ಮೂಲಕ: ಮೊಹಮ್ಮದ್ ಸಲ್ಮಾನ್
ಮೇ 14 2024
ಮೂಲ ವೀಡಿಯೋದಲ್ಲಿ ಮೋದಿಯವರು ಎಐಎಂಐಎಂಗೆ ಅಲ್ಲ, ತಮ್ಮದೇ ಪಕ್ಷವಾದ ಬಿಜೆಪಿಗೆ ಮತವನ್ನು ಕೇಳುತ್ತಿದ್ದಾರೆ. ಪದಗಳನ್ನು ವಿನಿಮಯ ಮಾಡಿ ವೈರಲ್ ಕ್ಲಿಪ್ ಅನ್ನು ಸಂಪಾದಿಸಲಾಗಿದೆ.
ಹೇಳಿಕೆ ಏನು?
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಕ್ಷೇತ್ರದ ಹಾಲಿ ಸಂಸದ ಅಸದ್ದುದ್ದೀನ್ ಓವೈಸಿ ನೇತೃತ್ವದ ರಾಜಕೀಯ ಪಕ್ಷವಾದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅನ್ನು ಅನುಮೋದಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. "ತೆಲಂಗಾಣ ಹೇಳುತ್ತಿರುವುದು ಕಾಂಗ್ರೆಸ್ ಅಲ್ಲ, ಬಿಜೆಪಿ (ಭಾರತೀಯ ಜನತಾ ಪಕ್ಷ), ಬಿಆರ್‌ಎಸ್ (ಭಾರತ್ ರಾಷ್ಟ್ರ ಸಮಿತಿ) ಅಲ್ಲ, ಎಂಐಎಂಗೆ ಮತ ನೀಡಿ, ಎಂಐಎಂ ಅನ್ನು ಗೆಲ್ಲಿಸುತ್ತೇವೆ (ಹಿಂದಿಯಿಂದ ಅನುವಾದಿಸುತ್ತೇವೆ)" ಎಂದು ಮೋದಿಯವರು ಹೇಳುತ್ತಿರುವುದನ್ನು ಈ ವೀಡಿಯೋದಲ್ಲಿ ಕೇಳಬಹುದು ಹಾಗು ಅದರಲ್ಲಿ ಈ ಪಠ್ಯವನ್ನು ನೋಡಬಹುದು : "ಮೋದಿ ಅವರು ಹೈದರಾಬಾದ್‌ನಲ್ಲಿ ಎಐಎಂಐಎಂ ಅನ್ನು ಬೆಂಬಲಿಸಿದರು."
ಎಕ್ಸ್ (ಹಿಂದಿನ ಟ್ವಿಟರ್) ಮತ್ತು ಫೇಸ್‌ಬುಕ್ ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡ ಬಳಕೆದಾರರು, ಮೋದಿಯವರು ಹೈದರಾಬಾದ್‌ನಲ್ಲಿ ಮಾಡಿದ ಭಾಷಣದಲ್ಲಿ ಓವೈಸಿಯ ಪಕ್ಷವನ್ನು ಅನುಮೋದಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ.)
ಆದರೆ, ಈಗ ವೈರಲ್ ಆಗಿರುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ಎಐಎಂಐಎಂಗೆ ಅಲ್ಲ, ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿಗೆ) ಮತ ನೀಡುವಂತೆ ಮೋದಿ ಜನರನ್ನು ಕೇಳುತ್ತಿರುವುದನ್ನು ಮೂಲ ವೀಡಿಯೋ ತೋರಿಸುತ್ತದೆ.
ವಾಸ್ತವಾಂಶಗಳು ಇಲ್ಲಿವೆ
ಮೇ ೧೦ ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೈರಲ್ ವೀಡಿಯೋದ ದೀರ್ಘ ಆವೃತ್ತಿಯನ್ನು ನಾವು ಗೂಗಲ್ ಹುಡುಕಾಟದ ಮೂಲಕ ಕಂಡುಕೊಂಡೆವು. ವೀಡಿಯೋ ವಿವರಣೆಯು ಅದೇ ದಿನ ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳುತ್ತದೆ.
