ಮೂಲಕ: ರಜಿನಿ ಕೆ.ಜಿ
ಜನವರಿ 5 2023
ನಂದಿನಿ ಬ್ರಾಂಡ್ ಅಮುಲ್ ಜೊತೆ ವಿಲೀನಗೊಳ್ಳುತ್ತಿದೆ ಎಂಬ ವರದಿಯನ್ನು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ತಳ್ಳಿಹಾಕಿದ್ದಾರೆ. ಅಮಿತ್ ಶಾ ಅವರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ.
ಸಂದರ್ಭ
೨೦೨೩ ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಎರಡು ದಿನಗಳ ಭೇಟಿ ನೀಡಿದ್ದರು. ತಮ್ಮ ಭೇಟಿಯ ಸಂದರ್ಭದಲ್ಲಿ, ಅವರು ಮಂಡ್ಯದಲ್ಲಿ ಮೆಗಾ ಡೈರಿಯನ್ನು ಉದ್ಘಾಟಿಸಿದರು ಮತ್ತು ಡಿಸೆಂಬರ್ ೩೦, ೨೦೨೨ ರಂದು ಗುಜರಾತ್‌ನ ಶ್ವೇತಕ್ರಾಂತಿ ಮತ್ತು ಹಾಲು ಸಹಕಾರಿ ಸಂಘದ ಕುರಿತು ಮಾತನಾಡಿದರು. ಇದರ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಹಲವು ತಪ್ಪುದಾರಿಗೆಳೆಯುವ ಪೋಸ್ಟ್‌ಗಳು ಹರಿದಾಡಲು ಪ್ರಾರಂಭಿಸಿದವು. ಕರ್ನಾಟಕ ಹಾಲು ಒಕ್ಕೂಟದ ಒಡೆತನದ ನಂದಿನಿ ಡೈರಿ ಬ್ರಾಂಡ್ ಅನ್ನು ಗುಜರಾತ್ ಸಹಕಾರ ಒಕ್ಕೂಟದ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ನೊಂದಿಗೆ ವಿಲೀನಗೊಳಿಸಲಾಗುವುದು ಎಂದು ಹೇಳಿಕೊಳ್ಳುತ್ತಿದ್ದವು. ಕರ್ನಾಟಕದ ಪ್ರತಿಪಕ್ಷಗಳು ಕೂಡ ಅಮಿತ್ ಶಾ ಹೇಳಿಕೆಯನ್ನು ಟೀಕಿಸಿವೆ, ಮತ್ತು #SaveNandini ಎಂಬ ಹ್ಯಾಶ್‌ಟ್ಯಾಗ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಲು ಪ್ರಾರಂಭಿಸಿತು. ಈ ಹ್ಯಾಶ್‌ಟ್ಯಾಗ್ ಹೊಂದಿರುವಂತಹ ಒಂದು ಪೋಸ್ಟ್, "ಕರ್ನಾಟಕದ 'ನಂದಿನಿ' ಗುಜರಾತ್‌ನ 'ಅಮುಲ್' ಜೊತೆ ವಿಲೀನಗೊಳ್ಳಲಿದೆ: ಅಮಿತ್ ಶಾ" ಎಂದು ಹೇಳಿಕೊಂಡಿತ್ತು.
ಆದರೆ, ಇದು ತಪ್ಪು. ಕರ್ನಾಟಕದ ಮುಖ್ಯಮಂತ್ರಿ (ಸಿಎಂ) ಬಸವರಾಜ ಬೊಮ್ಮಾಯಿ ಅವರು ಊಹಾಪೋಹವನ್ನು ನಿರಾಕರಿಸಿದ್ದಾರೆ ಮತ್ತು ಎರಡು ಬ್ರಾಂಡ್‌ಗಳ ವಿಲೀನವಿಲ್ಲ ಎಂದು ಖಚಿತಪಡಿಸಿದ್ದಾರೆ.
ವಾಸ್ತವವಾಗಿ
ಸರಳವಾದ ಕೀವರ್ಡ್ ಹುಡುಕಾಟದ ಮೂಲಕ, ಈ ಹೇಳಿಕೆಯನ್ನು ನಿರಾಕರಿಸಲು ನಾವು ಹಲವಾರು ಆಧಾರಗಳನ್ನು ಕಂಡುಕೊಂಡಿದ್ದೇವೆ.
ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ನ (ಪಿಐಬಿ) ಪತ್ರಿಕಾ ಪ್ರಕಟಣೆಯ ಪ್ರಕಾರ, ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೀಗೆ ಹೇಳಿದ್ದಾರೆ “ಅಮುಲ್ ಮತ್ತು ನಂದಿನಿ ಕರ್ನಾಟಕದ ಪ್ರತಿ ಹಳ್ಳಿಗಳಲ್ಲಿ ಪ್ರಾಥಮಿಕ ಡೈರಿಗಳನ್ನು ಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡುತ್ತವೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಪ್ರಾಥಮಿಕ ಡೈರಿ ಸ್ಥಾಪಿಸದ ಒಂದೇ ಒಂದು ಹಳ್ಳಿ ಇರುವುದಿಲ್ಲ ಎಂದು ಅವರು ಕರ್ನಾಟಕದ ಎಲ್ಲಾ ರೈತ ಸಹೋದರ ಸಹೋದರಿಯರಿಗೆ ಭರವಸೆ ನೀಡಲು ಬಯಸುತ್ತಾರೆ.” ಈ ಹೇಳಿಕೆಯನ್ನು "ನಂದಿನಿಯನ್ನು ಅಮುಲ್ ಜೊತೆ ವಿಲೀನಗೊಳಿಸಲಾಗುವುದು" ಎಂದು ತಪ್ಪಾಗಿ ಅರ್ಥೈಸಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ಜನವರಿ ೧, ೨೦೨೩ ರಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬ್ರ್ಯಾಂಡ್‌ಗಳ ವಿಲೀನದ ಹೇಳಿಕೆಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ವರದಿ ಮಾಡಿದೆ. ಅನುಷಾ ರವಿ ಸೂದ್, ದಿ ಸೌತ್ ಫಸ್ಟ್‌ನ ಪತ್ರಕರ್ತೆ ಅವರು ಸಿಎಂ ಬೊಮ್ಮಾಯಿ ಅವರು ಮಾಧ್ಯಮಗಳೊಂದಿಗೆ ಕನ್ನಡದಲ್ಲಿ ಮಾತನಾಡಿರುವ ವೀಡಿಯೋನ್ನು ಪೋಸ್ಟ್ ಮಾಡಿದ್ದಾರೆ. “ಊಹೆ ಮಾಡಿ ಟೀಕೆ ಮಾಡುವವರಿಗೆ ಏನು ಹೇಳುತ್ತೀರಿ, ಅವರು ಹೇಳಿದ್ದು ಸ್ಪಷ್ಟವಾಗಿದೆ, ನಂದಿನಿ ಮತ್ತು ಅಮುಲ್ ಪರಸ್ಪರ ಸಹಕಾರದಿಂದ ತಂತ್ರಜ್ಞಾನ ಮತ್ತು ಮಾರ್ಕೆಟಿಂಗ್‌ನಲ್ಲಿ ಪರಸ್ಪರ ಸಹಾಯ ಮಾಡಬೇಕಾಗಿದೆ. ಎರಡೂ ದೊಡ್ಡ ಸಂಸ್ಥೆಗಳು. ಈ ಎರಡು ಸಂಸ್ಥೆಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕು. ಇದರ ಅರ್ಥ ವಿಲೀನವಾಗುವುದು ಎಂದಲ್ಲ. ನಂದಿನಿ ೧೦೦ ವರ್ಷ ಮತ್ತು ಶಾಶ್ವತವಾಗಿ ಅಸ್ತಿತ್ವದಲ್ಲಿರುತ್ತದೆ” ಎಂದು ಅವರು ವೀಡಿಯೋದಲ್ಲಿ ಹೇಳುತ್ತಾರೆ.
