ಮೂಲಕ: ವಿವೇಕ್ ಜೆ
ಫೆಬ್ರವರಿ 17 2023
ಡಿಜಿಟಲ್ ಆಗಿ ರಚಿಸಲಾದ ವರ್ಚುವಲ್ ಪಟಾಕಿ ಪ್ರದರ್ಶನದ ವೀಡಿಯೋವನ್ನು ತಪ್ಪಾಗಿ ನಿರೂಪಿಸಿ, ಇದು ಜನವರಿ ೨೦೨೩ ರಲ್ಲಿ ಕೇರಳದಲ್ಲಿ ನಡೆದ ನೈಜ ಘಟನೆ ಎಂದು ಹೇಳಿಕೊಳ್ಳಲಾಗಿದೆ.
ಸಂದರ್ಭ
ಕೇರಳದ ಕುರವಿಲಂಗಾಡು ಎಂಬಲ್ಲಿ ವಿಶೇಷ ರೀತಿಯ ಪಟಾಕಿಯನ್ನು ಪ್ರದರ್ಶಿಸಲಾಗಿದೆ ಎಂದು ತೋರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ಪೋಷ್ಟ್ ಗಳು ಇದು ದುಬಾರಿ ಪಟಾಕಿ ಪ್ರದರ್ಶನ ಮತ್ತು ವಿಶ್ವದಲ್ಲೇ ಮೊದಲನೆಯದು ಎಂದು ಹೇಳಿಕೊಂಡಿವೆ. ಈ ರೀತಿಯ ಪೋಷ್ಟ್ ಒಂದು ಹೇಳುವುದೇನೆಂದರೆ, ಇದು ಭಾರತದ ಕೇರಳದಲ್ಲಿ ಕಂಡುಬಂದ ಅದ್ಭುತವಾದ ಪಟಾಕಿ ಪ್ರದರ್ಶನ. “ಸ್ಫೆರಿಕಲ್ ಫೈರ್ವರ್ಕ್ಸ್” ಎಂದು ಕರೆಯಲಾದ ಈ ಪ್ರದರ್ಶನವು ಅತೀ ದುಬಾರಿಯಾಗಿದ್ದು ಬಹಳಷ್ಟು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ, ಎಂದು.
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಂತೆ ಈ ವೀಡಿಯೋ ನಿಜವಾದ ಪಟಾಕಿ ಪ್ರದರ್ಶನದ್ದಲ್ಲ.
ವಾಸ್ತವವಾಗಿ
ವೀಡಿಯೋವಿನ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸುವ ಮೂಲಕ, ಹಿಂದೆ ಹಲವು ಬಾರಿ ಇದೇ ವೀಡಿಯೋವನ್ನು ಹಂಚಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ. ಈ ವೀಡಿಯೋವನ್ನು ಮೊದಲಬಾರಿ ಜನವರಿ ೪, ೨೦೧೩ ರಲ್ಲಿ”mediabyjj” ಎಂಬ ಯುಟ್ಯೂಬ್ ಚಾನಲ್ ನಲ್ಲಿ ಹಂಚಿಕೊಳ್ಳಲಾಗಿತ್ತು. ಈ ಯುಟ್ಯೂಬ್ ವೀಡಿಯೋವಿನ ವಿವರಣೆಯ ಭಾಗದಲ್ಲಿ ಅಪ್ಲೋಡ್ ಮಾಡಿದವರು ವೀಡಿಯೋವನ್ನು ತಾವೇ ಸ್ವತಃ ರಚಿಸಿದ್ದು ಎಂದು ಹಾಗು ಇದರ ಕೆಲಸವನ್ನು ಪೂರ್ತೀಕರಿಸಲು ಸುಮಾರು ಒಂದು ವಾರ ಸಮಯ ಹಿಡಿಯಿತು ಎಂದು ಹೇಳಿಕೊಂಡಿದ್ದಾರೆ. ಈ ರೀತಿಯ ಒಂದು ಡಿಜಿಟಲ್ ಸೃಷ್ಟಿಯನ್ನು ಕರಗತ ಮಾಡಲು ಬಳಸಲಾದ ಸಾಫ್ಟ್‌ವೇರ್ ಎಫ್.ಡಬ್ಲ್ಯೂ.ಸಿಮ್ (FWSim) ಎಂದು ಅಪ್‌ಲೋಡರ್ ಸ್ಪಷ್ಟಪಡಿಸಿದ್ದಾರೆ.