ವೀಡಿಯೋದ (ಇಲ್ಲಿ ಆರ್ಕೈವ್ ಮಾಡಲಾಗಿದೆ), ೧೨:೪೯ ಟೈಮ್‌ಸ್ಟ್ಯಾಂಪ್‌ನಲ್ಲಿ, ಮೋದಿ ತೆಲಂಗಾಣ ಮತ್ತು ಕರ್ನಾಟಕದ ಭಾಗಗಳಲ್ಲಿ ಮಾತನಾಡುವ ಸ್ಥಳೀಯ ಉಪಭಾಷೆಯಾದ ದಖಿನಿಯಲ್ಲಿ ಮಾತನಾಡುವುದನ್ನು ಕೇಳಬಹುದು, "ತೆಲಂಗಾಣ ಕಾಂಗ್ರೆಸ್ ನಕ್ಕೋ (ಇಲ್ಲ), ಬಿಆರ್ ಎಸ್ ನಕ್ಕೋ, ಎಂಐಎಂ ನಕ್ಕೋ ಎನ್ನುತ್ತಿದೆ ಬಿಜೆಪಿಗೆ ಮತ ಹಾಕುತ್ತೇವೆ, ಬಿಜೆಪಿಯನ್ನು ಗೆಲ್ಲಿಸುತ್ತೇವೆ," ಎಂದು ಅವರು ಹೇಳುತ್ತಾರೆ.
ಮೋದಿಯವರ ಭಾಷಣೆಯಲ್ಲಿ 'ಬಿಜೆಪಿ' ಮತ್ತು 'ಎಐಎಂಐಎಂ' ಪದಗಳನ್ನು ಬದಲಾಯಿಸಿ ಅವರು ಎಐಎಂಐಎಂ ಅನ್ನು ಬೆಂಬಲಿಸಿದ್ದಾರೆ ಎಂದು ಹೇಳಲು ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ಮೂಲ ವೀಡಿಯೋದಲ್ಲಿ ಅವರು ತಮ್ಮದೇ ಪಕ್ಷವಾದ ಬಿಜೆಪಿಯನ್ನು ಅನುಮೋದಿಸಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇಡೀ ಭಾಷಣದಲ್ಲಿ, ಮೋದಿಯವರು ಯಾವುದೇ ಹಂತದಲ್ಲಿ ಎಐಎಂಐಎಂ ಗೆ ಬೆಂಬಲವನ್ನು ನೀಡಿಲ್ಲ. ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ಮೇ ೧೩ ರಂದು ತೆಲಂಗಾಣದಲ್ಲಿ ಮತದಾನ ನಡೆಯಿತು, ತೆಲಂಗಾಣದಲ್ಲಿ ಪ್ರಚಾರದ ವೇಳೆ ದಖಿನಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮೋದಿ ಅವರು ಜನರನ್ನುದ್ದೇಶಿಸಿ ಮಾತನಾಡಿದ್ದನ್ನು ಈ ವೀಡಿಯೋ ತೋರಿಸುತ್ತದೆ.
ದಿ ಸ್ಟೇಟ್ಸ್‌ಮನ್ ಮತ್ತು ಸಿಯಾಸತ್ ಡೈಲಿಯಂತಹ ಮಾಧ್ಯಮಗಳೂ ಕೂಡ ಮೋದಿಯವರ ಭಾಷಣದ ಬಗ್ಗೆ ವರದಿ ಮಾಡಿವೆ ಹಾಗು ಮೋದಿಯವರು ಎಐಎಂಐಎಂ ಅನ್ನು ಅನುಮೋದಿಸಿರುವ ಬಗ್ಗೆ ಯಾವುದೇ ಉಲ್ಲೇಖವನ್ನು ನೀಡಿಲ್ಲ. ಬಿಜೆಪಿಯು ಹೈದರಾಬಾದ್ ಕ್ಷೇತ್ರದಿಂದ ಕೆ ಮಾಧವಿ ಲತಾ ಅವರನ್ನು ಅಸಾದ್ದುದಿನ್ ಓವೈಸಿ ವಿರುದ್ಧ ನೇಮಿಸಿದೆ, ಮತ್ತು ಮೋದಿಯವರ ಅಂತಹ ಅನುಮೋದನೆಯು ಅಸಾಮಾನ್ಯ ಹಾಗು ರಾಷ್ಟ್ರೀಯ ಮುಖ್ಯಾಂಶಗಳನ್ನು ಮಾಡುತ್ತಿತ್ತು.
ತೀರ್ಪು
ಪ್ರಧಾನಿ ಮೋದಿಯವರು ಹೈದರಾಬಾದ್‌ನಲ್ಲಿ ಎಐಎಂಐಎಂ ಅನ್ನು ಬೆಂಬಲಿಸಿದ್ದಾರೆ ಎಂದು ಹೇಳಲು ಎಡಿಟ್ ಮಾಡಿದ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೂಲ ವೀಡಿಯೋದಲ್ಲಿ ಅವರು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.