ಮೂಲಕ: ರಜಿನಿ ಕೆ.ಜಿ
ಡಿಸೆಂಬರ್ 13 2023
ನಾರಾಯಣ ಮೂರ್ತಿ ಅವರು ಎರಡು ವಿಭಿನ್ನ ಕಾರ್ಯಕ್ರಮಗಳಲ್ಲಿ ಮಾತನಾಡಿದ ಆಡಿಯೋವನ್ನು ಎಡಿಟ್ ಮಾಡಿ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಇಲ್ಲಿನ ಹೇಳಿಕೆ ಏನು?
ಬಿಲಿಯನೇರ್ ಉದ್ಯಮಿ ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಅವರ ಎರಡು ವೀಡಿಯೋಗಳು, ಅವರು ತಮ್ಮ ಹೋಸದಾದ ಇನ್ವೆಸ್ಟಿಂಗ್ ಪ್ಲಾಟ್ಫಾರ್ಮ್ ಅನ್ನು ಪ್ರಚಾರ ಮಾಡುತ್ತಿದ್ದರೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವೀಡಿಯೋ ಒಂದನ್ನು ಪೋಷ್ಟ್ ಮೂಲಕ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಬಳಕೆದಾರರು ಹೀಗೆ ಬರೆದಿದ್ದಾರೆ, "ಎನ್. ಆರ್. ನಾರಾಯಣ ಮೂರ್ತಿ ಅವರು ಭಾರತೀಯ ವ್ಯಾಪಾರ ಕ್ಷೇತ್ರದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಪ್ರಗತಿ ಮತ್ತು ಉನ್ನತ ಗುಣಮಟ್ಟಕ್ಕೆ ಅವರ ಅಚಲವಾದ ಬದ್ಧತೆ ಅನೇಕರಿಗೆ ಉದಾಹರಣೆಯಾಗಿದೆ. ಅವರು ಪ್ರತಿಯೊಬ್ಬ ಭಾರತೀಯನಿಗೂ ಅಪಾರ ಹೆಮ್ಮೆಯ ಮೂಲವಾಗಿದ್ದಾರೆ. ಗೌರವಾನ್ವಿತ ಶ್ರೀ ಮೂರ್ತಿ (sic) ಅವರಿಗೆ ಗೌರವದ ಆಳವಾದ ನಮನ. (ಕನ್ನಡಕ್ಕೆ ಅನುವಾದಿಸಲಾಗಿದೆ)."
ಈ ವೀಡಿಯೋದ ಆಡಿಯೋ ಮತ್ತು ಉಪಶೀರ್ಷಿಕೆಗಳು ಮೂರ್ತಿ ಅವರು ಮತ್ತು ಎಲೋನ್ ಮಸ್ಕ್ (ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಮತ್ತು ಎಕ್ಸ್‌ನ ಮಾಲೀಕರು) 'ಕ್ವಾಂಟಮ್ ಎಐ' ಎಂಬ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಮೂರ್ತಿ ಅವರ ತಂಡಗಳು ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಕ್ವಾಂಟಮ್ ಕಂಪ್ಯೂಟಿಂಗ್ ಸಾಫ್ಟ್‌ವೇರ್ ಆಗಿದೆ, ಇದು ಸ್ಟಾಕ್ ಮಾರ್ಕೆಟಿಂಗ್ ಮೂಲಕ ಲಾಭ ಗಳಿಸಲು ಸಹಾಯ ಮಾಡುತ್ತದೆ ಎಂದು ಅವರು ವಿವರಿಸುತ್ತಾರೆ. ಫೇಸ್‌ಬುಕ್ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ವೀಕ್ಷಿಸಬಹುದು.
ವೇದಿಕೆಯ ಯಶಸ್ಸಿನ ಪ್ರಮಾಣವು ೯೪ ಪ್ರತಿಶತ ಎಂದು ಮೂರ್ತಿ ಅವರು ಪ್ರತಿಪಾದಿಸುತ್ತಿರುವುದನ್ನು ಇದೇ ರೀತಿಯ ಇನ್ನೊಂದು ವೀಡಿಯೋ ತೋರಿಸುತ್ತದೆ. (ಇಲ್ಲಿ ಆರ್ಕೈವ್ ಮಾಡಲಾಗಿದೆ).
ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಈ ಹೇಳಿಕೆಯು ತಪ್ಪಾಗಿದೆ, ಎರಡು ವೀಡಿಯೋಗಳನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ ಮತ್ತು ' ಕ್ವಾಂಟಮ್ ಎಐ' ಕುರಿತ ಆಡಿಯೋವನ್ನು ಎಡಿಟ್ ಮಾಡಿ ಸೇರಿಸಲಾಗಿದೆ.