ಗೂಗಲ್‌ನಲ್ಲಿ ಎಫ್.ಡಬ್ಲ್ಯೂ.ಸಿಮ್ ನ ಬಗ್ಗೆ ಹುಡುಕಿದಾಗ ಅವರ ವೆಬ್‌ಸೈಟ್ ನಮಗೆ ಕಂಡುಬಂತು. ಅಲ್ಲಿ ಇತ್ತೀಚಿಗೆ ವೈರಲ್ ಆದ ವೀಡಿಯೋವಿನಂತೆ ಇರುವ ಪಟಾಕಿ ಪ್ರದರ್ಶನದ ಹಲವಾರು ಡಿಜಿಟಲ್ ವೀಡಿಯೋ ರಚನೆಗಳನ್ನು ನೋಡಬಹುದು. ಈ ವೆಬ್‌ಸೈಟ್ ನಲ್ಲಿ ಕಂಡುಬಂದ ವಿವರಣೆಯನ್ನು ಓದಿದಾಗ ಡಿಜಿಟಲ್ ವೀಡಿಯೋ ರಚನೆ ಸೇರಿದಂತೆ ಅವರು ನೀಡುವ ಎಲ್ಲಾ ಸೇವನೆಗಳ ವಿವರಗಳು ಇವೆ. ಹೀಗಾಗಿ, ಕೇರಳದಲ್ಲಿ ನಡೆದ ನೈಜ ಪ್ರದರ್ಶನ ಎಂದು ಹೇಳಿಕೊಂಡು ಹಂಚಿಕೊಳ್ಳಲಾಗಿರುವ ಈ ವೀಡಿಯೋ ಕೇವಲ ಒಂದು ಡಿಜಿಟಲ್ ರಚನೆ ಎಂದು ಸ್ಪಷ್ಟವಾಗಿದೆ.
ಇದೇ ವೀಡಿಯೋ ೨೦೧೮ ರಲ್ಲಿ ಜಪಾನ್ ನ ಮೌಂಟ್ ಫ್ಯೂಜಿಯಲ್ಲಿ ನಡೆದ ಪಟಾಕಿ ಪ್ರದರ್ಶನದ್ದು ಎಂದು ವೈರಲ್ ಆಗಿತ್ತು. ಆಗ ಕೂಡ ಈ ವೀಡಿಯೋವನ್ನು ಸ್ಫೆರಿಕಲ್ ಪೈರೊಟೆಕ್ನಿಕ್ಸ್ ಎಂಬ ತಂತ್ರಜ್ಞಾನವನ್ನು ಬಳಸಿ ಮಾಡಲಾಗಿದ್ದು ಎಂದು ಹೇಳಿಕೊಳ್ಳಲಾಗಿತ್ತು. ೨೦೨೨ ರಲ್ಲಿ ಕೂಡ ಈ ವೀಡಿಯೋ ಮುಂಬೈ ನ ಬೊರಿವಲಿ ಯಲ್ಲಿ ನಡೆದ ಪಟಾಕಿ ಪ್ರದರ್ಶನ ಎಂದು ವೈರಲ್ ಆಗಿದ್ದು, ಇಂಡಿಯಾ ಟುಡೇ ಈ ಹೇಳಿಕೆಯನ್ನು ತಪ್ಪು ಎಂದು ಕಂಡುಹಿಡಿದಿತ್ತು.
ತೀರ್ಪು
ಸಾಫ್ಟ್‌ವೇರ್ ಒಂದನ್ನು ಬಳಸಿ ವರ್ಚುವಲ್ ಆಗಿ ರಚಿಸಲ್ಪಟ್ಟ ಪಟಾಕಿ ಪ್ರದರ್ಶನದ ವೀಡಿಯೋವೊಂದು ಯುಟ್ಯೂಬ್ ನಲ್ಲಿ ೨೦೧೩ ರಲ್ಲಿ ಹಂಚಿಕೊಳ್ಳಲಾಗಿತ್ತು. ಈ ವೀಡಿಯೋವನ್ನು ಹಲವೆಡೆ ನಡೆದ ನೈಜ ಪಟಾಕಿ ಪ್ರದರ್ಶನಗಳದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇತ್ತೀಚೆಗೆ ೨೦೨೩ ರಲ್ಲಿ ಇದು ಕೇರಳದಲ್ಲಿ ನಡೆದ ನೈಜ ಪ್ರದರ್ಶನ ಎಂಬ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದ ಈ ಹೇಳಿಕೆಯನ್ನು ನಾವು ತಪ್ಪು ಎಂದು ಗುರುತಿಸಿದ್ದೇವೆ.