜೆ
ಜುಲೈ 19 2023
೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕುರಿತು ಬಿಬಿಸಿ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಬಿಡುಗಡೆ ಮಾಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗುತ್ತಿರುವುದು ನಕಲಿ ಸಮೀಕ್ಷೆ
ಸಂದರ್ಭ
ಮೇ ೧೦, ೨೦೨೩ ರಂದು ಕರ್ನಾಟಕದಲ್ಲಿ ಚುನಾವಣೆ ನೆಡೆಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC), ಭಾರತೀಯ ಜನತಾ ಪಕ್ಷ (BJP), ಮತ್ತು ಜನತಾ ದಳ-ಸೆಕ್ಯುಲರ್ (JDS) ಪ್ರಮುಖ ಸ್ಪರ್ಧಿಗಳಾಗಿದ್ದವು. ಹಲವಾರು ಸುದ್ದಿ ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಭವಿಷ್ಯವಾಣಿಗಳನ್ನು ಪ್ರಕಟಿಸಿವೆ. ಇದರ ಮಧ್ಯೆ, ಬಿಬಿಸಿ ಕೂಡ ಈ ಚುನಾವಣೆ ಕುರಿತು ಸಮೀಕ್ಷೆ ನಡೆಸಿದೆ, ಹಾಗು ಬಿಬಿಸಿ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ೨೨೪ ಸ್ಥಾನಗಳಲ್ಲಿ ಸುಮಾರು ೧೩೦ ರಿಂದ ೧೪೨ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಪೋಷ್ಟ್ಗಳು ಹೇಳಿಕೊಂಡಿವೆ. ಒಂದು ಬಿಬಿಸಿ ಹಿಂದಿ ಸುದ್ದಿ ವಾಹಿನಿಯ ವೆಬ್‌ಸೈಟ್ ಲಿಂಕ್‌ನೊಂದಿಗೆ ಈ ಪೋಷ್ಟ್ ಅನ್ನು ವಾಟ್ಸಾಪ್ಪ್ ನಲ್ಲಿ ಕೂಡ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಸುದ್ದಿಯನ್ನು ಟ್ವಿಟರ್, ಫೇಸ್‌ಬುಕ್ ಮತ್ತು ಕೂನಲ್ಲಿಯೂ ಹಂಚಿಕೊಳ್ಳಲಾಗಿದೆ. ಆದರೆ, ಈ ಹೇಳಿಕೆಗಳು ತಪ್ಪಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
ವಾಸ್ತವವಾಗಿ
೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕುರಿತು ಬಿಬಿಸಿ ನಡೆಸಿದ ಯಾವುದೇ ಸಮೀಕ್ಷೆಗಳು ನಮಗೆ ಕಂಡುಬಂದಿಲ್ಲ. ಇತ್ತೀಚಿನ ಪೋಷ್ಟ್ ಗಳೊಂದಿಗೆ ಹಂಚಿಕೊಳ್ಳಲಾದ ಲಿಂಕ್, ಬಿಬಿಸಿ ಹಿಂದಿ ವೆಬ್‌ಸೈಟ್‌ನ ಮುಖಪುಟಕ್ಕೆ ಮರುನಿರ್ದೇಶಿಸುತ್ತದೆ. ಈ ಲಿಂಕ್ ಯಾವುದೇ ಸಮೀಕ್ಷೆ, ಪ್ರಕಟಣೆ ಅಥವಾ ನಿರ್ದಿಷ್ಟ ಲೇಖನಕ್ಕೆ ಸಂಬಧಪಟ್ಟದ್ದಲ್ಲ.