ನಾವು ಕಂಡುಹಿಡಿದದ್ದು ಏನು?
ವೀಡಿಯೋ ೧
ವೀಡಿಯೋದ ಕೀಫ್ರೇಮ್‌ಗಳಲ್ಲಿ ಒಂದರ ಮೇಲೆ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಭಾರತದಲ್ಲಿನ ಹಣಕಾಸು ಸುದ್ದಿ ವೆಬ್‌ಸೈಟ್‌ನ ಮನಿ ಕಂಟ್ರೋಲ್‌ನ ಯೂಟ್ಯೂಬ್ ಚಾನಲ್‌ಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೋ "ಮನಿಕಂಟ್ರೋಲ್ ಸ್ಟಾರ್ಟ್ಅಪ್ ಕಾನ್ಕ್ಲೇವ್ ೨೦೨೩ ಲೈವ್ - ಫ್ಯೂಲಿಂಗ್ ಇನ್ನೋವೇಶನ್ ಇನ್ ಟೈಮ್ಸ್ ಆಫ್ ಟ್ರಾನ್ಸ್‌ಫರ್ಮೇಶನ್" ಎಂಬ ಶೀರ್ಷಿಕೆಯ ಲೈವ್‌ಸ್ಟ್ರೀಮ್ ಆಗಿತ್ತು ಮತ್ತು ಜುಲೈ ೭, ೨೦೨೩ ರಂದು ಹಂಚಿಕೊಳ್ಳಲಾಗಿತ್ತು.
ಸುಮಾರು ಒಂಬತ್ತು ಗಂಟೆಗಳ ಅವಧಿಯಲ್ಲಿ, ಮೂರ್ತಿ ಅವರು ತಮ್ಮ ಮಗ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ ಸಂಸ್ಥೆಯ 'ಸೊರೊಕೊ' ಸ್ಥಾಪಕ ರೋಹನ್ ಮೂರ್ತಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವುದನ್ನು ನಾವು ನೋಡಬಹುದು. ಕಾರ್ಯಕ್ರಮದಲ್ಲಿ, ಅವರು ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾಗಿ ತಮ್ಮ ಜೀವನದ ಪಾಠಗಳು ಮತ್ತು ವ್ಯವಹಾರದ ಅನುಭವದ ಬಗ್ಗೆ ಮಾತನಾಡಿದ್ದಾರೆ . ಅವರು ನಾಯಕತ್ವ ಮತ್ತು ಸಾಂಸ್ಥಿಕ ರಚನೆಯ ಬಗ್ಗೆ ಮಾತನಡುತ್ತಾ, ಅವರು ಇನ್ಫೋಸಿಸ್‌ನಲ್ಲಿ ತಮ್ಮ ಸಹೋದ್ಯೋಗಿಗಳನ್ನು ಹೇಗೆ ಮುನ್ನಡೆಸಿದರು ಮತ್ತು ಫ್ರಾನ್ಸ್ ಪ್ರವಾಸವು ಅವರ ವೃತ್ತಿಪರ ಜೀವನವನ್ನು ಹೇಗೆ ರೂಪಿಸಿತು ಎಂದು ತಿಳಿಸಿದ್ದರು. ವೀಡಿಯೋದಲ್ಲಿ ಎಲ್ಲಿಯೂ ಅವರು ಎಐ (ಕೃತಕ ಬುದ್ಧಿಮತ್ತೆ) ಅಥವಾ 'ಕ್ವಾಂಟಮ್ ಎಐ' ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ.
ಸಿಏನ್ ಬಿ ಸಿ - ಟಿವಿ ೧೮ ವಾಹಿನಿಯೂ ಕೂಡ ಜುಲೈ ೯, ೨೦೨೩ ರಂದು ಮನಿ ಕಂಟ್ರೋಲ್ ಸ್ಟಾರ್ಟ್ಅಪ್ ಕಾನ್ಕ್ಲೇವ್‌ನಲ್ಲಿ ನಾರಾಯಣ ಮೂರ್ತಿ ಮತ್ತು ಅವರ ಮಗ ರೋಹನ್ ಮೂರ್ತಿ ಅವರ ಸಂಭಾಷಣೆಯ ವೀಡಿಯೋವನ್ನು ಪೋಷ್ಟ್ ಮಾಡಿದೆ.
