ಮುಖಪುಟ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ವೀಡಿಯೋವನ್ನು ಎಡಿಟ್ ಮಾಡಿ ಅವರು ಕುಸ್ತಿಪಟುಗಳ ಪ್ರತಿಭಟನೆಯನ್ನು ಬೆಂಬಲಿಸಿದರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ವೀಡಿಯೋವನ್ನು ಎಡಿಟ್ ಮಾಡಿ ಅವರು ಕುಸ್ತಿಪಟುಗಳ ಪ್ರತಿಭಟನೆಯನ್ನು ಬೆಂಬಲಿಸಿದರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಜುಲೈ 4 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ವೀಡಿಯೋವನ್ನು ಎಡಿಟ್ ಮಾಡಿ ಅವರು ಕುಸ್ತಿಪಟುಗಳ ಪ್ರತಿಭಟನೆಯನ್ನು ಬೆಂಬಲಿಸಿದರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮುರ್ಮು ಅವರ ಭಾಷಣದ ಭಾಗವೊಂದನ್ನು ತಪ್ಪಾದ ನಿರೂಪಣೆಯೊಂದಿಗೆ ಶೇರ್ ಮಾಡಲಾಗಿದೆ. ಇದುವರೆಗೆ ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂದರ್ಭ

ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮುಖ್ಯಸ್ಥರ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣವನ್ನು ದಾಖಲಿಸಲಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೊಂದಿಗೆ ಪ್ರತಿಭಟಿಸಿದ ಮಹಿಳಾ ಕುಸ್ತಿಪಟುಗಳ ನ್ಯಾಯಕ್ಕಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮನವಿ ಮಾಡಿದ್ದಾರೆ ಎಂದು ಹೇಳುವ ಅವರ ಭಾಷಣದ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವೀಡಿಯೋವನ್ನು ಶೇರ್ ಮಾಡಿದ ಪೋಷ್ಟ್ ವೊಂದರ ಶೀರ್ಷಿಕೆ (ಕನ್ನಡಕ್ಕೆ ಅನುವಾದಿಸಿದಾಗ) ಹೀಗಿದೆ, "ಮೊದಲ ಬಾರಿಗೆ, ಗೌರವಾನ್ವಿತ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿ, ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು."

ಒಂದು ನಿಮಿಷಕ್ಕಿಂತ ಸ್ವಲ್ಪ ಹೆಚ್ಚು ಉದ್ದವಿರುವ ವೈರಲ್ ಕ್ಲಿಪ್ ನ್ಯೂಸ್ ೨೪ ನ ಲೋಗೋವನ್ನು ಹೊಂದಿದೆ. ರಾಷ್ಟ್ರಪತಿ ಮುರ್ಮು ಅವರು ಹಿಂದಿಯಲ್ಲಿ ಮಾತನಾಡಿರುವುದನ್ನು ಇದು ಸೆರೆಹಿಡಿದಿದೆ: "ಅವರಿಗೆ ನ್ಯಾಯ ಸಿಗಬೇಕು ಎಂದು ನಾನು ನಂಬುತ್ತೇನೆ." ಮತ್ತು, "ಇದು ನಿಮ್ಮ ಜವಾಬ್ದಾರಿಯಾಗಿದೆ. ಇದಕ್ಕೆ ಒಂದಲ್ಲಾ ಒಂದು ದಾರಿ ಇರಲೇ ಬೇಕು ಎಂದು ನನಗೆ ಅನಿಸುತ್ತದೆ. ನಾವು ಕಾನೂನುಗಳನ್ನು ರಚಿಸುತ್ತೇವೆ. ಕಾನೂನು ಅಸ್ತಿತ್ವದಲ್ಲಿಲ್ಲದಿದ್ದರೆ, ಅದನ್ನು ರಚಿಸಬೇಕು." ಹಾಗು, "ಅವರು ನಿಜವಾದ ಸಂತೋಷ ಮತ್ತು ನ್ಯಾಯಕ್ಕೆ ಅರ್ಹರು ಎಂದು ನಾನು ಭಾವಿಸುತ್ತೇನೆ. ಅವರು ಬೇರೆ ಎಲ್ಲಿ ಪರಿಹಾರ ಹುಡುಕಬಹುದು? ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಸುಪ್ರೀಂ ಕೋರ್ಟ್‌ಗಿಂತ ಹೆಚ್ಚಿನ ಅಧಿಕಾರ ರಾಷ್ಟ್ರದಲ್ಲಿ ಇಲ್ಲ." (ಕನ್ನಡಕ್ಕೆ ಅನಿವಾದಿಸಲಾಗಿದೆ) ಎಂದು ಹೇಳಿರುವುದನ್ನು ನಾವು ನೋಡಬಹುದು 