ಬಿಬಿಸಿ ಇಂಡಿಯಾದ ಯಾವುದೇ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಕರ್ನಾಟಕ ರಾಜ್ಯ ಚುನಾವಣೆಗೆ ಸಂಬಂಧಿಸಿದ ಚುನಾವಣಾ ಸಮೀಕ್ಷೆಗಳನ್ನು ಪ್ರಕಟಿಸಿಲ್ಲ. ಕರ್ನಾಟಕದಲ್ಲಿನ ಆರು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಪಟ್ಟಿ ಮಾಡಿರುವ ಇತ್ತೀಚಿನ ಡೆಕ್ಕನ್ ಹೆರಾಲ್ಡ್ ವರದಿಯನ್ನು ನಾವು ನೋಡಿದ್ದೇವೆ. ಇದರಲ್ಲಿ ಎರಡು ಸಮೀಕ್ಷೆಗಳ ಫಲಿತಾಂಶಗಳು ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಎರಡು ಬಿಜೆಪಿಯ ಗೆಲುವನ್ನು ಸೂಚಿಸಿವೆ. ಆದರೆ ಈ ಯಾವುದೇ ಸಮೀಕ್ಷೆಗಳು ಒಂದು ರಾಜಕೀಯ ಪಕ್ಷಕ್ಕೆ ಖಚಿತವಾದ ಸಂಪೂರ್ಣ ಬಹುಮತ ಸಿಗುತ್ತದೆ ಎಂದು ಹೇಳಿಕೊಂಡಿಲ್ಲ.
ಕರ್ನಾಟಕದಲ್ಲಿ ೨೦೧೮ ರ ವಿಧಾನಸಭಾ ಚುನಾವಣೆಯ ಮುನ್ನವೂ ಕೂಡ ಬಿಬಿಸಿಯ ಇದೇ ರೀತಿಯ ಸುಳ್ಳು ಸಮೀಕ್ಷೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗಿತ್ತು. ಆ ಸಮಯದಲ್ಲಿ, ಬಿಬಿಸಿ ನ್ಯೂಸ್ ಇಂಡಿಯಾ ಮೇ ೭, ೨೦೧೮ ರಂದು ಟ್ವೀಟ್ ಮಾಡುತ್ತಾ ಬಿಬಿಸಿ ಚುನಾವಣಾ ಸಮೀಕ್ಷೆಯದ್ದೆಂದು ಕಂಡುಬಂದ ಹೇಳಿಕೆಗಳು ಸುಳ್ಳು ಎಂದು ಹೇಳಿಕೊಂಡಿತು. ಆ ಪೋಷ್ಟ್ ಅನ್ನು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ “ಕರ್ನಾಟಕ ಚುನಾವಣೆಯ ಕುರಿತು ಬಿಬಿಸಿ ನ್ಯೂಸ್‌ನಿಂದ ಎಂದು ಹೇಳಿಕೊಳ್ಳಲಾದ ನಕಲಿ ಸಮೀಕ್ಷೆಯೊಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಇದು #fake ಮತ್ತು ಬಿಬಿಸಿ ಯಿಂದ ಬಂದಿಲ್ಲ ಎಂದು ನಾವು ಸಂಪೂರ್ಣವಾಗಿ ಸ್ಪಷ್ಟಪಡಿಸಲು ಬಯಸುತ್ತೇವೆ. ಬಿಬಿಸಿ ಭಾರತದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಯೋಜಿಸುವುದಿಲ್ಲ. #fake news.” ೨೦೨೩ ರ ವಿಧಾನಸಭಾ ಚುನಾವಣೆಗೂ ಮುನ್ನ ಇದೇ ರೀತಿಯ ಸುಳ್ಳು ಹೇಳಿಕೆಗಳೊಂದಿಗೆ ಸಮಾನವಾದ ಚಿತ್ರಗಳನ್ನು ಮತ್ತೆ ಹಂಚಿಕೊಳ್ಳಲಾಗಿದೆ.
ತೀರ್ಪು
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಬಿಸಿ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಯನ್ನು ಪ್ರಕಟಿಸಿಲ್ಲ. ಇಲ್ಲಿಯವರೆಗೂ ನಡೆಸಿದ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಒಂದು ಪಕ್ಷಕ್ಕೆ ಖಚಿತವಾದ ಬಹುಮತ ಸಿಗುತ್ತದೆ ಎಂದು ಹೇಳಿಕೊಂಡಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.