ವೀಡಿಯೋ ೨
ವೈರಲ್ ವೀಡಿಯೋದಲ್ಲಿ ಮೂರ್ತಿ ಅವರು ಹಿಡಿದಿರುವ ಮೈಕ್ರೊಫೋನ್ 'bt MINDRUSH' ಎಂದು ಓದುತ್ತದೆ. ಈ ಸುಳಿವನ್ನು ತೆಗೆದುಕೊಂಡು, ಉದ್ಯಮಿಗಳು ಮತ್ತು ಹಿರಿಯ ನಾಯಕರು ವ್ಯಾಪಾರ ಮತ್ತು ಕಾರ್ಪೊರೇಟ್ ಪ್ರಪಂಚದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ವೇದಿಕೆಯಾದ ಬ್ಯುಸಿನೆಸ್ ಟುಡೆ ನ 'ಮೈಂಡ್ರಶ್' ಪ್ಲಾಟ್ಫಾರ್ಮ್ ನಿಂದ ವೀಡಿಯೋವನ್ನು ನಾವು ಕಂಡುಕೊಂಡೆವು. ಈ ಕಾರ್ಯಕ್ರಮವು ಜೂನ್ ೨೪, ೨೦೨೨ ರಂದು ನವದೆಹಲಿಯ ದಿ ಒಬೆರಾಯ್‌ನಲ್ಲಿ ನಡೆತಿತ್ತು.
ಜೂನ್ ೨೪, ೨೦೨೨ ರಂದು ಬಿಸಿನೆಸ್ ಟುಡೆಯ ಯೂಟ್ಯೂಬ್ ಚಾನೆಲ್ ನಾರಾಯಣ ಮೂರ್ತಿ ಅವರ ವೀಡಿಯೋದ ದೀರ್ಘ ಆವೃತ್ತಿಯನ್ನು ಪೋಷ್ಟ್ ಮಾಡಿದೆ. ಉದ್ಯಮಶೀಲತೆಯ ಅನಿಶ್ಚಿತತೆ, ಹೂಡಿಕೆ ಮತ್ತು ಮಾರುಕಟ್ಟೆ ಸಂಶೋಧನಾ ಕಾರ್ಯವಿಧಾನಗಳ ಕೊರತೆಯಂತಹ, ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮೂರ್ತಿ ಮಾತನಾಡಿದ್ದರು. ಕೋವಿಡ್-೧೯ ರ ನಂತರ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಿದ ಹೊಸ ಉದ್ಯಮಿಗಳಿಗೆ ಅವರು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದರು. ಅವರು ವೀಡಿಯೋದ ಯಾವುದೇ ಹಂತದಲ್ಲಿ 'ಕ್ವಾಂಟಮ್ ಎಐ' ಬಗ್ಗೆ ಮಾತನಾಡಿಲ್ಲ.
ಮೊದಲ ವೀಡಿಯೋದಲ್ಲಿನ ಆಡಿಯೋ ಮೂರ್ತಿಯವರ ತುಟಿ ಚಲನೆಗಳಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಎರಡನೆಯ ವೀಡಿಯೋದಲ್ಲಿ ಅವು ತುಂಬಾ ಅಸಹಜವಾಗಿ ಕಂಡುಬರುತ್ತವೆ. ಅದಲ್ಲದೆ, ಅವರು 'ಕ್ವಾಂಟಮ್ ಎಐ' ಹೆಸರಿನ ಇನ್ವೆಸ್ಟಿಂಗ್ ಪ್ಲಾಟ್ಫಾರ್ಮ್ ಅನ್ನು ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಯಾವುದೇ ಸುದ್ದಿ ವರದಿಗಳಿಲ್ಲ.
ಸ್ಪಷ್ಟವಾಗಿ, ಬಿಲಿಯನೇರ್ 'ಕ್ವಾಂಟಮ್ ಎಐ' ಅನ್ನು ಅನುಮೋದಿಸುತ್ತಿದ್ದಾರೆ ಎಂದು ಬಿಂಬಿಸಲು ಎರಡೂ ವೀಡಿಯೋಗಳನ್ನೂ ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ.
ತೀರ್ಪು
ಇನ್ಫೋಸಿಸ್ ಸಹ-ಸಂಸ್ಥಾಪಕರು 'ಕ್ವಾಂಟಮ್ ಎಐ' ಹೆಸರಿನ ಇನ್ವೆಸ್ಟಿಂಗ್ ಪ್ಲಾಟ್ಫಾರ್ಮ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ತೋರುವಂತೆ ಎರಡು ವಿಭಿನ್ನ ಸಮಾರಂಭಗಳಲ್ಲಿ ನಾರಾಯಣ ಮೂರ್ತಿ ಅವರು ಮಾತನಾಡಿರುವ ವೀಡಿಯೋಗಳಿಗೆ ನಕಲಿ ಆಡಿಯೋವನ್ನು ಸೇರಿಸಿ ಬದಲಾಯಿಸಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)