ಹಿಂದೆ ಏಪ್ರಿಲ್‌ನಲ್ಲಿ, ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧವಿರುವ ಹಲವಾರು ಲೈಂಗಿಕ ಕಿರುಕುಳದ ದೂರುಗಳ ಮೇಲೆ ಕ್ರಮ ಕೈಗೊಳ್ಳದಿರುವ ಬಗ್ಗೆ ಹಲವಾರು ಭಾರತೀಯ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ನವೀಕರಿಸಿದರು. ಕುಸ್ತಿಪಟುಗಳು ಇತ್ತೀಚೆಗೆ ರಸ್ತೆಯಲ್ಲಿ ತಮ್ಮ ಅಭಿಯಾನವನ್ನು ನಿಲ್ಲಿಸಿ ನ್ಯಾಯಾಲಯದ ನೆರೆವಿಗೆ ಹೋಗಲು ಘೋಷಿಸಿದರು. 

ವಾಸ್ತವವಾಗಿ

ಹಿಂದಿ ಸುದ್ದಿವಾಹಿನಿ ನ್ಯೂಸ್ ೨೪ ರ ಯೂಟ್ಯೂಬ್ ಚಾನೆಲ್ ಅನ್ನು ಹುಡುಕಿದಾಗ, ಜೂನ್ ೧ ರಂದು ಅಪ್‌ಲೋಡ್ ಮಾಡಲಾದ ಮುರ್ಮು ಅವರ ಭಾಷಣದ ನಾಲ್ಕು ನಿಮಿಷಗಳ ಅವಧಿಯ ವೀಡಿಯೋವನ್ನು ನಾವು ಕಂಡುಕೊಂಡೆವು. ವೈರಲ್ ಕ್ಲಿಪ್ ಅನ್ನು ಈ ವೀಡಿಯೋದಿಂದ ತೆಗೆದುಕೊಳ್ಳಲಾಗಿದೆ ಮತ್ತು ಮುರ್ಮು ಅವರು ಮಹಿಳಾ ಕುಸ್ತಿಪಟುವಿನ ಆಂದೋಲನಕ್ಕೆ ಬೆಂಬಲಿಸಿದರು ಎಂಬ ಹೇಳಿಕೆಯೊಂದಿಗೆ ಶೇರ್ ಮಾಡಲಾಗಿದೆ. 

ಭಾರತದ ರಾಷ್ಟ್ರಪತಿಗಳ ಕಚೇರಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ, ನಾವು ಜಾರ್ಖಂಡ್ ಹೈಕೋರ್ಟ್‌ನಲ್ಲಿ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಲೈವ್-ಸ್ಟ್ರೀಮ್ ಮಾಡಲಾದ ವೀಡಿಯೋವನ್ನು ನೋಡಬಹುದು. ಈ ಕಾರ್ಯಕ್ರಮವು ಮೇ ೨೪ ರಂದು ನಡೆದಿದ್ದು, ಮುರ್ಮು ಅವರೊಂದಿಗೆ ಹಲವಾರು ಪ್ರಮುಖ ವ್ಯಕ್ತಿಗಳಾದ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಭಾಗವಹಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಮುರ್ಮು ಅವರ ಕ್ಲಿಪ್ ಅನ್ನು ಈ ವೀಡಿಯೋದಲ್ಲಿ ೧:೧೮:೧೮ ಸಮಯದಿಂದ ಪ್ರಾರಂಭವಾಗುತ್ತದೆ. ನಾವು ವೀಡಿಯೋ ಅನ್ನು ಪರಿಶೀಲಿಸಿದಾಗ ಮುರ್ಮು ಅವರು ಕುಸ್ತಿಪಟುಗಳ ಬಗ್ಗೆ ಯಾವುದೇ ಉಲ್ಲೇಖವನ್ನು ನೀಡಿಲ್ಲ ಎಂದು ಕಂಡಿದ್ದೇವೆ. ಅವರು ತಮ್ಮ ಭಾಷಣದಲ್ಲಿ ಸುದೀರ್ಘ ಅವಧಿಗಳ ನಂತರ ವ್ಯಕ್ತಿಗಳು ತಮ್ಮ ಪ್ರಕರಣಗಳಿಗೆ ತೀರ್ಪುಗಳನ್ನು ಸ್ವೀಕರಿಸಿದರೂ, ಈ ತೀರ್ಪುಗಳು ಭರವಸೆ ನೀಡುವ ನ್ಯಾಯವನ್ನು ಅವರು ಯಾವಾಗಲೂ ಪಡೆಯುವುದಿಲ್ಲ ಎಂಬ ಅಂಶದ ಮೇಲೆ ಗಮನ ಸೆಳೆಯುತ್ತಾರೆ.