ಅದಲ್ಲದೆ ಅಮಿತ್ ಶಾ ಹೇಳಿಕೆಗೆ ಸ್ಪಷ್ಟನೆ ನೀಡಿದ ಬೊಮ್ಮಾಯಿ ಹೀಗೆ ಹೇಳಿದರು: “ಯಾವುದೇ ತೊಂದರೆ ಇಲ್ಲ. ಅವರ ಅಮುಲ್ ಅದರ ಸ್ಥಾನದಲ್ಲಿರುತ್ತದೆ ಮತ್ತು ನಮ್ಮ ನಂದಿನಿ ಅದರ ಸ್ಥಾನದಲ್ಲಿರುತ್ತದೆ. ಅವುಗಳು ಕೆಲವು ಪ್ರದೇಶದಲ್ಲಿ ಒಟ್ಟಿಗೆ ಕೆಲಸ ಮಾಡಿದರೆ, ಇಬ್ಬರಿಗೂ ಲಾಭವಾಗುತ್ತದೆ. ಉದಾಹರಣೆಗೆ, ನಂದಿನಿಯ ತಂತ್ರಜ್ಞಾನ ಹೆಚ್ಚಿದರೆ ಅಥವಾ ಅಮುಲ್‌ನ ತಂತ್ರಜ್ಞಾನ ಹೆಚ್ಚಿದರೆ, ಅದನ್ನು ಹಂಚಿಕೊಳ್ಳಿ. ಅಲ್ಲದೆ, ಆಡಳಿತಾತ್ಮಕ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಲು ಅಮಿತ್ ಶಾ ಹೇಳಿದರು. ಅದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ; ಅದನ್ನು ದೊಡ್ಡ ಸುದ್ದಿ ಮಾಡುವ ಮತ್ತು ರಾಜಕಾರಣ ಮಾಡುವ ಅಗತ್ಯವಿಲ್ಲ. ಅವರು (ಅಮಿತ್ ಶಾ) ಹೇಳಿದ್ದು ಅಷ್ಟೇ. ಸಿಎಂ ಆಗಿ ನಾನು ಹೇಳುತ್ತಿದ್ದೇನೆ, ನಂದಿನಿ ಸದಾ ಪ್ರತ್ಯೇಕವಾಗಿ ತನ್ನ ಐಡೆಂಟಿಟಿ ಮೈಂಟೈನ್ ಮಾಡುತ್ತದೆ.”
ಡೈರಿ ಸಹಕಾರಿ ಸಂಘಗಳ ಕುರಿತು ಶಾ ನೀಡಿದ ಹೇಳಿಕೆಯು ಇಂತಹ ಊಹಾಪೋಹಗಳಿಗೆ ಕಾರಣವಾಗುತ್ತಿರುವುದು ಇದೇ ಮೊದಲಲ್ಲ ಎಂಬುದನ್ನು ಗಮನಿಸಬೇಕು. ೨೦೨೨ ರ ಅಕ್ಟೋಬರ್‌ನಲ್ಲಿ ಈಶಾನ್ಯ ಕೌನ್ಸಿಲ್‌ನ (North Eastern Council) ಸಭೆಯಲ್ಲಿ ಕೇಂದ್ರ ಸಚಿವರು ನೀಡಿದ ಹೇಳಿಕೆಯ ನಂತರ ನಂದಿನಿಯನ್ನು ಅಮುಲ್‌ನೊಂದಿಗೆ ವಿಲೀನಗೊಳಿಸಲಾಗಿದೆ ಎಂಬ ವದಂತಿಯು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಸಭೆಯಲ್ಲಿ ಅಮುಲ್ ಅನ್ನು ಇತರ ಐದು ಅನಿರ್ದಿಷ್ಟ ಸಹಕಾರಿಗಳೊಂದಿಗೆ ವಿಲೀನಗೊಳಿಸಲಾಗುವುದು ಎಂದು ಅವರು ಹೇಳಿದ್ದರು.
ಆ ಸಮಯದಲ್ಲಿ ಕರ್ನಾಟಕದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ನಂದಿನಿಯನ್ನು ಅಮುಲ್‌ನೊಂದಿಗೆ ವಿಲೀನಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳುವ ಮೂಲಕ ವದಂತಿಗಳನ್ನು ತಳ್ಳಿಹಾಕಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ತೀರ್ಪು
ಅಮುಲ್ ಮತ್ತು ನಂದಿನಿ ಒಟ್ಟಿಗೆ ಕೆಲಸ ಮಾಡುವ ಕುರಿತು ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಂದಿನಿ ಡೈರಿ ಬ್ರ್ಯಾಂಡ್ ಅನ್ನು ಅಮುಲ್ ಜೊತೆ ವಿಲೀನಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತಿದ್ದೇವೆ.