ನಂತರ, ಮುರ್ಮು ಅವರು, ಹಳ್ಳಿಯೊಂದರ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ನಡೆಸಿದ ಕೆಲಸದ ಬಗ್ಗೆ ಚರ್ಚಿಸುತ್ತಾ, ಅಲ್ಲಿ ಆಕೆಯ ತಂಡವು ಅಂತಿಮಗೊಳಿಸಲಾದ ಪ್ರಕರಣಗಳನ್ನು ಮತ್ತೆ ಹೇಗೆ ಅನುಸರಿಸುತ್ತಿದ್ದರು ಎಂಬ ವಿಷಯದ ಬಗ್ಗೆ ಮಾತನಾಡಿದ್ದಾರೆ. ಪ್ರಕರಣಗಳನ್ನು ಗೆದ್ದು ಅನುಕೂಲಕರ ತೀರ್ಪುಗಳನ್ನು ಪಡೆದಿದ್ದರೂ, ಅವರ ತೀರ್ಪುಗಳು ಜಾರಿಗೆ ಗೊಳಿಸಲಾಗಿಲ್ಲ ಎಂದು ಹೇಳುವ ಸಾಕಷ್ಟು ಜನರು ಅವರನ್ನು ಸಂಪರ್ಕಿಸುತ್ತಿದ್ದರು ಎಂದು ಅವರು ವಿವರಿಸುತ್ತಾರೆ. ನ್ಯಾಯಾಧೀಶರು, ರಾಜ್ಯ ಮತ್ತು ಕೇಂದ್ರ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಮುರ್ಮು, ಅಂಚಿನಲ್ಲಿರುವ ಸಮುದಾಯಗಳಿಗೆ ನಿಜವಾದ ನ್ಯಾಯದ ಅಗತ್ಯವಿದೆ ಮತ್ತು ಅಲ್ಲಿ ನೆರೆದಿರುವ ನ್ಯಾಯಾಧೀಶರು ಜವಾಬ್ದಾರಿಯನ್ನು ತೆಗೆದುಕೊಂಡು ಅಂತಹವರಿಗೆ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡಬೇಕೆಂದು ಹೇಳಿದ್ದಾರೆ. ಅಸ್ತಿತ್ವದಲ್ಲಿರುವ ಕಾನೂನುಗಳು ಅಸಮರ್ಪಕವಾಗಿದ್ದರೆ ಹೊಸ ಕಾನೂನುಗಳನ್ನು ಸ್ಥಾಪಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ. ಮುರ್ಮು ಅವರ ಭಾಷಣದ ಈ ಭಾಗವನ್ನು ಆಯ್ದುಕೊಂಡು ಅವರು ಕುಸ್ತಿಪಟುಗಳ ನ್ಯಾಯದ ಬಗ್ಗೆ ಮಾತನಾಡಿದ್ದರು ಎಂದು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. 

ರಾಷ್ಟ್ರಪತಿ ಮುರ್ಮು ಅವರು ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಕಂಡುಬಂದಿಲ್ಲ. 

ತೀರ್ಪು

ಜಾರ್ಖಂಡ್ ಹೈಕೋರ್ಟ್‌ನ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದ ಭಾಗವನ್ನು ಆಯ್ದುಕೊಂಡು ತಪ್ಪಾದ ನಿರೂಪಣೆಯೊಂದಿಗೆ ಪ್ರದಶಿಸಲಾಗಿದೆ. ಪ್ರತಿಭಟಿಸಿದ ಮಹಿಳಾ ಕುಸ್ತಿಪಟುಗಳ ನ್ಯಾಯಕ್ಕಾಗಿ ಮುರ್ಮು ಕರೆ ನೀಡಿದ್ದಾರೆ ಎಂದು ವೈರಲ್ ವೀಡಿಯೋ ತಪ್ಪಾಗಿ ಪ್ರತಿಪಾದಿಸಿದೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